ಹೊರ ದೇಶದಲ್ಲಿ ಭಾರತೀಯರ ಹವಾ ಜೋರಾಗಿಯೇ ನಡೆಯುತ್ತಿದೆ. ನಮ್ಮ ದೇಶದ ಹಲವರು ಪ್ರತಿಷ್ಠಿತ ಕಂಪೆನಿಗಳಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವುದು ಗೊತ್ತಿರುವ ವಿಚಾರ. ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಐಐಟಿ ದೆಹಲಿಯ ಹಳೆ ವಿದ್ಯಾರ್ಥಿ ಅನಿರುದ್ಧ್ ದೇವಗನ್ 5,25,000 ಕೋಟಿ ರೂ. ಮೌಲ್ಯದ ಕಂಪನಿ ಸಿಇಒ ಆಗಿರುವುದು ಗಮನಿಸಬೇಕಾದ ವಿಚಾರ.
ಅನಿರುದ್ಧ್ ದೇವಗನ್ ಅವರು ಪ್ರತಿಷ್ಠಿತ ಕಂಪ್ಯೂಟರ್ ವಿಜ್ಞಾನಿಯಾಗಿದ್ದು, ಸಾಫ್ಟ್‌ವೇರ್ ದೈತ್ಯ ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್‌ನ ಸಿಇಒ ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್ 5,25,000 ಕೋಟಿ ರೂ. ($ 64 ಶತಕೋಟಿ) ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ದೇವಗನ್ ಹುಟ್ಟಿ ಬೆಳೆದದ್ದು ಭಾರತದ ನವದೆಹಲಿಯಲ್ಲಿ. ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ದೇವಗನ್ ಅವರ ತಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿದ್ದರು. ಐಐಟಿ ಕ್ಯಾಂಪಸ್‌ನಲ್ಲಿ ಬೆಳೆದ ದೇವಗನ್ ತಮ್ಮ ತಂದೆಯಂತೆ ಶೈಕ್ಷಣಿಕ ಕ್ಷೇತ್ರದತ್ತ ಒಲವು ತೋರುವ ಬದಲು ಕಾರ್ಪೊರೇಟ್ ಜಗತ್ತನ್ನು ಆಯ್ಕೆ ಮಾಡಿಕೊಂಡರು.
ದೇವಗನ್ ತಮ್ಮ ಶಾಲಾ ಶಿಕ್ಷಣವನ್ನು ದೆಹಲಿ ಪಬ್ಲಿಕ್ ಸ್ಕೂಲ್ (DPS)ನಲ್ಲಿ ಪಡೆದಿದ್ದು ಬಳಿಕ ದೆಹಲಿ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡರು. ಇದಾದ ನಂತರ ಭಾರತವನ್ನು ತೊರೆದ ದೇವಗನ್ ಅಮೇರಿಕಾಕ್ಕೆ ತೆರಳಿ ಅಲ್ಲಿನ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ(Carnegie Mellon University)ದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದುಕೊಂಡರು.
ಲೆಜೆಂಡರಿ ಐಟಿ ಕಂಪನಿಯಾದ IBM ನೊಂದಿಗೆ ಅನಿರುದ್ಧ್ ದೇವಗನ್ ಅವರು ತಮ್ಮ ವೃತ್ತಿ ಬದುಕಿನ ಪ್ರಯಾಣವನ್ನು ಆರಂಭಿಸಿದರು. IBM ನಲ್ಲಿ ರಿಸರ್ಚ್ ಅಂಡ್ ಮ್ಯಾನೇಜ್ಮೆಂಟ್ ನ ವಿವಿಧ ವಿಭಾಗದಲ್ಲಿ ಒಂದು ದಶಕದ ಕಾಲ ಕೆಲಸ ಮಾಡಿದ ಅವರು, ನಂತರ 6 ವರ್ಷಗಳ ಕಾಲ ಮ್ಯಾಗ್ಮಾ ಡಿಸೈನ್ ಆಟೊಮೇಷನ್‌ನಲ್ಲಿ ಸೇವೆ ಸಲ್ಲಿಸಿದರು.
2017 ರಲ್ಲಿ ದೇವಗನ್ ಅವರು ಕ್ಯಾಡೆನ್ಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ್ದು, ಅಂತಿಮವಾಗಿ 2021 ರಲ್ಲಿ ನಿರ್ದೇಶಕರ ಮಂಡಳಿ ಮತ್ತು ಸಿಇಒ ಹುದ್ದೆ ಅಲಂಕರಿಸಿಕೊಂಡರು. ಪ್ರಸ್ತುತ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿರುವ ದೇವಗನ್ ಅವರು, ಭಾರತೀಯ ಮೂಲದವರಾಗಿರುವ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಎಣಿಸಿಕೊಂಡಿರುವ ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಗೂಗಲ್‌ನ ಸುಂದರ್ ಪಿಚೈ, ಅರಿಸ್ಟಾದ ಜಯಶ್ರೀ ಉಲ್ಲಾಲ್ ಮತ್ತು ಐಬಿಎಂನ ಅರವಿಂದ್ ಕೃಷ್ಣ ಅಂತವರ ಸಾಲಿನಲ್ಲಿದ್ದಾರೆ.
ದೇವಗನ್ ಸಿಇಒ ಆಗಿದ್ದಾಗ, ಅವರಿಗೆ ಮೂಲ ವೇತನದ 125% ಟಾರ್ಗೆಟ್ ಬೋನಸ್‌ನೊಂದಿಗೆ $725,000 ಮೂಲ ವೇತನವನ್ನು ನೀಡಲಾಯಿತು. ದೇವಗನ್ ಅವರಿಗೆ 2021 ರಲ್ಲಿ, ಪ್ರತಿಷ್ಠಿತ Phil Kaufman ಪ್ರಶಸ್ತಿ ಒಲಿದು ಬಂದಿದೆ.


Click it and Unblock the Notifications