ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕರ್ನಾಟಕ ಘಟಕವು 118 ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಹಲವಾರು ಸೌಕರ್ಯಗಳನ್ನು ಆರಂಭಿಸಲು ಮುಂದಾಗಿದೆ. ಆ ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಅಗತ್ಯವಾಗಿರುವ ಸೌಲಭ್ಯವು ಶೀಘ್ರವೇ ಈ ದಾರಿಯಲ್ಲಿರಲಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಟಾಯ್ಲೆಟ್ ಬ್ಲಾಕ್‌ಗಳು, ಆಹಾರ ಮಳಿಗೆಗಳು ಮತ್ತು ಫುಟ್ ಓವರ್‌ಬ್ರಿಡ್ಜ್‌ಗಳನ್ನು (ಮಾರ್ಗ ದಾಟಲು ಬ್ರಿಡ್ಜ್) ನಿರ್ಮಿಸಲು ಎರಡು ಕಂಪನಿಗಳಿಗೆ 36.5 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಎನ್‌ಎಚ್‌ಎಐ ನೀಡಿದೆ.

ಈ ಹೆದ್ದಾರಿಯಲ್ಲಿ ನಾಲ್ಕು ಟಾಯ್ಲೆಟ್ ಬ್ಲಾಕ್‌ಗಳು, ಕುಡಿಯುವ ನೀರು ಒದಗಿಸಲು ಎರಡು ಘಟಕ ಸೌಲಭ್ಯಗಳು, ಚಹಾ ಮತ್ತು ಕಾಫಿ, ಪ್ಯಾಕ್ ಮಾಡಿದ ಆಹಾರ ಮತ್ತು ವಿಕಲಚೇತನರಿಗೆ ಸೇರಿದಂತೆ ಶೌಚಾಲಯಗಳು, 24 ಅಡಿ ಮೇಲ್ಸೇತುವೆಗಳನ್ನು ಒದಗಿಸಲಾಗುತ್ತದೆ ಎಂದು ಕಳೆದ ತಿಂಗಳು ನೀಡಿದ ಆದೇವವನ್ನು ಉಲ್ಲೇಖಿಸಿ ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಎನ್‌ಎಚ್‌ಎಐಗೆ ಈ ಮಾರ್ಗದಲ್ಲಿ ವಾಶ್‌ರೂಮ್‌ಗಳು, ಪೆಟ್ರೋಲ್ ಬಂಕ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಪಾದಚಾರಿ ಸ್ನೇಹಿ ಮೂಲಸೌಕರ್ಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಇರುವುದನ್ನು ಹಲವಾರು ಬಾರಿ ತಿಳಿಸಿದ್ದಾರೆ. ಮಾಧ್ಯಮಗಳು ಕೂಡಾ ಈ ಬಗ್ಗೆ ವರದಿಗಳನ್ನು ಮಾಡಿದೆ. ಈಗ ಎನ್‌ಎಚ್‌ಎಐ ಈ ಎಲ್ಲ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ, "ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರುನಲ್ಲಿ ಕ್ರಮವಾಗಿ ಹೆದ್ದಾರಿಯ ಎರಡೂ ಬದಿಯಲ್ಲಿ ಒಂದು ನೆಸ್ಟ್ (ಮಿನಿ) ಸೌಲಭ್ಯ ಮತ್ತು ಒಂದು ಶೌಚಾಲಯದ ಬ್ಲಾಕ್ ಅನ್ನು ಸ್ಥಾಪಿಸಲಾಗುವುದು," ಎಂದು ಮಾಹಿತಿ ನೀಡಿದ್ದಾರೆ. ನೆಸ್ಟ್ (ಮಿನಿ) ಮತ್ತು ಶೌಚಾಲಯ ಬ್ಲಾಕ್‌ಗಳ ಸ್ಥಾಪನೆಗೆ ಗುತ್ತಿಗೆ ಮೌಲ್ಯ 1.5 ಕೋಟಿ ರೂಪಾಯಿಗಳಾಗಿದ್ದು, 24 ಅಡಿ ಮೇಲ್ಸೇತುವೆಗಳ ಸ್ಥಾಪನೆಗೆ 35 ಕೋಟಿ ರೂಪಾಯಿ ಗುತ್ತಿಗೆಯಾಗಿದೆ.
ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ
ಹೊಸ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಆಯ್ಕೆ ಮಾಡಿದ ಎರಡು ಹೆದ್ದಾರಿಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಒಂದಾಗಿದೆ. ಇದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರಕ್ಕೆ ಪ್ರಯಾಣಿಕರಿಗೆ ಶುಲ್ಕ ವಿಧಿಸಲಿದೆ.
ವಾಹನಗಳು ಕ್ರಮಿಸುವ ದೂರವನ್ನು ಗಣನೆಗೆ ತೆಗೆದುಕೊಂಡು ಟೋಲ್ ಶುಲ್ಕವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಸಚಿವಾಲಯವು ಜಿಯೋಫೆನ್ಸಿಂಗ್ ಎಫರ್ಟ್‌ಗಳನ್ನು ಪ್ರಾರಂಭಿಸಿದೆ. ಆರಂಭದಲ್ಲಿ, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಈಗಾಗಲೇ ಜಿಪಿಎಸ್ ಆಧಾರಿತ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿರುವ 18 ಲಕ್ಷಕ್ಕೂ ಹೆಚ್ಚು ವಾಣಿಜ್ಯ ವಾಹನಗಳಿಗೆ ಪ್ರತ್ಯೇಕವಾಗಿರಲಿದೆ.
ಯಾವ ವಾಹನಕ್ಕೆ ಎಷ್ಟು ಟೋಲ್?
ಕಾರುಗಳು, ಎಸ್‌ಯುವಿಗಳು ಮತ್ತು ವ್ಯಾನ್‌ಗಳಿಗೆ ಒಂದು ಮಾರ್ಗದ ಟೋಲ್ 155 ರೂಪಾಯಿ ಆಗಿರುತ್ತದೆ ಮತ್ತು 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ 235 ರೂಪಾಯಿ ಟೋಲ್ ಆಗಿರುತ್ತದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿಬಸ್‌ಗಳಿಗೆ ಏಕಮುಖ ಪ್ರಯಾಣಕ್ಕೆ 235 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು ಟೋಲ್ ಶುಲ್ಕ 375 ರೂಪಾಯಿ ಆಗಿದೆ.
ಎರಡು ಆಕ್ಸಲ್‌ಗಳನ್ನು ಹೊಂದಿರುವ ಟ್ರಕ್‌ಗಳು ಮತ್ತು ಬಸ್‌ಗಳು 24 ಗಂಟೆಗಳ ಒಳಗೆ ಏಕಮುಖ ಪ್ರಯಾಣಕ್ಕೆ 525 ರೂಪಾಯಿ ಮತ್ತು ಹಿಂದಿರುಗುವ ಪ್ರಯಾಣಕ್ಕೆ 790 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಹೊಸ ಟೋಲ್ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಈಗಿರುವ ಟೋಲ್‌ಗೆ ಹೆಚ್ಚುವರಿಯಾಗಿರುತ್ತದೆ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯೊಳಗೆ ಪ್ರಯಾಣಿಸುವ ವಾಣಿಜ್ಯೇತರ ವಾಹನಗಳಿಗೆ 330 ರೂಪಾಯಿ ಬೆಲೆಯ ಮಾಸಿಕ ಪಾಸ್ ಅನ್ನು ಎನ್‌ಎಚ್‌ಎಐ ಒದಗಿಸುತ್ತದೆ.


Click it and Unblock the Notifications