ಬೆಂಗಳೂರು: ಅನ್ನಭಾಗ್ಯ ಯೋಜನೆಗಾಗಿ, ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಜಾರಿಗೆ ತಂದ ಪಡಿತರ ಚೀಟಿ (Ration Card), ಇಂದು ಹಲವು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬಡತನ ನಿರ್ಮೂಲನೆ ದೃಷ್ಟಿಯಿಂದ, ಬಡತನ ರೇಖೆಯಲ್ಲಿರುವವರಿಗೆ ನೀಡಲಾಗುವ ಈ ಬಿಪಿಎಲ್ ಕಾರ್ಡ್ (BPL Card), ಸದ್ಯ ದುರುಪಯೋಗವಾಗುತ್ತಿದೆ ಎಂಬ ಕೂಗು ಕೇಳುತ್ತಲೇ ಇದೆ. ಅದೇ ಕಾರಣದಿಂದ ಇದೀಗ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಲಕ್ಷಾಂತರ ಕಾರ್ಡ್‌ಗಳನ್ನು ಸಹ ರದ್ದುಗೊಳಿಸಿದೆ.

ಅಕ್ರಮ ಬಿಪಿಎಲ್ ಕಾರ್ಡ್ ಬಳಸುತ್ತಿರುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ರದ್ದು ಪಡಿಸುವ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ಆಹಾರ ಇಲಾಖೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈಗಾಗಲೇ ಲಕ್ಷಾಂತರ ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಇದೀಗ ಸರ್ಕಾರ ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಇಲಾಖೆ ಮುಂದಾಗಲಿದೆ.
ಲಕ್ಷಗಟ್ಟಲೆ ಬಿಪಿಎಲ್ ಕಾರ್ಡ್ ರದ್ದು!
ಸರ್ಕಾರದ ಆದೇಶದಂತೆ ಆಹಾರ ಇಲಾಖೆ ಖಡಕ್ ನಿರ್ಧಾರ ಕೈಗೊಂಡಿದೆ. ಆ ಪ್ರಕಾರ 1 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಬೆಂಗಳೂರು ದಕ್ಷಿಣ 15,916, ಬೆಂಗಳೂರು ನಗರ 48,891, ಬೆಂಗಳೂರು ಉತ್ತರ 12,431, ಬೆಂಗಳೂರು ಪಶ್ಚಿಮ 25,143, ಬೆಂಗಳೂರು ಪೂರ್ವ 10,376, ಬೆಂಗಳೂರು ಗ್ರಾಮಾಂತರ 5,963 ಎಪಿಎಲ್ ಕಾರ್ಡ್‌ಗಳು ರದ್ದಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲೇ ಒಟ್ಟು 3.90 ಲಕ್ಷ ಪಡಿತರ ಕಾರ್ಡ್‌ಗಳಿವೆ. ಪ್ರಸ್ತುತ ಬೆಂಗಳೂರು ಒಂದರಲ್ಲೇ 1 ಲಕ್ಷಕ್ಕೂ ಅಧಿಕ ಪಡಿತರ ಚೀಟಿ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾಗಿದೆ ಎಂದು ಹೇಳಲಾಗಿದೆ.
ಆದಾಯ ಮಿತಿ ಪರಿಷ್ಕರಣೆಗೆ ಮುಂದಾದ ಸರ್ಕಾರ!
ಗುರುವಾರ ವಿಧಾನಸಭೆ ಸದನದಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್, ಪಡಿತರ ಚೀಟಿಗೆ ಸಂಬಂಧಿಸಿ, ಸರ್ಕಾರದ ನಿರ್ಧಾರದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಉತ್ತರಿಸಿ, ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ನೀಡಲಾಗಿರುವ ಆದಾಯ ಮಿತಿಯನ್ನು ಪರಿಷ್ಕರಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ಪಡೆಯಬೇಕೆಂದರೆ ಆದಾಯ ಮಿತಿ 1.20 ಲಕ್ಷ ರೂಪಾಯಿ ಇರಬೇಕು. ಆದ್ರೆ ಇದೀಗ ಆದಾಯ ಮಿತಿಯನ್ನು ಹೆಚ್ಚಳ ಮಾಡುವ ಯೋಜನೆಯಲ್ಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಿ, ಪರಿಷ್ಕರಿಸುವುದಾಗಿ ಹೇಳಿದ್ದಾರೆ.
ಕಾರಣವೇನು?
ಸಾಮಾನ್ಯವಾಗಿ ಇಂದಿನ ಪರಿಸ್ಥಿತಿಯಲ್ಲಿ ಒಬ್ಬ ಕೂಲಿ ಕಾರ್ಮಿಕನ ದಿನದ ಸಂಬಳ ಕಮ್ಮಿ ಅಂದರೂ 500 ರೂ. ಇದೆ.ಅದನ್ನೇ ಒಟ್ಟು ಲೆಕ್ಕ ಹಾಕಿದರೆ, ವಾರ್ಷಿಕವಾಗಿ 1.80 ಲಕ್ಷ ರೂ. ಆಗುತ್ತದೆ. ಅಂದರೆ ಇದು ಬಿಪಿಎಲ್ ಕಾರ್ಡ್ ಆದಾಯ ಮಿತಿಗಿಂತಲೂ ಹೆಚ್ಚಿದೆ. ಅದೇ ಕಾರಣದಿಂದ ಎಷ್ಟೋ ಜನರ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರಕಾರ ಇದೀಗ ಪರಿಷ್ಕರಣೆಗೆ ಮುಂದಾಗಿದೆ ಎಂದು ಹೇಳಲಾಗಿದೆ.


Click it and Unblock the Notifications