ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. 2023-2024ನೇ ಪೂರ್ಣವಧಿ ಬಜೆಟ್ ಅನ್ನು ಫೆಬ್ರವರಿ 1ರಂದು ಹಣಕಾಸು ಸಚಿವೆ ಮಂಡಿಸಲಿದ್ದಾರೆ. ಈ ಶುಭದಿನದಂದು ವಿತ್ತ ಸಚಿವೆ ಕೆಂಪು ಬಣ್ಣದ ಸೀರೆಯನ್ನು ಉಟ್ಟಿದ್ದಾರೆ.
ಕೇಂದ್ರ ಬಜೆಟ್‌ಗೆ ಸಿದ್ಧವಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಹಾಗೂ ಗೋಲ್ಡ್ ಬಣ್ಣದ ಬಾರ್ಡರ್ ಇರುವ ಕೆಂಪು ಸಿಲ್ಕ್ ಸೀರೆಯನ್ನು ತೊಟ್ಟು, ಡಿಜಿಟಲ್ ಬಹಿಖಾತಾದೊಂದಿಗೆ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸಣ್ಣ ಚಿನ್ನದ ಸರವನ್ನು ಧರಿಸಿಕೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆಗೂ ಮುನ್ನ ಬರುವ ನಿರ್ಮಲಾ ಸೀತಾರಾಮನ್‌ರ ಪೂರ್ಣವಧಿ ಬಜೆಟ್ ಇದಾಗಿದೆ. ಅದರಿಂದಾಗಿ ಈ ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಬಹುದು ಎಂಬ ಭರವಸೆಯನ್ನು ಜನರು ಹೊಂದಿದ್ದಾರೆ.

ಕೈಮಗ್ಗದಿಂದ ಮಾಡಲಾದ ಸೀರೆ
ನಿರ್ಮಲಾ ಸೀತಾರಾಮನ್ ಕೈಮಗ್ಗದಿಂದ ಮಾಡಲಾದ ಸೀರೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಹಿಂದೆಯೂ ಹಲವಾರು ಬಾರಿ ಸಂಸತ್ತಿನಲ್ಲಿ ಕೈಮಗ್ಗದಿಂದ ಮಾಡಲಾದ ಸೀರೆ ತೊಟ್ಟು ಕಾಣಿಸಿಕೊಂಡಿದ್ದಾರೆ. ಸುಂದರವಾದ, ಆಕರ್ಷಕವಾದ ಕೈಮಗ್ಗದ ಸೀರೆಯನ್ನು ಹೆಚ್ಚಾಗಿ ಖರೀದಿ ಮಾಡುವ ಮೂಲಕ ಕೈಮಗ್ಗದ ಕೆಲಸ ಮಾಡುವವರಿಗೆ ನಿರ್ಮಲಾ ಸೀತಾರಾಮನ್ ಪ್ರೋತ್ಸಾಹವನ್ನು ನೀಡಿದ್ದಾರೆ.
ಹಲವಾರು ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಉಡುವ ಸೀರೆಗಳೇ ಹೆಡ್‌ಲೈನ್ ಆಗಿಬಿಟ್ಟಿದೆ. 2022ರ ಬಜೆಟ್ ಮಂಡನೆ ಮಾಡುವಾಗ ನಿರ್ಮಲಾ ಸೀತಾರಾಮನ್ ಕೆಂಪು-ಕಂದು ಕೈಮಗ್ಗ ಸಿಲ್ಕ್ ಸೀರೆಯನ್ನು ಉಟ್ಟಿದ್ದರು. 2021ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ಕೆಂಪು ಹಾಗೂ ಬಿಳಿ ಕೈಮಗ್ಗ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ ಮೂರು ವರ್ಷಗಳಲ್ಲಿ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣವನ್ನು ಆಯ್ಕೆಮಾಡಿಕೊಂಡು ಬಂದಿದ್ದಾರೆ. ಇನ್ನು ಅದಕ್ಕೂ ಮುನ್ನ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹಳದಿ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
2019ರಲ್ಲಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡುವಾಗ ಬ್ರೈಟ್ ಪಿಂಕ್, ಗೋಲ್ಡ್ ಬಾರ್ಡರ್ ಇರುವ ಸೀರೆಯನ್ನು ಉಟ್ಟಿದ್ದರು. ಹಾಗೆಯೇ ಬಹಿಖಾತಾದಿಂದ ಡಿಜಿಟಲ್ ಬಹಿಖಾತಾಕ್ಕೆ ಬದಲಾಗಿದ್ದಾರೆ. ಪೇಪರ್‌ಲೆಸ್ ಬಜೆಟ್ ಅನ್ನು ಆರಂಭಿಸಿದ್ದಾರೆ.


Click it and Unblock the Notifications