ಪ್ರತಿ ತಿಂಗಳು ಸಂಬಳ ಪಡೆಯುವ ಎಲ್ಲ ಉದ್ಯೋಗಿಗಳಿಗೆ ಉದ್ಯೋಗದಾತರಿಂದ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಸೌಲಭ್ಯವನ್ನು ಒದಗಿಸಲಾಗಿರುತ್ತದೆ. ಇಪಿಎಫ್ ಖಾತೆಗೆ ಉದ್ಯೋಗಿಯು ಪ್ರತಿ ತಿಂಗಳು ನಿರ್ದಿಷ್ಟ ಪ್ರಮಾಣದ ಹಣವನ್ನು ವಂತಿಗೆಯಾಗಿ ಪಾವತಿಸುತ್ತಾನೆ ಹಾಗೂ ಉದ್ಯೋಗದಾತನು ಕೂಡ ಅಷ್ಟೇ ಮೊತ್ತದ ಕೊಡುಗೆಯನ್ನು ಖಾತೆಗೆ ಜಮೆ ಮಾಡುತ್ತಾನೆ. ಈ ರೀತಿಯ ವಂತಿಗೆಯ ಮೊತ್ತವು ಸಾಮಾನ್ಯವಾಗಿ ಪೂರ್ವನಿರ್ಧರಿತವಾಗಿರುತ್ತವೆ. ನೌಕರನೊಬ್ಬ ನಿವೃತ್ತಿಯಾದ ನಂತರ ಆತನ ಭವಿಷ್ಯದ ಹಣಕಾಸಿನ ಅಗತ್ಯಗಳು ಪೂರ್ತಿಯಾಗುವಂತೆ ಖಾತ್ರಿಪಡಿಸಲು ಸರ್ಕಾರ ಇಪಿಎಫ್ ಯೋಜನೆಯನ್ನು ಜಾರಿಗೊಳಿಸಿದೆ. ನಿವೃತ್ತಿಯ ನಂತರ ಉದ್ಯೋಗಿಯು ತನ್ನ ವೃದ್ಧಾಪ್ಯದ ಅಗತ್ಯಗಳನ್ನು ಪೂರೈಸಲು ಇಪಿಎಫ್‌ನಲ್ಲಿನ ಹಣವನ್ನು ಹಿಂಪಡೆಯಬಹುದು. ಇಪಿಎಫ್ನಲ್ಲಿ ಜಮೆ ಮಾಡಲಾದ ಉಳಿತಾಯದ ಹಣಕ್ಕೆ ಸರ್ಕಾರವು ಯಾವುದೇ ರೀತಿಯ ತೆರಿಗೆಯನ್ನು ವಿಧಿಸುವುದಿಲ್ಲ.
ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಎಂದರೇನು? (Voluntary Provident Fund -VPF)
ಬಹುತೇಕ ನಮಗೆಲ್ಲರಿಗೂ ಇಪಿಎಫ್ ಬಗ್ಗೆ ಗೊತ್ತು. ಆದರೆ ಈ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಎಂದರೇನು? ಬನ್ನಿ.. ಈ ಬಗ್ಗೆ ತಿಳಿಯೋಣ.
ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್)
ಉದ್ಯೋಗಿಯೊಬ್ಬ ತನ್ನ ಇಪಿಎಫ್ ಖಾತೆಗೆ ಕಾರ್ಮಿಕ ಭವಿಷ್ಯ ನಿಧಿ ಪ್ರಾಧಿಕಾರವು ನಿಗದಿಪಡಿಸಿದ ಇಪಿಎಫ್ ವಂತಿಗೆಗಿಂತ ಹೆಚ್ಚುವರಿ ವಂತಿಗೆಯನ್ನು ಪಾವತಿಸುವುದೇ ವಿಪಿಎಫ್ ಅಥವಾ ಸ್ವಯಂ ಪ್ರೇರಿತ ಭವಿಷ್ಯ ನಿಧಿ ಆಗಿದೆ. ಸಾಮಾನ್ಯವಾಗಿ ಉದ್ಯೋಗಿಯ ಮೂಲವೇತನದ ಶೇ 12ರಷ್ಟು ಮೊತ್ತವನ್ನು ಉದ್ಯೋಗದಾತನು ಇಪಿಎಫ್ ವಂತಿಗೆಯಾಗಿ ನೀಡುತ್ತಾನೆ. ಆದರೆ ಉದ್ಯೋಗಿಯೊಬ್ಬ ಬಯಸಿದಲ್ಲಿ ಅದಕ್ಕೂ ಹೆಚ್ಚಿನ ಮೊತ್ತವನ್ನು ಪಾವತಿಸಲು ಸ್ವತಂತ್ರನಾಗಿದ್ದಾನೆ. ಸಂಬಳ ಬಟವಾಡೆಯ ಸಮಯದಲ್ಲಿ ಇಪಿಎಫ್‌ನೊಂದಿಗೆ ವಿಪಿಎಫ್ ಮೊತ್ತ ಸಹ ಕಡಿತವಾಗುವುದರಿಂದ ಅನೇಕ ಉದ್ಯೋಗಿಗಳು ವಿಪಿಎಫ್ ಆಯ್ದುಕೊಳ್ಳಲು ಬಯಸುತ್ತಾರೆ. ಇದೊಂದು ಕಿರಿಕಿರಿ ಇಲ್ಲದ ಪ್ರಕ್ರಿಯೆಯಾಗಿದ್ದು, ಪ್ರತಿವರ್ಷ ವಿಪಿಎಫ್ ವಂತಿಗೆಯನ್ನು ನವೀಕರಿಸಿದರೆ ಸಾಕು. ಹಣಕಾಸು ವರ್ಷಾರಂಭದಲ್ಲಿ ಉದ್ಯೋಗಿಯು ತನ್ನ ವಿಪಿಎಫ್ ವಂತಿಗೆ ಮೊತ್ತವನ್ನು ಉದ್ಯೋಗದಾತರಿಗೆ ತಿಳಿಸಬೇಕಾಗುತ್ತದೆ.
ಉತ್ತಮ ಬಡ್ಡಿದರ ನೀಡುವ ವಿಪಿಎಫ್
ವರ್ಷಕ್ಕೊಮ್ಮೆ ಸಂಬಳ ಏರಿಕೆಯಾದಾಗ ಉದ್ಯೋಗಿಗಳು ಸಾಮಾನ್ಯವಾಗಿ ತಮ್ಮ ಹೂಡಿಕೆಗಳನ್ನು ಸಹ ಹೆಚ್ಚಿಸಲು ಬಯಸುತ್ತಾರೆ. ಇನ್ನು ಹೂಡಿಕೆ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಜಾಸ್ತಿ ಸಮಯ ವ್ಯಯಿಸಲು ಸಾಧ್ಯವಾಗದಿದ್ದಾಗ ಸಹ ಉದ್ಯೋಗಿಗಳು ವಿಪಿಎಫ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ಸಾಮಾನ್ಯ ಕಾರಣಗಳನ್ನು ಹೊರತು ಪಡಿಸಿ ವಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಮತ್ತೊಂದು ಮುಖ್ಯ ಕಾರಣವೆಂದರೆ ಇದರಲ್ಲಿ ಸಿಗುವ ಹೆಚ್ಚಿನ ಬಡ್ಡಿದರ. ವಿಪಿಎಫ್ ಹಾಗೂ ಇಪಿಎಫ್ ಮೊತ್ತಕ್ಕೆ ವಾರ್ಷಿಕ ಶೇ 8.50 ಯಷ್ಟು ಬಡ್ಡಿದರ ಸದ್ಯ ಸಿಗುತ್ತಿದೆ. ಯಾವುದೇ ಫಿಕ್ಸೆಡ್ ಡಿಪಾಸಿಟ್ ಅಥವಾ ಉಳಿತಾಯ ಖಾತೆ ಅಥವಾ ಇನ್ನಾವುದೇ ಠೇವಣಿಯು ಇಷ್ಟು ದೊಡ್ಡ ಬಡ್ಡಿದರ ನಿಮಗೆ ನೀಡುವುದಿಲ್ಲವಾದ್ದರಿಂದ, ವಿಪಿಎಫ್ ಅತ್ಯಂತ ಆಕರ್ಷಕ ಹೂಡಿಕೆ ಆಯ್ಕೆಯಾಗಿದೆ. ಜೊತೆಗೆ ವಿಪಿಎಫ್ ಹೂಡಿಕೆ ಮಾಡುವುದು ಸಂಪೂರ್ಣ ಸುರಕ್ಷಿತವಾಗಿದ್ದು, ನಿವೃತ್ತಿಯ ನಂತರ ನಿಮ್ಮ ಹಣವನ್ನು ನೀವು ಪಡೆದುಕೊಳ್ಳುವಿರಿ. ಇದರಲ್ಲಿ ಯಾವುದೇ ರೀತಿಯ ರಿಸ್ಕ್ ಅಡಕವಾಗಿಲ್ಲ.
ಸುರಕ್ಷಿತ ಹೂಡಿಕೆ ಮಾರ್ಗ ವಿಪಿಎಫ್
ಇಕ್ವಿಟಿ ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ಎಸ್ಐಪಿಗಳಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಕೆಲ ಉದ್ಯೋಗಿಗಳು ಭಾವಿಸಿರುತ್ತಾರೆ. ಆದರೆ ಇಂಥ ಹೂಡಿಕೆಯ ಲಾಭ-ನಷ್ಟಗಳು ಯಾವಾಗಲೂ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತವೆ ಎಂಬುದನ್ನು ಗಮನದಲ್ಲಿಡಬೇಕಾಗುತ್ತದೆ. ಇದಕ್ಕೆ ಹೋಲಿಸಿದರೆ ವಿಪಿಎಫ್ ಸಂಪೂರ್ಣ ಸುರಕ್ಷಿತ ಹಾಗೂ ಉತ್ತಮ ಆದಾಯ ನೀಡುವ ಹೂಡಿಕೆ ವಿಧಾನವಾಗಿದೆ.
ಸ್ವಯಂ ಪ್ರೇರಿತ ಭವಿಷ್ಯ ನಿಧಿ ಮತ್ತು ತೆರಿಗೆ ಉಳಿತಾಯ
ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಮ್ಮ ವಿಪಿಎಫ್ ಹೂಡಿಕೆಗಳು ತೆರಿಗೆ ಉಳಿತಾಯಕ್ಕೆ ಅರ್ಹವಾಗಿರುತ್ತವೆ. ಆದಾಯ ತೆರಿಗೆ ಕಾಯ್ದೆ 1951 ರ ಸೆಕ್ಷನ್ 80 ಸಿ ಅಡಿಯಲ್ಲಿ ಈ ಹೂಡಿಕೆಗಳು ತೆರಿಗೆ ಮುಕ್ತವಾಗಿರುತ್ತವೆ. ಪ್ರಸ್ತುತ ಓರ್ವ ಉದ್ಯೋಗಿಯು ಪ್ರತಿವರ್ಷ ಪಡೆಯಬಹುದಾದ ತೆರಿಗೆ ವಿನಾಯಿತಿಯನ್ನು 1,50,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ವರ್ಷವೊಂದರಲ್ಲಿ ನೀವು 46,800 ರೂಪಾಯಿಗಳಷ್ಟು ತೆರಿಗೆಯನ್ನು ಉಳಿಸಬಹುದು. ಹೀಗಾಗಿ ಮುಂದಿನ ಬಾರಿ ನಿಮ್ಮ ಸಂಬಳ ಹೆಚ್ಚಾದಾಗ ನೀವೂ ಸಹ ಸುರಕ್ಷಿತ ಹಾಗೂ ತೆರಿಗೆ ಉಳಿತಾಯದ ವಿಪಿಎಫ್ ಹೂಡಿಕೆ ಮಾರ್ಗವನ್ನು ಆಯ್ದುಕೊಳ್ಳಬಹುದು.
ವಿಪಿಎಫ್ ಲಾಕ್ ಇನ್ ಅವಧಿ ಎಷ್ಟು?
ಇನ್ನು ಇಪಿಎಫ್ ರೀತಿಯಲ್ಲಿಯೇ ವಿಪಿಎಫ್ ಮೊತ್ತವು ಸಹ ಲಾಕ್ ಇನ್ ಅವಧಿಯನ್ನು ಹೊಂದಿರುತ್ತದೆ. ಅಂದರೆ ನೀವು ಸತತವಾಗಿ ಎರಡು ತಿಂಗಳು ನಿರುದ್ಯೋಗಿಯಾಗಿದ್ದರೆ ಅಥವಾ ನಿವೃತ್ತಿಯ ನಂತರ ಈ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಅಲ್ಲಿಯವರೆಗೂ ತೆರಿಗೆ ವಿನಾಯಿತಿಯೊಂದಿಗೆ ನಿಮ್ಮ ಹೂಡಿಕೆಯನ್ನು ಮುಂದುವರಿಸಬಹುದು. ಒಂದು ವೇಳೆ ನೀವು ಕೆಲಸ ಬದಲಾಯಿಸಿದರೆ ಇಪಿಎಫ್ ನಂತೆಯೇ ವಿಪಿಎಫ್ ಅನ್ನು ಕೂಡ ವರ್ಗಾವಣೆ ಮಾಡಿಕೊಳ್ಳಬಹುದು.
ಭವಿಷ್ಯ ಸುಂದರವಾಗಿಸಿಕೊಳ್ಳಿ
ಇಪಿಎಫ್‌ನಲ್ಲಿ ಹೂಡಬಹುದಾದ ಗರಿಷ್ಠ ವಂತಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಇಪಿಎಫ್ ವಂತಿಗೆಯ ನಿಯಮಾವಳಿಗಳನ್ನು ಪರಿಷ್ಕರಿಸಿದ್ದಾರೆ. ಉದ್ಯೋಗಿಯೊಬ್ಬ ಇಪಿಎಫ್‌ನಲ್ಲಿ ವಾರ್ಷಿಕವಾಗಿ ಗರಿಷ್ಠ 2,50,000 ರೂಪಾಯಿಗಳ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅಂದರೆ 2021 ರ ಹೊಸ ಹಣಕಾಸು ಕಾಯ್ದೆಯ ಪ್ರಕಾರ 2,50,000 ರೂಪಾಯಿ ಮೀರುವ ಮೊತ್ತಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.
"ಕೆಲವರು ತಮ್ಮ ಇಪಿಎಫ್ ಖಾತೆಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಗಳವರೆಗೂ ವಂತಿಗೆ ಪಾವತಿಸಲಾರಂಭಿಸಿದರು. 2 ಲಕ್ಷ ಆದಾಯ ಗಳಿಸುವ, ತಮ್ಮ ಪಿಎಫ್ ಉಳಿತಾಯಕ್ಕೆ ಶೇ 8ರಷ್ಟು ಬಡ್ಡಿದರ ಪಡೆಯುವ ಉದ್ಯೋಗಿಯೊಬ್ಬನಿಗೆ ಇದನ್ನು ಹೋಲಿಕೆ ಮಾಡಲಾಗದು. ಹೀಗಾಗಿಯೇ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಬೇಕಾಯಿತು." ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ನಿಮ್ಮ ಇಪಿಎಫ್ ವಂತಿಗೆಯು ಈ ಮಿತಿಗಿಂತ ಕಡಿಮೆ ಇದ್ದಲ್ಲಿ ನೀವು ವಿಪಿಎಫ್ ವಂತಿಗೆಯನ್ನು ಆರಂಭಿಸಬಹುದು. ಇನ್ನು ನೀವು ತೆರಿಗೆ ಪಾವತಿಸಲು ಸಿದ್ಧವಿದ್ದರೆ, ಆಗಲೂ ಹೆಚ್ಚುವರಿ ವಿಪಿಎಫ್ ಪಾವತಿಸಬಹುದು. ಇದರಲ್ಲಿ ಸಿಗುವ ಬಡ್ಡಿದರ ಹೆಚ್ಚಾಗಿರುವುದನ್ನು ಗಮನಿಸಬೇಕಾಗುತ್ತದೆ.
ವಿಪಿಎಫ್ ಆಯ್ಕೆ ಮಾಡಿ, ಭವಿಷ್ಯ ಸುಂದರವಾಗಿಸಿಕೊಳ್ಳಿ
ವೃದ್ಧಾಪ್ಯದಲ್ಲಿ ಹಣಕಾಸು ಸಮಸ್ಯೆ ಎದುರಾಗಬಾರದೆಂಬ ಕಾಳಜಿಯಿಂದ ಇಪಿಎಫ್ ಯೋಜನೆಯನ್ನು ರೂಪಿಸಲಾಗಿದೆ. ಇದರ ಜೊತೆಗೆ ವಿಪಿಎಫ್ ಆಯ್ಕೆ ಮಾಡಿಕೊಂಡು ನಿಮ್ಮ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಬಹುದು.


Click it and Unblock the Notifications