ಈಗ ನವರಾತ್ರಿ ಸಂಭ್ರಮ ನಡೆಯುತ್ತಿದೆ. ಇನ್ನೇನು ದೀಪಾವಳಿ ಕೂಡ ಬರಲಿದೆ. ಇದರ ಜತೆಜತೆಗೆ ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಬೇರೆ ಇ ಕಾಮರ್ಸ್ ವೆಬ್ ಸೈಟ್ ಗಳು ಭರ್ಜರಿ ಆಫರ್ ಗಳನ್ನು ಘೋಷಿಸಿವೆ. ಆದರೆ ಇಂಥ ಆಫರ್ ಇರುವ ಸಂದರ್ಭದಲ್ಲೂ ನಗದು ನೀಡಿ, ಖರೀದಿ ಮಾಡಲು ಸಾಧ್ಯವಾಗದಿದ್ದಲ್ಲಿ ಕ್ರೆಡಿಟ್ ಕಾರ್ಡ್ ಬಳಸಬಹುದಾ ಎಂಬ ಗೊಂದಲ ಇದೆಯಾ?
ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಆ ಆಯ್ಕೆ ಉತ್ತಮ ಆಗಬಹುದೇ ಎಂಬ ಪ್ರಶ್ನೆ ನಿಮಗಿದ್ದಲ್ಲಿ, ಉತ್ತರ 'ಹೌದು' ಎಂದಾಗಿದೆ. ಕ್ರೆಡಿಟ್ ಕಾರ್ಡ್ ಬಳಸುವುದೇ ಉತ್ತಮ ಎಂದು ಆ ನಿರ್ಧಾರವನ್ನು ಬೆಂಬಲಿಸುವ ಆರು ಕಾರಣಗಳು ಇಲ್ಲಿವೆ. ಇನ್ನೇಕೆ ತಡ ಮುಂದಕ್ಕೆ ಓದಿಕೊಳ್ಳಿ.
ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ
ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡಿದಲ್ಲಿ ಸಾಲ ಪಡೆದುಕೊಂಡಂತೆಯೇ ಸರಿ. ಕ್ರೆಡಿಟ್ ಕಾರ್ಡ್ ಬಾಕಿಯನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ಪಾಸಿಟಿವ್ ಪರಿಣಾಮ ಆಗಲಿದೆ. ಇನ್ನೊಂದು ವಿಚಾರ ನೆನಪಿರಲಿ, ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದಲ್ಲಿ ಬಡ್ಡಿ ಬೀಳುವುದಿಲ್ಲ. ಆ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ಮಾಡುವುದು ಉತ್ತಮ ಹಾಗೂ ಅನುಕೂಲಕರ ಆಯ್ಕೆ ಆಗಲಿದೆ. ಆದರೆ ಸಮಯಕ್ಕೆ ಸರಿಯಾಗಿ ಪಾವತಿ ಆಗಬೇಕಷ್ಟೇ. ಇನ್ನು ಇದರ ಜತೆಗೆ ಒಟ್ಟಾರೆ ಖರ್ಚಿನ ಮಿತಿಯ ಶೇಕಡಾ 30ರಷ್ಟು ಸಾಲದ ಮಿತಿ ದಾಟದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಈ ಅಂಶಗಳನ್ನು ಗಮನಿಸದೇ ಹೋದಲ್ಲಿ ವಾರ್ಷಿಕ 30ರಿಂದ 49 ಪರ್ಸೆಂಟ್ ಬಡ್ಡಿ ಬೀಳಬಹುದು. ಭವಿಷ್ಯದಲ್ಲಿ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅರ್ಹತೆ ಮೇಲೆ ಪರಿಣಾಮ ಆಗಬಹುದು.
ಕ್ರೆಡಿಟ್ ಕಾರ್ಡ್ ಅನುಕೂಲಗಳ ಮೂಲಕ ಹಣ ಉಳಿತಾಯ ಮಾಡಬಹುದು
ಗ್ರಾಹಕರನ್ನು ಆಕರ್ಷಿಸಲು ಹಬ್ಬದ ಸೀಸನ್ ನಲ್ಲಿ ಹಲವು ವರ್ತಕರು, ರೀಟೇಲರ್ ಗಳು ನಾನಾ ಅನುಕೂಲಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ರಿವಾರ್ಡ್ ಪಾಯಿಂಟ್ ಗಳು, ರಿಯಾಯಿತಿಗಳು, ವೋಚರ್, ಕ್ಯಾಶ್ ಬ್ಯಾಕ್ ಇತ್ಯಾದಿ ಆಫರ್ ಗಳನ್ನು ಕ್ರೆಡಿಟ್ ಕಾರ್ಡ್ ಮೇಲೆ ನೀಡಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ಸೆಕ್ಷನ್ ನಲ್ಲಿ ಈ ಆಫರ್ ಗಳ ಬಗ್ಗೆ ತಿಳಿಯಬಹುದು. ಒಂದು ವೇಳೆ ಕ್ರೆಡಿಟ್ ಕಾರ್ಡ್ ಗೆ ಆಫರ್ ಗಳು ದೊರೆಯದಿದ್ದರೂ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಗೆ ರಿವಾರ್ಡ್ ಪಾಯಿಂಟ್ ಬಂದಲ್ಲಿ ನಿಗದಿತ ಅವಧಿಯೊಳಗೆ ಅದರ ಪ್ರಯೋಜನ ಪಡೆದುಕೊಳ್ಳಬೇಕು.
ಬಡ್ಡಿ ಇಲ್ಲದ ಅವಧಿಯಲ್ಲಿ ನಗದು ಹರಿವು ನಿರ್ವಹಣೆ
ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದಲ್ಲಿ ಒಂದರಿಂದ ಮತ್ತೊಂದು ಬಿಲ್ಲಿಂಗ್ ಸೈಕಲ್ ಅವಧಿಗೆ ಹಣ ಪಾವತಿಸಲು ಸಮಯ ಸಿಗುತ್ತದೆ. ಇದು ಸಾಮಾನ್ಯವಾಗಿ ಒಂದು ತಿಂಗಳಿಗೂ ಹೆಚ್ಚು ಅವಧಿಯದಾಗಿರುತ್ತದೆ. ಯಾವುದೇ ಬಡ್ಡಿ ಇಲ್ಲದೆ, ಇಂತಿಷ್ಟು ಸಮಯಕ್ಕೆ ಹಣ ಕಟ್ಟಬಹುದು. ಒಂದೇ ಸಲಕ್ಕೆ ಕಟ್ಟಬೇಕಾದ ಹಣವನ್ನು ಉಳಿಸಿಕೊಂಡು, ಅದನ್ನೇ ಬೇರೆ ತುರ್ತು ಖರ್ಚುಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಇಎಂಐ ಆಗಿ ಬದಲಿಸಿಕೊಳ್ಳಲು ಅವಕಾಶ ಇದೆ
ಮೊದಲೇ ಹೇಳಿದ ಹಾಗೆ ಒಂದೇ ಸಲಕ್ಕೆ ಹಣ ಕಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ತುರ್ತಾಗಿ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದಾದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ, ಕೊಂಡುಕೊಂಡ ನಂತರ ಆ ಮೊತ್ತವನ್ನು ಇಎಂಐ ಆಗಿ ವರ್ಗಾವಣೆ ಮಾಡಬಹುದು. ಆಯಾ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಕ್ರೆಡಿಟ್ ಕಾರ್ಡ್ ಆಧಾರದಲ್ಲಿ ಮರುಪಾವತಿ ಅವಧಿ ದೊರೆಯುತ್ತದೆ. ಅದೇ ರೀತಿ ಬಡ್ಡಿ ದರ ಕೂಡ ತೀರ್ಮಾನ ಆಗುತ್ತದೆ.
ಹೆಚ್ಚುವರಿ ರಿಯಾಯಿತಿ
ಹಲವು ಕ್ರೆಡಿಟ್ ಕಾರ್ಡ್ ಗಳು ವಿವಿಧ ಮಾರಾಟಗಾರರ ಜತೆಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಅವುಗಳಿಂದ ಖರೀದಿ ಮಾಡಿದಾಗ ನೋ ಕಾಸ್ಟ್ ಇಎಂಐ ಆಗಿ ಮಾಡಿಸಿಕೊಳ್ಳಬಹುದು. ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ವಿಧಾನದಲ್ಲಿ ಇಎಂಐಗೆ ಕನ್ವರ್ಟ್ ಮಾಡಿಸಿಕೊಳ್ಳಬಹುದು. ಇಎಂಐ ಮೇಲಿನ ಬಡ್ಡಿಯನ್ನು ಮಾರಾಟಗಾರರೇ ಕಟ್ಟುತ್ತಾರೆ. ಕಾರ್ಡ್ ದಾರರು ಖರೀದಿ ವೆಚ್ಚವನ್ನು ಭರಿಸಿದರೆ ಆಯಿತು. ಕೆಲವು ಕಾರ್ಡ್ ಕಂಪೆನಿಗಳು ಹೆಚ್ಚುವರಿ ರಿಯಾಯಿತಿಗಳನ್ನು ನೀಡುತ್ತಿವೆ. ಇದರ ಜತೆಗೆ ಯಾವುದೇ ಬಡ್ಡಿ ಹಾಕದಂತೆ ನಿರ್ದಿಷ್ಟ ಅವಧಿಗೆ ಇಎಂಐ ಆಯ್ಕೆ ಮಾಡಿಕೊಳ್ಳುವುದು ಸಹ ಸಾಧ್ಯವಿರುತ್ತದೆ.
ತಕ್ಷಣದ ಹಣದ ಅಗತ್ಯಕ್ಕೆ ಪ್ರೀ ಅಪ್ರೂವ್ಡ್ ಸಾಲ
ಯಾವ ಕಾರ್ಡ್ ದಾರರು ಈ ಹಿಂದೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾ ಬರುತ್ತಿರುತ್ತಾರೋ ಅಂಥವರಿಗೆ ಸಾಮಾನ್ಯವಾಗಿ ಸಾಲದ ಆಫರ್ ನೀಡಲಾಗುತ್ತದೆ. ಇವು ಅವರ ಕ್ರೆಡಿಟ್ ಲಿಮಿಟ್ ಮೇಲೆ ನೀಡುವ ಪ್ರೀ ಅಪ್ರೂವ್ಡ್ ಸಾಲ. ಈ ಸಾಲದ ಅರ್ಹತೆ ಇರುವವರಿಗೆ ತಕ್ಷಣವೇ ಮಂಜೂರಾಗುತ್ತದೆ. ಹಬ್ಬದ ಸಂದರ್ಭದಲ್ಲಿ ತುರ್ತು ನಗದಿನ ಅಗತ್ಯ ಇರುವಾಗ ಈ ಪ್ರೀ ಅಪ್ರೂವ್ಡ್ ಸಾಲದ ಅನುಕೂಲವನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಹೆಚ್ಚು ಸಮಯ ಕಾಯುವುದು ಕೂಡ ಅಗತ್ಯ ಇಲ್ಲ. ಬಹುತೇಕ ಅರ್ಜಿ ಹಾಕಿಕೊಂಡ ದಿನವೇ ಸಾಲ ಸಿಗುತ್ತದೆ.


Click it and Unblock the Notifications