ಪ್ರಸ್ತುತ ದೇಶದಲ್ಲಿ ಅತೀ ಮುಖ್ಯವಾಗಿರುವ ದಾಖಲೆಗಳಲ್ಲಿ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ ಕಾರ್ಡ್) ಕೂಡಾ ಒಂದಾಗಿದೆ. ನಮ್ಮ ಬಹುತೇಕ ಎಲ್ಲ ಹಣಕಾಸು ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಜೂನ್ 30 ರ ಮೊದಲು ನೀವು ನಿಮ್ಮ ಪ್ಯಾನ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ನಿಷ್ಕ್ರೀಯವಾಗಿರಲಿದೆ.
ಹೌದು, ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಹಲವಾರು ಬಾರಿ ಅವಕಾಶವನ್ನು ನೀಡಿತ್ತು, ಗಡುವನ್ನು ಕೂಡಾ ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ ಜೂನ್ 30ರ ಬಳಿಕ ಗಡುವು ವಿಸ್ತರಣೆ ಮಾಡಿಲ್ಲ. ಆದ್ದರಿಂದಾಗಿ ನಿಮ್ಮ ಪ್ಯಾನ್ ಕಾರ್ಡ್ ಈಗ ನಿಷ್ಕ್ರೀಯವಾಗಿರಲಿದೆ. ಇದರಿಂದಾಗಿ ಯಾವುದೇ ಹಣಕಾಸು ಕಾರ್ಯಗಳನ್ನು ನಡೆಸುವುದು ಕಷ್ಟವಾಗಲಿದೆ.

ನಾವು ಉದಾಹರಣೆ ಸಹಿತವಾಗಿ ಹೇಳುವುದಾದರೆ ನೀವು ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಅಥವಾ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ, ಆದಾಯ ತೆರಿಗೆ ರಿಟರ್ನ್ಸ್ ಅನ್ನು ಫೈಲ್ ಮಾಡಲು ಸಾಧ್ಯವಾಗುವುದಿಲ್ಲ, ತೆರಿಗೆ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಇನ್ನು ಹಲವಾರು ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಆದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಿದ್ದರೂ ಕೂಡಾ ನೀವು ಕೆಲವೊಂದು ಹಣಕಾಸು ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ. ಆದರೆ ಈ ಹಣಕಾಸು ಕಾರ್ಯಗಳಿಗೆ ಅಧಿಕ ಟಿಡಿಎಸ್ ಮತ್ತು ಟಿಸಿಎಸ್ ಕಡಿತವಾಗಲಿದೆ. ನೀವು ಯಾವೆಲ್ಲ ಕಾರ್ಯಗಳನ್ನು ಪ್ಯಾನ್ ಕಾರ್ಡ್ ಇಲ್ಲದೆ ಮಾಡಬಹುದು ಎಂಬುವುದನ್ನು ನಾವು ಉದಾಹರಣೆಯೊಂದಿಗೆ ವಿವರಿಸಿದ್ದೇವೆ, ಮುಂದೆ ಓದಿ...
ಪ್ಯಾನ್ ಇಲ್ಲದೆ, ಅಧಿಕ ಟಿಡಿಎಸ್ ಪಾವತಿಸಿ ಈ ಕಾರ್ಯ ಮಾಡಿ
* ನೀವು ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್ ಅಥವಾ ರೆಕ್ಯೂರಿಂಗ್ ಡೆಪಾಸಿಟ್‌ನಿಂದ ಒಂದು ಹಣಕಾಸು ವರ್ಷದಲ್ಲಿ 40 ಸಾವಿರ ರೂಪಾಯಿ (ಹಿರಿಯ ನಾಗರಿಕರಿಗೆ 50 ಸಾವಿರ ರೂಪಾಯಿ) ಗಳಿಸುತ್ತಿದ್ದರೆ, ನಿಮಗೆ ಟಿಡಿಎಸ್ ವಿಧಿಸಲಾಗುತ್ತದೆ.
* ಒಂದು ಹಣಕಾಸಿನ ವರ್ಷದಲ್ಲಿ ಕಂಪನಿಗಳು ಅಥವಾ ಮ್ಯೂಚುವಲ್ ಫಂಡ್‌ಗಳಿಂದ 5,000 ರೂಪಾಯಿಗಿಂತ ಹೆಚ್ಚಿನ ಲಾಭಾಂಶವನ್ನು ಪಡೆಯುವುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.
* ನೀವು 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯನ್ನು ಮಾರಾಟ ಮಾಡಿದರೆ, ನೀವು ಹೆಚ್ಚಿನ ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ.
* 10 ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ ಕಾರನ್ನು ಖರೀದಿಸಿದರೆ ಹೆಚ್ಚಿನ ಟಿಸಿಎಸ್ ಅನ್ನು ಪಾವತಿಸಬೇಕಾಗುತ್ತದೆ.
* ತೆರಿಗೆ ಬಾಕಿ ಇರುವಾಗ ನಿಮ್ಮ ಇಪಿಎಫ್ ಖಾತೆಯಿಂದ 50 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್‌ಡ್ರಾ ಮಾಡಿದರೆ ಅಧಿಕ ಟಿಡಿಎಸ್ ತೆರಬೇಕಾಗುತ್ತದೆ.
* ಮಾಸಿಕ ಬಾಡಿಗೆ 50 ಸಾವಿರ ರೂಪಾಯಿಗಿಂತ ಅಧಿಕವಾಗಿರುವಾಗ ಭೂಮಾಲೀಕರಿಗೆ ಬಾಡಿಗೆ ಪಾವತಿಯನ್ನು ಮಾಡುವುದರಿಂದ ಅಧಿಕ ಟಿಡಿಎಸ್ ವಿಧಿಸಲಾಗುತ್ತದೆ.
* 50 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.
* ನೀವು ಗುತ್ತಿಗೆ ಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಂಡರೆ ಮತ್ತು ಅವರಿಗೆ ಒಂದೇ ಒಪ್ಪಂದಕ್ಕೆ 30,000 ರೂಪಾಯಿ ಅಥವಾ ಒಟ್ಟಾಗಿ ಒಂದು ಲಕ್ಷ ರೂಪಾಯಿಗಿಂತ ಅಧಿಕ ಪಾವತಿಸಿದರೆ, ನೀವು ಹೆಚ್ಚಿನ ಟಿಡಿಎಸ್ ಪಾವತಿಸಬೇಕಾಗುತ್ತದೆ.
* 15,000 ರೂಪಾಯಿಗಿಂತ ಹೆಚ್ಚಿನ ಕಮಿಷನ್ ಅಥವಾ ಬ್ರೋಕರೇಜ್ ಪಾವತಿಗಳನ್ನು ಸ್ವೀಕರಿಸುವುದರಿಂದ ಹೆಚ್ಚಿನ ಟಿಡಿಎಸ್ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 206ಎಎ ಮತ್ತು 206ಸಿಸಿಗಳು ಪ್ರಮುಖ ಪರಿಣಾಮಗಳನ್ನು ಹೊಂದಿವೆ ಎಂದು ವ್ಯಾಪಾರ ಸಲಹಾ ಸಂಸ್ಥೆಯಾದ ಆರ್‌ಎಸ್‌ಎಂ ಇಂಡಿಯಾದ ಸಂಸ್ಥಾಪಕ ಸುರೇಶ್ ಸುರಾನಾ ಹೇಳುತ್ತಾರೆ. ಸುರಾನಾ ಪ್ರಕಾರ, ಟಿಡಿಎಸ್‌ಗೆ ಒಳಪಟ್ಟಿರುವ ವಹಿವಾಟುಗಳ ಸಮಯದಲ್ಲಿ ನೀವು ನಿಮ್ಮ ಪ್ಯಾನ್ ಅನ್ನು ಒದಗಿಸದಿದ್ದರೆ, ತೆರಿಗೆ ಕಡಿತ ಮಾಡುವವರು ಒಟ್ಟು ಮೊತ್ತದಲ್ಲಿ ಶೇಕಡ 20ರಷ್ಟು ತೆರಿಗೆಯನ್ನು ಕಡಿತ ಮಾಡಬೇಕಾಗುತ್ತದೆ. ನಿಮ್ಮ ಪ್ಯಾನ್ ನಿಷ್ಕ್ರಿಯವಾಗಿದ್ದರೆ ಸಹ ಇದು ಅನ್ವಯಿಸುತ್ತದೆ.
ಇದಲ್ಲದೆ, ನಿಮ್ಮ ಪ್ಯಾನ್ ಅನ್ನು ನೀವು ಒದಗಿಸದಿದ್ದರೆ ಅಥವಾ ಅದು ನಿಷ್ಕ್ರಿಯವಾಗಿದ್ದರೆ, ಹೆಚ್ಚಿನ ಟಿಸಿಎಸ್ ವಿಧಿಸಬಹುದು ಎಂದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206CC ಹೇಳುತ್ತದೆ. ಇದು ನಿಗದಿತ ದರಕ್ಕಿಂತ ಎರಡು ಪಟ್ಟು ಅಥವಾ ಶೇಕಡ 5ರಷ್ಟು (ಯಾವುದು ಹೆಚ್ಚು ಅದು) ಆಗಿರಬಹುದು. ಇತ್ತೀಚಿನ ಬಜೆಟ್ 2023 ರಲ್ಲಿ ಜುಲೈ 1, 2023 ರಿಂದ ಅನ್ವಯವಾಗುವಂತೆ ಗರಿಷ್ಠ ಟಿಸಿಎಸ್ ದರವನ್ನು ಶೇಕಡ 20 ಎಂದು ನಿಗದಿಪಡಿಸಲಾಗಿದೆ. ಅದು ಕೂಡಾ ಪ್ಯಾನ್ ಒದಗಿಸಿದರೂ ನೀವು ಟಿಸಿಎಸ್ ಪಾವತಿಸಬೇಕಾಗುತ್ತದೆ.


Click it and Unblock the Notifications