ಸಾಲ ಇಲ್ಲದೆ ಬದುಕು ನಡೆಸಬೇಕು ಅನ್ನೋದು ಬಹಳ ಜನರ ಆಸೆ. ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಸಾಲಗಳನ್ನು ಮಾಡಿದರೂ ಅವುಗಳನ್ನು ಬೇಗ ತೀರಿಸಿಕೊಳ್ಳಬೇಕು ಅನ್ನೋದು ಲೆಕ್ಕಾಚಾರ ಆಗಿರುತ್ತದೆ. ಅದರಲ್ಲೂ ಏಕ ಕಾಲಕ್ಕೆ ಹಲವು ರೀತಿಯ ಸಾಲ ಇರುವವರಿಗೆ ತಮ್ಮ ಹತ್ತಿರ ಹಣ ಇದ್ದರೂ ಯಾವುದನ್ನು ಮುಂಚಿತವಾಗಿ ಕೊಟ್ಟು ಪೂರೈಸಬೇಕು ಎಂಬ ಗೊಂದಲ ಇದ್ದೇ ಇರುತ್ತದೆ.
ಮನೆ ಸಾಲ, ಕಾರಿನ ಸಾಲ, ಪರ್ಸನಲ್ ಲೋನ್ ಹಾಗೂ ಜತೆಗೆ ಕ್ರೆಡಿಟ್ ಕಾರ್ಡ್ ಗೆ ಪಾವತಿ ಮಾಡಬೇಕಾದ ಹಣ ಹೀಗೆ ತಾವು ಕಟ್ಟಬೇಕಾದ ಸಾಲದ ಜವಾಬ್ದಾರಿಗಳನ್ನು ಇಷ್ಟುದ್ದ ಇರಿಸಿಕೊಂಡಿರುತ್ತಾರೆ. ಇಎಂಐ ಒತ್ತಡ ನಿರ್ವಹಣೆ ಮಾಡುವುದು ಬಲು ಕಷ್ಟ ಅನ್ನೋದರಲ್ಲಿ ಎರಡು ಮಾತಿಲ್ಲ. ಒಬ್ಬ ವ್ಯಕ್ತಿಗೆ ಹೆಚ್ಚುವರಿಯಾಗಿ ಹಣ ದೊರೆತರೆ ಈಗಿನ ಸಾಲಗಳ ಪೈಕಿ ಯಾವುದನ್ನು ಆದ್ಯತೆ ಮೇಲೆ ಪೂರ್ವ ಪಾವತಿ ಮಾಡಬೇಕು ಎಂದು ವಿವರಿಸುವ ಲೇಖನ ಇಲ್ಲಿದೆ.
ನಿಮ್ಮ ಬಳಿ ಈಗಾಗಲೇ 'ತುರ್ತು ನಿಧಿ' (ಎಮರ್ಜೆನ್ಸಿ ಫಂಡ್) ಇದೆ ಎಂದಿಟ್ಟುಕೊಳ್ಳೋಣ. ಹೆಚ್ಚುವರಿ ಹಣದಲ್ಲಿ ಸಾಲ ಮರುಪಾವತಿ ಮಾಡಿದರೆ ಹೇಗೆ ಎಂಬ ಆಲೋಚನೆ ಬರುತ್ತದೆ. ಒಂದು ವೇಳೆ ನಿಮಗೆ ಹಲವು ಸಾಲಗಳಿದ್ದಲ್ಲಿ ಏನು ಮಾಡಬೇಕು? ನೀವು ಯಾವುದಾದರೂ ಒಂದನ್ನು ಆರಿಸಿಕೊಂಡು, ಮುಂಚಿತವಾಗಿ ತೀರಿಸಬೇಕಾಗುತ್ತದೆ.
ಆದಾಯ 1.5 ಲಕ್ಷ ರುಪಾಯಿ- ಇಎಂಐ 55,000 ರುಪಾಯಿ
ಒಬ್ಬ ವ್ಯಕ್ತಿಗೆ ಈ ಕೆಳಕಂಡಂಥ ಸಾಲಗಳು ಇವೆ ಎಂದುಕೊಳ್ಳಿ:
* ಗೃಹ ಸಾಲ 35 ಲಕ್ಷ ರುಪಾಯಿ ಇದೆ. ಬಡ್ಡಿ 7.5 ಪರ್ಸೆಂಟ್. ಇಎಂಐ ಮೊತ್ತ ತಿಂಗಳಿಗೆ 30,000 ರುಪಾಯಿ ಬರುತ್ತದೆ.
* ಕಾರು ಸಾಲ 6 ಲಕ್ಷ ರುಪಾಯಿ ಇದೆ. 10 ಪರ್ಸೆಂಟ್ ಬಡ್ಡಿ. ಇಎಂಐ 10,000 ರುಪಾಯಿ ಬರುತ್ತದೆ.
* ಪರ್ಸನಲ್ ಲೋನ್ 3 ಲಕ್ಷ ರುಪಾಯಿ ಇದೆ. 15 ಪರ್ಸೆಂಟ್ ಬಡ್ಡಿ. ಇಂಐ 15,000 ರುಪಾಯಿ ಬರುತ್ತದೆ.
* ಕ್ರೆಡಿಟ್ ಕಾರ್ಡ್ ಬಾಕಿ 1.5 ಲಕ್ಷ ರುಪಾಯಿ ಇದೆ. ತಿಂಗಳಿಗೆ 3 ಪರ್ಸೆಂಟ್ ಬಡ್ಡಿ (ಅಥವಾ ವರ್ಷಕ್ಕೆ 36 ಪರ್ಸೆಂಟ್)
ಈ ವ್ಯಕ್ತಿ ಎಲ್ಲ ಇಎಂಐ ಸೇರಿ ಒಟ್ಟು 55,000 ರುಪಾಯಿ ಕಟ್ಟುತ್ತಾರೆ. ಇವರ ತಿಂಗಳ ಆದಾಯ 1.5 ಲಕ್ಷ ರುಪಾಯಿ ಇದೆ ಮತ್ತು ಖರ್ಚು 75,000 ರುಪಾಯಿ. ಆದಾಯ ಮತ್ತು ಖರ್ಚು ಕಳೆದು ತಿಂಗಳಿಗೆ ಹೆಚ್ಚುವರಿಯಾಗಿ 20,000 ರುಪಾಯಿ ಉಳಿಯುತ್ತದೆ. ಸರಳವಾಗಿ ಲೆಕ್ಕಾಚಾರ ಮಾಡಿಕೊಳ್ಳುವ ಕಾರಣಕ್ಕೆ ಸದ್ಯಕ್ಕೆ ಯಾವುದೇ ತಿಂಗಳ ಉಳಿತಾಯದ ಜವಾಬ್ದಾರಿ ಇಲ್ಲ ಅಂದುಕೊಳ್ಳೋಣ.
ಈ ಹೆಚ್ಚುವರಿ 20,000 ರುಪಾಯಿ ಮೊತ್ತವನ್ನು ಬಾಕಿ ಉಳಿದ ಈ ಸಾಲಗಳ ಪೈಕಿ ಒಂದಕ್ಕೆ ಪೂರ್ವಪಾವತಿ ಮಾಡಲು ಆರಂಭಿಸಬಹುದು. ಹಾಗಿದ್ದರೆ ಯಾವುದನ್ನು ಮೊದಲು ಕಟ್ಟಬೇಕು? ಯಾವುದಕ್ಕೆ ಹೆಚ್ಚಿನ ಬಡ್ಡಿಯೋ ಅದನ್ನು ಮೊದಲು ತೀರಿಸಬೇಕು.
ಕ್ರೆಡಿಟ್ ಕಾರ್ಡ್ ಬಾಕಿ ಮೊದಲು ತೀರಿಸಿ
ಕ್ರೆಡಿಟ್ ಕಾರ್ಡ್ ಬಾಕಿ ಸಾಲಗಳಲ್ಲೇ ದುಬಾರಿಯಾದದ್ದು. ಕ್ರೆಡಿಟ್ ಕಾರ್ಡ್ ಗಳಿಗೆ ಕನಿಷ್ಠ ಮೊತ್ತ ಮಾತ್ರ ಪಾವತಿಸುವುದು ಉತ್ತಮ ನಡೆಯಲ್ಲ. ಆದ್ದರಿಂದ ಹೆಚ್ಚುವರಿ ಹಣವನ್ನು ಕ್ರೆಡಿಟ್ ಕಾರ್ಡ್ ಗೆ ಎಷ್ಟು ತೀರಿಸಬೇಕೋ ಅಷ್ಟಕ್ಕೆ ಪಾವತಿಸುವುದು ಉತ್ತಮ. ಆ ನಂತರ ಎರಡನೆಯದಾಗಿ ಹೆಚ್ಚಿನ ಬಡ್ಡಿ ಪಾವತಿ ಮಾಡುತ್ತಿರುವುದು ಪರ್ಸನಲ್ ಲೋನ್. ಬಡ್ಡಿ ಮೊತ್ತ ಹದಿನೈದು ಪರ್ಸೆಂಟ್. ಆ ನಂತರ ಕಾರಿನ ಸಾಲವನ್ನು ತೀರಿಸಬೇಕು. ಇನ್ನೊಂದು ವಿಚಾರ, ಆದ್ದರಿಂದ ಇನ್ನೊಂದು ಪರ್ಸನಲ್ ಲೋನ್ ತೆಗೆದುಕೊಂಡು, ಕ್ರೆಡಿಟ್ ಕಾರ್ಡ್ ಬಾಕಿಯನ್ನು ತೀರಿಸಿಬಿಡಿ. ಏಕೆಂದರೆ ಪರ್ಸನಲ್ ಲೋನ್ ಬಡ್ಡಿ ದರ 15 ಪರ್ಸೆಂಟ್ ಹಾಗೂ ಕ್ರೆಡಿಟ್ ಕಾರ್ಡ್ ಮೇಲೆ ವರ್ಷಕ್ಕೆ 36 ಪರ್ಸೆಂಟ್ ಬಡ್ಡಿ ಬೀಳುತ್ತದೆ.
ಹೂಡಿಕೆಗೂ ಮುನ್ನ ಸಾಲ ತೀರಿಸಿಕೊಳ್ಳಿ
ಈಗ ಕಟ್ಟಬೇಕಾದ ತಿಂಗಳ ಇಎಂಐ ಹೀಗೆ ಇರುತ್ತದೆ:
* ಗೃಹ ಸಾಲ 35 ಲಕ್ಷ ರುಪಾಯಿ ಇದೆ. ಬಡ್ಡಿ 7.5 ಪರ್ಸೆಂಟ್. ಇಎಂಐ ಮೊತ್ತ ತಿಂಗಳಿಗೆ 30,000 ರುಪಾಯಿ ಬರುತ್ತದೆ.
* ಕಾರು ಸಾಲ 6 ಲಕ್ಷ ರುಪಾಯಿ ಇದೆ. 10 ಪರ್ಸೆಂಟ್ ಬಡ್ಡಿ. ಇಎಂಐ 10,000 ರುಪಾಯಿ ಬರುತ್ತದೆ.
* ಪರ್ಸನಲ್ ಲೋನ್ 4.5 ಲಕ್ಷ ರುಪಾಯಿ ಇದೆ. 15 ಪರ್ಸೆಂಟ್ ಬಡ್ಡಿ. ಇಂಐ 25,000 ರುಪಾಯಿ ಬರುತ್ತದೆ.
* ಕ್ರೆಡಿಟ್ ಕಾರ್ಡ್ ಬಾಕಿ: ಶೂನ್ಯ
ಈಗ ತಿಂಗಳಿಗೆ ಹತ್ತು ಸಾವಿರ ಮಾತ್ರ ಹೆಚ್ಚುವರಿಯಾಗಿ ಉಳಿಯುತ್ತದೆ. ಆ ಹಣವನ್ನು ಯಾವುದರ ಬಡ್ಡಿ ಹೆಚ್ಚೋ ಅದಕ್ಕೆ ಪಾವತಿ ಮಾಡಿ. ಅಂದರೆ, ಪರ್ಸನಲ್ ಲೋನ್ ಗೆ ಪೂರ್ವ ಪಾವತಿ ಆರಂಭಿಸಬಹುದು. ಹಾಗಿದ್ದರೆ ಭವಿಷ್ಯಕ್ಕೆ ಉಳಿತಾಯ ಮಾಡುವುದು ಏನು ಎಂಬ ಪ್ರಶ್ನೆ ನಿಮ್ಮ ಮನಸಲ್ಲಿ ಮೂಡಿರುತ್ತದೆ. ಆದರೆ ಹೂಡಿಕೆ ಆರಂಭಿಸುವ ಮುನ್ನ ಹೆಚ್ಚಿನ ಬಡ್ಡಿ ದರದ ಸಾಲವನ್ನು ತೀರಿಸಿಕೊಳ್ಳುವುದು ಉತ್ತಮ.
ಗೃಹ ಸಾಲವನ್ನು ಮುಂದುವರಿಸಿ
ಆದರೆ, ಗೃಹ ಸಾಲವನ್ನು ಮುಂದುವರಿಸಿಕೊಂಡು ಹೋಗಿ. ಏಕೆಂದರೆ ಅದರ ಮೇಲೆ ಬಡ್ಡಿ ದರ ಕಡಿಮೆ. ಜತೆಗೆ ಸಾಲ ಪಡೆದವರಿಗೆ ತೆರಿಗೆ ಅನುಕೂಲ ದೊರೆಯುತ್ತದೆ. ಕಾರು ಸಾಲವನ್ನೂ ವಾಪಸ್ ಮಾಡಬಹುದು. ಏಕೆಂದರೆ ಬಡ್ಡಿ ದರ ಹೆಚ್ಚು. ಒಂದು ವೇಳೆ ಎಮರ್ಜೆನ್ಸಿ ಫಂಡ್ ಎಂದು ಹಣ ಕೂಡಿಟ್ಟುಕೊಂಡಿಲ್ಲ ಎಂದಾದಲ್ಲಿ ಅದರ ಕಡೆಗೆ ಗಮನ ನೀಡಿ. ಇನ್ನೊಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ. ಗೃಹ ಸಾಲ ಕೂಡ ಪೂರ್ವಪಾವತಿ ಮಾಡುವುದು ಅತ್ಯುತ್ತಮ. ಅದು ಯಾವಾಗ ಗೊತ್ತಾ? ಸಾಲ ಮರುಪಾವತಿಯ ಆರಂಭದ ಹಂತದಲ್ಲಿ ಆಗ ಇಎಂಐ ಪಾವತಿಯ ಬಹು ಭಾಗ ಬಡ್ಡಿಗೇ ಹೋಗುತ್ತಿರುತ್ತದೆ. ಅಂಥ ಸನ್ನಿವೇಶದಲ್ಲಿ ಭಾಗಶಃ ಪಾವತಿ ಮಾಡಿದಲ್ಲಿ ಇಎಂಐ ಅಥವಾ ಮರುಪಾವತಿ ಅವಧಿ ಕಡಿಮೆ ಆಗುತ್ತದೆ. ಇಎಂಐ ಮೊತ್ತವನ್ನು ಅಷ್ಟೇ ಇರುವುದಕ್ಕೆ ಬಿಟ್ಟು, ಮರುಪಾವತಿ ಅವಧಿ ಕಡಿಮೆ ಮಾಡಿಕೊಳ್ಳುವುದು ಉತ್ತಮ.


Click it and Unblock the Notifications