ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಗಂಗಾ ವಿಲಾಸ ನೌಕಾಯಾನಕ್ಕೆ ಚಾಲನೆ ನೀಡಿದ್ದಾರೆ. ಇದು ವಿಶ್ವದ ಅತೀ ಉದ್ದನೆ ನದಿಯನ್ನು ದಾಟಲಿರುವ ಐಷಾರಾಮಿ ಹಡಗು ಆಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಪ್ರಧಾನಿ ಮೋದಿ ವಾರಾಣಸಿಯಲ್ಲಿ ವರ್ಚುವಲ್ ಆಗಿ, ಗಂಗಾ ವಿಲಾಸ ನೌಕೆಯನ್ನು ಲೋಕಾರ್ಪನೆ ಮಾಡಿದ್ದಾರೆ.
ಈ ಐಷಾರಾಮಿ ನೌಕೆಯು ನದಿ ಮಾರ್ಗದಲ್ಲಿ ಸಾಗಲಿದ್ದು, ವಾರಾಣಸಿಯಿಂದ ಬಾಂಗ್ಲಾದೇಶ, ಅಸ್ಸಾಂವರೆಗೆ ಯಾನ ನಡೆಸಲಿದೆ. ಗಂಗಾ ವಿಲಾಸ ನೌಕೆಯು ಮಂಗಳವಾರ ವಾರಾಣಸಿಯ ರಾಮನಗರ ಬಂದರಿಗೆ ತಲುಪಿದೆ. ಈ ನೌಕೆಯು ಸುಮಾರು 51 ದಿನದಲ್ಲಿ 50 ಪ್ರದೇಶಕ್ಕೆ ಪ್ರವಾಸ ನಡೆಸಲಿದೆ.
ಡಿಸೆಂಬರ್ 22ರಂದು ಈ ನೌಕೆಯು ಕೋಲ್ಕತ್ತಾದಿಂದ ಹೊರಟು ಮಂಗಳವಾರ ವಾರಾಣಸಿ ತಲುಪಿದೆ. ನೌಕೆಯು ಕಳೆದ ಶನಿವಾರವೇ ವಾರಾಣಸಿಗೆ ತಲುಪಬೇಕಿತ್ತು. ಆದರೆ ಹವಾಮಾನ ಸಮಸ್ಯೆಯಿಂದ ತಡವಾಗಿ ಆಗಮಿಸಿದೆ. ನೌಕೆಯಲ್ಲಿ ಪ್ರಯಾಣ ಮಾಡಲು ಎಷ್ಟು ಟಿಕೆಟ್‌ಗೆ ವೆಚ್ಚವನ್ನು ನಾವು ತೆರಬೇಕಾಗುತ್ತದೆ, ಈ ನೌಕೆ ಯಾವೆಲ್ಲ ಪ್ರದೇಶಕ್ಕೆ ಪ್ರವಾಸ ತೆರಳಲಿದೆ, ಎಂಬ ಮೊದಲಾದ ಮಾಹಿತಿ ಇಲ್ಲಿದೆ ಮುಂದೆ ಓದಿ...
ಐಷಾರಾಮಿ ನೌಕೆ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ
ಗಂಗಾ ವಿಲಾಸ ಐಷಾರಾಮಿ ನೌಕೆಯು ಮೊದಲು ರಾಮನಗರ ಬಂದರಿನಿಂದ ಸಂತ ರವಿದಾಸ ಘಾಟ್‌ಗೆ ತೆರಳಲಿದೆ. ಐಷಾರಾಮಿ ಟ್ರಿಬಲ್ ಡೆಕ್ ನೌಕೆಯು ವಿಶ್ವದ ಅತೀ ಉದ್ದನೆಯ ಜಲಮಾರ್ಗದಲ್ಲಿ ವಾರಾಣಸಿಯಿಂದ ಅಸ್ಸಾಂನ ದಿಬ್ರುಗರ್ ಸಾಗಲಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಈ ನೌಕೆಯು ಸುಮಾರು 51 ದಿನಗಳ ಯಾನವನ್ನು ಮಾಡಲಿದೆ. ಈ 51 ದಿನದಲ್ಲಿ 50 ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲಿದೆ. ವಿಶ್ವದ ಪಾರಂಪಾರಿಕ ಸ್ಥಳಗಳಿಗೆ, ರಾಷ್ಟ್ರೀಯ ಉದ್ಯಾನವನ, ಘಟ್ಟ ಪ್ರದೇಶಕ್ಕೆ ಭೇಟಿ ನೀಡಲಿದೆ. ಪ್ರಮುಖ ನಗರಗಳಾದ ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಗೆ ಭೇಟಿ ನೀಡಲಿದೆ. ಈ ನೌಕೆಯು 18 ಸಿಬ್ಬಂದಿಗಳು ಸೇರಿದಂತೆ 80 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಗಂಗಾ ವಿಲಾಸ ನೌಕೆ: ಪ್ರವಾಸ ಕೇಂದ್ರಗಳು
51 ದಿನದ ನೌಕಾಯಾನದಲ್ಲಿ ಗಂಗಾ ವಿಲಾಸ ಐಷಾರಾಮಿ ನೌಕೆಯು ಬಾಂಗ್ಲಾದೇಶದ ಮೂಲಕ ಸಾಗಲಿದೆ. ಆ ಬಳಿಕ ಬ್ರಹ್ಮಪುತ್ರ ನದಿಯ ಮೂಲಕ ಅಸ್ಸಾಂನ ದಿಬ್ರುಗರ್‌ಗೆ ತೆರಳಲಿದೆ. ಭಾರತ ಹಾಗೂ ಬಾಂಗ್ಲಾದೇಶದ ಐದು ರಾಜ್ಯಗಳ ಸುಮಾರು 3,200 ಕಿಲೋ ಮೀಟರ್ ಜಲಮಾರ್ಗದಲ್ಲಿ ಈ ನೌಕೆಯು ಸಾಗಲಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಅಸ್ಸಾಂನ ಸುಮಾರು 27 ನದಿಗಳ ಮೂಲಕ ಈ ನೌಕೆ ಸಾಗಲಿದೆ. ಪ್ರಮುಖವಾಗಿ ಗಂಗಾ, ಮೇಘನಾ, ಬ್ರಹ್ಮಪುತ್ರ ನದಿಯಲ್ಲಿ ಸಾಗಲಿದೆ. ಬಂಗಾಳದ ಭಾಗೀರಥಿ, ಹೂಗ್ಲಿ, ವಿದ್ಯಾವತಿ, ಮಾಲತ, ಸುಂದರಬನ ನದಿಯನ್ನು ದಾಟಲಿದೆ. ಬಾಂಗ್ಲಾದೇಶದಲ್ಲಿ ಮೇಘನಾ, ಪದ್ಮ, ಜಮುನಾ ನದಿಯನ್ನು ದಾಟಿ ಬಳಿಕ ಅಸ್ಸಾಂನ ಬ್ರಹ್ಮಪುತ್ರಕ್ಕೆ ತಲುಪಲಿದೆ.
ಐಷಾರಾಮಿ ನೌಕೆಯ ಟಿಕೆಟ್ ಬೆಲೆಯೆಷ್ಟು?
ಗಂಗಾ ವಿಲಾಸ ಐಷಾರಾಮಿ ನೌಕೆಯ ಟಿಕೆಟ್ ಅನ್ನು ಈ ನೌಕೆಯ ನಿರ್ವಹಣೆ ಮಾಡುವ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಲಭ್ಯವಿರು ಮಾಹಿತಿ ಪ್ರಕಾರ ನೌಕೆಯಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 24,692.25 ರೂಪಾಯಿ (300 ಡಾಲರ್) ಟಿಕೆಟ್ ದರವಾಗಿದೆ. ಭಾರತೀಯರಾಗಲಿ, ವಿದೇಶಿಗರಾಗಲಿ ಇದೇ ದರ ಇರಲಿದೆ. ಒಟ್ಟು 51 ದಿನದ ಈ ನೌಕಾಯಾನಕ್ಕೆ ಒಟ್ಟು 12.59 ಲಕ್ಷ ರೂಪಾಯಿ (153000 ಡಾಲರ್) ನೀಡಬೇಕಾಗುತ್ತದೆ.


Click it and Unblock the Notifications