ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ನಾಳೆ (ಆಗಸ್ಟ್ 30) ಚಾಲನೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಾಸಿಕವಾಗಿ 2,000 ರೂಪಾಯಿ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಆಗಸ್ಟ್ 30 ರ ಬುಧವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ಪ್ರಾರಂಭಿಸಲಿದ್ದಾರೆ.
ನಾಳೆ ಈ ಯೋಜನೆಯಡಿಯಲ್ಲಿ ಸರ್ಕಾರವು 1.9 ಕೋಟಿ ಮಹಿಳೆಯರ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೈಸೂರಿನಲ್ಲಿದ್ದು ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದಾರೆ. ಕರ್ನಾಟಕದಾದ್ಯಂತ 10,400 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುವುದು.

ಏನಿದು ಗೃಹ ಲಕ್ಷ್ಮೀ ಯೋಜನೆ ತಿಳಿಯಿರಿ
ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಯೋಜನೆಯಾಗಿದ್ದು, ಇದರಡಿಯಲ್ಲಿ ಪ್ರತಿ ತಿಂಗಳು ಕೂಡಾ ಮನೆಯ ಒಡತಿಗೆ ಎರಡು ಸಾವಿರ ರೂಪಾಯಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಮನೆಯ ಯಜಮಾನತ್ವವನ್ನು ಮಹಿಳೆ ವಹಿಸಿದ್ದರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಯೋಜನೆಯ ಮಾರ್ಗಸೂಚಿ, ಮಾನದಂಡಗಳು
* ಈ ಯೋಜನೆಯ ಫಲಾನುಭವಿಗಳು 2023ರ ಜುಲೈ 19 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ನಲ್ಲಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
* ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದರ, ಬಿಪಿಎಲ್, ಎಪಿಎಲ್ ಪಡಿತ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದಾರೆ.
* ಒಂದು ಕುಟುಂಬದಲ್ಲಿ ಒಂದಕ್ಕಿಂತ ಅಧಿಕ ಮಹಿಳೆಯರು ಇದ್ದರೆ ಎಲ್ಲರಿಗೂ ಈ ಯೋಜನೆಯ ಲಾಭ ಲಭ್ಯವಾಗುವುದಿಲ್ಲ. ಮನೆಯ ಯಜಮಾನಿ ಎಂದು ಗುರುತಿಸಲ್ಪಟ್ಟ ಒಬ್ಬರಿಗೆ ಮಾತ್ರ ಈ ಯೋಜನೆಯ ಮೂಲಕ ಎರಡು ಸಾವಿರ ರೂಪಾಯಿ ಲಭ್ಯವಾಗುತ್ತದೆ.
* ಆನ್‌ಲೈನ್ ಆಪ್, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಈ ಅರ್ಜಿ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಸಹಾಯ ಪಡೆಯಬಹುದಾಗಿದೆ.
* ಆರಂಭದಲ್ಲಿ ಯೋಜನೆಯ ಲಾಭ ಪಡೆಯಬೇಕಾದರೆ ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಈಗ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ.
* ನೀವು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಅನುಮೋದನೆಯಾಗಿ ನಿಮಗೆ ಆಗಸ್ಟ್‌ನಲ್ಲಿ ಹಣ ಲಭ್ಯವಾಗಬಹುದು. ಆದರೆ ಬಳಿಕ ನೀವು ಸಲ್ಲಿಸಿದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನೀವು ನಕಲಿ ದಾಖಲೆ ಸಲ್ಲಿಸಿರುವುದು ಖಚಿತವಾದರೆ, ಅಥವಾ ನೀವು ತಪ್ಪು ಮಾಹಿತಿ ನೀಡಿದ್ದರೆ, ನಿಮಗೆ ನೀಡಿದ ಹಣವನ್ನು ಹಿಂಪಡೆಯಲಾಗುತ್ತದೆ. ಹಾಗೆಯೇ ನಿಮ್ಮ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಯಾರು ಯೋಜನೆಗೆ ಅರ್ಹರಲ್ಲ
ಒಂದು ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡುತ್ತಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ. ಇನ್ನು ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಆಗಿದ್ದರೂ ಕೂಡಾ ಈ ಯೋಜನೆಯ ಫಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ.


Click it and Unblock the Notifications