ಕರ್ನಾಟಕ ಒನ್, ಬೆಂಗಳೂರು ಒನ್ ಮುಂತಾದ ಕಡೆ ಎಲ್ಲಿ ನೋಡಿದರೂ ಜನಸಾಗರ, ಅದರಲ್ಲೂ ಮಹಿಳಯರದ್ದೇ ಪಾರುಪತ್ಯ. ಕಾರಣ, ಸಿದ್ದರಾಮಯ್ಯನವರ ಸರ್ಕಾರದ ವಿವಿಧ ಗ್ಯಾರಂಟಿಗಳಿಗೆ ನೋಂದಣಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು ಹತ್ತಿರ ಬರುತ್ತಿರುವುದು.
ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಲಕ್ಷ್ಮೀ ಸ್ಕೀಂಗಳಿಗೆ ಅಧಿಕೃತವಾಗಿ ಸರ್ಕಾರ ಚಾಲನೆ ನೀಡಿದ್ದಾಗಿದೆ. ರಾಜ್ಯಾದ್ಯಂತ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ 2,000 ರೂ.ಗಳನ್ನು ಒದಗಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 19ರಂದು ಗೃಹ ಲಕ್ಷ್ಮಿ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.

ಅಂದಿನಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರು ಎಷ್ಟು ಎನ್ನುವುದರ ಬಗ್ಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿರುವ ಏಕೈಕ ಮಹಿಳಾ ಸಚಿವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿಭಾಯಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿಯನ್ನು ನೀಡಿದ್ದಾರೆ.
"ಜುಲೈ 31ರ ವರೆಗೆ 86,59,467 ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಂಖ್ಯೆ ಕಳೆದ ಹದಿನೈದು ದಿನಗಳಲ್ಲಿ ಒಂದು ಕೋಟಿಯನ್ನು ದಾಟಿದೆ" ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ.
"ಜುಲೈ ಇಪ್ಪತ್ತರದು ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು, ಇದುವರೆಗೆ ಒಂದು ಕೋಟಿ ಅರ್ಜಿ ಸಲ್ಲಿಕೆಯಾಗಿದೆ. ಒಟ್ಟು 1.28ಕೋಟಿ ಫಲಾನುಭವಿಗಳಿದ್ದಾರೆ. ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ" ಎಂದು ಸಚಿವರು ಹೇಳಿದ್ದಾರೆ.
ಆಗಸ್ಟ್ 24ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೃಹಿಣಿಯರ ಖಾತೆಗೆ ಎರಡು ಸಾವಿರ ಜಮಾ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಯಾರು ಯೋಜನೆಗೆ ಅರ್ಹರಲ್ಲ
ಒಂದು ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡುತ್ತಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ. ಇನ್ನು ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಆಗಿದ್ದರೂ ಕೂಡಾ ಈ ಯೋಜನೆಯ ಫಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ.


Click it and Unblock the Notifications