ರಾಜ್ಯ ಸರ್ಕಾರವು ಘೋಷಿಸಿದ ಐದು ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಆಗಸ್ಟ್ 30ರಂದು ಚಾಲನೆ ನೀಡಲಾಗುತ್ತದೆ. ಆ ದಿನವೇ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ 2000 ರೂಪಾಯಿ ಜಮೆ ಮಾಡಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧಿಕಾರವನ್ನು ವಹಿಸಿಕೊಂಡು 100 ದಿನಗಳು ಆಗುವ ಈ ದಿನದಂದೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸಿಎಂ ಸಿದ್ಧರಾಮಯ್ಯನವರ ತವರು ಜಿಲ್ಲೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಈ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದು, ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಮೊತ್ತ ಹಸ್ತಾಂತರಿಸಲಿದ್ದಾರೆ. ಕಳೆದ ತಿಂಗಳಿನಲ್ಲೇ ರಾಜ್ಯ ಸರ್ಕಾರವು ಶಕ್ತಿ, ಅನ್ನ ಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದಾದ ಬಳಿಕ ಈಗ ಜಾರಿಗೊಳ್ಳುವ ನಾಲ್ಕನೇ ಯೋಜನೆ ಗೃಹಲಕ್ಷ್ಮಿಯಾಗಿದೆ. ಇನ್ನೊಂದು ಯೋಜನೆಯಾದ ಯುವನಿಧಿ ಬಾಕಿ ಉಳಿದಿದ್ದು, ಅದು ಕೊಂಚ ತಡವಾಗಿ ಜಾರಿಯಾಗಲಿದೆ.
ರಾಜ್ಯ ಸರ್ಕಾರದ 100 ದಿನಗಳ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಮಾಹಿತಿಯನ್ನು ಒಳಗೊಂಡಿರುವ ಕಿರುಪುಸ್ತಕವನ್ನು ಸಹ ರಾಹುಲ್ ಗಾಂಧಿ ಈ ಸಂದರ್ಭದಲ್ಲೇ ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ ಈ ಕಾರ್ಯಕ್ರಮವನ್ನು ಆಗಸ್ಟ್ 20 ರಂದು ಬೆಳಗಾವಿಯಲ್ಲಿ ನಿಗದಿ ಪಡಿಸಲಾಗಿತ್ತು. ಆದರೆ ಬಳಿಕ ಆಗಸ್ಟ್ 27ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಈಗ ಆಗಸ್ಟ್ 30ರಂದು ಮೈಸೂರಿನಲ್ಲಿ ನಡೆಸುವ ಬಗ್ಗೆ ಮಾಹಿತಿ ನೀಡಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಸೇವಾ ಸಿಂಧು ಪೋರ್ಟರ್ ಅಥವಾ ಆಪ್‌ಗೆ ಲಾಗಿನ್ ಆಗಿ
ಹಂತ 2: ಗೃಹಲಕ್ಷ್ಮೀ ಎಂದು ನಮೂದಿಸಲಾಗಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಗೃಹ ಲಕ್ಷ್ಮೀ ಯೋಜನೆಗೆ ಆನ್‌ಲೈನ್ ಅರ್ಜಿ ಲಭ್ಯವಾಗುತ್ತದೆ.
ಹಂತ 4: ಅರ್ಜಿಯನ್ನು ಭರ್ತಿ ಮಾಡಿ.
ಹಂತ 5: I agree ಎಂಬುವುದನ್ನು ಕ್ಲಿಕ್ ಮಾಡಿ
ಹಂತ 6: word verification ಎಂದು ಇರುವಲ್ಲಿ ಕಾಣುವ ಸಂಖ್ಯೆಗಳನ್ನು ಬಾಕ್ಸ್‌ನಲ್ಲಿ ನಮೂದಿಸಿ submit ಕ್ಲಿಕ್ ಮಾಡಿ.
ವಾಟ್ಸಾಪ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ
ಚಾಟ್‌ಬಾಟ್ ಲಿಂಕ್ ಆಗಿರುವ ವಾಟ್ಸಾಪ್ ಸಂಖ್ಯೆ 8147500500 ಅನ್ನು ಸರ್ಕಾರ ಒದಗಿಸಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಿವರಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಚಾಟ್‌ಬಾಟ್ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ ಮತ್ತು ಮಾರ್ಗದರ್ಶನ ನೀಡಲಿದೆ.
ಚಾಟ್‌ಬಾಟ್ ಈ ಅರ್ಜಿಯನ್ನು ಬೆಂಗಳೂರುಒನ್, ಕರ್ನಾಟಕ ಒನ್ ಮತ್ತು ಗ್ರಾಮಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ಎಲ್ಲ ಪರಿಶೀಲನೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಬಾಟ್ ಸೇವೆಗಳಿಂದ ಏಳು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.
ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಜೊತೆಗೆ ತಮ್ಮ ಪಡಿತರ ಚೀಟಿಯಾದ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲದಿದ್ದರೆ, ಆಧಾರ್ ಕಾರ್ಡ್ ಮಾಹಿತಿ ಜೊತೆಗೆ ಪಾಸ್‌ಬುಕ್ ಅನ್ನು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ಚೆಕ್ ಮಾಡಿ
ಹಂತ 1: ಅಧಿಕೃತ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ: sevasindhuservices.karnataka.gov.in.
ಹಂತ 2: Check Application/Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಅಪ್ಲಿಕೇಶನ್‌ನ ರೆಫೆರೆನ್ಸ್ ನಂಬರ್ ಅಥವಾ ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ.
ಹಂತ 4: ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ವಿವರಗಳನ್ನು ಸಬ್‌ಮಿಟ್ ಮಾಡಿ, ನೀವು ಯೋಜನೆಯ ಫಲಾನುಭವಿಗಳ ಲೀಸ್ಟ್‌ನಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.


Click it and Unblock the Notifications