ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಅನ್ನು ಆರಂಭ ಮಾಡಿದೆ. ದೇಶದಲ್ಲಿ ಜಿಎಸ್‌ಟಿ ಯಶಸ್ವಿ ಅನುಷ್ಠಾನಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಭಾರತದಲ್ಲಿ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಿನವನ್ನು ಆಚರಣೆ ಮಾಡಲಾಗುತ್ತದೆ.
ಜಿಎಸ್‌ಟಿ, ಸಮಗ್ರ ಪರೋಕ್ಷ ತೆರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಧಿಸಿದ ಬಹು ಸಂಕೀರ್ಣ ಸುಂಕಗಳನ್ನು ಬದಲಿಸುವ ಮೂಲಕ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಾಡಲಾದ ಮಹತ್ವದ ಬದಲಾವಣೆಯಾಗಿದೆ. ಜಿಎಸ್‌ಟಿಯು ಸರಳವಾದ, ಪಾರದರ್ಶಕತೆಯ ತೆರಿಗೆ ವಿಧಾನವಾಗಿದೆ. ಆದರೆ ನಿಮಗೆ ಜಿಎಸ್‌ಟಿ ಪಿತಾಮಹ ಯಾರು, ಇತಿಹಾಸ, ಪ್ರಾಮುಖ್ಯತೆ ಮಾಹಿತಿ ತಿಳಿದಿದೆಯೇ?, ಇಲ್ಲಿದೆ ವಿವರ ಮುಂದೆ ಓದಿ...

ಜಿಎಸ್‌ಟಿ ದಿನ: ಇತಿಹಾಸ
ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿ 2000ರ ದಶಕದ ಆರಂಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಲ್ಪನೆಯನ್ನು ಮೊದಲ ಬಾರಿಗೆ ಪ್ರಸ್ತಾಪ ಮಾಡಲಾಗಿದೆ. ಕೇಳ್ಕರ್ ಟಾಸ್ಕ್ ಫೋರ್ಸ್, ದೇಶದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದ ತೆರಿಗೆ ವ್ಯವಸ್ಥೆಯ ಬದಲಾಗಿ, ಬೇರೆ ತೆರಿಗೆ ವ್ಯವಸ್ಥೆಯನ್ನು ಜಾರಿ ಮಡುವಂತೆ ಸೂಚಿಸಿತ್ತು. ಚರ್ಚೆಗಳು ಮತ್ತು ಮಾತುಕತೆಗಳ ನಂತರ, ಸಂಸತ್ತು ಆಗಸ್ಟ್ 2016 ರಲ್ಲಿ ಸಂವಿಧಾನ (101 ನೇ ತಿದ್ದುಪಡಿ) ಕಾಯಿದೆಯನ್ನು ಅಂಗೀಕರಿಸಿದೆ. ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಇದು ನೀಡಿದೆ.
ಸರ್ಕಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡ ಜಿಎಸ್‌ಟು ಕೌನ್ಸಿಲ್ ಅನ್ನು ರಚನೆ ಮಾಡಿದೆ. ಜಿಎಸ್‌ಟಿ ದರಗಳು, ವಿನಾಯಿತಿಗಳು ಮತ್ತು ಇತರೆ ಜಿಎಸ್‌ಟಿ ಸಂಬಂಧಿತ ವಿಚಾರಗಳನ್ನು ಚರ್ಚಿಸಲು ಕೌನ್ಸಿಲ್ ಸಭೆಗಳನ್ನು ನಡೆಸಲಾಗುತ್ತದೆ. ಅಂತಿಮವಾಗಿ, ಜುಲೈ 1, 2017 ರಂದು, ಜಿಎಸ್‌ಟಿ ಅನ್ನು ಭಾರತದಾದ್ಯಂತ ಜಾರಿಗೆ ತರಲಾಯಿತು. ಇದು ರಾಜ್ಯಗಳ ನಡುವೆ ತಡೆರಹಿತ ವ್ಯಾಪಾರಕ್ಕಾಗಿ ಏಕೀಕೃತ ಮಾರುಕಟ್ಟೆಯನ್ನು ಸೃಷ್ಟಿಸಿತು.
ಜಿಎಸ್‌ಟಿ ದಿನ: ಪ್ರಾಮುಖ್ಯತೆ
ಜಿಎಸ್‌ಟಿ ದಿನವು ಭಾರತದ ತೆರಿಗೆ ವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ. ಈ ದಿನದಲ್ಲಿ ಜಿಎಸ್‌ಟಿಯ ಯಶಸ್ವಿ ಅನುಷ್ಠಾನವನ್ನು ಆಚರಿಸಲಾಗುತ್ತದೆ. ತೆರಿಗೆ ರಚನೆಯನ್ನು ಸರಳಗೊಳಿಸುವ ಮೂಲಕ ಮತ್ತು ರಾಜ್ಯಗಳ ನಡುವೆ ತಡೆರಹಿತ ವ್ಯಾಪಾರಕ್ಕಾಗಿ ಏಕೀಕೃತ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ಜಿಎಸ್‌ಟಿ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ.
ಜಿಎಸ್‌ಟಿಯ ಪರಿಚಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ವ್ಯಾಟ್‌ನಂತಹ ಪರೋಕ್ಷ ತೆರಿಗೆಗಳನ್ನು ಬದಲಿಸಿದೆ. ಇದು ತೆರಿಗೆ ವ್ಯವಸ್ಥೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕಗೊಳಿಸಿದೆ. ಅಂತರ-ರಾಜ್ಯ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆದುಹಾಕುವುದು ಜಿಎಸ್‌ಟಿಯ ಇನ್ನೊಂದು ಗಮನಾರ್ಹ ಪರಿಣಾಮವಾಗಿದೆ. ಆದರೆ ಕೆಲವು ರಾಜ್ಯಗಳಿಗೆ ಕೇಂದ್ರದಿಂದ ಸರಿಯಾದ ಸಮಯಕ್ಕೆ ಜಿಎಸ್‌ಟಿ ಪರಿಹಾರ ಲಭ್ಯವಾಗುತ್ತಿಲ್ಲ ಎಂಬ ಆರೋಪವು ಇದೆ.
ಜಿಎಸ್‌ಟಿ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಮಾಹಿತಿ
* ಜಿಎಸ್‌ಟಿಯ ಪಿತಾಮಹ ಅಟಾಲ್ ಬಿಹಾರಿ ವಾಜಪೇಯಿ ಆಗಿದ್ದಾರೆ.
* ಜಿಎಸ್‌ಟಿಯ ಬ್ರ್ಯಾಂಡ್ ಅಂಬಾಸಿಡರ್ ಅಮಿತಾಬ್ ಬಚ್ಚನ್ ಆಗಿದ್ದಾರೆ.
* ಮೊದಲ ಬಾರಿಗೆ ಫ್ರಾನ್ಸ್ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿ ಮಾಡಿದೆ.
* ಜಿಎಸ್‌ಟಿಯು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಬ್ರಾಂಡ್ ಮಾಡದ ಹಿಟ್ಟಿನಂತಹ ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡುತ್ತದೆ.
* ಜಿಎಸ್‌ಟಿ ಆದಾಯವನ್ನು ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಲಾಗುತ್ತದೆ.
* ಭಾರತದಲ್ಲಿ ಜಿಎಸ್‌ಟಿಯನ್ನು 2000 ರಲ್ಲಿ ಪ್ರಸ್ತಾಪಿಸಲಾಗಿದ್ದು, ಆದರೆ ಅದನ್ನು ಜಾರಿಗೆ ತರಲು 17 ವರ್ಷಗಳು ಆಗಿದೆ.
* ಭಾರತದಲ್ಲಿ ಜಿಎಸ್‌ಟಿ ವ್ಯವಸ್ಥೆಯು ಶೇಕಡ 0, 5, 12, 18 ಮತ್ತು 28ರಷ್ಟು ತೆರಿಗೆ ಸ್ಲ್ಯಾಬ್‌ಗಳನ್ನು ಹೊಂದಿದೆ.
* ಜಿಎಸ್‌ಟಿ ಪ್ರತ್ಯೇಕ ರಾಜ್ಯ ಮಟ್ಟದ ತೆರಿಗೆ ನೋಂದಣಿಗಳ ಅಗತ್ಯವನ್ನು ನಿವಾರಿಸುತ್ತದೆ, ವ್ಯಾಪಾರ ಪ್ರಕ್ರಿಯೆಗಳನ್ನು ಸರಾಗಗೊಳಿಸುತ್ತದೆ.
* ಕೆನಡಾದ ಜಿಎಸ್‌ಟಿ ವ್ಯವಸ್ಥೆಯು ಭಾರತದ ಜಿಎಸ್‌ಟಿ ವ್ಯವಸ್ಥೆಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ.
* ಜಿಎಸ್‌ಟಿ ಕೌನ್ಸಿಲ್ ಅನ್ನು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೆಪ್ಟೆಂಬರ್ 2016 ರಲ್ಲಿ ಸ್ಥಾಪಿಸಿದರು.


Click it and Unblock the Notifications