ಭಾರತೀಯ-ಅಮೆರಿಕನ್ ಹೂಡಿಕೆ ಬ್ಯಾಂಕರ್ ಮತ್ತು ಹಣಕಾಸು ನಿರ್ವಹಣಾ ತಜ್ಞೆಯಾದ ರಿತು ಕಾಲ್ರಾ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕಾತಿಗೊಂಡಿದ್ದಾರೆ. ಅಮೇರಿಕಾ ಸೇರಿದಂತೆ ಹೊರ ದೇಶದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ಭಾರತೀಯರಲ್ಲಿ ಇವರೊಬ್ಬರಾಗಿದ್ದಾರೆ.
ಪ್ರಸ್ತುತ ಭಾರತ ಮೂಲದ ರಿತು ಕಾಲ್ರಾ ವಿಶ್ವವಿದ್ಯಾನಿಲಯದಲ್ಲಿ ಹಣಕಾಸು ಮತ್ತು ಖಜಾನೆಯ ಸಹಾಯಕ ಉಪಾಧ್ಯಕ್ಷರಾಗಿ ಹಾಗೂ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಯೋಜನೆಗಳ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಿತು ಕಾಲ್ರಾ ಬಗ್ಗೆ ನೀವು ತಿಳಿದಿರಬೇಕಾದ 7 ಪ್ರಮುಖ ಮಾಹಿತಿ ಇಲ್ಲಿದೆ ಮುಂದೆ ಓದಿ...

ರಿತು ಕಾಲ್ರಾ ಬಗ್ಗೆ ನೀವು ತಿಳಿದಿರಬೇಕಾದ 7 ಮಾಹಿತಿ
1. ಹಾರ್ವರ್ಡ್ ಗೆಜೆಟ್‌ನ ಪ್ರಕಾರ ರಿತು ಕಾಲ್ರಾ ಹೊಸ ಉನ್ನತ ಹುದ್ದೆಯನ್ನು ಪಡೆದ ಬಳಿಕ ದೀರ್ಘಾವಧಿ ಯೋಜನೆ, ವಾರ್ಷಿಕ ಬಜೆಟ್, ಎಂಡೋಮೆಂಟ್ ಫಂಡ್ ಸ್ಪೆಂಡಿಂಗ್ ಪಾಲಿಸಿ, ಟ್ರೆಜರಿ, ಹಣಕಾಸು ಲೆಕ್ಕಪತ್ರ ನಿರ್ವಹಣೆ, ವರದಿ ಮಾಡುವುದು ಸೇರಿದಂತೆ ಹಣಕಾಸು ನಿರ್ವಹಣೆಯ ಎಲ್ಲವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
2. ರಿತು ಕಾಲ್ರಾ ರಿಸರ್ಚ್ ಅಡ್ಮಿನಿಸ್ಟ್ರೆಷನ್, ಕಾರ್ಯತಂತ್ರದ ನಿರ್ವಹಣೆ, ಬಂಡವಾಳ ಯೋಜನೆ, ರಿಸ್ಕ್ ಮ್ಯಾನೆಜ್‌ಮೆಂಟ್ ಅನ್ನು ಕೂಡಾ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ, ರಿತು ಕಾಲ್ರಾ 200 ಕ್ಕೂ ಹೆಚ್ಚು ಜನರ ಪೂರ್ಣ ಸಮಯದ ಉದ್ಯೋಗಿಗಳೊಂದಿಗೆ ಬಹು ಹಣಕಾಸು ವಿಭಾಗಗಳನ್ನು ಮುನ್ನಡೆಸುತ್ತಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
3. "ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಹುದ್ದೆಯನ್ನು ಪಡೆಯುವ ಸಾಮರ್ಥ್ಯವನ್ನು ರೂಪಿಸಿಕೊಳ್ಳುವುದು ಆಕಸ್ಮಿಕವಾಗಿ ಆಗುವುದಲ್ಲ, ಇದು ಅತೀ ದೀರ್ಘವಾದ ಪ್ರಯತ್ನ," ಎಂದು ರಿತು ಕಾಲ್ರಾ ಹೇಳಿಕೊಂಡಿದ್ದಾರೆ. "ಕಾರ್ಯತಂತ್ರದ ನಾಯಕತ್ವ ಮತ್ತು ಉತ್ತಮ ಅರ್ಹತೆಯ ಒಂದು ಅತೀ ವಿರಳವಾದ ಮತ್ತು ಸ್ಥಿರವಾದ ವಿವಾಹ ಇದಕ್ಕೆ ಅಗತ್ಯವಿದೆ," ಎಂದು ಕೂಡಾ ಒಗಟ್ಟಾಗಿ ಮಾತನಾಡಿದ್ದಾರೆ.
4. "ವಿಪಿ ಹಾಗೂ ಸಿಎಫ್‌ಒ ಸ್ಥಾನವನ್ನು ರಿತು ಕಾಲ್ರಾ ಪಡೆಯುತ್ತಿರುವುದು ಅತೀ ಸಂತಸದ ವಿಚಾರ," ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೆರೆಡಿತ್ ವೀನಿಕ್ ತಿಳಿಸಿದ್ದಾರೆ. "2020ರಲ್ಲಿ ಹಾರ್ವರ್ಡ್‌ಗೆ ಸೇರ್ಪಡೆಯಾದಾಗಿನಿಂದ ರಿತು ಉತ್ತಮ ನಾಯಕತ್ವವನ್ನು ವಹಿಸಿಕೊಂಡು ಬಂದಿದ್ದಾರೆ. ಹಣಕಾಸು ವಿಚಾರಕ್ಕೆ ಬಂದಾಗ ನಮ್ಮ ವಿಶ್ವವಿದ್ಯಾನಿಲಯದ ಅತೀ ನಂಬಿಕಾರ್ಹ ಸಲಹೆಗಾರರು ಆಗಿದ್ದಾರೆ," ಎಂದು ರಿತುವನ್ನು ಮೆರೆಡಿತ್ ವೀನಿಕ್ ಹಾಡಿಹೊಗಳಿದ್ದಾರೆ.
5. ಹಾರ್ವರ್ಡ್‌ಗೆ ಸೇರ್ಪಡೆಯಾಗುವುದಕ್ಕೂ ಮುನ್ನ ರಿತು ಕಾಲ್ರಾ ಸುಮಾರು 18 ವರ್ಷಗಳ ಕಾಲ ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಗೋಲ್ಡ್‌ಮ್ಯಾನ್ ಸಾಚ್ಸ್‌ನಲ್ಲಿ ರಿತು ಕಾಲ್ರಾ ಮ್ಯಾನೆಜಿಂಗ್ ಡೈರೆಕ್ಟರ್, ಪಬ್ಲಿಕ್ ಸೆಕ್ಟರ್‌ನ ಮುಖ್ಯಸ್ಥೆ ಸೇರಿದಂತೆ ಹಲವಾರು ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ.
6. ತನ್ನ ಮೂಲಸೌಕರ್ಯ ಹಣಕಾಸು ಅಭ್ಯಾಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ರಿತು ಕಾಲ್ರಾ ಹವಾಮಾನ-ಸಂಬಂಧಿತ ಅಪಾಯಗಳನ್ನು ನಿರ್ವಹಿಸಲು ಹೊಸದಾದ ಹಣಕಾಸು ತಂತ್ರಗಳನ್ನು ವಿನ್ಯಾಸಗೊಳಿಸುವುದು ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಹಲವಾರು ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ಸಲಹೆಯನ್ನು ನೀಡುವ ಸೇವೆ ಮಾಡಿದ್ದಾರೆ.
7. ರಿತು ಕಾಲ್ರಾ ತನ್ನ ನೂತನ ಹುದ್ದೆಯ ಉಸ್ತುವಾರಿಯನ್ನು ಜುಲೈನಲ್ಲಿ ವಹಿಸಿಕೊಳ್ಳಲಿದ್ದಾರೆ. ರಿತು ಕಾಲ್ರಾ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೀನಿಕ್‌ಗೆ ರಿಪೋರ್ಟ್ ಮಾಡಲಿದ್ದಾರೆ.


Click it and Unblock the Notifications