ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಹಲವಾರು ಸೇವೆಗಳನ್ನು ಗ್ರಾಹಕರಿಗೆ ಯೋನೋ ಆಪ್ ಮೂಲಕ ನೀಡುತ್ತಾ ಬಂದಿದೆ. ಈ ಆಪ್ ಮೂಲಕ ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡಲು ಕೂಡಾ ಸಾಧ್ಯವಾಗುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ?. ಹಣಕಾಸು ವರ್ಷ 2022-23ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಅನ್ನು ಜುಲೈ 31ರ ಒಳಗೆ ಫೈಲ್ ಮಾಡಬೇಕಾಗಿದೆ. ಈಗಾಗಲೇ ನಾವು 2023-24ನೇ ಸಾಲಿನ ಹಣಕಾಸು ವರ್ಷದ ಮೊದಲ ದಿನದಲ್ಲಿದ್ದೇವೆ. ಇನ್ನು 4 ತಿಂಗಳ ಅವಧಿ ಮಾತ್ರ ನಿಮಗಿದೆ. ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡುವುದು ಮುಖ್ಯವಾಗಿದೆ.
ಆದಾಯ ತೆರಿಗೆ ರಿಟರ್ನ್ ಅಥವಾ ಐಟಿಆರ್ ಫೈಲ್ ಮಾಡುವ ಸಮಯ ಬಂದಾಗ ಎಂದಿಗೂ ಕೂಡಾ ತೆರಿಗೆ ಪಾವತಿದಾರರು ಅಗತ್ಯ ಮಾಹಿತಿಗಳಾದ ಐಟಿಆರ್ ಫೈಲಿಂಗ್ ಕೊನೆಯ ದಿನಾಂಕ ಆರಂಭ ಮೊದಲಾದವುಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಗಡುವು ಅಂತ್ಯವಾಗುವುದಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. ರಿಟರ್ನ್ ಫೈಲ್ ಮಾಡುವುದು ತಡವಾದರೆ 5 ಸಾವಿರ ರೂಪಾಯಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಇತರೆ ನಷ್ಟವು ಕೂಡಾ ಆಗುತ್ತದೆ. ಈ ನಷ್ಟವನ್ನೆಲ್ಲ ತಪ್ಪಿಸಬೇಕಾದರೆ ಸರಿಯಾದ ಸಮಯಕ್ಕೆ ಸರಿಯಾದ ಫಾರ್ಮ್ ಮೂಲಕ ಐಟಿಆರ್ ಫೈಲ್ ಮಾಡುವುದು ಮುಖ್ಯವಾಗುತ್ತದೆ.

ಯೋನೋ ಆಪ್ ಮೂಲಕ ಐಟಿಆರ್ ಫೈಲಿಂಗ್
ಈ ನಡುವೆ ನೀವು ಎಸ್‌ಬಿಐನ ಯೋನೋ ಆಪ್ ಮೂಲಕವೂ ಐಟಿಆರ್ ಅನ್ನು ಪೈಲ್ ಮಾಡುವ ಅವಕಾಶವನ್ನು ಹೊಂದಿದ್ದೀರಿ. ಎಸ್‌ಬಿಐ ಗ್ರಾಹಕರು ಮಾತ್ರ ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಎಸ್‌ಬಿಐ ಗ್ರಾಹಕರಾಗಿದ್ದರೆ ಯೋನೋ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಸೇವೆಯನ್ನು ಪಡೆಯಿರಿ. ಐಒಎಸ್ (iOS) ಹಾಗೂ ಆಂಡ್ರಾಯ್ಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ನೀವು ಎಸ್‌ಬಿಐನ ಯೋನೋ ಆಪ್ ಡೌನ್‌ಲೋಡ್ ಮಾಡಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದಾದರೆ ಅದಕ್ಕೂ ಮುನ್ನ ಬೇಕಾದ ದಾಖಲೆಗಳ ಬಗ್ಗೆ ತಿಳಿಯುವುದು ಮುಖ್ಯ. ಕೈಯಲ್ಲಿ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ನೀವು ಐಟಿಆರ್ ಫೈಲ್ ಮಾಡಿದರೆ ಫೈಲಿಂಗ್ ಪ್ರಕ್ರಿಯೆ ಶೀಘ್ರ ಹಾಗೂ ಸರಳವಾಗಲಿದೆ. ನೀವು ಎಸ್‌ಬಿಐ ಯೋನೋ ಆಪ್‌ನಲ್ಲಿ ಐಟಿಆರ್ ಫೈಲ್ ಮಾಡಬೇಕಾದರೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್ 16, ತೆರಿಗೆ ಕಡಿತ ಮಾಹಿತಿ, ಬಡ್ಡಿದರ ಆದಾಯ ಪ್ರಮಾಣಪತ್ರ, ತೆರಿಗೆ ಉಳಿತಾಯ ಹೂಡಿಕೆ ಪುರಾವೆಗಳು ಇರಬೇಕಾಗುತ್ತದೆ.
ಯೋನೋ ಆಪ್ ಮೂಲಕ ಐಟಿಆರ್ ಫೈಲ್ ಮಾಡುವುದು ಹೇಗೆ?
ಎಸ್‌ಬಿಐ ಗ್ರಾಹಕರು ಮಾತ್ರ ಯೋನೋ ಆಪ್ ಮೂಲಕ ಐಟಿಆರ್ ಫೈಲ್ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಉಚಿತವಾಗಿ ಐಟಿಆರ್ ಅನ್ನು ಫೈಲ್ ಮಾಡಬೇಕಾದರೆ ಮೊದಲು ಯೋನೋ ಆಪ್‌ಗೆ ಲಾಗಿನ್ ಆಗಬೇಕಾಗುತ್ತದೆ. ಯೋನೋ ಆಪ್‌ನಲ್ಲಿ ಐಟಿಆರ್ ಫೈಲ್ ಮಾಡುವುದನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 1: ಯೋನೋ ಆಪ್‌ಗೆ ಲಾಗಿನ್ ಆಗಿ
ಹಂತ 2: Shops and Orders ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ಅದಾದ ಬಳಿಕ Tax and Investment ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಅದಾದ ಬಳಿಕ Tax2Win ಅನ್ನು ಆಯ್ಕೆ ಮಾಡಿ
ಅದಾದ ಬಳಿಕ ಆಪ್‌ನಲ್ಲಿ ಕೇಳಲಾಗುವ ಮಾಹಿತಿ ಭರ್ತಿ ಮಾಡಿ, ಸೂಚನೆಗಳನ್ನು ಪಾಲಿಸಿ ನೀವು ಐಟಿಆರ್ ಅನ್ನು ಫೈಲ್ ಮಾಡಬಹುದಾಗಿದೆ.


Click it and Unblock the Notifications