ಪರ್ಮನೆಂಟ್ ಅಕೌಂಟ್ ನಂಬರ್ (PAN) ಈಗಂತೂ ನಾನಾ ಕಾರಣಗಳಿಗೆ ಬೇಕೇಬೇಕು. ಆದಾಯ ತೆರಿಗೆ ರಿಟರ್ನ್ಸ್ ಗೆ, ಬ್ಯಾಂಕ್ ಖಾತೆ ತೆರೆಯುವುದಕ್ಕೆ, ಯಾವುದಾದರೂ ದೊಡ್ಡ ಮೊತ್ತದ ಹಣಕಾಸು ವ್ಯವಹಾರಕ್ಕೆ... ಹೀಗೆ ಪಟ್ಟಿ ಇಷ್ಟುದ್ದ ಬೆಳೆಯುತ್ತಾ ಸಾಗುತ್ತದೆ. ಈ ಮುಂಚೆ ಹೇಗಿತ್ತು ಅಂದರೆ, ಪ್ಯಾನ್ ಕಾರ್ಡ್ ಗಾಗಿ ಅರ್ಜಿ ತುಂಬಿ, ಅಗತ್ಯ ದಾಖಲಾತಿಗಳನ್ನು ನೀಡಬೇಕಿತ್ತು. ಅದಕ್ಕೆ ಹದಿನೈದು ದಿನ ಸಮಯ ತೆಗೆದುಕೊಳ್ಳುತ್ತಿತ್ತು.
ಆದರೆ ಈಗ ತತ್ ಕ್ಷಣವೇ ಆದಾಯ ತೆರಿಗೆ ಇಲಾಖೆಯಿಂದ e-PAN ದೊರೆಯುತ್ತದೆ. e-PAN ಅಂದರೆ ಡಿಜಿಟಲ್ ಸಹಿ ಹಾಕಿದ PAN ಕಾರ್ಡ್ ಅಂತ ಅರ್ಥ. ಎಲೆಕ್ಟ್ರಾನಿಕ್ ಫಾರ್ಮಾಟ್ ನಲ್ಲಿ PAN ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ. ಆದರೆ ಅರ್ಜಿದಾರರು ಅಧಿಕೃತವಾದ ಆಧಾರ್ ಸಂಖ್ಯೆ ಅಥವಾ ಡಿಜಿಟಲ್ ಸಹಿ ಹೊಂದಿರಬೇಕು.
e-PANಗೆ ಅಪ್ಲೈ ಮಾಡುವುದು ಹೇಗೆ?
ಅರ್ಜಿದಾರರು ವೆಬ್ ಸೈಟ್ ಕ್ಲಿಕ್ ಮಾಡಬೇಕು. ಅದರಲ್ಲಿ Apply for new PAN card (Form 49A) ಆಯ್ಕೆ ಮಾಡಿಕೊಳ್ಳಬೇಕು. ಆ ನಂತರ e-PAN ಪಡೆಯುವುದಕ್ಕೆ "digital mode" ಆಯ್ಕೆ ಮಾಡಿಕೊಳ್ಳಿ. ಈ ಡಿಜಿಟಲ್ ಮೋಡ್ ಆಯ್ಕೆ ಮಾಡಿಕೊಂಡ ಮೇಲೆ ಆರ್ಜಿದಾರರು ಯಾವುದೇ ಹಾರ್ಡ್ ಕಾಪಿ ಅರ್ಜಿ ಅಥವಾ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ.
ಮೊಬೈಲ್ ಫೋನ್ ಸಂಖ್ಯೆ ಅಪ್ ಡೇಟ್ ಆಗಿರಬೇಕು
ಆಧಾರ್ ನ ಡಿಜಿಟಲ್ ಸಿಗ್ನೇಚರ್ ನೇ ಅರ್ಜಿಗೆ ಬಳಸಲಾಗುತ್ತದೆ. ಆದರೆ ನಿಮ್ಮ ಈಗಿನ ಮೊಬೈಲ್ ಸಂಖ್ಯೆಗೆ ಆಧಾರ್ ಅಪ್ ಡೇಟ್ ಆಗಿರಬೇಕು. ಏಕೆಂದರೆ, ಇ- ಕೆವೈಸಿಗಾಗಿ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಅನ್ನು ಮೊಬೈಲ್ ಫೋನ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಭಾವಚಿತ್ರ ಹಾಗೂ ಸಹಿಯ ಇಮೇಜ್
ಅರ್ಜಿದಾರರು ಜನನ ಪ್ರಮಾಣ ಪತ್ರವೂ ಸೇರಿದಂತೆ ವಿಳಾಸ ದೃಢೀಕರಣ ಪ್ರಮಾಣಪತ್ರ ಇವ್ಯಾವೂ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ನಲ್ಲಿ ಡೇಟಾ ಬೇಸ್ ನಲ್ಲಿ ಯಾವ ಮಾಹಿತಿ ಇರುತ್ತದೋ ಅದರ ಆಧಾರದಲ್ಲಿ e-PAN ಸಿದ್ಧವಾಗುತ್ತದೆ. ಆದರೆ ತಮ್ಮ ಸಹಿ ಹಾಗೂ ಈಚಿನ ಭಾವಚಿತ್ರದ ಇಮೇಜ್ ಅನ್ನು ನಿರ್ದಿಷ್ಟ ಸೂಚನೆ ಅನುಸರಿಸಿ, ಅಪ್ ಲೋಡ್ ಮಾಡಬೇಕು.
ಆಧಾರ್ ನಲ್ಲಿನ ಮಾಹಿತಿಯಲ್ಲಿ ಯಾವುದೇ ತಪ್ಪಿಲ್ಲದಂತೆ ನೋಡಿಕೊಳ್ಳಿ
ಆಧಾರ್ ಮೂಲವಾಗಿಟ್ಟುಕೊಂಡು e-PAN ವಿತರಿಸಲಾಗುತ್ತದೆ. ಆ ಕಾರಣಕ್ಕೆ ಆಧಾರ್ ನಲ್ಲಿನ ಮಾಹಿತಿಯಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಅರ್ಜಿ ಸಲ್ಲಿಸುವಾಗ ಫಿಸಿಕಲ್ PAN ಕಾರ್ಡ್ ಬೇಕಾ ಅಥವಾ e-PAN ಮಾತ್ರ ಸಾಕಾ ಅಥವಾ ಎರಡೂ ಬೇಕಾ ಎಂದು ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಬೇಕೆಂದರೆ 107 ರುಪಾಯಿ ಅಥವಾ ಬರೀ e-PAN ಬೇಕೆಂದರೆ 66 ರುಪಾಯಿ ಆಗುತ್ತದೆ.


Click it and Unblock the Notifications