For Quick Alerts
ALLOW NOTIFICATIONS  
For Daily Alerts

ಹೌಸಿಂಗ್ ಲೋನ್ ಗೆ ಕೇಳುವ ದಾಖಲೆ, ಆದಾಯ ಇತ್ಯಾದಿ ಮಾಹಿತಿ ಇಲ್ಲಿದೆ

By ಅನಿಲ್ ಆಚಾರ್
|

ಬಹಳ ಮಂದಿಗೆ ಬ್ಯಾಂಕ್ ವ್ಯವಹಾರ ಅಥವಾ ಬ್ಯಾಂಕ್ ಗೆ ಹೋಗುವುದು ಅಂದರೆ ಭಯ. ಈಗ ಹೌಸಿಂಗ್ ಲೋನ್ ಬಡ್ಡಿ ದರ ಸಿಕ್ಕಾಪಟ್ಟೆ ಕಡಿಮೆ ಇದೆ. ಈ ಹಿಂದೆಂದೂ ಇಲ್ಲದಷ್ಟು ಪಾತಾಳಕ್ಕೆ ಇಳಿದಿದೆ. ಒಂದು ವೇಳೆ ಸೈಟ್ ಇದ್ದಲ್ಲಿ, ಆ ಜಾಗಕ್ಕೆ ಕಾಗದ- ಪತ್ರಗಳು ಇದ್ದರೆ ಸಾಲ ಪಡೆಯುವುದು ಕಷ್ಟ ಏನಲ್ಲ. ಅದೇ ರೀತಿ ಸೂಕ್ತ ದಾಖಲೆಗಳು ಇದ್ದಲ್ಲಿ ಕಟ್ಟಿದ ಮನೆ, ಅಪಾರ್ಟ್ ಮೆಂಟ್ ಖರೀದಿ ಮಾಡಬಹುದು.

 

ಕಾಗದ ಪತ್ರ ಅಂತೀರಲ್ಲಾ ಅದೇ ನಮ್ಮ ಸಮಸ್ಯೆ ಅಂದುಕೊಳ್ಳುತ್ತಿದ್ದೀರಾ? ಅಷ್ಟೆಲ್ಲ ದಾಖಲೆ ಕೊಡುವುದು ನಮ್ಮಿಂದ ಸಾಧ್ಯವೇ ಇಲ್ಲ. ಹಾಗೂ ಹೀಗೂ ಕಷ್ಟ ಪಟ್ಟು, ಕಾಗದ- ಪತ್ರಗಳನ್ನು ಒಟ್ಟು ಮಾಡಿಕೊಂಡೆವು ಅಂದುಕೊಳ್ಳಿ. ನಿಮ್ಮ ಆದಾಯಕ್ಕೆ ಅಷ್ಟು ಮೊತ್ತದ ಸಾಲ ಸಿಗಲ್ಲ ಅಂದು ಬಿಡುತ್ತಾರೆ ಎನ್ನುವವರೇ ಹೆಚ್ಚು.

ಯಾವ ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್ ಮೇಲೆ ಬಡ್ಡಿ ಬಹಳ ಕಡಿಮೆ?ಯಾವ ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್ ಮೇಲೆ ಬಡ್ಡಿ ಬಹಳ ಕಡಿಮೆ?

ನಿಮಗೆ ಗೊತ್ತಿರಲಿ, ಇದೇ ಮೊದಲ ಸಲ ಮನೆ ಕಟ್ಟುತ್ತಿದ್ದಲ್ಲಿ ಬಡ್ಡಿಯಲ್ಲಿ ಸಬ್ಸಿಡಿ ಸಿಗುವ ಯೋಜನೆ ಕೂಡ ಸರ್ಕಾರದಿಂದ ಇದೆ. ಹೋಮ್ ಲೋನ್ ಗೆ ತೆರಿಗೆ ವಿನಾಯಿತಿಯೂ ಇದೆ. ಅದನ್ನು ಬ್ಯಾಂಕ್ ಗಳಲ್ಲೇ ವಿಚಾರಿಸಿ. ಹಾಗಿದ್ದರೆ ಗೃಹ ಸಾಲ ಅಥವಾ ಹೋಮ್ ಲೋನ್ ಪಡೆದುಕೊಳ್ಳುವಾಗ ಸಿದ್ಧತೆ ಹೇಗಿರಬೇಕು ಎಂಬ ಮಾಹಿತಿ ಈ ಲೇಖನದಲ್ಲಿ ಇದೆ.

ಗೃಹ ಸಾಲ ಪಡೆಯಲು ಬೇಕಾಗುವ ದಾಖಲೆಗಳು

ಗೃಹ ಸಾಲ ಪಡೆಯಲು ಬೇಕಾಗುವ ದಾಖಲೆಗಳು

ಬ್ಯಾಂಕ್ ಗಳಲ್ಲಿ ಕೇಳುವ ದಾಖಲೆಗಳು ಹೀಗಿರುತ್ತವೆ: ಆಸ್ತಿ ನಿಮ್ಮ ಹೆಸರಿಗೆ ಬಂದದ್ದು ಹೇಗೆ ಎಂಬುದಕ್ಕೆ ದಾಖಲೆ (ಸೇಲ್ ಡೀಡ್, ವಿಲ್, ಪಾಲು ಪತ್ರ, ದಾನ ಪತ್ರ ಹೀಗೆ), ಮದರ್ ಡೀಡ್ (ಮೂಲಪತ್ರ), ಋಣಭಾರ ರಾಹಿತ್ಯ ಪತ್ರ (ಎನ್ ಕಂಬರನ್ಸ ಸರ್ಟಿಫಿಕೇಟ್- ಅವಧಿಯನ್ನು ಬ್ಯಾಂಕ್ ನವರೇ ಹೇಳುತ್ತಾರೆ), ಕಂದಾಯ- ಅಭಿವೃದ್ಧಿ ಶುಲ್ಕ ಪಾವತಿ ವಿವರ, ಖಾತೆ- ಖಾತೆ ಎಕ್ಸ್ ಟ್ರಾಕ್ಟ್, ಲೇಔಟ್ ಪ್ಲಾನ್, ವಾಸ ಮಾಡುವುದಕ್ಕೆ ಭೂಮಿಯನ್ನು ಪರಿವರ್ತನೆ ಮಾಡಲಾಗಿದೆಯಾ ಎಂಬುದಕ್ಕೆ ಕನ್ವರ್ಷನ್ ಸರ್ಟಿಫಿಕೇಟ್, ಮನೆ ಕಟ್ಟುವುದಕ್ಕೆ ಕಟ್ಟಡ ನಿರ್ಮಾಣ ಮಾಡಲು ನಕ್ಷೆ (ಪ್ಲ್ಯಾನ್) ಹಾಗೂ ಸ್ಥಳೀಯ ಸಂಸ್ಥೆಗಳಿಂದ ಒಪ್ಪಿಗೆ ಅಥವಾ ಈಗಾಗಲೇ ಕಟ್ಟಿರುವ ಮನೆ ಆಗಿದ್ದಲ್ಲಿ ಅದಕ್ಕಾಗಿ ಪಡೆದಿರುವ ಅನುಮತಿಯನ್ನು ಕೇಳಲಾಗುತ್ತದೆ. ಅಪಾರ್ಟ್ ಮೆಂಟ್ ಖರೀದಿ ಮಾಡಬೇಕಿದ್ದಲ್ಲಿ ಅದಕ್ಕೆ ಬೇಕಾದ ದಾಖಲೆಗಳು ಇನ್ನಷ್ಟು ಕೇಳಬಹುದು.

ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಎಷ್ಟಿದೆ?
 

ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಎಷ್ಟಿದೆ?

ಇನ್ನು ಸಾಲ ಪಡೆಯುವವರಿಗೆ ಇರುವ ಆದಾಯ ಎಷ್ಟು? ಕ್ರೆಡಿಟ್ ಸ್ಕೋರ್ ಎಷ್ಟಿದೆ ಹಾಗೂ ರಿಪೋರ್ಟ್ ಹೇಗಿದೆ? ಈಗ ಪಡೆಯುವ ಸಾಲವನ್ನು ಹಿಂತಿರುಗಿಸುವ ಸಾಮರ್ಥ್ಯ ಇದೆಯಾ ಎಂಬುದನ್ನು ಅಳೆಯಲಾಗುತ್ತದೆ. ಆದಾಯವನ್ನು ತಿಳಿದುಕೊಳ್ಳುವ ಸಲುವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲಾಗಿದೆಯಾ ಅಥವಾ ಫಾರ್ಮ್ 16 ಕೇಳಲಾಗುತ್ತದೆ. ಎರಡು ಅಥವಾ ಮೂರು ವರ್ಷದ ಆದಾಯ ತೆರಿಗೆ ಮಾಹಿತಿ ಕೇಳುತ್ತಾರೆ. ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್, ಸ್ಯಾಲರಿ ಸ್ಲಿಪ್ ತರಲು ಹೇಳುತ್ತಾರೆ. ಸಾಲ ಪಡೆಯುವ ವ್ಯಕ್ತಿಯ ವಯಸ್ಸು ಕೂಡ ಬಹಳ ಮುಖ್ಯವಾಗುತ್ತದೆ. ಅದರ ಆಧಾರದಲ್ಲಿ ಎಷ್ಟು ವರ್ಷಕ್ಕೆ ಮರುಪಾವತಿ ಅವಕಾಶ ನೀಡಬಹುದು ಎಂಬ ತೀರ್ಮಾನ ಆಗುತ್ತದೆ. ಒಂದು ವೇಳೆ ಪ್ರಸ್ತುತ ಆದಾಯಕ್ಕೆ ಅಥವಾ ವಯ ಸ್ಸಿಗೆ ಕೇಳಿದಷ್ಟು ಸಾಲ ಸಿಗದಿದ್ದಾಗ ಕೋ- ಅಪ್ಲಿಕೆಂಟ್ ಅಂತ ಸೇರಿಸಿಕೊಳ್ಳಬಹುದು. ಅದು ರಕ್ತ ಸಂಬಂಧಿಗಳೇ ಆಗಿರಬೇಕು ಎಂಬ ನಿಯಮ ಇದೆ. ಇದರ ಜತೆಗೆ ಮೂರು ಪಾಸ್ ಪೋರ್ಟ್ ಅಳತೆಯ ಫೋಟೋ ಕೇಳಲಾಗುತ್ತದೆ.

ವಕೀಲರ ಅಭಿಪ್ರಾಯ ಕೇಳಲಾಗುತ್ತದೆ

ವಕೀಲರ ಅಭಿಪ್ರಾಯ ಕೇಳಲಾಗುತ್ತದೆ

ಇಷ್ಟೆಲ್ಲ ಒದಗಿಸಿದ ಮೇಲೆ ಅರ್ಜಿದಾರರು ನೀಡಿದ ಮಾಹಿತಿ ಸರಿಯಿದೆಯಾ ಎಂದು ತಿಳಿಯಲು ಪರಿಶೀಲನೆ ನಡೆಸಲಾಗುತ್ತದೆ. ಕಾಗದ- ಪತ್ರಗಳ ಕುರಿತು ವಕೀಲರಿಂದ ಲೀಗಲ್ ಒಪಿನಿಯನ್ ತೆಗೆದುಕೊಳ್ಳಲಾಗುತ್ತದೆ. ಹೀಗೆ ಪರಿಶೀಲನೆಗೆ ಹಾಗೂ ಕಾಗದ- ಪತ್ರಗಳ ಕುರಿತು ವಕೀಲರ ಅಭಿಪ್ರಾಯ ತೆಗೆದುಕೊಳ್ಳುವುದಕ್ಕೆ ಆಗುವ ಖರ್ಚಿನ ಲೆಕ್ಕಕ್ಕೆ 'ಶುಲ್ಕ' ಎಂದು ತೆಗೆದುಕೊಳ್ಳಲಾಗುತ್ತದೆ. ಕೆಲವು ಬ್ಯಾಂಕ್ ಗಳಲ್ಲಿ ಹೌಸಿಂಗ್ ಲೋನ್ ಗೆ ಅರ್ಜಿ ಹಾಕುವಾಗಲೇ ಶುಲ್ಕವಾಗಿ ಇಂತಿಷ್ಟು ಮೊತ್ತ ಎಂದು ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವು ಬ್ಯಾಂಕ್ ಗಳಲ್ಲಿ ಸಾಲ ಮಂಜೂರು ಆದ ಮೇಲಷ್ಟೇ ಶುಲ್ಕ ಮತ್ತು ಪ್ರೊಸೆಸಿಂಗ್ ಫೀ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇದನ್ನು ಮುಂಚಿತವಾಗಿಯೇ ವಿಚಾರಿಸಿಕೊಳ್ಳಬೇಕು. ಇಷ್ಟೆಲ್ಲ ಪ್ರಕ್ರಿಯೆ ನಡೆಯುವುದಕ್ಕೆ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆದ್ದರಿಂದ ಕನಿಷ್ಠ ನಲವತ್ತೈದು ದಿನಗಳನ್ನು ಈ ಪ್ರಕ್ರಿಯೆಗಾಗಿ ಮೀಸಲಿಡುವುದು ಉತ್ತಮ.

ಭೂಮಿ ಅಥವಾ ಆಸ್ತಿಯ ಮೌಲ್ಯಮಾಪನ

ಭೂಮಿ ಅಥವಾ ಆಸ್ತಿಯ ಮೌಲ್ಯಮಾಪನ

ಕಾಗದ- ಪತ್ರ ಸರಿಯಿದೆ. ಆದಾಯವೂ ಖಾತ್ರಿ ಎಂದಾದ ಮೇಲೆ ಎಷ್ಟು ಸಾಲವನ್ನು ಹಾಗೂ ಯಾವ ಅವಧಿಗೆ ನೀಡಬಹುದು ಎಂಬ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಭೂಮಿಯ ಅಥವಾ ಆಸ್ತಿಯ ಮೌಲ್ಯಮಾಪನ ಮಾಡಿ ಶೇಕಡಾ 90, 80, 75 ಅಥವಾ 60ರಷ್ಟು ಸಾಲ ನೀಡುವ ತೀರ್ಮಾನವನ್ನು ಆಯಾ ಬ್ಯಾಂಕ್ ತೀರ್ಮಾನ ಮಾಡುತ್ತದೆ. ಅದಕ್ಕಾಗಿ ಮನೆ ನಿರ್ಮಾಣಕ್ಕೆ ಆಗುವ ಖರ್ಚೆಷ್ಟು ಎಂಬುದು ಕೂಡ ಗಣನೆಗೆ ಬರುತ್ತದೆ. ಆ ನಂತರ ಒಟ್ಟು ಆದಾಯದಲ್ಲಿ ಶೇಕಡಾ 50ರಷ್ಟನ್ನು ಮಾತ್ರ (ಉಳಿದ ಸಾಲಗಳು ಇದ್ದಲ್ಲಿ ಅದರ ಇಎಂಐ ಮತ್ತೊಂದು ಕಳೆದು ಲೆಕ್ಕ ಹಾಕಲಾಗುತ್ತದೆ) ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಮನೆ ನಿರ್ಮಾಣಕ್ಕೆ ಸಾಲವನ್ನು ತೆಗೆದುಕೊಳ್ಳುವಂತಿದ್ದರೆ ಹಂತ ಹಂತವಾಗಿ, ಅಂದರೆ ಕಟ್ಟಡ ನಿರ್ಮಾಣ ಸಾಗಿದಂತೆ ಹಣ ಬಿಡುಗಡೆ ಮಾಡಲಾಗುತ್ತದೆ. ಕಟ್ಟಿದ ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಿದರೆ ಮಾರಾಟಗಾರರ ಹೆಸರಿಗೆ ಚೆಕ್ ನೀಡಲಾಗುತ್ತದೆ.

ಬಡ್ಡಿ ದರ ಬಹಳ ಮುಖ್ಯ

ಬಡ್ಡಿ ದರ ಬಹಳ ಮುಖ್ಯ

ಸಾಲ ತೆಗೆದುಕೊಳ್ಳಲು ತೀರ್ಮಾನ ಮಾಡುವ ಹಂತದಲ್ಲೇ ಯಾವ ಬ್ಯಾಂಕ್ ಎಂಬುದನ್ನು ನಿರ್ಧರಿಸಿ. ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್, ಎನ್ ಬಿಎಫ್ ಸಿ, ಕೋ ಆಪರೇಟಿವ್ ಬ್ಯಾಂಕ್ ಹೀಗೆ ಎಲ್ಲಿ ಸಾಲ ಪಡೆದುಕೊಳ್ಳುತ್ತಿದ್ದೀರಿ ಎಂಬುದು ಬಹಳ ಮುಖ್ಯವಾದ ಸಂಗತಿ ಆಗುತ್ತದೆ. ಏಕೆಂದರೆ ಬಡ್ಡಿ ದರ ಒಂದೊಂದು ಕಡೆ ಒಂದೊಂದು ರೀತಿ ಇದೆ. ಅದೇ ರೀತಿ ಕೆಲವು ದಾಖಲೆಗಳು ಇಲ್ಲದಿದ್ದರೂ ಸಾಲ ನೀಡಲಾಗುತ್ತದೆ. ಆದರೆ ಬಡ್ಡಿ ದರ ಸಿಕ್ಕಾಪಟ್ಟೆ ಜಾಸ್ತಿ ಇರುತ್ತದೆ. ಕೆಲವು ಬ್ಯಾಂಕ್ ಗಳು ಬಿ ಖಾತೆ ಇದ್ದರೂ ಸಾಲ ನೀಡಿದರೆ, ಹಲವು ಬ್ಯಾಂಕ್ ಗಳು ಎ ಖಾತೆ ಇರಲೇಬೇಕು ಎನ್ನುತ್ತವೆ. ಸಾಲ ಪಡೆಯುವಾಗ ಬಡ್ಡಿ ದರ ಫಿಕ್ಸೆಡ್ ಅಥವಾ ಫ್ಲೋಟಿಂಗ್ ಯಾವುದು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ಇನ್ನು ಸಾಲ ಪಡೆಯುವರ ಹೆಸರಿಗೆ ಟರ್ಮ್ ಇನ್ಷೂರೆನ್ಸ್ ಮಾಡಿಸಲೇ ಬೇಕು ಎಂದು ಕೆಲವು ಬ್ಯಾಂಕ್ ಗಳು ಕಡ್ಡಾಯ ಮಾಡುತ್ತವೆ. ಆದರೆ ಈಗಾಗಲೇ ಟರ್ಮ್ ಇನ್ಷೂರೆನ್ಸ್ ಮಾಡಿಸಿದವರು ಬ್ಯಾಂಕ್ ನಲ್ಲಿ ಆ ಮಾಹಿತಿಯನ್ನು ನೀಡಿ, ಇನ್ಷೂರೆನ್ಸ್ ಖರೀದಿ ಮಾಡದಿದ್ದರೂ ನಡೆಯುತ್ತದೆ. ಹೌಸಿಂಗ್ ಲೋನ್ ಕೇಳಬೇಕು ಅಂದರೆ ಧೈರ್ಯವಾಗಿ ಬ್ಯಾಂಕ್ ಗೆ ಹೋಗಿ. ಇಲ್ಲಿ ಹೇಳಿರುವ ಮಾಹಿತಿ ಹೊರತು ಪಡಿಸಿದಂತೆ ಎಲ್ಲೋ ಕೆಲವು ದಾಖಲೆ, ಮಾಹಿತಿ ನಿಮ್ಮಿಂದ ಹೆಚ್ಚಿಗೆ ಕೇಳಬಹುದು. ಉಳಿದಂತೆ ಸಾಲ ಸಿಗುವುದು ಕಷ್ಟ ಏನಲ್ಲ.

English summary

How To Get Home Loan? What Are The Documents Ask By Banks Before Approval

How to get home loan, due to corona pandemic crisis housing loan rate of interest bottom out. Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X