ಅಧಿಕ ಜನರು ಈಗ ಯುಪಿಐ ಪಾವತಿ ವಿಧಾನವನ್ನು ಬಳಕೆ ಮಾಡುತ್ತಿದ್ದಾರೆ. ಇದು ಅತೀ ಜನಪ್ರಿಯವಾಗಲು ಮುಖ್ಯ ಕಾರಣ ಇದರ ಬಳಕೆ ಸುಲಭವಾಗಿರುವುದು. ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ನೀವು ಪಾವತಿ ಮಾಡಲು ಬಯಸುವ ವ್ಯಕ್ತಿ ಅಥವಾ ಮಾರಾಟಗಾರರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೀವು ಸುಲಭವಾಗಿ ಪಾವತಿಯನ್ನು ಮಾಡಬಹುದಾಗಿದೆ.
ಆರಂಭದಲ್ಲಿ ಒಬ್ಬರ ಬ್ಯಾಂಕ್ ಖಾತೆಯನ್ನು ಯುಪಿಐಗೆ ಲಿಂಕ್ ಮಾಡುವ ಮೂಲಕ ಬ್ಯಾಂಕ್ ಖಾತೆಯಿಂದ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಬಳಿಕ ಹಲವಾರು ಬ್ಯಾಂಕುಗಳು ಯುಪಿಐ ಪಾವತಿ ಮಾಡಲು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸೇರಿಸಲು ಜನರು ಅವಕಾಶ ನೀಡಿದೆ. ನೀವು ಯುಪಿಐ ಲಿಂಕ್ ಮಾಡಲಾದ ಕಾರ್ಡ್ ಅನ್ನು ಬಳಸಿಕೊಂಡು ವ್ಯಾಪಾರಿಗಳಿಗೆ ಮಾತ್ರ ಪಾವತಿ ಮಾಡಲು ಸಾಧ್ಯವಾಗಲಿದೆ. ವೈಯಕ್ತಿಕ ಪಾವತಿ ಮಾಡಲು ಸಾಧ್ಯವಿಲ್ಲ.
ಯುಪಿಐ ಅಪ್ಲಿಕೇಶನ್‌ಗಳಿಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸೇರಿಸುವ ಮೂಲಕ, ಪಿಒಎಸ್ ಯಂತ್ರದಲ್ಲಿ ಸ್ವೈಪ್ ಮಾಡುವ ಅಗತ್ಯವಿಲ್ಲದೇ ಪಾವತಿ ಮಾಡಬಹುದು. ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಪಾವತಿ ಮಾಡಲು ಸೇರಿಸಲಾದ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಪಾವತಿ ವಿಧಾನವಾಗಿ ಆಯ್ಕೆಮಾಡಬಹುದು. ಇದಕ್ಕಾಗಿ ಒಟಿಪಿ ಮುಖ್ಯವಾಗಿದೆ. ಹಾಗಾದರೆ ಹೇಗೆ ಈ ಪಾವತಿ ಮಾಡುವುದು ಎಂದು ತಿಳಿಯಲು ಮುಂದೆ ಓದಿ..
ಗೂಗಲ್ ಪೇ: ಲಿಂಕ್ ಮಾಡಬಹುದಾದ ಬ್ಯಾಂಕ್
ಗೂಗಲ್ ಪೇ ಬಳಸಿಕೊಂಡು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು, ನೀವು ಮೊದಲು ಯುಪಿಐ ಅಪ್ಲಿಕೇಶನ್‌ಗೆ ಕಾರ್ಡ್‌ಗಳನ್ನು ಸೇರಿಸಬೇಕಾಗುತ್ತದೆ. ಗೂಗಲ್ ಪೇ ವೆಬ್‌ಸೈಟ್‌ನ ಪ್ರಕಾರ, ಒಬ್ಬ ವ್ಯಕ್ತಿಯು ಈ ಕೆಳಗಿನ ಬ್ಯಾಂಕ್‌ಗಳ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಸೇರಿಸಬಹುದು.
* ಆಕ್ಸಿಸ್ ಬ್ಯಾಂಕ್
* ಎಸ್‌ಬಿಐ, ಎಸ್‌ಬಿಐ ಕಾರ್ಡ್ಸ್
* ಕೋಟಕ್ ಬ್ಯಾಂಕ್
* ಎಚ್‌ಡಿಎಫ್‌ಸಿ ಬ್ಯಾಂಕ್
* ಇಂಡಸ್ಇಂಡ್ ಬ್ಯಾಂಕ್
* ಫೆಡರಲ್ ಬ್ಯಾಂಕ್
* ಆರ್‌ಬಿಎಲ್ ಬ್ಯಾಂಕ್
* ಎಚ್‌ಎಸ್‌ಬಿಸಿ ಬ್ಯಾಂಕ್
* ಐಸಿಐಸಿಐ ಬ್ಯಾಂಕ್
* ಒನ್‌ಕಾರ್ಡ್ (ವೀಸಾ ಕ್ರೆಡಿಟ್ ಕಾರ್ಡ್)
ಗೂಗಲ್ ಪೇಗೆ ಕ್ರೆಡಿಟ್, ಡೆಬಿಟ್ ಕಾರ್ಡ್ ಲಿಂಕ್ ಹೇಗೆ?
ಹಂತ 1: ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಹಂತ 2: ಪಾವತಿ ವಿಧಾನಗಳ ಮೇಲೆ ಕ್ಲಿಕ್ ಮಾಡಿ.
ಹಂತ 3: ಅಪ್ಲಿಕೇಶನ್‌ನಲ್ಲಿ ಸೇರಿಸಲಾದ ಪ್ರಸ್ತುತ ಬ್ಯಾಂಕ್ ಖಾತೆಗಳನ್ನು ಅಪ್ಲಿಕೇಶನ್ ತೋರಿಸುತ್ತದೆ.
ಹಂತ 4: ಗೂಗಲ್ ಪೇನಲ್ಲಿ ನಿಮ್ಮ ಕಾರ್ಡ್ ಅನ್ನು ಸೇರಿಸಲು 'Add credit or debit card' ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, ಸಿವಿವಿ ನಮೂದಿಸಿ
ಹಂತ 6: ಹೆಸರು ಮತ್ತು ಬಿಲ್ಲಿಂಗ್ ವಿಳಾಸವನ್ನು ನಮೂದಿಸಿ Save ಕ್ಲಿಕ್ ಮಾಡಿ.
ಹಂತ 7: ನೀವು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು
ಹಂತ 8: 'Activate' ಕ್ಲಿಕ್ ಮಾಡಬೇಕು, ಒಟಿಪಿ ಬರಲಿದ್ದು ಅದನ್ನು ನಮೂದಿಸಿದರೆ ಪ್ರಕ್ರಿಯೆ ಪೂರ್ಣ
ಫೋನ್ ಪೇ ಮೂಲಕ ಪಾವತಿ ಹೇಗೆ
ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಲು, ನೀವು ಮೊದಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಪಾವತಿ ವಿಧಾನಗಳಲ್ಲಿ ಒಂದಾಗಿ ಸೇರಿಸುವ ಅಗತ್ಯವಿದೆ. ಫೋನ್ ಪೇ ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿಸುವ ಹಂತಗಳು ಮೇಲೆ ತಿಳಿಸಿದಂತೆಯೇ ಇರುತ್ತದೆ. ಪೋನ್ ಪೇ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ, ಪಾವತಿ ವಿಧಾನಗಳನ್ನು ಪರಿಶೀಲಿಸಿ. 'Add new card' ಮೇಲೆ ಕ್ಲಿಕ್ ಮಾಡಿ. ನೀವು ಕಾರ್ಡ್ ವಿವರಗಳನ್ನು ನಮೂದಿಸುವ ಅಗತ್ಯವಿದೆ. ಕಾರ್ಡ್ ಅನ್ನು ಯಶಸ್ವಿಯಾಗಿ ಪರಿಶೀಲಿಸಿದಾಗ, ಕಾರ್ಡ್ ಅನ್ನು ಪಾವತಿಗಳಿಗೆ ಬಳಸಬಹುದು.
ಪೇಟಿಎಂ ಮೂಲಕ ಪಾವತಿ ಹೇಗೆ?
ಪೇಟಿಎಂ ಅಪ್ಲಿಕೇಶನ್‌ನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಸೇರಿಸಲು ಇದೇ ರೀತಿಯ ವಿಧಾನವನ್ನು ನೀವು ಪಾಲಿಸಬೇಕಾಗುತ್ತದೆ. ಕಾರ್ಡ್ ಅನ್ನು ಯಶಸ್ವಿಯಾಗಿ ಪರಿಶೀಲಿಸಿದ ನಂತರ, ಅದನ್ನು ಪಾವತಿಗಳಿಗೆ ಬಳಸಬಹುದು. ಪೇಟಿಎಂ ಅಪ್ಲಿಕೇಶನ್ ಪಾವತಿಗಳನ್ನು ಮಾಡಲು ಎಲ್ಲಾ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಸಹ ಬಳಸಬಹುದಾಗಿದೆ.


Click it and Unblock the Notifications