ಭಾರತದಲ್ಲಿ ಆಧಾರ್ ಕಾರ್ಡ್ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಜನರ ಗುರುತಿನ ಚೀಟಿಯ ಜೊತೆಗೆ ಸರ್ಕಾರಿ ಯೋಜನೆಗಳು ಸುಲಭವಾಗಿ ತಲುಪಲು ಪ್ರಮುಖ ವಾಹಕವಾಗಿ ಕೆಲಸ ಮಾಡುತ್ತಿದೆ. ನಮ್ಮ ಪ್ಯಾನ್ ನಂಬರ್, ಪಿಎಫ್, ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಹೀಗೆ ಹಲವು ಸೇವೆಗಳಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತಿದೆ. ಹೀಗಾಗಿ, ಆಧಾರ್ ಕಾರ್ಡ್ ವಿಚಾರದಲ್ಲಿ ಬಹಳ ಜೋಪಾನವಾಗಿರುವುದು ಒಳ್ಳೆಯದು.
ನಿಮ್ಮ ಆಧಾರ್ ನಂಬರ್ ಸುರಕ್ಷಿತವಾಗಿಡಲು ಮೊಬೈಲ್ ನಂಬರ್ ಜೋಡಿಸುವುದು ಬಹಳ ಅಗತ್ಯ. ಆಧಾರ್ ನಂಬರ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲವೆಂದರೆ ಕೂಡಲೇ ಮಾಡಿ. ಮೊಬೈಲ್ ನಂಬರ್ ಸೇರಿಸಬೇಕೆಂದರೆ ನೀವು ಆಧಾರ್ ಸೆಂಟರ್‌ಗೆ ಹೋಗುವುದು ಅನಿವಾರ್ಯ.
ನೀವು ಮೊಬೈಲ್ ನಂಬರ್ ಜೋಡಿಸಿದ್ದೇ ಆದಲ್ಲಿ ನಂತರ ಆಧಾರ್ ಸಂಬಂಧಿತ ಹಲವು ಕಾರ್ಯಗಳನ್ನು ನೀವು ಕೂತಲಿಂದಲೇ ಮಾಡಲು ಸಾಧ್ಯ. ನೀವು ಆಧಾರ್‌ಗೆ ಜೋಡಿಸಿರುವ ಮೊಬೈಲ್ ಸಂಖ್ಯೆಯನ್ನು ಬದಲಿಸುವ ಕೆಲಸವನ್ನೂ ಮನೆಯಿಂದಲೇ ಮಾಡಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮುಖಾಂತರ ಇದು ಸಾಧ್ಯ.

ಆಧಾರ್‌ಗೆ ನೊಂದಣಿ ಮೊಬೈಲ್ ನಂಬರ್ ಬದಲಿಸುವ ಪ್ರಕ್ರಿಯೆ:
* ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
* ಸರ್ವಿಸ್ ರಿಕ್ವೆಸ್ಟ್ ಸೆಕ್ಷನ್‌ಗೆ ಹೋಗಿ
* ನಾನ್-ಐಪಿಪಿಬಿ ಬ್ಯಾಂಕಿಂಗ್ ಓಪನ್ ಮಾಡಿರಿ, ಬಳಿಕ "ಡೋರ್‌ಸ್ಟೆಪ್ ಬ್ಯಾಂಕಿಂಗ್" ಮೇಲೆ ಕ್ಲಿಕ್ ಮಾಡಿ.
* ಅಲ್ಲಿ ಪ್ರತ್ಯಕ್ಷವಾಗುವ ಫಾರ್ಮ್‌ನಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿರಿ.
* ಆಧಾರ್ ಮೊಬೈಲ್ ಅಪ್‌ಡೇಟ್‌ನ ಮುಂದಿರುವ ಬಾಕ್ಸ್ ಅನ್ನು ಟಿಕ್ ಮಾಡಿರಿ.
* ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಇಷ್ಟು ಕೆಲಸವಾದ ಬಳಿಕ ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಬಿಡುವಿರುವ ವೇಳೆಯನ್ನು ಅವರಿಗೆ ತಿಳಿಸಿದರೆ ಆ ಸಮಯಕ್ಕೆ ನಿಮ್ಮ ಮನೆಗೇ ಅವರು ಬರುತ್ತಾರೆ. ನಿಮ್ಮ ಬಯೋಮೆಟ್ರಿಕ್ಸ್ ಪಡೆದು, ಕೆವೈಸಿ ಭರ್ತಿ ಮಾಡುತ್ತಾರೆ. ಬಯೋಮೆಟ್ರಿಕ್ ಆದ ಬಳಿಕ ಅವರು ಆಧಾರ್‌ಗೆ ಜೋಡಿಸಿರುವ ಮೊಬೈಲ್ ನಂಬರ್ ಅನ್ನು ಬದಲಿಸುತ್ತಾರೆ.

10 ವರ್ಷದ ಹಿಂದಿನ ಆಧಾರ್‌ಗೆ ಮಾರ್ಪಾಡು
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್‌ನಲ್ಲಿ ಮಾಹಿತಿ ಪರಿಷ್ಕರಿಸದೇ ಇದ್ದರೆ ಅಂಥವರು ತಮ್ಮ ವಾಸಸ್ಥಳದ ದಾಖಲೆಗಳೊಂದಿಗೆ ಆಧಾರ್ ಅನ್ನು ಅಪ್‌ಡೇಟ್ ಮಾಡಬೇಕು ಎಂದು ಯುಐಡಿಎಐ ಸಂಸ್ಥೆ ಇತ್ತೀಚೆಗೆ ಹೇಳಿದೆ. ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಬೇಕಾದರೂ ಮಾಡಬಹುದು, ಅಥವಾ ಆಧಾರ್ ಸೆಂಟರ್‌ಗೆ ಹೋಗಿಯೂ ಅಪ್‌ಡೇಟ್ ಮಾಡಬಹುದು.
ಅಧಾರ್ ಕಾರ್ಡ್‌ಗೆ ನಿಮ್ಮ ಮೊಬೈಲ್ ನಂಬರ್ ಅನ್ನು ನೊಂದಾಯಿಸಿದ್ದರೆ ಆನ್‌ಲೈನ್‌ನಲ್ಲೇ ವಿವರಗಳನ್ನು ಪರಿಷ್ಕರಿಸಲು ಸಾಧ್ಯ. ಮೊಬೈಲ್ ನಂಬರ್ ಜೋಡಿಸಿಲ್ಲವಾದರೆ ಆಧಾರ್ ಸೆಂಟರ್‌ಗೆ ಹೋಗಿಯೇ ಅಪ್‌ಡೇಟ್ ಮಾಡಿಬೇಕಾಗುತ್ತದೆ.


Click it and Unblock the Notifications