2023ರ ಎಂ3ಎಂ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಟಾಪ್ 10 ಬಿಲಿಯನೇರ್ ಪಟ್ಟಿಯಲ್ಲಿ ಕೇವಲ ಓರ್ವ ಭಾರತೀಯ ಮಾತ್ರ ಇದ್ದಾರೆ. ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮತ್ತು ಚೇರ್‌ಮನ್ ಆದ ಮುಕೇಶ್ ಅಂಬಾನಿ ಮಾತ್ರ ವಿಶ್ವದ ಟಾಪ್ 10 ಬಿಲಿಯನೇರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಗ್ರೂಪ್ ಎಂ3ಎಂ ಸಂಶೋಧನಾ ವೇದಿಕೆ ಹುರುನ್ ಸಂಗ್ರಹಿಸಿದ ವರದಿಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ಬಿಲಿಯನೇರ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ನಿವ್ವಳ ಆದಾಯವು 82 ಬಿಲಿಯನ್ ಡಾಲರ್ ಆಗಿದೆ. ಮುಕೇಶ್ ಅಂಬಾನಿ ಸಂಪತ್ತು ಶೇಕಡ 20ರಷ್ಟು ಕುಸಿತ ಕಂಡಿದೆ, ಆದರೂ ಕೂಡಾ ವಿಶ್ವದ ಟಾಪ್ 10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಅಂಬಾನಿ ಸತತ ಮೂರನೇ ವರ್ಷವೂ ಏಷ್ಯಾದ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಗೌತಮ್ ಅದಾನಿ ಯಾವ ಸ್ಥಾನದಲ್ಲಿ
ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ವರ್ಷದಿಂದ ವರ್ಷಕ್ಕೆ ಗೌತಮ್ ಅದಾನಿಯ ಆದಾಯವು ಶೇಕಡ 35ರಷ್ಟು ಇಳಿಕೆಯಾಗಿದ್ದು, ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಗೌತಮ್ ಅದಾನಿಯ ನಿವ್ವಳ ಆದಾಯವು 53 ಬಿಲಿಯನ್ ಡಾಲರ್ ಆಗಿದೆ. ಹುರುನ್ ಪ್ರಕಾರ ಕಳೆದ ಒಂದು ವರ್ಷದಲ್ಲಿ ಗೌತಮ್ ಅದಾನಿ ಪ್ರತಿ ವಾರ ಸುಮಾರು 3,000 ಕೋಟಿ ರೂಪಾಯಿಯಷ್ಟು ನಷ್ಟವನ್ನು ಕಂಡಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಎರಡನೇ ಸ್ಥಾನವನ್ನು ಕಳೆದುಕೊಂಡಿದ್ದು, ಪ್ರಸ್ತುತ ಏಷ್ಯಾದ ಎರಡನೇ ಶ್ರೀಮಂತರ ಪಟ್ಟಿಯಲ್ಲಿ ಚೀನಾದ ಶಾಂಗ್ ಶಾಂಶನ್ ಇದ್ದಾರೆ. ಯುಸ್‌ನ ಹಿಂಡನ್‌ಬರ್ಗ್ ಜನವರಿ 24ರಂದು ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಆರೋಪಿಸಿ ವರದಿ ಪ್ರಕಟಿಸಿದೆ. ಇದಾದ ಬಳಿಕ ಗೌತಮ್ ಅದಾನಿ ಆದಾಯ ಭಾರೀ ಇಳಿಕೆಯಾಗಿದೆ. ಅದಾದ ಬಳಿಕ ಅದಾನಿ ಸ್ಟಾಕ್ ಶೇಕಡ 60ರಷ್ಟು ಮೌಲ್ಯ ಕಳೆದುಕೊಂಡಿದೆ. ಈ ವರದಿಗೂ ಮುನ್ನ ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದರು.
ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿ
ಇತರೆ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸಿರಮ್ ಇನ್‌ಸ್ಟಿಟ್ಯೂಟ್‌ನ ಸಿರಸ್ ಪೂನಾವಾಲಾ 3ನೇ ಸ್ಥಾನದಲ್ಲಿದ್ದು ನಿವ್ವಳ ಆದಾಯ 27 ಬಿಲಿಯನ್ ಡಾಲರ್ ಆಗಿದೆ. ಇನ್ನು ಶಿವ್ ನಾಡಾರ್ ಹಾಗೂ ಕುಟುಂಬವು ನಾಲ್ಕನೇ ಸ್ಥಾನದಲ್ಲಿದ್ದು ನಿವ್ವಳ ಆದಾಯವು 26 ಬಿಲಿಯನ್ ಡಾಲರ್ ಆಗಿದೆ. ಇನ್ನು ಲಕ್ಷ್ಮೀ ಮಿತ್ತಲ್ 5ನೇ ಸ್ಥಾನದಲ್ಲಿದ್ದು ನಿವ್ವಳ ಆದಾಯವು 20 ಬಿಲಿಯನ್ ಡಾಲರ್ ಆಗಿದೆ. ಇನ್ನು ಎಸ್‌ಪಿ ಹಿಂದೂಜಾ & ಫ್ಯಾಮಿಲಿ, ದಿಲೀಪ್ ಶಾಂಘವಿ & ಫ್ಯಾಮಿಲಿ, ರಾಧಾಕೃಷ್ಣನ್ ಧಾಮಿನಿ & ಫ್ಯಾಮಿಲಿ, ಕುಮಾರ್ ಮಂಗಳಂ ಬಿರ್ಲಾ & ಫ್ಯಾಮಿಲಿ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಹತ್ತನೇ ಸ್ಥಾನದಲ್ಲಿ ಉದಯ್ ಕೋಟಕ್ ಇದ್ದಾರೆ.
ಭಾರತದಲ್ಲಿ ಒಟ್ಟು 187 ಬಿಲಿಯನೇರ್‌ಗಳು ಇದ್ದಾರೆ. ಈ ಪಟ್ಟಿಗೆ 16 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ವಿಶ್ವದಲ್ಲಿ ಅತೀ ಅಧಿಕ ಬಿಲಿಯನೇರ್‌ಗಳು ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ಮೂಲದ ಬಿಲಿಯನೇರ್‌ಗಳ ಹೆಸರನ್ನು ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿದರೆ, ಸಂಖ್ಯೆಯು 217ಕ್ಕೆ ಏರಿಕೆಯಾಗುತ್ತದೆ. ಈ 187 ಬಿಲಿಯನೇರ್‌ಗಳು ದೇಶದ 24 ನಗರಗಳಿಗೆ ಸೇರಿದವರು ಆಗಿದ್ದಾರೆ. ಕಳೆದ ಐದು ವರ್ಷದಲ್ಲಿ ಭಾರತದ ಬಿಲಿಯನೇರ್‌ಗಳ ಪಟ್ಟಿಗೆ ಹೆಚ್ಚುವರಿಯಾಗಿ 360 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಪಟ್ಟಿಯ ಪ್ರಕಾರ 360 ಬಿಲಿಯನ್ ಡಾಲರ್ ಅಂಕಿ ಅಂಶವು ಹಾಂಗ್ ಕಾಂಗ್‌ನ ಜಿಡಿಪಿಗೆ ಸಮನಾಗಿರುತ್ತದೆ.


Click it and Unblock the Notifications