ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗಿರುವ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ನಿಮ್ಮ ಎಲ್ಲ ಹಣಕಾಸು ವಹಿವಾಟುಗಳ ಮೇಲೆ ನಿಗಾ ವಹಿಸಲು ಸರ್ಕಾರವು ಇದನ್ನು ಆರಂಭ ಮಾಡಿದೆ. ಬಹುತೇಕ ಎಲ್ಲ ಹಣಕಾಸು ಕಾರ್ಯಗಳಿಗೆ ಪ್ರಸ್ತುತ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ. ಆದರೆ ನೀವು ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಈ ಪ್ರಮುಖ ಕಾರ್ಡ್ ನಿಷ್ಕ್ರೀಯವಾಗಲಿದೆ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಇದಕ್ಕೂ ಮುನ್ನ ನಿಮ್ಮ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಇದರಿಂದಾಗಿ ನಿಮಗೆ ಹಲವಾರು ಹಣಕಾಸು ಸಂಬಂಧಿತ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆಧಾರ್ ಲಿಂಕ್ ಆಗದಿದ್ದರೆ ಯಾವೆಲ್ಲ ಹಣಕಾಸು ಕಾರ್ಯ ನಡೆಸಲು ಸಾಧ್ಯವಿಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯಾವೆಲ್ಲ 15 ಹಣಕಾಸು ಕಾರ್ಯಗಳನ್ನು ಮಾಡಲಾಗದು?
1. ಕೋಆಪರೇಟಿವ್ ಬ್ಯಾಂಕ್‌ನಿಂದ ಹಿಡಿದು ಖಾಸಗಿ ಬ್ಯಾಂಕ್‌ಗಳವರೆಗೆ ಯಾವುದೇ ಬ್ಯಾಂಕ್‌ನಲ್ಲಿ ಹೊಸದಾಗಿ ಖಾತೆಯನ್ನು ತೆರೆಯಲು ಸಾಧ್ಯವಾಗದು.
2. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ.
3. ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ.
4. ವಿದೇಶ ಪ್ರವಾಸಕ್ಕೆ 50 ಸಾವಿರ ರೂಪಾಯಿ ಒಂದು ಬಾರಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.
5. ಒಂದೇ ವಹಿವಾಟಿನಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.
6. ಮ್ಯೂಚುವಲ್ ಫಂಡ್‌ನಲ್ಲಿ 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತ ಹೂಡಿಕೆ ಮಾಡಲು ಸಾದ್ಯವಾಗುವುದಿಲ್ಲ.
7. ಯಾವುದೇ ಸಂಸ್ಥೆಗೆ 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತ ಪಾವತಿ ಮಾಡಲು ಸಾದ್ಯವಾಗುವುದಿಲ್ಲ.
8. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದ ಬಾಂಡ್ ಅನ್ನು ಖರೀದಿಸಲು ಸಾಧ್ಯವಿಲ್ಲ.
9. ಫಿಕ್ಸಿಡ್ ಡೆಪಾಸಿಟ್ ಅಥವಾ ಯಾವುದೇ ಬ್ಯಾಂಕ್ ಯೋಜನೆಗಳಿಗೆ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಿಂತ ಅಧಿಕ ಹೂಡಿಕೆ ಮಾಡುವುದಕ್ಕೆ ಮಿತಿ ಇದೆ.
10. ಬ್ಯಾಂಕ್ ಡ್ರಾಫ್ಟ್ಸ್, ಪೇ ಆರ್ಡರ್, ಚೆಕ್‌ಗಳಲ್ಲಿ 50 ಸಾವಿರ ರೂಪಾಯಿಗಿಂತ ಅಧಿಕ ಪಾವತಿಗೆ ನಿರ್ಬಂಧ.
11. ಒಂದು ಹಣಕಾಸು ವರ್ಷದಲ್ಲಿ ಜೀವ ವಿಮಾ ಸಂಸ್ಥೆಗೆ 50 ಸಾವಿರ ರೂಪಾಯಿಗಿಂತ ಅಧಿಕ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ.
12. 1 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಷೇರು ವಹಿವಾಟಿಗೆ ನಿರ್ಬಂಧ.
13. ನಿಷ್ಕ್ರಿಯ ಪ್ಯಾನ್ ಬಳಸಿ ಮಾಡಿದ ಪಾವತಿಗಳ ಮೇಲಿನ ತೆರಿಗೆ ಕಡಿತ.
14. ಮೋಟಾರು ವಾಹನಗಳು ಅಥವಾ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ, ವಾಹನದ ಮಾರಾಟ ಅಥವಾ ಖರೀದಿ ಸಾಧ್ಯವಿಲ್ಲ.
15. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಖರೀದಿ ಮತ್ತು ಮಾರಾಟಕ್ಕೆ ಅಧಿಕ ತೆರಿಗೆಯನ್ನು ವಿಧಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ವ್ಯಾಲಿಡಿಟಿ ಚೆಕ್ ಮಾಡಿ
ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಿದ್ದರೆ ನಿಮಗೆ ಯಾವುದೇ ಹಣಕಾಸು ಕಾರ್ಯಗಳನ್ನು ನಡೆಸಲು ಸಾಧ್ಯವಾಗದು, ಹಾಗೆಯೇ ದಂಡವನ್ನು ಕೂಡಾ ವಿಧಿಸಲಾಗುತ್ತದೆ. ಆದ್ದರಿಂದಾಗಿ ನೀವು ಆನ್‌ಲೈನ್‌ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವ್ಯಾಲಿಡಿಟಿಯನ್ನು ಚೆಕ್ ಮಾಡಿಕೊಳ್ಳುವುದು ಉತ್ತಮ. ಈ ಕೆಳಗಿನ ಹಂತಗಳನ್ನು ಪಾಲಿಸಿ ಪ್ಯಾನ್ ಸಕ್ರಿಯವಾಗಿದೆಯೇ, ನಿಷ್ಕ್ರೀಯವಾಗಿದೆಯೇ ಎಂದು ತಿಳಿದುಕೊಳ್ಳಿ.
ಹಂತ 1: ಆದಾಯ ತೆರಿಗೆ ಇಲಾಖೆಯ incometaxindiaefiling.gov.in/home ಸೈಟ್‌ಗೆ ಭೇಟಿ ನೀಡಿ
ಹಂತ 2: "Verify Your PAN Details" ಲಿಂಕ್ ಅನ್ನು ಆಯ್ಕೆ ಮಾಡಿ
ಹಂತ 3: ಪ್ಯಾನ್ ನಂಬರ್ ಅನ್ನು ನಮೂದಿಸಿ
ಹಂತ 4: ಪ್ಯಾನ್ ಕಾರ್ಡ್‌ನಲ್ಲಿ ಇರುವಂತೆಯೇ ಹೆಸರನ್ನು ನಮೂದಿಸಿ
ಹಂತ 5: ಪೇಜ್‌ನಲ್ಲಿರುವಂತೆಯೇ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
ಹಂತ 6: submit ಕ್ಲಿಕ್ ಮಾಡಿ
ಹಂತ 7: ನಿಮ್ಮ ಪ್ಯಾನ್ ಕಾರ್ಡ್‌ನ ಸ್ಟೇಟಸ್, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಿದೆಯೇ, ಸಕ್ರಿಯವಾಗಿದೆಯೇ ಎಂಬ ಮಾಹಿತಿ ಈಗ ಲಭ್ಯವಾಗಲಿದೆ.


Click it and Unblock the Notifications