ಮಧ್ಯಮ ವರ್ಗದ ಆದಾಯವು ಹಣಕಾಸು ವರ್ಷ 2012-13 ಮತ್ತು ಹಣಕಾಸು ವರ್ಷ 2021-22 ರ ನಡುವೆ ಸುಮಾರು ಸುಮಾರು ಮೂರು ಪಟ್ಟು ಅಧಿಕವಾಗಿದೆ. 4.4 ಲಕ್ಷ ರೂಪಾಯಿಯಷ್ಟಿದ್ದ ಮಧ್ಯಮ ವರ್ಗದ ಆದಾಯವು 13 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಕಡಿಮೆ ಆದಾಯದ ಗುಂಪಿನಿಂದ ಉನ್ನತ-ಆದಾಯದ ಗುಂಪಿಗೆ ಬದಲಾವಣೆ ಹೊಂದಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನಾ ವರದಿ ಹೇಳಿದೆ.
ಎಸ್‌ಬಿಐ ಸಂಶೋಧನಾ ವರದಿಯ ಪ್ರಕಾರ, "ಹಣಕಾಸು ವರ್ಷ 2012 ಕ್ಕೆ ಹೋಲಿಕೆ ಮಾಡಿದರೆ ಹಣಕಾಸು ವರ್ಷ 2023 ರಲ್ಲಿ ಕಡಿಮೆ ಆದಾಯದ ಜನಸಂಖ್ಯೆಯಲ್ಲಿ ಶೇಕಡ 13.6ರಷ್ಟು ಜನಸಂಖ್ಯೆಯು ಕೊಂಚ ಬೆಳವಣಿಗೆ ಕಂಡಿದೆ," ಎಂದು ಹೇಳುತ್ತದೆ.

ಭಾರತದ ತಲಾ ಆದಾಯವು ಹಣಕಾಸು ವರ್ಷ 2023 ರಲ್ಲಿ 2 ಲಕ್ಷ ರೂಪಾಯಿಯಿಂದ ಹಣಕಾಸು ವರ್ಷ 2047 ರಲ್ಲಿ 14.9 ಲಕ್ಷ ರೂಪಾಯಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನು ಡಾಲರ್ ಲೆಕ್ಕದಲ್ಲಿ ನಾವು ನೋಡಿದಾಗ ವಿತ್ತೀಯ ವರ್ಷ 2023ರಿಂದ ವಿತ್ತೀಯ ವರ್ಷ 2047 ರ ವೇಳೆಗೆ 2500 ಡಾಲರ್‌ನಿಂದ 12400 ಡಾಲರ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಇತ್ತೀಚೆಗೆ ವರದಿಯಲ್ಲಿ ತಿಳಿಸಿದೆ.
ಹಣಕಾಸು ವರ್ಷ 2011-12 ರಲ್ಲಿ ಸುಮಾರು 16 ಮಿಲಿಯನ್ ಜನರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡಿದ್ದು, ಅದರ ಪ್ರಕಾರ ಸುಮಾರು ಶೇಕಡ 84 ರಷ್ಟು ಮಂದಿ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿರುವವರು ಆಗಿದ್ದಾರೆ ಎಂದು 'ಐಟಿಆರ್ ಫೈಲಿಂಗ್‌ನಲ್ಲಿ ಬೆಳೆಯುತ್ತಿರುವ ಪ್ರವೃತ್ತಿಗಳನ್ನು ಅರ್ಥೈಸಿಕೊಳ್ಳುವುದು: ವಲಸೆಯಲ್ಲಿ ಹೊಸ ಮಧ್ಯಮ ವರ್ಗದ ಆಗಮನ' ದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
"ಹಣಕಾಸು ವರ್ಷ 2023 ರಲ್ಲಿ, 68.5 ಮಿಲಿಯನ್ ಜನರು ಐಟಿಆರ್ ಅನ್ನು ಸಲ್ಲಿಸಿದ್ದಾರೆ, ಗರಿಷ್ಠ ಶೇಕಡ 64 ರಷ್ಟು ಜನಸಂಖ್ಯೆಯು ಇನ್ನೂ 5 ಲಕ್ಷ ರೂಪಾಯಿವರೆಗಿನ ಆದಾಯದ ಗುಂಪಿನಲ್ಲಿದೆ," ಎಂದು ಎಸ್‌ಬಿಐ ವರದಿಯಲ್ಲಿ ಸೇರಿಸಿದೆ.
ಹಣಕಾಸು ವರ್ಷ 2047 ರ ವೇಳೆಗೆ ಶೇಕಡ 25 ರಷ್ಟು ಐಟಿಆರ್ ಫೈಲರ್‌ಗಳು ಕಡಿಮೆ ಆದಾಯದ ಶ್ರೇಣಿಯನ್ನು ತೊರೆಯುವ ನಿರೀಕ್ಷೆಯಿದೆ. ಇನ್ನು ಸುಮಾರು ಶೇಕಡ 17.5 ರಷ್ಟು 5 ಲಕ್ಷ ರೂಪಾಯಿ ಆದಾಯದ ಗುಂಪು 10 ಲಕ್ಷ ರೂಪಾಯಿಯ ಗುಂಪಾಗಿ ಬದಲಾವಣೆಯಾಗುವ ನಿರೀಕ್ಷೆಯಿದೆ. 10 ಲಕ್ಷ ರೂಪಾಯಿಯ ಗುಂಪು ಶೇಕಡ 5ರಷ್ಟು ಜನರು, 20 ಲಕ್ಷ ರೂಪಾಯಿಯ ಗುಂಪಾಗಿ ಮತ್ತು ಶೇಕಡ 3ರಷ್ಟು 20 ಲಕ್ಷ ರೂಪಾಯಿ ಆದಾಯದ ಗುಂಪು 40 ಲಕ್ಷ ರೂಪಾಯಿಯ ಆದಾಯದ ಗುಂಪಾಗಿ ಬದಲಾವಣೆಯಾಗುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ.
5 ಲಕ್ಷ- 10 ಲಕ್ಷ ರೂಪಾಯಿಯ ಆದಾಯದ ಗುಂಪಿನಲ್ಲಿ ಒಟ್ಟು ಶೇ.8.1ರಷ್ಟು ಜನಸಂಖ್ಯೆ ಹೆಚ್ಚಿದೆ. 10 ಲಕ್ಷ- 20 ಲಕ್ಷ ರೂಪಾಯಿಯ ಆದಾಯದ ಗುಂಪಿನಲ್ಲಿ ಶೇ.3.8ರಷ್ಟು ಜನಸಂಖ್ಯೆ ಹೆಚ್ಚಿದೆ. 20 ಲಕ್ಷ-50 ಲಕ್ಷ ರೂಪಾಯಿಯ ಆದಾಯದ ಗುಂಪಿನಲ್ಲಿ ಶೇ.1.5ರಷ್ಟು ಜನಸಂಖ್ಯೆ ಹೆಚ್ಚಿದೆ ಎಂದು ಎಸ್‌ಬಿಐ ವರದಿ ಹೇಳಿದೆ.
"50 ಲಕ್ಷ- 1 ಕೋಟಿ ರೂಪಾಯಿಯ ಆದಾಯದ ಗುಂಪಿನಲ್ಲಿ ಶೇಕಡ 0.2 ರಷ್ಟು ಜನಸಂಖ್ಯೆಯು ಹೆಚ್ಚಾಗಿದೆ. ಆದರೆ 1 ಕೋಟಿಗಿಂತ ಹೆಚ್ಚಿನ ಆದಾಯದ ಗುಂಪಿನಲ್ಲಿ ಶೇಕಡ 0.02 ರಷ್ಟು ಜನಸಂಖ್ಯೆಯು ಹೆಚ್ಚಾಗಿದೆ," ಎಂದು ವರದಿಯಲ್ಲಿ ಸೇರಿಸಲಾಗಿದೆ. ಹಣಕಾಸು ವರ್ಷ 2047 ರ ವೇಳೆಗೆ ಸುಮಾರು ಶೇಕಡ 0.5 ರಷ್ಟು ಫೈಲರ್‌ಗಳು 50 ಲಕ್ಷ- 1 ಕೋಟಿ ರೂಪಾಯಿಯ ಆದಾಯದ ಗುಂಪಿಗೆ, ಶೇಕಡ 0.075 ರಷ್ಟು ಮಂದಿ 1 ಕೋಟಿಗಿಂತ ಹೆಚ್ಚಿನ ಆದಾಯದ ಗುಂಪಿಗೆ ಬದಲಾಗುವ ನಿರೀಕ್ಷೆಯಿದೆ.
ಭಾರತೀಯ ಜನಸಂಖ್ಯೆಯು ಹಣಕಾಸು ವರ್ಷ 2023 ರಲ್ಲಿ 1400 ಮಿಲಿಯನ್‌ನಿಂದ 1610 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ಅನುಗುಣವಾಗಿ, ಹಣಕಾಸು ವರ್ಷ 2023ರಲ್ಲಿ 530 ಮಿಲಿಯನ್‌ನಿಂದ ಹಣಕಾಸು ವರ್ಷ 2047 ರಲ್ಲಿ ದೇಶದ ಉದ್ಯೋಗಿಗಳ ಸಂಖ್ಯೆ 725 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ


Click it and Unblock the Notifications