ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದಕ್ಕೆ ಜುಲೈ 31 ಕೊನೆಯ ದಿನಾಂಕವಾಗಿದೆ. ಅಂದರೆ ನಿನ್ನೆಯೆ ಗಡುವು ಮುಗಿದಿದೆ. 2023-24 ರ ಹಣಕಾಸು ವರ್ಷಕ್ಕೆ ಜುಲೈ 31 ರಂದು ಸಂಜೆ 6:30 ರವರೆಗೆ 6.50 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲಾಗಿದೆ. ಆದರೆ ಇನ್ನೂ ಕೂಡಾ ಹಲವಾರು ಮಂದಿ ಐಟಿಆರ್ ಫೈಲ್ ಮಾಡಿಲ್ಲ.
ನಿರೀಕ್ಷೆಯಂತೆ, ಆದಾಯ ತೆರಿಗೆ ಇಲಾಖೆಯು ಐಟಿಆರ್‌ಗಳನ್ನು ಸಲ್ಲಿಸಲು ಗಡುವನ್ನು ವಿಸ್ತರಣೆ ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಗಡುವು ವಿಸ್ತರಣೆ ಮಾಡಲಾಗಿದ್ದರೂ ಕೂಡಾ ಕಳೆದ ವರ್ಷ ಹಾಗೂ ಈ ವರ್ಷ ಗಡುವು ವಿಸ್ತರಣೆ ಮಾಡಿಲ್ಲ. ಆದರೆ ಹಲವಾರು ತಾಂತ್ರಿಕ ಸಮಸ್ಯೆಗಳು ಇದೆ, ಅಧಿಕ ಕಾಲಾವಕಾಶ ನೀಡಬೇಕು ಎಂಬ ಬೇಡಿಕೆಯು ಕೂಡಾ ಇದೆ.

ನಿಗದಿತ ಸಮಯದೊಳಗೆ ರಿಟರ್ನ್ ಸಲ್ಲಿಸಲು ವಿಫಲರಾದ ತೆರಿಗೆದಾರರು ಆತಂಕವೇನು ಪಡೆಬೇಕಾಗಿಲ್ಲ. ನೀವು ತಡವಾಗಿ ಐಟಿಆರ್ ಅನ್ನು ಫೈಲ್ ಮಾಡಬಹುದಾಗಿದೆ. ಆದರೆ ಅದಕ್ಕಾಗಿ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಅವಧಿ ಮುಗಿದರೂ ಐಟಿಆರ್ ಫೈಲ್ ಮಾಡದಿದ್ರೆ ಏನು ಮಾಡುವುದು, ಇಲ್ಲಿದೆ ವಿವರ ಮುಂದೆ ಓದಿ...
ತಡವಾದ ಐಟಿಆರ್ ಸಲ್ಲಿಕೆ
ತೆರಿಗೆದಾರರು ಜುಲೈ 31ರ ಒಳಗಾಗಿ ಐಟಿಆರ್ ಅನ್ನು ಫೈಲ್ ಮಾಡದಿದ್ದರೆ, ಆತಂಕ ಪಡಬೇಕಾಗಿಲ್ಲ. ನೀವು ಈ ಕಳೆದ ಹಣಕಾಸು ವರ್ಷದ ಐಟಿಆರ್ ಅನ್ನು ಡಿಸೆಂಬರ್ 31ರ ಒಳಗಾಗಿ ಫೈಲ್ ಮಾಡಬಹುದಾಗಿದೆ. ಇದಕ್ಕೆ ತಡವಾದ ಐಟಿಆರ್ ಎಂದು ಕರೆಯಲಾಗುತ್ತದೆ. ಆದರೆ ನೀವು ದಂಡ ತೆರಬೇಕಾಗುತ್ತದೆ. ಒಟ್ಟಾಗಿ ಐದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ತೆರಿಗೆ ಪಾವತಿದಾರರ ಒಟ್ಟು ಆದಾಯವು ಐದು ಲಕ್ಷ ರೂಪಾಯಿಗಿಂತ ಕಡಿಮೆಯಾಗಿದ್ದರೆ ನೀವು ತಡವಾದ ಐಟಿಆರ್ ಫೈಲ್ ಮಾಡುವುದಕ್ಕೆ ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ. ತೆರಿಗೆ ವಿನಾಯಿತಿ ಮಿತಿಯಲ್ಲಿರುವ ಆದಾಯ ನಿಮ್ಮದಾಗಿದ್ದರೆ, ನೀವು ತಡವಾದ ಐಟಿಆರ್ ಫೈಲ್‌ಗಾಗಿ ಯಾವುದೇ ದಂಡವನ್ನು ಪಾವತಿ ಮಾಡಬೇಕಾಗಿಲ್ಲ.
ಇನ್ನು ದಂಡ ಮಾತ್ರವಲ್ಲದೆ ತಡವಾದ ಐಟಿಆರ್‌ಗೆ ನಿಮ್ಮ ಒಟ್ಟು ತೆರಿಗೆ ಮೊತ್ತದಲ್ಲಿ ಶೇಕಡ 1ರಷ್ಟು ಮಾಸಿಕವಾಗಿ ಬಡ್ಡಿ ರೂಪದಲ್ಲಿ ತೆರಬೇಕಾಗುತ್ತದೆ. ಟಿಡಿಎಸ್, ಟಿಸಿಎಸ್, ಮುಂಗಡ ತೆರಿಗೆ, ಇತರೆ ಕಡಿತಗಳು ಆದ ಬಳಿಕ ಉಳಿದ ಮೊತ್ತಕ್ಕೆ ಬಡ್ಡಿದರವು ಅನ್ವಯವಾಗುತ್ತದೆ. ಒಂದು ದಿನ ತಡವಾದರೂ ಕೂಡಾ ಪೂರ್ತಿ ತಿಂಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದ ನಷ್ಟವೇನು?
ನಾವು ಗಡುವಿಗೂ ಮುನ್ನ ಐಟಿಆರ್ ಅನ್ನು ಫೈಲ್ ಮಾಡುವುದರಿಂದ ನಮಗೆ ಹೇಗೆ ಹಲವಾರು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆಯೋ, ಹಾಗೆಯೇ ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದಾಗಿ ನಮಗೆ ಹಲವಾರು ನಷ್ಟಗಳು ಇರುತ್ತದೆ. ನೀವು ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದ ಒಂದು ಬಾರಿಗೆ ನಷ್ಟವಾಗುವುದು ಮಾತ್ರವಲ್ಲ, ನಿಮಗೆ ಭವಿಷ್ಯದಲ್ಲಿಯೂ ನಷ್ಟ ಉಂಟಾಗಲು ಇದು ಕಾರಣವಾಗಬಹುದು.
ನೀವು ಸಮಯಕ್ಕೆ ಸರಿಯಾಗಿ ಐಟಿಆರ್ ಅನ್ನು ಫೈಲ್ ಮಾಡಿದ್ದರೆ ಮಾತ್ರವೇ ನಿಮಗೆ ತೆರಿಗೆ ರಿಫಂಡ್ ಪಡೆಯಲು ಸಾಧ್ಯವಾಗುತ್ತದೆ. ನೀವು ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದಾಗಿ ನಿಮಗೆ ತೆರಿಗೆ ರಿಫಂಡ್‌ನಲ್ಲಿ ನಷ್ಟ ಉಂಟಾಗಬಹುದು. ನೀವು ಅವಧಿಗೂ ಮುನ್ನ ಐಟಿಆರ್ ಫೈಲ್ ಮಾಡಿದ್ದರೂ ಕೂಡಾ ನಿಮಗೆ ಇ-ವೆರಿಫೈ ಮಾಡಿಲ್ಲದಿದ್ದರೆ, 30 ದಿನಗಳ ಒಳಗಾಗಿ ದಂಡ ಪಾವತಿಸದೆಯೇ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನೀವು ಈ ಅವಧಿಗೂ ಮುನ್ನ ವೆರಿಫೈ ಮಾಡಿಲ್ಲದಿದ್ದರೆ, ನಿಮ್ಮ ಐಟಿಆರ್ ಫೈಲಿಂಗ್ ನಿರಾಕರಿಸಲಾಗುತ್ತದೆ.


Click it and Unblock the Notifications