ಪ್ರಸ್ತುತ ದೇಶದಾದ್ಯಂತ ನಂದಿನಿ ಹಾಲು ಹಾಗೂ ನಂದಿನ ಹಾಲು ಉತ್ಪನ್ನಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕರ್ನಾಟಕ ಹಾಲು ಫೆಡರೇಷನ್ ನಿರ್ವಹಣೆ ಮಾಡುವ ನಂದಿನ ಹಾಲು ಮತ್ತು ಹಾಲು ಉತ್ಪನ್ನಗಳ ಬಗ್ಗೆ ಚರ್ಚೆಯು ಅಮುಲ್‌ನ ಹೇಳಿಕೆಯೊಂದರ ಬಳಿಕ ಹುಟ್ಟಿಕೊಂಡಿದೆ. ಗುಜರಾತ್ ಕಾರ್ಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ನಿರ್ವಹಣೆ ಮಾಡಲು ಅಮುಲ್ ಉತ್ಪನ್ನಗಳು ಕರ್ನಾಟಕದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂಬ ಸುದ್ದಿಯ ಬಳಿಕ ಈ ವಿವಾದವು ಸೃಷ್ಟಿಯಾಗಿದೆ.
ಕರ್ನಾಟಕದಲ್ಲಿ ಹಾಲಿನ ವಿಚಾರಕ್ಕೆ ಬಂದಾಗ ನಂದಿನಿ ಅತೀ ಜನಪ್ರಿಯ ಬ್ರ್ಯಾಂಡ್ ಆಗಿದೆ. ಗ್ರಾಹಕರು ಹಾಲು ಕೊಡಿ ಎನ್ನುವ ಬದಲು ನಂದಿನಿ ಕೊಡಿ ಎನ್ನುವುದು ಇದೆ, ಹಾಗೆಯೇ ಗ್ರಾಹಕರು ಹಾಲು ಕೊಡಿ ಎಂದು ಕೇಳಿದಾಗ ಅಂಗಡಿಯವರು ನಂದಿನಿ ಹಾಲನ್ನೇ ನೀಡುವುದು ನಮ್ಮ ಸುತ್ತಲ್ಲು ನಡೆಯುವ ಘಟನೆ. ಹೀಗಿರುವಾಗ ಕರ್ನಾಟಕಕ್ಕೆ ಗುಜರಾತ್ ಸಂಸ್ಥೆ ಎಂಟ್ರಿ ನೀಡಿದ್ರೆ ರಾಜ್ಯದಲ್ಲಿ ನಂದಿನಿಗೆ ನಷ್ಟವಾಗಲಿದೆ ಎಂಬ ಅಭಿಪ್ರಾಯವಿದೆ. ಈ ನಡುವೆ ಬಿಜೆಪಿ ಸರ್ಕಾರ ಗುಜರಾತ್‌ನ ಉದ್ಯಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂಬ ಆರೋಪವಿದೆ. ಈ ವಿವಾದ ಏನು, ನಂದಿನಿ ಹಾಲಿನ ಇತಿಹಾಸ, ವಹಿವಾಟು ಹೇಗಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

ನಂದಿನಿ ಹಾಲಿನ ಸಂಸ್ಥೆಯ ಮಾಹಿತಿ
ಕರ್ನಾಟಕ ಡೈರಿ ಅಭಿವೃದ್ಧಿ ನಿಗಮವನ್ನು 1975ರಲ್ಲಿ ವಿಶ್ವಬ್ಯಾಂಕ್ ನೆರವಿನ ಡೈರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಏಜೆನ್ಸಿಯಾಗಿ ರಚನೆ ಮಾಡಲಾಯಿತು. ಕರ್ನಾಟಕ ಹಾಲು ಒಕ್ಕೂಟವು 1984 ರಲ್ಲಿ ಸಂಪೂರ್ಣ ರಾಜ್ಯವನ್ನು 13 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳೊಂದಿಗೆ ಡೈರಿ ಚಟುವಟಿಕೆಯನ್ನು ನಿರ್ವಹಣೆ ಮಾಡಲು ಇದು ಆರಂಭ ಮಾಡಿತು. ಈ ಸಂಸ್ಥೆಯ ಬ್ರ್ಯಾಂಡ್ ಹೆಸರು ನಂದಿನಿಯಾಗಿದ್ದು ಇದು 1983ರಲ್ಲಿ ಆರಂಭವಾಗಿದೆ. 21 ಮಾರ್ಚ್ 1983 ರಂದು ರಾಜಾನುಕುಂಟೆಯಲ್ಲಿ ಮೊದಲ ಜಾನುವಾರು ಆಹಾರ ಘಟಕವನ್ನು ಪ್ರಾರಂಭಿಸಲಾಯಿತು. ಅದರ ಸಾಮರ್ಥ್ಯವನ್ನು 1997 ರಲ್ಲಿ 100 ಮೆಟ್ರಿಕ್ ಟನ್‌ನಿಂದ 200 ಮೆಟ್ರಿಕ್ ಟನ್‌ಗೆ ವಿಸ್ತರಣೆ ಮಾಡಲಾಗಿದೆ.
ನಂದಿನಿ ಸಂಸ್ಥೆ ಬೆಳವಣಿಗೆ
ಕೆಎಂಎಫ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾಗಿದೆ. ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸಂಗ್ರಹ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ಎಲ್ಲ ಜಿಲ್ಲೆಗಲ್ಲಿ ಕೆಎಂಎಫ್‌ನ 16 ಹಾಲು ಘಟಕಗಳು ಇದೆ. ಪ್ರಾಥಮಿಕ ಡೈರಿ ಸಹಕಾರ ಸಂಘಗಳಿಂದ (ಡಿಸಿಎಸ್) ಹಾಲನ್ನು ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಕರ್ನಾಟಕದ ವಿವಿಧ ಪಟ್ಟಣಗಳು/ ನಗರಗಳು/ ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲನ್ನು ವಿತರಿಸಲಾಗುತ್ತದೆ. 2022-23ರಲ್ಲಿ ರಾಜ್ಯದಲ್ಲಿ 15,311 ಡೈರಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.
1976-77ರಲ್ಲಿ ಕರ್ನಾಟಕ ಹಾಲು ಮಹಾಮಂಡಳವು ರೈತರಿಗೆ ಪ್ರತಿನಿತ್ಯ 0.09 ಕೋಟಿ ರೂಪಾಯಿಗಳನ್ನು ನೀಡುತ್ತಿತ್ತು. 2022-23ರಲ್ಲಿ ರೈತರಿಗೆ ನಿತ್ಯ 23.93 ಕೋಟಿ ರೂಪಾಯಿಯನ್ನು ನೀಡಲಾಗುತ್ತಿದೆ. 1976-77ರಲ್ಲಿ ಕೆಎಂಎಫ್ ಒಕ್ಕೂಟಗಳ ಒಟ್ಟು ವಹಿವಾಟು 8.82 ಕೋಟಿ ರೂಪಾಯಿ ಆಗಿತ್ತು. ಆದರೆ 2022-23ರಲ್ಲಿ ಈ ವಹಿವಾಟು 14,018 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಏನಿದು ವಿವಾದ?
ಈ ವರ್ಷದಲ್ಲಿ ಕರ್ನಾಟಕದಲ್ಲಿ ಚುನವಾಣೆ ನಡೆಯಲಿದೆ. ಈ ನಡುವೆ ನಂದಿನಿ-ಅಮುಲ್ ವಿವಾದ ಸೃಷ್ಟಿಯಾಗಿದೆ. ಅಮುಲ್ ಕರ್ನಾಟಕದ ಮಾರುಕಟ್ಟೆಗೂ ಕೂಡಾ ಎಂಟ್ರಿ ನೀಡಲಿದೆ ಎಂಬ ಸುದ್ದಿ ಈ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಈ ವಿಚಾರದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದು, "ನಂದಿನಿ ಕಳ್ಳತನ" ಎಂದು ಆರೋಪ ಮಾಡುತ್ತಿದೆ. ಇನ್ನು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ನಾನು ಕರ್ನಾಟಕದ ನಂದಿನಿ ಹಾಲನ್ನು ಮಾತ್ರ ಬಳಕೆ ಮಾಡುತ್ತೇವೆ ಎಂದಿದ್ದಾರೆ.


Click it and Unblock the Notifications