ಕೆಜಿಎಫ್ ಸ್ಟಾರ್, ನಟ ಯಶ್ ಜನ್ಮದಿನ ಸಮಯದಲ್ಲಿ ಎತ್ತರದಲ್ಲಿ ಬ್ಯಾನರ್ ಕಟ್ಟಲು ಹೋದಾಗ ವಿದ್ಯುತ್ ತಂತಿ ತಾಗಿ ಮೃತಪಟ್ಟ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಯುವಕರ ಕುಟುಂಬಕ್ಕೆ ನಟನ ಕಡೆಯಿಂದ ಪರಿಹಾರದ ಚೆಕ್ ಅನ್ನು ನೀಡಲಾಗಿದೆ.
ಯಶೋಮಾರ್ಗ ಫೌಂಡೇಶನ್ ಕಡೆಯಿಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ನಟ ಯಶ್ ಸ್ನೇಹಿತರು ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟ ಯುವಕರ ಕುಟುಂಬಸ್ಥರಿಗೆ ತಲುಪಿಸಿದ್ದಾರೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಂತ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಇನ್ನು ನಟ ಯಶ್ ಸ್ನೇಹಿತರು ಮೃತ ಅಭಿಮಾನಿಗಳ ಕುಟುಂಬಕ್ಕೆ ಚೆಕ್ ವಿತರಿಸಿ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ್ದಾರೆ. "ಅಭಿಮಾನಿಗಳು ಮೃತಪಡಬಾರದಿತ್ತು. ಆದರೆ ಈಗ ಎಲ್ಲ ಆಗಿ ಹೋಗಿದೆ. ಯಶ್ ಅವರು ಹೇಳಿದ್ದಂತೆ ನಾವು ಮೃತ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ," ಎಂದು ತಿಳಿಸಿದರು.
"ಗಾಯಾಳುಗಳು ಯಾರೆಲ್ಲ ಎಂಬ ಬಗ್ಗೆ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ಇನ್ನು ಎರಡು ಮೂರು ದಿನಗಳಲ್ಲಿ ಅವರಿಗೂ ಕೂಡಾ ಪರಿಹಾರವನ್ನು ನೀಡಲಾಗುತ್ತದೆ. ಈಗ ಮೃತ ಯುವಕರ ಮನೆಗೆ ಹೋಗಿ ಹಣ ತಲುಪಿಸಿದ್ದೇವೆ. ಗಾಯಾಳುಗಳು ಈಗ ಮಾತನಾಡುವ ಸ್ಥಿತಿಯಲ್ಲಿಲ್ಲ. ನೋವಿನಿಂದ ಹೊರ ಬಂದಿಲ್ಲ," ಎಂದು ಹೇಳಿದರು.
ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಮಕ್ಕಳನ್ನು ಕಳೆದುಕೊಂಡ ಮೂರೂ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಪರಿಹಾರವನ್ನು ಕೂಡಾ ನೀಡಿದ್ದಾರೆ.
ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಜನವರಿ 7 ರಂದು ತಯಾರಿ ಮಾಡುತ್ತಿದ್ದರು. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿದ್ದು ಈ ಅನಾಹುತ ನಡೆದಿದೆ. ಮುರಳಿ, ನವೀನ್ ಮತ್ತು ಹನುಮಂತ ಮೃತಪಟ್ಟ ಯುವಕರು.


Click it and Unblock the Notifications