ನೀವಿನ್ನೂ ನಿಮ್ಮ ಆಧಾರ್ ನಂಬರ್‌ಗೆ ಪ್ಯಾನ್ ನಂಬರ್ ಲಿಂಕ್ ಮಾಡಿಲ್ಲವಾ? ಹಾಗಾದರೆ ತ್ವರೆ ಮಾಡಿ ಆ ಕೆಲಸ ಮೊದಲು ಮಾಡಿ ಮುಗಿಸಿ. ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ನಂಬರ್ (PAN - Permanent Account Number) ಲಿಂಕ್ ಮಾಡಲು ಅಂತಿಮ ಡೆಡ್‌ಲೈನ್‌ಗೆ ಕೇವಲ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ.
ಆಧಾರ್ ನಂಬರ್‌ಗೆ ಪ್ಯಾನ್ ನಂಬರ್ ಲಿಂಕ್ ಮಾಡಬೇಕೆಂದು ಸರ್ಕಾರ ಹಲವು ಬಾರಿ ಸೂಚಿಸುತ್ತಲೇ ಬಂದಿದೆ. ಡೆಡ್‌ಲೈನ್ ವಿಸ್ತರಿಸುತ್ತಲೇ ಬಂದಿದೆ. ಈ ಬಾರಿ ಹೊಸ ಹಣಕಾಸು ವರ್ಷ ಆರಂಭವಾಗುವ ಹೊತ್ತಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಜೋಡಿಸಬೇಕೆಂದು ಆದಾಯ ತೆರಿಗೆ ಇಲಾಖೆ ಕಟ್ಟಪ್ಪಣೆ ಹೊರಡಿಸಿದೆ.
ಆಧಾರ್, ಪ್ಯಾನ್ ಲಿಂಕ್‌ಗೆ 2023 ಮಾರ್ಚ್ 31 ಕೊನೆಯ ದಿನ ಎಂದು ಫಿಕ್ಸ್ ಆಗಿದೆ. ಈ ಬಾರಿ ಡೆಡ್‌ಲೈನ್ ಎಂದರೆ ನಿಜವಾಗಿಯೂ ಡೆಡ್‌ಲೈನ್ ಆಗಿರಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.
ಈಗ ಜೋಡಿಸಿದರೆ ಕೇವಲ 1,000 ರೂ ದಂಡ
ವಾಸ್ತವದಲ್ಲಿ ಜೂನ್ 30ರಂದೇ ಆಧಾರ್ ಮತ್ತು ಪ್ಯಾನ್ ಜೋಡಣೆಗೆ ಕೊನೆಯ ದಿನವಾಗಿತ್ತು. ಯಾವುದೇ ಪೆನಾಲ್ಟಿ ಇಲ್ಲದೇ ಆಗ ಲಿಂಕ್ ಮಾಡಬಹುದಿತ್ತು. ಆ ದಿನದ ಬಳಿಕ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡುತ್ತಿರುವವರು ಒಂದು ಸಾವಿರ ರೂಪಾಯಿ ದಂಡ ಪಾವತಿಸಿ ನಂಬರ್ ಜೋಡಣೆ ಮಾಡಬಹುದು. ಅದೂ ಮಾರ್ಚ್ 31ರವರೆಗೆ ಮಾತ್ರ ಅವಕಾಶ. ಅಂದರೆ ಈಗ ನೀವು ಲಿಂಕ್ ಮಾಡಿದರೂ ಲೇಟ್ ಫೀ ಎಂದು 1,000 ರೂ ದಂಡ ಪಾವತಿಸಲೇಬೇಕಾಗುತ್ತದೆ.
ಈ ಅಂತಿಮ ವಾಯಿದೆಯನ್ನು ಯಾರೂ ತಪ್ಪಿಸಿಕೊಳ್ಳದಿರಲೆಂದು ಆದಾಯ ತೆರಿಗೆ ಇಲಾಖೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಲರ್ಟ್ ಮೆಸೇಜ್‌ಗಳಂತೆ ಪೋಸ್ಟ್ ಮಾಡುತ್ತಿರುತ್ತದೆ.
ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಜೂನ್ 30ರ ಡೆಡ್‌ಲೈನ್ ತಪ್ಪಿಸಿಕೊಂಡೆವು, ಏನೂ ಆಗಿಲ್ಲ. ಮಾರ್ಚ್ 31ರ ಡೆಡ್‌ಲೈನ್ ಮೀರಿ ಹೋದರೂ ಏನು ಆಗಲ್ಲ ಎಂದು ಯಾರಾದರೂ ಭಾವಿಸಿದ್ದರೆ ಅದು ಸ್ವಯಂಕೃತಾಪರಾಧ ಆಗುತ್ತದೆ ಹುಷಾರ್. 2023ರ ಮಾರ್ಚ್ 31ರ ವೇಳೆಗೆ ನೀವು ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡುವುದನ್ನು ತಪ್ಪಿಸಿಕೊಂಡಿದ್ದೇ ಆದಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ನಿಷ್ಕ್ರಿಯಗೊಳ್ಳುತ್ತದೆ. ಐಟಿ ಇಲಾಖೆ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡುತ್ತಲೇ ಇದೆ.
ಒಂದು ವೇಳೆ ಪ್ಯಾನ್ ನಂಬರ್ ನಿಷ್ಕ್ರಿಯವಾದರೆ ಏನಾಗುತ್ತದೆ ಎಂದು ಕೇಳಬಹುದು. ಪ್ಯಾನ್ ನಂಬರ್ ಈಗ ಹಣಕಾಸು ವಹಿವಾಟಿಗೆ ಮೂಲಭೂತ ಅಗತ್ಯವಾಗಿ ಬಳಕೆಯಾಗುತ್ತಿದೆ. ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯಲು ಆಗುವುದಿಲ್ಲ. ಈ ಮೊದಲು ನೀವು ಬ್ಯಾಂಕ್‌ಗೆ ಪ್ಯಾನ್ ನಂಬರ್ ಕೊಟ್ಟಿದ್ದೀರೆಂದು ಇಟ್ಟುಕೊಂಡರೂ ಅದು ನಿಷ್ಕ್ರಿಯವಾಗಿರುವುದು ಬ್ಯಾಂಕ್ ಗಮನಕ್ಕೆ ಬಂದು ನಿಮ್ಮ ಖಾತೆಯನ್ನು ಫ್ರೀಜ್ ಮಾಡಬಹುದು.
ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಆಗುವುದಿಲ್ಲ. ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ ಸಾಧ್ಯವಾಗುವುದಿಲ್ಲ. ನಿಮ್ಮ ನಿಷ್ಕ್ರಿಯ ಪ್ಯಾನ್ ಕಾರ್ಡ್ ಅನ್ನು ಎಲ್ಲಿಯಾದರೂ ದಾಖಲೆಯಾಗಿ ಕೊಡುತ್ತೇನೆಂದು ಹೋದರೆ ಯಡವಟ್ಟಾದೀತು. ಅದು ಸುಳ್ಳು ದಾಖಲೆ ಕೊಟ್ಟಂತಾಗುತ್ತದೆ. 1961 ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಪ್ರಕಾರ ಈ ಕೆಲಸಕ್ಕೆ ನಿಮಗೆ 10 ಸಾವಿರ ರೂವರೆಗೆ ದಂಡ ಬೀಳುತ್ತದೆ.
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ?
* ಮೊದಲು ಇನ್ಕಂ ಟ್ಯಾಕ್ಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ (https://www.incometax.gov.in/iec/foportal/) ಹೋಗಿ ಅಲ್ಲಿ ಮುಖ್ಯಪುಟದಲ್ಲಿ ಎಡಬದಿಯಲ್ಲಿರುವ ವಿವಿಧ ಮೆನುಗಳ ಪಟ್ಟಿಯಲ್ಲಿ 'ಲಿಂಕ್ ಆಧಾರ್' ಕ್ಲಿಕ್ ಮಾಡಿ.
* ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಆಧಾರ್ ನಂಬರ್, ಪ್ಯಾನ್ ನಂಬರ್ ಮತ್ತು ಮೊಬೈಲ್ ನಂಬರ್ ಇತ್ಯಾದಿ ವಿವರ ತುಂಬಿಸಿ.
* "ಐ ವ್ಯಾಲಿಡೇಟ್ ಮೈ ಆಧಾರ್ ಡೀಟೇಲ್ಸ್' ಎಂದು ಬರೆದಿರುವ ಆಯ್ಕೆಯನ್ನು ಒತ್ತಿರಿ.
* ಈಗ ನಿಮ್ಮ ನೊಂದಾಯಿತ ನಂಬರ್‌ಗೆ ಒಟಿಪಿ ಬರುತ್ತದೆ. ಆ ಒಟಿಪಿ ನಂಬರ್ ನಮೂದಿಸಿ 'ವ್ಯಾಲಿಡೇಟ್' ಕ್ಲಿಕ್ ಮಾಡಿ.
* ನೀವು ತಡವಾಗಿ ಲಿಂಕ್ ಮಾಡುತ್ತಿರುವುದರಿಂದ ಶುಲ್ಕ ಪಾವತಿಯ ವಿಂಡೋ ಬರುತ್ತದೆ. ಆನ್‌ಲೈನ್‌ನಲ್ಲೇ ದಂಡ ಪಾವತಿಸಿದ ಬಳಿಕ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳು ಜೋಡಣೆ ಆಗುತ್ತವೆ.


Click it and Unblock the Notifications