ಭಾರತದಲ್ಲಿ ಜೀವ ವಿಮೆ ಪಾಲಿಸಿಗಳನ್ನು ಹೂಡಿಕೆ ಅಂತಲೇ ಪ್ರಚಾರ ಮಾಡಲಾಗುತ್ತದೆ. ಆದರೆ ಜೀವ ವಿಮೆಯ ಮುಖ್ಯ ಗುರಿ ಏನೆಂದರೆ, ಒಂದು ಕುಟುಂಬಕ್ಕೆ ಆಧಾರ ಸ್ತಂಭ ಆಗಿರುವ ವ್ಯಕ್ತಿ ನಿಧನರಾದಾಗ ಆ ಕುಟುಂಬಕ್ಕೆ ಆರ್ಥಿಕ ಬೆಂಬಲ ಎಂಬಂತೆ ನೆರವಾಗುವುದು. ನಿಮಗೆ ನೆನಪಿರಲಿ, ಇನ್ಷೂರೆನ್ಸ್ ಪಾಲಿಸಿಗಳ ಮೂಲಕ ತುರ್ತು ಹಣಕಾಸು ಅಗತ್ಯ ಕೂಡ ನಿರ್ವಹಿಸಬಹುದು.
ಅಲ್ಪಾವಧಿಯಲ್ಲಿ ನಗದು ಕೊರತೆ ಇದ್ದಲ್ಲಿ ಜೀವ ವಿಮೆ ಪಾಲಿಸಿ ಮೇಲೆ ಸಾಲ ಪಡೆಯಬಹುದು. ಈ ಸಾಲ ಪಡೆಯುವುದಕ್ಕೆ ಅರ್ಹತೆ ಏನು, ಎಷ್ಟು ಮೊತ್ತ ಸಿಗಲಿದೆ ಹಾಗೂ ಅನುಕೂಲ ಮತ್ತು ಅನನುಕೂಲಗಳೇನು ಎಂಬುದರ ಮಾಹಿತಿ ಈ ಲೇಖನದಲ್ಲಿ ಇದೆ. ನಿಮ್ಮ ಪ್ರಶ್ನೆಗಳಿಗೆ ಇವು ಉತ್ತರ ಆಗಲಿವೆ.
ಜೀವವಿಮೆ ಪಾಲಿಸಿ ಮೇಲೆ ಸಾಲ ಪಡೆಯಲು ಅರ್ಹತೆ ಏನು?
ಜೀವ ವಿಮಾ ನಿಗಮ ಅಥವಾ ಇನ್ಯಾವುದೇ ಪ್ರತಿಷ್ಠಿತ ಇನ್ಷೂರೆನ್ಸ್ ಕಂಪೆನಿಗಳ ಜೀವ ವಿಮೆ ಪಾಲಿಸಿಯನ್ನು ಸಾಲಕ್ಕೆ ಕೊಲ್ಯಾಟರೆಲ್ ಆಗಿ ಸ್ವೀಕರಿಸಲಾಗುತ್ತದೆ. ಯುನಿಟ್ ಲಿಂಕ್ಡ್ ಪ್ಲ್ಯಾನ್ಸ್ (ಯುಲಿಪ್), ಎಂಡೋಮೆಂಟ್ ಪ್ಲ್ಯಾನ್ಸ್, ಜೀವಿತಾವಧಿ ಪ್ಲ್ಯಾನ್ಸ್ ಮತ್ತು ಆದಾಯದ ಯೋಜನೆಗಳು ಮಾತ್ರ ಈ ರೀತಿ ಸಾಲ ಪಡೆಯಲು ಅರ್ಹ ಇರುವ ಪಾಲಿಸಿಗಳು. ಟರ್ಮ್ ಇನ್ಷೂರೆನ್ಸ್ ಪಾಲಿಸಿಗೆ ಸಾಲ ಸಿಗುವುದಿಲ್ಲ. ಕನಿಷ್ಠ ಕಳೆದ ಮೂರು ವರ್ಷಗಳ ಅವಧಿಗೆ ಇನ್ಷೂರೆನ್ಸ್ ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಮಾಡಿರಬೇಕು.
ಎಷ್ಟು ಮೊತ್ತ ಸಾಲವಾಗಿ ದೊರೆಯುತ್ತದೆ?
ಯಾವುದೇ ಪಾಲಿಸಿಯ ಸರೆಂಡರ್ ಮೌಲ್ಯದ ಶೇಕಡಾ ಎಂಬತ್ತರಷ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದು. ಅಂದ ಹಾಗೆ ಸರೆಂಡರ್ ಮೌಲ್ಯ ಅಂದರೆ ಏನು ಗೊತ್ತಾ? ಯಾವುದೇ ಪಾಲಿಸಿದಾರರು ಆ ಪಾಲಿಸಿಯ ಮೆಚ್ಯೂರಿಟಿಗೆ ಮುಂಚೆಯೇ ಹಣ ತೆಗೆದುಕೊಳ್ಳಬೇಕು ಎಂದು ಬಯಸಿದರೆ ದೊರೆಯುವ ಮೊತ್ತ.
ಜೀವ ವಿಮೆ ಮೇಲೆ ಪಡೆಯುವ ಸಾಲದ ಅನುಕೂಲಗಳೇನು?
* ಲೈಫ್ ಇನ್ಷೂರೆನ್ಸ್ ಪಾಲಿಸಿಯ ಸರೆಂಡರ್ ಮೌಲ್ಯದ ಶೇಕಡಾ ತೊಂಬತ್ತು ಪರ್ಸೆಂಟ್ ತನಕ ಸಾಲವಾಗಿ ಕೇಳಬಹುದು. ಸಾಮಾನ್ಯವಾಗಿ ಏನಾದರೂ ಅಡಮಾನ ಮಾಡಿಕೊಂಡು ಸಾಲ ನೀಡುವ ಮೊತ್ತಕ್ಕಿಂತ ಇದು ಖಂಡಿತಾ ಹೆಚ್ಚಿರುತ್ತದೆ.
* ಪರ್ಸನಲ್ ಲೋನ್ ಮೇಲಿನ ಬಡ್ಡಿ ದರಕ್ಕಿಂತಲೂ ಜೀವ ವಿಮೆ ಪಾಲಿಸಿಗಳ ಮೇಲೆ ಪಡೆಯುವ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಇರುತ್ತದೆ.
* ನೀವು ಯಾವ ಕಂಪೆನಿ ಬಳಿ ಜೀವ ವಿಮೆ ಮಾಡಿಸಿದ್ದೀರೋ ಅಥವಾ ಯಾವ ಬ್ಯಾಂಕ್ ಬಳಿ ಸಾಲ ಪಡೆಯಬೇಕು ಅಂತಿದ್ದೀರೋ ಅಲ್ಲಿಯೇ ಅಗತ್ಯ ದಾಖಲಾತಿಗಳು ಏನು ಬೇಕು ಎಂಬ ಮಾಹಿತಿ ದೊರೆಯುತ್ತದೆ. ಅರ್ಜಿ ವಿಲೇವಾರಿ ಕೂಡ ಪರ್ಸನಲ್ ಲೋನ್ ನಷ್ಟು ದೀರ್ಘ ಪ್ರಕ್ರಿಯೆಯದ್ದಾಗಿರುವುದಿಲ್ಲ.
* ತೀರಾ ತುರ್ತು ಸನ್ನಿವೇಶದಲ್ಲಿ ಜೀವ ವಿಮೆ ಪಾಲಿಸಿ ಮೇಲೆ ಸಾಲ ಪಡೆಯಲಾಗುತ್ತದೆ ಎಂದೇ ಪರಿಗಣಿಸಲಾಗುತ್ತದೆ. ಜತೆಗೆ ಇನ್ಷೂರೆನ್ಸ್ ಪಾಲಿಸಿಯನ್ನೇ ಅಡಮಾನವಾಗಿ ಇಡಲಾಗಿರುತ್ತದೆ. ಕೆಲವು ಕಡೆ ಆನ್ ಲೈನ್ ನಲ್ಲೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಅನನುಕೂಲಗಳು ಏನು?
* ಕನಿಷ್ಠ ಮೊದಲ ಮೂರು ವರ್ಷಗಳ ಕಾಲ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡಿರಲೇಬೇಕು. ಏಕೆಂದರೆ ಅಷ್ಟು ಅವಧಿಗೆ ಪಾವತಿ ಮಾಡಿದರೆ ಮಾತ್ರ ಸರೆಂಡರ್ ಮೌಲ್ಯ ದೊರೆಯುತ್ತದೆ.
* ಸಾಲದ ಮರುಪಾವತಿ ಜತೆ ಜತೆಗೆ ಭವಿಷ್ಯದ ಇನ್ಷೂರೆನ್ಸ್ ಪ್ರೀಮಿಯಂ ಅನ್ನು ಕೂಡ ಪಾವತಿಸಬೇಕು. ಇಲ್ಲದಿದ್ದಲ್ಲಿ ಇನ್ಷೂರೆನ್ಸ್ ಲ್ಯಾಪ್ಸ್ ಆಗುತ್ತದೆ.
ಸಾಲ ಮರುಪಾವತಿ ಹೇಗೆ?
* ಪಾಲಿಸಿಯ ಅವಧಿಯಲ್ಲಿ ಅರ್ಜಿದಾರರು ಸಾಲ ಮರುಪಾವತಿ ಹಾಗೂ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡಬೇಕು. ಬಡ್ಡಿ ಹಾಗೂ ಅಸಲು ಪಾವತಿಗೆ ಒಂದು ಆಯ್ಕೆ ಇದೆ ಅಥವಾ ಕೇವಲ ಬಡ್ಡಿ ಮಾತ್ರ ಕಟ್ಟುವಂತೆ ಆಯ್ಕೆ ಮಾಡಿಕೊಳ್ಳಬಹುದು.
* ಬಡ್ಡಿ ಮಾತ್ರ ಕಟ್ಟಿಕೊಂಡು ಹೋಗುವ ಆಯ್ಕೆ ಮಾಡಿಕೊಂಡರೆ, ತೀರುವಳಿ ಸಂದರ್ಭದಲ್ಲಿ ಬಾಕಿ ಮೊತ್ತವನ್ನು ಇನ್ಷೂರೆನ್ಸ್ ಕಂಪೆನಿಯು ಕ್ಲೇಮ್ ಮೊತ್ತದಿಂದ ಕಳೆದು, ಬಾಕಿಯನ್ನು ನೀಡುತ್ತದೆ.
* ಒಂದು ವೇಳೆ ಸಾಲ ಮಾಡಿದ ವ್ಯಕ್ತಿಯೇ ತೀರಿಕೊಂಡರೆ ಆಗ ಕ್ಲೇಮ್ ಮೊತ್ತದಲ್ಲಿ ಸಾಲದ ಬಾಕಿಯನ್ನು ಕಳೆದು, ಬಾಕಿ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.
* ಒಂದು ವೇಳೆ ಮರುಪಾವತಿ ಸರಿಯಾದ ಸಮಯಕ್ಕೆ ಮಾಡಲು ವಿಫಲರಾದಲ್ಲಿ ಸಾಲದ ಮೇಲಿನ ಬಡ್ಡಿ ಹೆಚ್ಚುತ್ತಲೇ ಹೋಗುತ್ತದೆ. ಪಾಲಿಸಿಯ ನಗದು ಮೊತ್ತವನ್ನು ಮೀರುತ್ತದೆ. ಇದರಿಂದ ಪಾಲಿಸಿ ಲ್ಯಾಪ್ಸ್ ಆಗಿ, ನಗದು ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
* ಇನ್ನು ಸಾಲ ಮರುಪಾವತಿಸಲು ವಿಫಲರಾದಲ್ಲಿ ಸರೆಂಡರ್ ಮೊತ್ತದಿಂದ ಹಣ ತೆಗೆದುಕೊಳ್ಳಲಾಗುತ್ತದೆ ಮತ್ತು ಜೀವ ವಿಮೆ ಪಾಲಿಸಿ ರದ್ದಾಗುತ್ತದೆ.


Click it and Unblock the Notifications