ಕ್ರೆಡ್ (CRED) ಸಂಸ್ಥೆಯ ಸಿಇಒ ಆಗಿರುವ ಕುನಾಲ್ ಶಾ ತಮ್ಮ ವೇತನವನ್ನು ಬಹಿರಂಗಪಡಿಸಿದ್ದು ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಅವರಿಗಿರುವುದು ಕೇವಲ 15,000 ರೂ. ವೇತನ. ಕುನಾಲ್ ಶಾ ಖುದ್ದು ಇನ್ ಸ್ಟಾಗ್ರಾಮ್ ನಲ್ಲಿ ಸಂವಾದ ವೇಳೆ "ಆಸ್ಕ್ ಮಿ ಎನಿಥಿಂಗ್"ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕುನಾಲ್ ಶಾ ಅವರ ಇನ್ ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ ಶಾಟ್ ನ್ನು ಅಜೀತ್ ಪಟೇಲ್ ಎಂಬ ಟ್ವಿಟರ್ ಬಳಕೆದಾರೊಬ್ಬರು ಹಂಚಿಕೊಂಡಿದ್ದಾರೆ.
ಇದರಲ್ಲಿ CREDನಲ್ಲಿ "ನಿಮ್ಮ ವೇತನ ಅತ್ಯಲ್ಪವಾಗಿದ್ದು ನೀವು ಹೇಗೆ ಬದುಕುತ್ತೀರಿ?," ಎಂದು ಯಾರೋ ಪ್ರಶ್ನಿಸಿದ್ದರು. ಇದಕ್ಕೆ ಸಿಇಒ ಆಗಿರುವ ಕುನಾಲ್ ಶಾ ಸಿಇಒ ಉತ್ತರಿಸಿದ್ದು, "ಸಂಸ್ಥೆಯೂ ಲಾಭದಾಯಕ ಸ್ಥಿತಿ ತಲುಪುವವರೆಗೆ ನನಗೆ ಉತ್ತಮ ಸಂಬಳ ದೊರಕಬೇಕು ಎಂದು ಅನ್ನಿಸುವುದಿಲ್ಲ. ಕ್ರೆಡ್ ನಲ್ಲಿ ತನ್ನ ವೇತನ 15 ಸಾವಿರ ರೂ. ಇದ್ದು, ಹಿಂದಿನ ನನ್ನ ಕಂಪನಿ ಪ್ರೀಚಾರ್ಚ್ ಅನ್ನು ಮಾರಾಟ ಮಾಡಿರುವುದರಿಂದ ನಾನು ಬದುಕಬಲ್ಲೆ" ಎಂದು ಉತ್ತರಿಸಿದ್ದಾರೆ.

ಟ್ವಿಟರ್ ಬಳಕೆದಾರರಾಗಿರುವ ಅಜೀತ್ ಪಟೇಲ್ ಈ ಪೋಸ್ಟ್ ಗೆ "ಕೋಟಿಗಟ್ಟಲೆ ಸಂಬಳ ಪಡೆಯುವ ಸಿಇಒಗಳಿದ್ದಾರೆ. ಇವರ ಮಧ್ಯೆ ಕುನಾಲ್ ಶಾ ಭಿನ್ನ" ಎಂಬರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ತಮ ವೇತನ ಬಹಿರಂಗಪಡಿಸಿದ ಕುನಾಲ್ ಶಾ ಬಗ್ಗೆ ನೆಟ್ಟಿಗರು ಭಿನ್ನ- ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
"ನಮ್ರತೆ ಮತ್ತು ಹೊಂದಿಕೊಳ್ಳುವ ಗುಣ ಅವರು ಬರೆದ ಒಂದೇ ವಾಕ್ಯದಲ್ಲಿ ಕಾಣಿಸುತ್ತದೆ. ಅವರ ಮಾತುಗಳು ಯಾವಾಗಲೂ ನನಗೆ ಕುತೂಹಲವುಂಟು ಮಾಡುತ್ತದೆ" ಎಂದು ಬಳಕೆದಾರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ಬ್ರೋ ,ಇದನ್ನು ತೆರಿಗೆ ಉಳಿತಾಯ ಎಂದು ಕರೆಯಲಾಗುತ್ತದೆ. ಇವರೆಲ್ಲಾ ತಮ್ಮ ಜೀವನಶೈಲಿಗಾಗಿ ಲಕ್ಷಾಂತರ ಖರ್ಚು ಮಾಡುತ್ತಾರೆ" ಎಂದು ಟೀಕಿಸಿದ್ದಾರೆ.
ಕುನಾಲ್ ಶಾ ಅವರು 2018ರಲ್ಲಿ ಕ್ರೆಡ್ ಅನ್ನು ಆರಂಭಿಸಿದರು. ಇದಲ್ಲದೆ ಶಾ ಅವರು ಸರಣಿ ಹೂಡಿಕೆದಾರರಾಗಿದ್ದು, 200ಕ್ಕೂ ಹೆಚ್ಚು ಸ್ಟಾರ್ಟ್ ಆಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. 2021ರಲ್ಲಿ ಅವರ ನಿವ್ವಳ ಮೌಲ್ಯ 15,000 ರೂ. ಕೋಟಿಗಳಷ್ಟಿತ್ತು. ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ಕುನಾಶ್ ಶಾ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದು ಆ ಬಳಿಕ ನರ್ಸಿ ಮೊಂಜಿ ಇನ್‌ಸ್ಟ್ರಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಎಂಬಿಎ ಮಾಡಲು ತೆರಳಿದರೂ ಒಂದು ವರ್ಷ ಮಾತ್ರ ಅಧ್ಯಯನ ಮಾಡಿ ಬಳಿಕ ಅದನ್ನು ಕೈಬಿಟ್ಟಿದ್ದರು.


Click it and Unblock the Notifications