ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಕಳೆದ ಆಗಸ್ಟ್ 23ರಂದು ಚಂದ್ರಯಾನ-3 ಮಿಷನ್‌ನ್ನು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಸುವ ಮೂಲಕ ಇಡೀ ಜಗತ್ತಿನ ಮುಂದೆ ಇತಿಹಾಸವನ್ನು ಸೃಷ್ಟಿಸಿದೆ. ಈ ಚಂದ್ರಯಾನ-3 ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಆಗಿತ್ತು.
ಜತೆಗೆ, ಈ ಮಿಷನ್‌ಗೆ ಭಾರತ ಸುಮಾರು 615 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಚಂದ್ರನ ದಕ್ಷಿಣ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಅಲ್ಲಿ ವೈಜ್ಞಾನವಾದ ಅಧ್ಯಯನವನ್ನು ಮಾಡುವುದು ಈ ಚಂದ್ರಯಾನ 3 ಮಿಷನ್‌ನ ಪ್ರಮುಖ ಗುರಿಯಾಗಿತ್ತು. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-3 ಅನ್ನು 2023ರ ಜುಲೈ 14ರಂದು ಉಡಾವಣೆ ಮಾಡಲಾಗಿತ್ತು.

ಇಸ್ರೋದ ವಿಜ್ಞಾನಿಗಳು ಅಂದುಕೊಂಡಂತೆ ಚಂದ್ರಯಾನ-3 ಉಪಗ್ರಹವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು, ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಿರುವಾಗ, ಈ ಚಂದ್ರಯಾನ-3 ಮಿಷನ್ ಭಾರತದ ಉದ್ಯಮಿಯೊಬ್ಬರನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ ಎನ್ನುವ ಬಹಳ ಆಸಕ್ತದಾಯಕ ವಿಚಾರವೊಂದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಚಂದ್ರಯಾನ-3 ಮಿಷನ್ ಹಿಂದೆ ಕೆಲಸ ಮಾಡಿದವರ ಪೈಕಿ ಹಲವಾರು ವಿಜ್ಞಾನಿಗಳು ಹಾಗೂ ಕಂಪನಿಗಳ ಪ್ರಮುಖರು ಸೇರಿದ್ದಾರೆ. ಅವುಗಳ ಪೈಕಿ ಕೇನ್ಸ್ ಟೆಕ್ನಾಲಜಿ ಎಂಬ ಕಂಪನಿ ಕೂಡ ಸೇರಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೇನ್ಸ್ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕಾ ಸಂಸ್ಥೆಯಾಗಿದ್ದು, ಇದು ಚಂದ್ರಯಾನ-3 ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್‌ಗೆ ಶಕ್ತಿಯನ್ನು ನೀಡುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ಪೂರೈಸುವುದಕ್ಕೆ ನೆರವಾಗಿದೆ.
ಫೋರ್ಬ್ಸ್ ಮಾಡಿರುವ ವರದಿ ಪ್ರಕಾರ, ಚಂದ್ರಯಾನ-3 ಮಿಷನ್‌ನ ಬೃಹತ್ ಯಶಸ್ವಿಯಿಂದಾಗಿ ಕೇನ್ಸ್‌ಟೆಕ್ನಾಲಜಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ಕುಂಞಿಕಣ್ಣನ್ ಅವರು ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಏಕೆಂದರೆ, ಚಂದ್ರಯಾನ-3 ಮಿಷನ್‌ನ ಯಶಸ್ವಿಯಲ್ಲಿ ಕೇನ್ಸ್ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಯಾಗಿದೆ.
ಅದರಲ್ಲಿಯೂ ಕೇನ್ಸ್ ಟೆಕ್ನಾಲಜಿ ಐಪಿಒಗೆ ಪ್ರವೇಶಿಸಿದ ಬಳಿಕ ಈ ಕಂಪನಿಯ ಷೇರುಗಳು ಸುಮಾರು ಶೇಕಡ 40ರಷ್ಟು ಜಿಗಿತ ಕಂಡಿವೆ ಎಂದು ಫೋರ್ಬ್ಸ್ ಹೇಳಿದೆ. ರಮೇಶ್ ಕುಂಞಿಕಣ್ಣನ್ ಅವರು ಕೇನ್ಸ್ ಟೆಕ್ನಾಲಜಿಯಲ್ಲಿ ಶೇಕಡ 64ರಷ್ಟು ಪಾಲನ್ನು ಹೊಂದಿದ್ದು, ಅವರ ನಿವ್ವಳ ಮೌಲ್ಯವು 1.1 ಶತಕೋಟಿ ಅಮೆರಿಕನ್ ಡಾಲರ್ (ಅಂದರೆ ಸುಮಾರು 9200 ಕೋಟಿ ರೂಪಾಯಿ) ಆಗಿದೆ.
ರಮೇಶ್ ಅವರು ಒಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದು, ಅವರು 1988ರಲ್ಲಿ ಕೇನ್ಸ್ ಟೆಕ್ನಾಲಜಿಯನ್ನು ಪ್ರಾರಂಭಿಸಿದ್ದಾರೆ. ರಮೇಶ್ ಅವರು ಕರ್ನಾಟಕದ ಮೈಸೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್(ಎನ್‌ಐಇ)ಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪಡೆದುಕೊಂಡಿದ್ದಾರೆ.
ರಮೇಶ್ ಅವರ ಪತ್ನಿ ಸವಿತಾ ರಮೇಶ್ ಅವರು ಕೇನ್ಸ್ ಟೆಕಗ್ನಾಲಜಿಯ ಅಧ್ಯಕ್ಷರಾಗಿದ್ದಾರೆ. ಅವರು ಕೂಡ ತಮಿಳುನಾಡಿನ ಚೆನ್ನೈನಲ್ಲಿರುವ ಮದ್ರಾಸ್ ವಿವಿಯಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.


Click it and Unblock the Notifications