ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಹಾಗೂ ಎಚ್‌ಡಿಎಫ್‌ಸಿ ಶನಿವಾರದಿಂದ (ಜುಲೈ 1) ವಿಲೀನವಾಗಲಿದೆ. ಎರಡು ಹಣಕಾಸು ಸಂಸ್ಥೆಗಳು ವಿಲೀನವಾದ ಬಳಿಕ ಇದು ಸುಮಾರು 41 ಲಕ್ಷ ಕೋಟಿ ರೂಪಾಯಿಯ ಸಂಸ್ಥೆಯಾಗಲಿದೆ. ದೇಶದ ಅತೀ ದೊಡ್ಡ ಸರ್ಕಾರಿ ಬ್ಯಾಂಕ್ ಆದ ಎಸ್‌ಬಿಐನ ಮೌಲ್ಯಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯವು ಸಮೀಪವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಒಟ್ಟು ವ್ಯವಹಾರ (ಡೆಪಾಸಿಟ್ ಮತ್ತು ಅಡ್ವಾನ್ಸ್) ಮಾರ್ಚ್ 31, 2023 ರ ಅಂತ್ಯದ ವೇಳೆಗೆ 70.30 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಹಣಕಾಸು ವರ್ಷ 2023ರಲ್ಲಿ ಎಸ್‌ಬಿಐನ ಲಾಭವು ಸುಮಾರು 50,232 ಕೋಟಿ ರೂಪಾಯಿ ಆಗಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಭವು 60,000 ಕೋಟಿ ರೂಪಾಯಿ ಆಗಿದೆ. ಅಂದರೆ ಎಸ್‌ಬಿಐನ ಲಾಭಕ್ಕಿಂತ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಭವು ಅಧಿಕವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಳಿಕ ವಿಶ್ವದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ. ಆಸ್ತಿಯ ಗಾತ್ರದ ಲೆಕ್ಕಾಚಾರದಲ್ಲಿ ನೋಡಿದಾಗ ಮಾತ್ರ ಸರ್ಕಾರಿ ಸ್ವಾಮ್ಯದ ಎಸ್‌ಬಿಐನ ಬಳಿಕ ಎರಡನೇ ಅತಿದೊಡ್ಡ ಭಾರತೀಯ ಬ್ಯಾಂಕ್ ಆಗಿದೆ. ಈ ಹೊಸ ಘಟಕವು ಈಗ ಸುಮಾರು 120 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಇದು ಜರ್ಮನಿಯ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ನಡುವೆ ವಿಲೀನದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಮುನ್ನಡೆಸುವ ವ್ಯಕ್ತಿಯ ಬಗ್ಗೆ ತಿಳಿಯೋಣ ಮುಂದೆ ಓದಿ...
ಎಚ್‌ಡಿಎಫ್‌ಸಿ ಬ್ಯಾಂಕ್ ಮುನ್ನಡೆಸಲಿರುವ ಶಶಿಧರ್ ಜಗದೀಶ್ ಯಾರು?
ಶಶಿಧರ್ ಜಗದೀಶ್ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಹಾಗೂ ಸಿಇಒ ಆಗಿದ್ದಾರೆ. 2020ರಲ್ಲಿ ಜಗದೀಶ್ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ ಹಾಗೂ ಎಂಡಿಯಾಗಿ ನೇಮಕಗೊಂಡಿದ್ದಾರೆ. 2020ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಶಿಧರ್ ಜಗದೀಶ್ ನೇಮಕಾತಿಯನ್ನು ಅನುಮೋದನೆ ಮಾಡಿದ್ದು, ಅದಾದ ಬಳಿಕ ಜಗದೀಶ್ ಎಚ್‌ಡಿಎಫ್‌ಸಿಯ ಪ್ರಮುಖ ಸ್ಥಾನವನ್ನು ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಬ್ಯಾಂಕಿಂಗ್, ಆರ್ಥಿಕತೆ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನ ಹಾಗೂ ವೃತ್ತಿ ಅನುಭವವನ್ನು ಹೊಂದಿರುವ ವ್ಯಕ್ತಿ ಶಶಿಧರ್ ಜಗದೀಶ್ ಆಗಿದ್ದಾರೆ.
1996ರಿಂದಲೇ ಶಶಿಧರ್ ಜಗದೀಶ್ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಶಶಿಧರ್ ಜಗದೀಶ್ 1996ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಣಕಾಸು ವಿಭಾಗದ ನಿರ್ವಾಹಕರಾಗಿದ್ದರು. ಅಂದಿನಿಂದ ಇಂದಿನವರೆಗೆ ಬ್ಯಾಂಕ್‌ನ ಬೆಳವಣಿಗೆಗೆ ಅತೀ ಪ್ರಮುಖವಾದ ಕೊಡುಗೆಯನ್ನು ಶಶಿಧರ್ ಜಗದೀಶ್ ನೀಡುತ್ತಾ ಬಂದಿದ್ದಾರೆ. 1999ರಲ್ಲಿ ಶಶಿಧರ್ ಜಗದೀಶ್ ಫೈನಾನ್ಸ್‌ನ ಬ್ಯುಜಿನೆಸ್ ಹೆಡ್ ಆದರು. ಅದಾದ ಬಳಿಕ 2008ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಶಶಿಧರ್ ಜಗದೀಶ್ ವೇತನ ಎಷ್ಟಿದೆ?
2019ರಲ್ಲಿ ಶಶಿಧರ್ ಜಗದೀಶ್ "ಚೇಂಜ್ ಏಜೆಂಟ್ ಆಫ್ ದಿ ಬ್ಯಾಂಕ್" ಆಗಿ ನೇಮಕಗೊಂಡಿದ್ದಾರೆ. ಅದಾದ ಬಳಿಕ ಶಶಿಧರ್ ಜಗದೀಶ್ ಕಾನೂನು, ಕಾರ್ಯದರ್ಶಿ, ಮಾನವ ಸಂಪನ್ಮೂಲಗಳು, ಕಾರ್ಪೊರೇಟ್ ಸಂವಹನ, ಮೂಲಸೌಕರ್ಯ ಮತ್ತು ಆಡಳಿತ, ಮತ್ತು ಸಿಎಸ್‌ಆರ್ ಕಾರ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡು ಬಂದಿದ್ದಾರೆ.
ಶಶಿಧರ್ ಜಗದೀಶ್ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ (ಫಿಸಿಕ್ಸ್) ವಿಚಾರದಲ್ಲಿ ಪದವಿಯನ್ನು ಪಡೆದಿದ್ದಾರೆ. ಹಾಗೆಯೇ ಶಶಿಧರ್ ಜಗದೀಶ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಇನ್ನು ಯುಕೆಯ ಶೆಫೀಲ್ಡ್ ವಿಶ್ವವಿದ್ಯಾನಿಲಯದಿಂದ ಇಕಾನಮಿಕ್ಸ್ ಆಫ್ ಮನಿ, ಬ್ಯಾಂಕಿಂಗ್, ಫೈನಾನ್ಸ್ ವಿಷಯದಲ್ಲಿ (ಹಣ, ಬ್ಯಾಂಕಿಂಗ್, ಹಣಕಾಸು ಅರ್ಥಶಾಸ್ತ್ರ) ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ. ಇಕಾನಮಿಕ್ ಟೈಮ್ಸ್ 2022ರ ವರದಿಯ ಪ್ರಕಾರ ಶಶಿಧರ್ ಜಗದೀಶ್ ವಾರ್ಷಿಕವಾಗಿ 6.51 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ.


Click it and Unblock the Notifications