46 ವರ್ಷ ವಯಸ್ಸಿನ ವಸಂತ್ ನರಸಿಂಹನ್ ಅವರು ಜಾಗತಿಕ ಮಟ್ಟದ ಬಿಸಿನೆಸ್ ಲೀಡರ್ ಆಗಿದ್ದು, ಸಿಇಒ ಆಗಿ ಕಾರ್ಯನಿರ್ವಹಣೆ ಆರಂಭ ಮಾಡುವುದಕ್ಕೂ ಮೊದಲೇ ಅಂದರೆ 20 ವರ್ಷಗಳ ಹಿಂದೆ ಆ ಗರಿಮೆಯನ್ನು ಸಾಧಿಸಿದ್ದರು. ವಾಸ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಉದ್ಯಮಿಯು ಜಗತ್ತಿನ ಅತಿದೊಡ್ಡ ಫಾರ್ಮಸೂಟಿಕಲ್ ಕಾರ್ಪೊರೇಷನ್‌ನ ಮುಖ್ಯಸ್ಥರಾಗಿದ್ದು, ಜಾಗತಿಕವಾಗಿ ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಮೂಲದ ಸಿಇಒಗಳ ಸಾಲಿನಲ್ಲಿದ್ದಾರೆ.
ವಸಂತ್ ನರಸಿಂಹನ್ ಅವರು 2018ರಲ್ಲಿ ಸ್ವಿಸ್ ಎಂಎನ್‌ಸಿ ನೊವಾರ್ಟಿಸ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅಂದಿನಿಂದ 185 ಬಿಲಿಯನ್ ಡಾಲರ್ (15,29,000 ಕೋಟಿ ರೂಪಾಯಿ) ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ನರಸಿಂಹನ್ ಅವರು ಆರೋಗ್ಯ ಕ್ಷೇತ್ರದಲ್ಲಿ ಮ್ಯಾನೇಜರ್ ಆಗಿ ವೃತ್ತಿಯನ್ನು ಆರಂಭಿಸಿರಲಿಲ್ಲ, ಬದಲಿಗೆ ಅವರೊಬ್ಬ ನುರಿತ ವೈದ್ಯರಾಗಿ ಆ ವಲಯಕ್ಕೆ ಪ್ರವೇಶ ಪಡೆದಿದ್ದರು. ಹೀಗಾಗಿ, ವೈದ್ಯರು ಸಿಇಒ ಆಗಿ ಬದಲಾಗಿ ಜಗತ್ತಿನ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತ ಯುವ ಸಾಧಕರಾಗಿ ಬಹಳ ವೇಗವಾಗಿ ಬೆಳೆದರು.

ಇವರ ವೃತ್ತಿ ಬದುಕಿನ ಬೆಳವಣಿಗೆಯನ್ನು ಗೂಗಲ್‌ನ ಸಿಇಒ ಸುಂದರ್ ಪಿಚ್ಚೈ ಹಾಗೂ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಅವರಿಗೆ ಹೋಲಿಸಲಾಗಿದೆ. ವಸಂತ್ ನರಸಿಂಹನ್ ಅವರು ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದು, ಅವರ ಹೆತ್ತವರು ತಮಿಳುನಾಡು ಮೂಲದವರು. ಅವರ ಈ ಭಾರತೀಯ ಸಂಬಂಧದ ಹೊರತಾಗಿ ತಮ್ಮ ಕಾಲೇಜು ದಿನಗಳಲ್ಲಿ ಚೈಲ್ಡ್ ಪೂವರ್ಟಿ ಬಗ್ಗೆ ಭಾರತದಲ್ಲಿ ಕೆಲಸ ಮಾಡಿದ್ದರು.
ವಸಂತ್ ನರಸಿಂಹನ್ ಬಗ್ಗೆ ಅಧಿಕ ಮಾಹಿತಿ
ತಂದೆ ಬಿಸಿನೆಸ್ ಎಕ್ಸಿಕ್ಯೂಟಿವ್ ಆಗಿದ್ದು, ತಾಯಿ ನೂಕ್ಲಿಯರ್ ಎಂಜಿನಿಯರ್ ಆಗಿದ್ದರೂ ಮಗ ನರಸಿಂಹನ್ ಮಾತ್ರ ಆರೋಗ್ಯ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿದರು. ಅವರು ಚಿಕಾಗೊ ವಿಶ್ವವಿದ್ಯಾಲಯದಿಂದ ಜೈವಿಕ ವಿಜ್ಞಾನದಲ್ಲಿ ಪದವಿಯನ್ನು ಪಡೆದು, ಬಳಿಕ ಪ್ರತಿಷ್ಠಿತ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಿಂದ ಎಂಡಿ ಪದವಿ ಪಡೆದುಕೊಂಡರು. ಮುಂದೆ ಜಾನ್ ಎಫ್ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್‌ನಿಂದ ಪಬ್ಲಿಕ್ ಪಾಲಿಸಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಹಾರ್ವರ್ಡ್‌ನಲ್ಲಿ ಉನ್ನತ ಪದವಿಯನ್ನು ಕಲಿತ ಬಳಿಕ ಅವರು ಮೆಕೆನ್ಸೆ & ಕೋ, ಇಂಕ್‌ನೊಂದಿಗೆ ತಮ್ಮ ವೃತ್ತಿ ಜೀವನವನ್ನು ಪಾರಂಭಿಸಿದರು. ಬಳಿಕ 2005ರಲ್ಲಿ ನೋವಾರ್ಟಿಸ್‌ಗೆ ಸೇರಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಈ ದೈತ್ಯ ಫಾರ್ಮಾ ಕಂಪೆನಿಯಲ್ಲಿ ವಿವಿಧ ನಾಯಕತ್ವ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದರು.
ಈ ನಡುವೆ ಅವರು ಸ್ಯಾಂಡೋಜ್ ಇಂಟರ್‌ನ್ಯಾಷನಲ್‌ನಲ್ಲಿ ಸಹ ಭಾಗಿಯಾಗಿದ್ದರು. 2017ರಲ್ಲಿ ಹೊರಹೋದ ಸಿಇಒ ಜೋಸೆಫ್ ಜಿಮೆನೆಜ್ ಅವರಿಗೆ ಬದಲಿ ವ್ಯಕ್ತಿಯಾಗಿ ನರಸಿಂಹನ್ ಅವರನ್ನು ಘೋಷಿಸಲಾಗಿತ್ತು. ನೊವಾರ್ಟಿಸ್ 2022ರ ವಾರ್ಷಿಕ ವರದಿ ಪ್ರಕಾರ, ವಾಸ್ ನರಸಿಂಹನ್ ಅವರ ಆ ವರ್ಷದ ಪರಿಹಾರ ಮೊತ್ತ CHF 8,452,176 (75.5ಕೋಟಿ ರೂಪಾಯಿ) ಆಗಿದೆ.
ವೈಯಕ್ತಿಕ ಬದುಕಿನಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮವು ನರಸಿಂಹನ್ ಅವರಿಗೆ ಶಕ್ತಿ ಹಾಗೂ ಧೈರ್ಯವನ್ನು ತುಂಬಿದೆ. ಅವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಆರೋಗ್ಯದ ದೃಷ್ಟಿಯಿಂದ ಇದನ್ನು ಮಾಡುತ್ತಿದ್ದರು. ಯೋಗವನ್ನು ತಮ್ಮ ಅಜ್ಜ-ಅಜ್ಜಿಯಿಂದ ಕಲಿತುಕೊಂಡಿದ್ದರು.
ಬದುಕಿನಲ್ಲಿ ಉತ್ತಮ ಅವಕಾಶಗಳು ಹಾಗೂ ಯಶಸ್ಸನ್ನು ಗಳಿಸಿರುವುದಕ್ಕೆ ತಮ್ಮ ಕುಟುಂಬಸ್ಥರು ಹಾಗೂ ಪೂರ್ವಜರು ಕಾರಣ. ವಸಂತ್‌ನರಸಿಂಹನ್ ಅವರು 2003ರಲ್ಲಿ ಸೃಷ್ಟಿ ಗುಪ್ತಾ ಅವರನ್ನು ವಿವಾಹವಾಗಿದ್ದರು. ಹಾರ್ವರ್ಡ್‌ನಲ್ಲಿ ಏಷ್ಯನ್ ಸಾಂಸ್ಕೃತಿಕ ಉತ್ಸವ ಆಯೋಜಿಸಿದ್ದ ವೇಳೆ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.


Click it and Unblock the Notifications