ಭಾರತದ ಅತೀ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಚೇರ್‌ಮನ್ ಮುಕೇಶ್ ಅಂಬಾನಿ ಪ್ರತಿ ದಿನ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಾ ಇದ್ದಾರೆ. ಈ ನಡುವೆ ಮುಕೇಶ್ ಅಂಬಾನಿ ತನ್ನ ಉದ್ಯೋಗಿಗೆ 1500 ಕೋಟಿ ರೂಪಾಯಿಯ ಮನೆಯನ್ನು ಗಿಫ್ಟ್ ಆಗಿ ನೀಡಿರುವುದು ನಿಮಗೆ ತಿಳಿದಿದೆಯೇ?. ಹೌದು ಮುಕೇಶ್ ಅಂಬಾನಿ ಈ ಹಿಂದೆಯೂ ಹಲವಾರು ಬಾರಿ ತನ್ನ ಉದ್ಯೋಗಿಗಳಿಗೆ ದುಬಾರಿ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಮುಕೇಶ್ ಅಂಬಾನಿ ತನ್ನ ಉದ್ಯೋಗಿಗಳಲ್ಲಿ ಒಬ್ಬರಿಗೆ ಮುಂಬೈನಲ್ಲಿ ಬರೋಬ್ಬರಿ 1500 ಕೋಟಿ ರೂಪಾಯಿಯ ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಉದ್ಯೋಗಿಯ ಹೆಸರು ಮನೋಜ್ ಮೋದಿ. ಸಾಮಾನ್ಯವಾಗಿ ಮನೋಜ್ ಮೋದಿಯನ್ನು ಮುಕೇಶ್ ಅಂಬಾನಿಯ ಬಲಗೈ ಬಂಟ ಎಂದೇ ಪರಿಗಣಿಸಲಾಗುತ್ತದೆ. ಮನೋಜ್ ಮೋದಿ ಮುಕೇಶ್ ಅಂಬಾನಿಗೆ ಅತೀ ಆಪ್ತರೂ ಕೂಡಾ ಹೌದು.

ತನ್ನ ಉದ್ಯೋಗಿ ಮನೋಜ್ ಮೋದಿಗೆ ಮುಕೇಶ್ ಅಂಬಾನಿ ಗಿಫ್ಟ್ ಆಗಿ ನೀಡಿರುವ 1500 ಕೋಟಿ ರೂಪಾಯಿಯ 22 ಅಂತಸ್ತಿನ ಕಟ್ಟಡ ಸುಮಾರು 1.7 ಲಕ್ಷ ಸ್ಕ್ವೇರ್ ಫೀಟ್ (ಚದರ ಅಡಿ ವಿಸ್ತೀರ್ಣ) ಅನ್ನು ಹೊಂದಿದೆ. Magicbricks.com ಪ್ರಕಾರ ವಿಸ್ತಾರವಾದ ಆಸ್ತಿಯು ಮುಂಬೈನ ನೇಪಿಯನ್ ಸಮುದ್ರ ರಸ್ತೆಯಲ್ಲಿದೆ. ಹಾಗಾದರೆ ಮನೋಜ್ ಮೋದಿ ಬಗ್ಗೆ ಅಧಿಕ ಮಾಹಿತಿ ತಿಳಿಯೋಣ ಮುಂದೆ ಓದಿ...
ಮನೋಜ್ ಮೋದಿ ಯಾರು ತಿಳಿಯಿರಿ
ಮನೋಜ್ ಮೋದಿ ಮುಕೇಶ್ ಅಂಬಾನಿಯ ಬ್ಯಾಚ್‌ಮೇಟ್ ಆಗಿದ್ದಾರೆ. ಇಬ್ಬರೂ ಕೂಡಾ ಮುಂಬೈನ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ಮಾಡಿದ್ದಾರೆ. ಮನೋಜ್ ಮೋದಿ 1980ರಲ್ಲಿ ರಿಲಯನ್ಸ್ ಸಂಸ್ಥೆಯನ್ನು ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿಯ ತಂದೆ ಧೀರೂಭಾಯಿ ಸಂಸ್ಥೆಯ ನಿರ್ವಹಣೆ ಮಾಡುತ್ತಿದ್ದರು.
ವರದಿಯ ಪ್ರಕಾರ ಹಲವಾರು ದಶಕಗಳಿಂದ ಮನೋಜ್ ಮೋದಿಯು ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿಯ ಸ್ನೇಹಿತರಾಗಿದ್ದಾರೆ. ಪ್ರಸ್ತುತ ಮುಕೇಶ್ ಅಂಬಾನಿಯ ಮಕ್ಕಳಾದ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿಯ ಜೊತೆಯಲ್ಲಿ ಮನೋಜ್ ಮೋದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ರಿಲಯನ್ಸ್‌ನ ಹಲವಾರು ಮಲ್ಟಿ ಬಿಲಿಯನ್ ಡೀಲ್‌ಗಳ ಮಾಸ್ಟರ್ ಮೈಂಡ್ ಮನೋಜ್ ಮೋದಿಯಾಗಿದ್ದಾರೆ.
ರಿಲಯನ್ಸ್ ಕಂಪೆನಿ ಅಧ್ಯಕ್ಷ ಮುಕೇಶ್ ಅಂಬಾನಿ ಬಲಗೈ ಬಂಟ ಎಂದೇ ಕರೆಯಲ್ಪಡುವ ಮನೋಜ್ ಮೋದಿ ಎಂದಿಗೂ ಕೂಡಾ ಪ್ರಚಾರದಿಂದ ದೂರ ಉಳಿಯುತ್ತಾರೆ. ರಿಲಯನ್ಸ್ ಜಿಯೋ ಮತ್ತು ಫೇಸ್‌ಬುಕ್ ಇಂಚ್ ನಡುವಿನ ಅತಿದೊಡ್ಡದಾದ 5.7 ಬಿಲಿಯನ್ ಅಮೆರಿಕನ್ ಡಾಲರ್ ಬಿಸಿನೆಸ್ ಡೀಲ್‌ನಲ್ಲಿ ಮನೋಜ್ ಮೋದಿ ಪಾತ್ರ ಪ್ರಮುಖವಾಗಿದೆ.
ಮನೋಜ್ ಮೋದಿ ಅವರು ಪ್ರಚಾರ ಅಥವಾ ಮಾಧ್ಯಮದಿಂದ ಎಷ್ಟರ ಮಟ್ಟಿಗೆ ದೂರ ಉಳಿದಿದ್ದಾರೆ ಅಂದರೆ ಮನೋಜ್ ಮೋದಿ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಮನೋಜ್ ಮೋದಿ ಮಾಧ್ಯಮಕ್ಕೆ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಲಭ್ಯ ಮಾಹಿತಿಗಳ ಪ್ರಕಾರ, ಮನೋಜ್ ಮೋದಿ ಅವರಿಗೆ 60 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ.
ಮಾಹಿತಿ ಪ್ರಕಾರ ಸ್ಟಾರ್ಟ್‌ಅಪ್ ಸಂಸ್ಥೆಗಳೊಂದಿಗೆ ಮನೋಜ್ ಮೋದಿ ಮಾತುಕತೆ ನಡೆಸಿ ಪರೋಕ್ಷವಾಗಿ ಡೀಲ್‌ಗಳನ್ನು ನಡೆಸುತ್ತಾರೆ. ಮನೋಜ್ ಮೋದಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಬಹಳ ಅನುಭವಿ ವ್ಯಕ್ತಿಯಾಗಿದ್ದಾರೆ. ಏಕೆಂದರೆ, 1980ರ ದಶಕದಲ್ಲಿ ಮುಕೇಶ್ ಅಂಬಾನಿ ತಂದೆ ಧೀರೂಭಾಯಿ ಅಂಬಾನಿ ತೈಲ ಮತ್ತು ಪೆಟ್ರೋಕೆಮಿಕಲ್ಸ್ ಅನ್ನು ಪ್ರಾರಂಭಿಸುವಾಗ ಸೇರಿದ್ದರು.


Click it and Unblock the Notifications