ಈ ವರ್ಷ ಭಾರತದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಕಳೆದುಕೊಂಡ ಗೌತಮ್ ಅದಾನಿ ಇದೀಗ ಅದನ್ನು ಮರಳಿ ಪಡೆಯುವ ಸ್ಪರ್ಧೆಗೆ ಇಳಿದಂತಿದೆ. ಕಳೆದ ಎರಡು ವಾರಗಳಲ್ಲಿ ಅದಾನಿ ಸಂಸ್ಥೆಯ ಷೇರುಗಳು ಏರಿಕೆಯಾದ ಕಾರಣದಿಂದಾಗಿ ಅದಾನಿ 18.8 ಬಿಲಿಯನ್ ಡಾಲರ್ ಅನ್ನು ಗಳಿಸಿದ್ದಾರೆ.
ಈಗ 92.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿಯನ್ನು ಕೇವಲ 7 ಬಿಲಿಯನ್ ಡಾಲರ್ ದೂರದಲ್ಲಿದ್ದಾರೆ. ಜನವರಿಯಲ್ಲಿ ಹಿಂಡನ್‌ಬರ್ಗ್ ಅದಾನಿ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಮ್ಯಾನಿಪುಲೇಷನ್ ಮಾಡಿದೆ ಎಂಬ ಆರೋಪವನ್ನು ಮಾಡಿ ವರದಿ ಪ್ರಕಟಿಸಿದಾಗಿನಿಂದ ನಿರಂತರವಾಗಿ ಅದಾನಿ ಷೇರುಗಳು ಕುಸಿಯುತ್ತಾ ಬಂದಿದೆ.

ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ವಿಚಾರಣೆಯಲ್ಲಿ ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ಬ್ಯಾಚ್‌ನ ಆದೇಶವನ್ನು ಕಾಯ್ದಿರಿಸಿತ್ತು. ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಸುಪ್ರೀಂ ಕೋರ್ಟ್‌ಗೆ ಅದಾನಿ ಗ್ರೂಪ್ ವಿರುದ್ಧ ವರದಿ ಸಲ್ಲಿಸಿದೆ.
"ನಾವು ವಿದೇಶಿ ವರದಿಗಳನ್ನು ಏಕೆ ಸತ್ಯವೆಂದು ತೆಗೆದುಕೊಳ್ಳಬೇಕು? ನಾವು ವರದಿಯನ್ನು ತಿರಸ್ಕರಿಸುತ್ತಿಲ್ಲ, ಆದರೆ ನಮಗೆ ಪುರಾವೆ ಬೇಕು. ಹಾಗಾದರೆ ಅದಾನಿ ಗ್ರೂಪ್ ವಿರುದ್ಧ ನಿಮ್ಮ ಬಳಿ ಏನು ಪುರಾವೆ ಇದೆ?," ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ತಿಳಿಸಿದರು. ಇದಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ಏರಿಕೆಯಾಗುತ್ತಾ ಸಾಗುತ್ತಿದೆ.
ಅದಾನಿ ಸಮೂಹದ ಷೇರುಗಳ ಹೆಚ್ಚಳವು ಗೌತಮ್ ಅದಾನಿ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ (ಬಿಬಿಐ) ಶ್ರೇಯಾಂಕದಲ್ಲಿ ಏರಲು ಸಹಾಯವಾಗಿದೆ. ಗೌತಮ್ ಅದಾನಿ ಈಗ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು 82.5 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿರುವ ವಿಶ್ವದ ಹದಿನೈದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಏಷ್ಯಾದ ಎರಡನೇ ಶ್ರೀಮಂತ ಸ್ಥಾನಕ್ಕೆ ಏರಿದ್ದರೂ, ಗೌತಮ್ ಅದಾನಿ ಇನ್ನೂ ಮುಕೇಶ್ ಅಂಬಾನಿಗಿಂತ ಹಿಂದುಳಿದಿದ್ದಾರೆ. ಮುಕೇಶ್ ಅಂಬಾನಿ ನಿವ್ವಳ ಮೌಲ್ಯವು ಪ್ರಸ್ತುತ ಸುಮಾರು 95.5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಅದಾನಿ ಷೇರು ಏರಿಕೆ, ಎಷ್ಟು ನೋಡಿ
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 3.21ರಷ್ಟು ಏರಿಕೆಯಾಗಿ 2,987 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 0.26ರಷ್ಟು ಕುಗ್ಗಿ, 369.10 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.31ರಷ್ಟು ಏರಿ, 1,078 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 0.34ರಷ್ಟು ಏರಿಕೆಯಾಗಿದ್ದು, 522 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 0.75ರಷ್ಟು ಇಳಿದು, 2,217.65 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 2.68ರಷ್ಟು ಇಳಿಕೆಯಾಗಿ, 1,046 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.0.64ರಷ್ಟು ಕುಸಿದು 1,044.85 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.0.58ರಷ್ಟು ಇಳಿಕೆಯಾಗಿದ್ದು, 1,038ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 4.81ರಷ್ಟು ಕುಸಿದು 218.85 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 3.23ರಷ್ಟು ಇಳಿಕೆಯಾಗಿ 431.80 ರೂಪಾಯಿಗೆ ತಲುಪಿದೆ.


Click it and Unblock the Notifications