ವಿವಿಧ ಇನ್ಷೂರೆನ್ಸ್ ಪ್ಯಾಕೇಜ್ ಅಡಿಯಲ್ಲಿ ಬಾರದ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಮತ್ತು ಹೆಚ್ಚಿನ ಮೊತ್ತದ ಚಿಕಿತ್ಸೆ ಅಗತ್ಯ ಇರುವವರಿಗೆ ರಾಷ್ಟ್ರೀಯ ಆರೋಗ್ಯ ನಿಧಿ (RAN) ಯೋಜನೆ ಅಡಿಯಲ್ಲಿ 15 ಲಕ್ಷ ರುಪಾಯಿ ತನಕ ಹಣಕಾಸಿನ ನೆರವು ದೊರೆಯಲಿದೆ ಎಂದು ಕಚೇರಿಯ ಸುತ್ತೋಲೆಯೊಂದು ತಿಳಿಸಿದೆ.
ಜೀವಕ್ಕೆ ಆತಂಕ ಇರುವ ಕಾಯಿಲೆಗಳಿಂದ ಬಳಲುವಾಗ, ಆಯುಷ್ಮಾನ್ ಭಾರತ್- ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ ಫಲಾನುಭವಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಬಡ ರೋಗಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಆರೋಗ್ಯ ನಿಧಿಯ ಒಟ್ಟು ಯೋಜನೆ ಅಡಿ ಪರಿಷ್ಕೃತ ಮಾರ್ಗದರ್ಶಿ ಸೂತ್ರವನ್ನು ವಿತರಿಸಲಾಗಿದೆ.
ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ, ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳಿಗೆ, ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ, ವೆಚ್ಚ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಯೋಜನೆಯನ್ನು ಜಾರಿಗೆ ತರುವಂತೆ ಸೂಚನೆ ನೀಡಿ, ಈ ಸುತ್ತೋಲೆಯನ್ನು ಕಳುಹಿಸಲಾಗಿದೆ.
15 ಲಕ್ಷ ರುಪಾಯಿ ತನಕ ಹಣಕಾಸಿನ ನೆರವು
ಒಂದು ವೇಳೆ ವೈದ್ಯಕೀಯ ಸಲಹೆ ಅನ್ವಯ, ಸೂಚಿಸಲಾದ ಚಿಕಿತ್ಸೆಯು ಆಯುಷ್ಮಾನ್ ಭಾರತ್ ನ ಮಂಜೂರಾದ ಪ್ಯಾಕೇಜ್ ಅಡಿಯಲ್ಲಿ ಬಾರದಿದ್ದ ಪಕ್ಷದಲ್ಲಿ ಈ ನಿಯಮ ಅನ್ವಯ ಆಗುತ್ತದೆ. ರಾಷ್ಟ್ರೀಯ ಆರೋಗ್ಯ ನಿಧಿಯ ಒಟ್ಟಾರೆ ಯೋಜನೆ ಅಡಿಯಲ್ಲಿ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ 15 ಲಕ್ಷ ರುಪಾಯಿ ತನಕ ಹಣಕಾಸಿನ ನೆರವು ಒದಗಿಸಬಹುದು. - ಹೀಗೆ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ಸುತ್ತೋಲೆ ಹೊರಡಿಸಲಾಗಿದೆ. ಅಂಥ ಸನ್ನಿವೇಶದಲ್ಲಿ ಆಯಾ ಸರ್ಕಾರಿ ಆಸ್ಪತ್ರೆಯಿಂದ ಫಲಾನುಭವಿಗೆ, ಆತ ಅಥವಾ ಆಕೆ ಆಯುಷ್ಮಾನ್ ಭಾರತ್ ಯೋಜನೆ ಅಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿ ಹಣಕಾಸಿನ ನೆರವು ಪಡೆಯಲು ಅನುಕೂಲ ಒದಗಿಸಬೇಕು ಎಂದು ಪ್ರಮಾಣೀಕರಿಸಬೇಕು ಎಂದು ತಿಳಿಸಲಾಗಿದೆ.
ಬ್ಲಡ್ ಕ್ಯಾನ್ಸರ್, ಗಂಭೀರ ಸ್ವರೂಪದ ಯಕೃತ್ತಿನ ಕಾಯಿಲೆಗೆ ಅವಕಾಶ ಇಲ್ಲ
ಆಲ್ ಇಂಡಿಯಾ ಮೆಡಿಕಲ್ ಸೈನ್ಸಸ್ ಮತ್ತು ಎನ್ ಎಚ್ ಎನಿಂದ ಆರೋಗ್ಯ ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಒಂದು ವೇಳೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಚಿಕಿತ್ಸೆ ನಿರಾಕರಿಸಿದರೆ ರಾಷ್ಟ್ರೀಯ ಆರೋಗ್ಯ ನಿಧಿಯ ಒಟ್ಟಾರೆ ಯೋಜನೆ ಅಡಿ ಕವರ್ ಮಾಡಬೇಕು ಎಂದು ಸಲಹೆ ನೀಡಲಾಗಿತ್ತು. ಬ್ಲಡ್ ಕ್ಯಾನ್ಸರ್, ಗಂಭೀರ ಸ್ವರೂಪದ ಯಕೃತ್ತಿನ ಕಾಯಿಲೆ ಹಾಗೂ ಅಂಗಾಂಶ ಮತ್ತು ಅಸ್ಥಿ ಮಜ್ಜೆ ಚಿಕಿತ್ಸೆ ಪಡೆಯುವುದಕ್ಕೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯ 1393 ವೈದ್ಯಕೀಯ ಪ್ಯಾಕೇಜ್ ನಲ್ಲಿ ಅವಕಾಶ ಇಲ್ಲ. ಕಳೆದ ನವೆಂಬರ್ ನಲ್ಲಿ ಆರೋಗ್ಯ ಸಚಿವಾಲಯವು ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.
ವರದಿ ಕೇಳಿತ್ತು ಮಾನವ ಹಕ್ಕು ಆಯೋಗ
ಅದರ ಬದಲಿಗೆ ಆಯುಷ್ಮಾನ್ ಭಾರತ್ ನಲ್ಲೇ ಆ ಕಾಯಿಲೆಗಳನ್ನು ಸೇರಿಸಿ, ವರ್ಷಕ್ಕೆ 5 ಲಕ್ಷದ ಮಿತಿ ಏನಿತ್ತು ಅದನ್ನು ವಿಸ್ತರಿಸುವಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸೂಚಿಸಿತ್ತು. ಹಾಗೆ ಮಾಡಿದಲ್ಲಿ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ ಅಡಿಯಲ್ಲೇ ಚಿಕಿತ್ಸೆ ಪಡೆಯಬಹುದು ಎಂಬುದು ಉದ್ದೇಶವಾಗಿತ್ತು. ಇನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಈಚೆಗೆ ಆರೋಗ್ಯ ಸಚಿವಾಲಯವದಿಂದ ವರದಿಯನ್ನು ಕೇಳಿತ್ತು. ಬಿಪಿಎಲ್ ಕಾರ್ಡ್ ದಾರರಾಗಿದ್ದು, ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ ಅಡಿ ಸೌಲಭ್ಯ ಇದ್ದರೂ ಆಯುಷ್ಮಾನ್ ಭಾರತ್ ನಲ್ಲಿ ಇರುವ 5 ಲಕ್ಷ ಮಿತಿಗಿಂತ ಹೆಚ್ಚು ಖರ್ಚಾಗುವ- ಜೀವಕ್ಕೆ ಅಪಾಯ ತಂದೊಡ್ಡುವ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅಂಥವರಿಗೆ ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಯಾವುದೇ ಅನುಕೂಲ ದೊರೆಯುತ್ತಿಲ್ಲ. ಈ ಬಗ್ಗೆ ಕೆಲವು ಬಡ ರೋಗಿಗಳು ದೂರಿದ್ದಾರೆ. ಆದ್ದರಿಂದ ವರದಿ ನೀಡಿ ಎಂದು ಕೇಳಲಾಗಿತ್ತು.
ಯೋಜನೆಯ ಪ್ರಯೋಜನ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ
ಈಚೆಗೆ ತಂದಿರುವ ತಿದ್ದುಪಡಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಡರೋಗಿಗಳ ಪೈಕಿ ಹಲವರಿಗೆ ಕಿಡ್ನಿ ಕಸಿ, ಅಸ್ಥಿ ಮಜ್ಜೆ ಅಥವಾ ಯಕೃತ್ತು ಕಸಿ ಅಗತ್ಯ ಇರುತ್ತದೆ. ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ ಕಾರ್ಡ್ ಇದ್ದರೂ ಚಿಕಿತ್ಸೆ ವೆಚ್ಚಕ್ಕೆ ಮಿತಿ ಇರುವುದರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಂಥವರಿಗೆ ಈಗ ಅನುಕೂಲ ಆಗಿದೆ ಎಂದು ಹಲವರು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. 5 ಲಕ್ಷಕ್ಕಿಂತ ಹೆಚ್ಚು ಚಿಕಿತ್ಸೆ ವೆಚ್ಚ ಆಗಿದ್ದಲ್ಲಿ ರಾಷ್ಟ್ರೀಯ ಆರೋಗ್ಯ ನಿಧಿ ಯೋಜನೆ ಅಡಿ ಈ ತನಕ ಅನುಕೂಲ ಪಡೆಯಲು ಆಗುತ್ತಿರಲಿಲ್ಲ. "ಎಲ್ಲ ಜನಪರ ಯೋಜನೆಗಳು ಇರುವುದು ಜನರ ಹಿತಕ್ಕಾಗಿಯೇ. ಅದರ ಉದ್ದೇಶ ಪೂರ್ಣವಾಗಿ ಈಡೇರುತ್ತಿದೆಯಾ ಎಂಬುದನ್ನು ಆಗಿಂದಾಗ್ಗೆ ಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ಪ್ರಯತ್ನ ವ್ಯರ್ಥವಾಗುತ್ತದೆ. ನೀತಿ ರೂಪಿಸುವವರು ಮತ್ತು ಅಧಿಕಾರಿಗಳಿಗೆ ಫಲಾನುಭವಿಗಳ ಬಗ್ಗೆ ಅಕ್ಕರಾಸ್ಥೆ ಇರಬೇಕು. ಜವಾಬ್ದಾರಿ ಇರುವ ವೈದ್ಯರಾಗಿ ನಮಗೂ ಈ ಬಗ್ಗೆ ನಿಗಾ ಇರಬೇಕು" ಎಂದು ವೈದ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications