ಆರ್‌ಬಿಐನಿಂದ ಮಾರುಕಟ್ಟೆಗೆ ಡಬಲ್ ಡೋಸ್ ಲಿಕ್ವಿಡಿಟಿ: ನಿಮ್ಮ ಸಾಲ ಮತ್ತು ಹೂಡಿಕೆಯ ಮೇಲೆ ಇದರ ಪರಿಣಾಮವೇನು?

ನವೆಂಬರ್ 23 ರಂದು ಭಾರತದ ಹಣಕಾಸು ಮಾರುಕಟ್ಟೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಬಲ್ ಡೋಸ್ ಲಿಕ್ವಿಡಿಟಿ ಇಂಜೆಕ್ಷನ್ ನೀಡಿದೆ. ಅಂದರೆ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಎರಡು ಪ್ರತ್ಯೇಕ ಹರಾಜು ಪ್ರಕ್ರಿಯೆಗಳನ್ನು ನಡೆಸಿದೆ. ಮೊದಲನೆಯದು 50,000 ಕೋಟಿ ರೂಪಾಯಿ ಮೊತ್ತದ 4 ದಿನಗಳ ವೇರಿಯೇಬಲ್ ರೇಟ್ ರೆಪೋ (VRR) ಹರಾಜು. ಬೆಳಿಗ್ಗೆ 9:30 ರಿಂದ 10:00 ರವರೆಗೆ ನಡೆದ ಈ ಹರಾಜಿನ ಪ್ರಕ್ರಿಯೆಯು ನವೆಂಬರ್ 27 ರಂದು ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ, ಬೆಳಿಗ್ಗೆ 10:30 ರಿಂದ 11:00 ರವರೆಗೆ ನವೆಂಬರ್ 25 ಕ್ಕೆ ಮುಕ್ತಾಯವಾಗುವ ಮತ್ತೊಂದು 2 ದಿನಗಳ 50,000 ಕೋಟಿ ರೂಪಾಯಿಗಳ ಹರಾಜನ್ನು ಆರ್‌ಬಿಐ ನಡೆಸಿದೆ.

ಬೆಳಗಿನ 4 ದಿನಗಳ ಹರಾಜಿಗೆ ಮಾರುಕಟ್ಟೆಯಿಂದ ಭಾರಿ ಸ್ಪಂದನೆ ಸಿಕ್ಕಿದ್ದು, ಬರೋಬ್ಬರಿ 1.52 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಆರ್‌ಬಿಐ 50,005 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಈ ಹರಾಜಿನ ಕಟ್-ಆಫ್ ದರ ಶೇಕಡಾ 5.62 ರಷ್ಟಿದ್ದರೆ, ವೇಟೆಡ್ ಆವರೇಜ್ ದರ ಶೇಕಡಾ 5.63 ರಷ್ಟಿತ್ತು. ಇದು ಮಾರುಕಟ್ಟೆಯಲ್ಲಿ ಹಣದ ಕೊರತೆ (Tightness) ಇರುವುದನ್ನು ತೋರಿಸುತ್ತದೆಯಾದರೂ, ಈ ನಗದು ಪೂರೈಕೆಯು ಓವರ್‌ನೈಟ್ ದರಗಳನ್ನು ಸ್ಥಿರಗೊಳಿಸಲು ನೆರವಾಗಲಿದೆ. ಸದ್ಯ ಪಾಲಿಸಿ ರೆಪೋ ದರ ಶೇಕಡಾ 5.50 ರಷ್ಟಿದ್ದು, ಮಾರುಕಟ್ಟೆಯ ಹಣಕಾಸಿನ ಒತ್ತಡವನ್ನು ತಗ್ಗಿಸಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಆರ್‌ಬಿಐನಿಂದ ಮಾರುಕಟ್ಟೆಗೆ ಡಬಲ್ ಡೋಸ್ ಲಿಕ್ವಿಡಿಟಿ

ಆರ್‌ಬಿಐ ವಿಆರ್‌ಆರ್ ಹರಾಜು: ಈಗೇಕೆ ಈ ನಿರ್ಧಾರ?

"ಪ್ರಸ್ತುತ ಮತ್ತು ಬದಲಾಗುತ್ತಿರುವ ನಗದು ಪರಿಸ್ಥಿತಿಗಳಿಗೆ" ತಕ್ಷಣ ಸ್ಪಂದಿಸಲು ಈ ಹಂತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಈ ನಿರ್ಧಾರವು ನವೆಂಬರ್ 20 ರಂದು ನಡೆದ ಹರಾಜಿನ ಮಾದರಿಯಲ್ಲೇ ಇದೆ. ಅಂದು ಸುಮಾರು 75,010 ಕೋಟಿ ರೂಪಾಯಿ ಮೌಲ್ಯದ ಎರಡು 3 ದಿನಗಳ ವಿಆರ್‌ಆರ್ ಹರಾಜುಗಳನ್ನು ನಡೆಸಲಾಗಿತ್ತು (ದರ 5.56 ರಿಂದ 5.58 ಶೇಕಡಾ). ಈ ರೀತಿ ಸಾಲು ಸಾಲಾಗಿ ಹರಾಜು ನಡೆಸುವುದು ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (NBFCs) ಎದುರಾಗುವ ರೋಲ್‌ಓವರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಆರ್‌ಬಿಐ ವಿಆರ್‌ಆರ್ ಹರಾಜು: ಇಎಂಐ, ಎಫ್‌ಡಿ ಮತ್ತು ಲಿಕ್ವಿಡ್ ಫಂಡ್‌ಗಳ ಮೇಲೇನು ಪರಿಣಾಮ?

ರೆಪೋ ದರಕ್ಕೆ ಲಿಂಕ್ ಆಗಿರುವ ಗೃಹ ಸಾಲದ ಮಾಸಿಕ ಕಂತುಗಳಲ್ಲೇನಾದರೂ (EMI) ತಕ್ಷಣಕ್ಕೆ ಬದಲಾವಣೆಯಾಗುತ್ತದೆಯೇ? ಖಂಡಿತ ಇಲ್ಲ. ಸಾಲದ ಇಎಂಐ ಕಡಿಮೆಯಾಗಬೇಕಾದರೆ ಆರ್‌ಬಿಐ ಮೂಲ ಪಾಲಿಸಿ ದರ ಇಳಿಸಬೇಕು ಅಥವಾ ಬ್ಯಾಂಕುಗಳ ಫಂಡಿಂಗ್ ವೆಚ್ಚ ಗಮನಾರ್ಹವಾಗಿ ತಗ್ಗಬೇಕು. ಇನ್ನು ಕಮರ್ಷಿಯಲ್ ಪೇಪರ್ ಮತ್ತು ಸರ್ಟಿಫಿಕೇಟ್ ಆಫ್ ಡಿಪಾಸಿಟ್ ಇಳುವರಿಗಳು ಕಳೆದ ವಾರಕ್ಕೆ ಹೋಲಿಸಿದರೆ ಕೊಂಚ ತಗ್ಗುವ ಸಾಧ್ಯತೆಯಿದೆ. ಲಿಕ್ವಿಡ್ ಮತ್ತು ಓವರ್‌ನೈಟ್ ಫಂಡ್‌ಗಳ ರಿಟರ್ನ್ಸ್ ಈ ದರಗಳನ್ನೇ ಆಧರಿಸಿರುವುದರಿಂದ, ಇಂದಿನ ಕಟ್-ಆಫ್ ದರವು ಎನ್‌ಎವಿ (NAV) ಮೇಲೆ ಪ್ರಭಾವ ಬೀರಲಿದೆ. ಇನ್ನು ಸ್ಥಿರ ಠೇವಣಿ (FD) ದರಗಳಲ್ಲಿನ ಬದಲಾವಣೆಗಳು ಮಾರುಕಟ್ಟೆಯ ಚಲನೆಗೆ ತಕ್ಕಂತೆ ನಿಧಾನವಾಗಿ ಆಗಲಿವೆ.

ಮಾರುಕಟ್ಟೆ ಮುಕ್ತಾಯದ ವೇಳೆಗೆ, ಎರಡನೇ ವಿಆರ್‌ಆರ್ ಹರಾಜಿನ ಕಟ್-ಆಫ್ ದರ ಮತ್ತು ಶೇಕಡಾ 5.50 ರ ರೆಪೋ ದರಕ್ಕೆ ಹೋಲಿಸಿದರೆ ಕಾಲ್ ದರಗಳು ಹೇಗಿರುತ್ತವೆ ಎಂಬುದನ್ನು ಗಮನಿಸಬೇಕಿದೆ. ಕಟ್-ಆಫ್ ದರವು ರೆಪೋ ದರಕ್ಕೆ ಹತ್ತಿರವಾಗಿದ್ದರೆ ನಗದು ಕೊರತೆಯ ಒತ್ತಡ ಕಡಿಮೆಯಾಗಿದೆ ಎಂದು ಭಾವಿಸಬಹುದು. ಜೊತೆಗೆ ರೂಪಾಯಿ ಮೌಲ್ಯ ಮತ್ತು 10 ವರ್ಷಗಳ ಸರ್ಕಾರಿ ಬಾಂಡ್ ಇಳುವರಿಯನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಈ ಎರಡೂ ಹರಾಜು ಪ್ರಕ್ರಿಯೆಗಳು ನವೆಂಬರ್ 25 ಮತ್ತು ನವೆಂಬರ್ 27 ರಂದು ರಿವರ್ಸ್ ಆಗಲಿದ್ದು, ಮುಂದಿನ ರೋಲ್‌ಓವರ್‌ಗೆ ಮಾರುಕಟ್ಟೆಯ ಆಸಕ್ತಿ ಹೇಗಿರಲಿದೆ ಎಂಬುದು ಅತ್ಯಂತ ಪ್ರಮುಖವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+