ಭಾರತೀಯರು ಚಿನ್ನ ಖರೀದಿ ವಿಚಾರದಲ್ಲಿ ಎಂದಿಗೂ ಹಿಂಜರಿಯುವುದಿಲ್ಲ. ವಿವಾಹ ಅಥವಾ ಯಾವುದೇ ಸಮಾರಂಭವಾದರೂ ಚಿನ್ನ ಖರೀದಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಭಾರತದಲ್ಲಿ ನೀಡಲಾಗುತ್ತದೆ. ಚಿನ್ನ ವಿಶ್ವದಲ್ಲೇ ಅತೀ ಮೌಲ್ಯಯುತ ಮತ್ತು ಹೆಚ್ಚಾಗಿ ಬಳಕೆ ಮಾಡಲಾಗುವ ಲೋಹವಾಗಿದೆ. ಚಿನ್ನಕ್ಕೆ ಬಹುತೇಕ ಎಲ್ಲ ದೇಶಗಳಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗುತ್ತದೆ.
ಪ್ರಸ್ತುತ ಭಾರತದಲ್ಲಿ ಬೇರೆ ಬೇರೆ ಕ್ಯಾರಟ್, ಶುದ್ಧತೆಯ ಚಿನ್ನವು ಲಭ್ಯವಾಗುತ್ತದೆ. ಈ ನಡುವೆ ಹಲವಾರು ಮಂದಿಗೆ ಈ ಕ್ಯಾರಟ್ ಎಂದರೇನು ಎಂಬ ಮಾಹಿತಿ ಇಲ್ಲ. ಕ್ಯಾರಟ್ ಎಂದರೇನು, ಚಿನ್ನದಲ್ಲಿ ಎಷ್ಟು ಕ್ಯಾರಟ್‌ಗಳು ಇದೆ, ಅದರ ಶುದ್ಧತೆ ಏನು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ...

ಕ್ಯಾರೆಟ್ ಅಥವಾ K ಎಂದರೇನು?
ಸಾಮಾನ್ಯವಾಗಿ ಚಿನ್ನ ಖರೀದಿ ಮಾಡಲು ಹೋದಾಗ ಚಿನ್ನದ ಶುದ್ಧತೆಯ ವಿಚಾರದಲ್ಲಿ ಪ್ರಸ್ತಾಪ ಬಂದಾಗ 22 ಕ್ಯಾರಟ್, 24 ಕ್ಯಾರಟ್ ಎಂಬ ಮಾತುಗಳು ಬರುತ್ತದೆ. ನಾವು ಈ 22 ಮತ್ತು 24 ಕ್ಯಾರಟ್ ಚಿನ್ನದ ನಡುವೆ ವ್ಯತ್ಯಾಸ ತಿಳಿಯುವುದಕ್ಕೂ ಮುನ್ನ ಈ ಕ್ಯಾರಟ್ ಅಥವಾ K ಎಂದರೇನು ಎಂದು ಮೊದಲು ತಿಳಿಯಬೇಕು. ಚಿನ್ನ ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ಕ್ಯಾರಟ್ ಮೌಲ್ಯವು ಹೆಚ್ಚಾಗುತ್ತದೆ. 0 ರಿಂದ 24 ರ ಪ್ರಮಾಣದಲ್ಲಿ, ಇದನ್ನು ರೇಟ್ ಮಾಡಲಾಗಿದೆ. ಚಿನ್ನದ ಆಭರಣವನ್ನು ಉತ್ಪಾದನೆ ಮಾಡುವಾಗ ತಾಮ್ರ, ನಿಕಲ್, ಬೆಳ್ಳಿ ಮತ್ತು ಪಲ್ಲಾಡಿಯಮ್‌ನಂತಹ ಇತರೆ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ.
ವಿವಿಧ ಕ್ಯಾರೆಟ್‌ನ ಚಿನ್ನ ಮತ್ತು ಅದರ ಶುದ್ಧತೆ
24ಕ್ಯಾರಟ್: ಶೇ.99.9 ಶುದ್ಧತೆ
22 ಕ್ಯಾರಟ್: ಶೇ91.6 ಶುದ್ಧತೆ
20 ಕ್ಯಾರಟ್: ಶೇ.83.3 ಶುದ್ಧತೆ
18 ಕ್ಯಾರಟ್: ಶೇ.75 ಶುದ್ಧತೆ
14 ಕ್ಯಾರಟ್: ಶೇ.58.5 ಶುದ್ಧತೆ
10 ಕ್ಯಾರಟ್: ಶೇ.41.7 ಶುದ್ಧತೆ
24 ಕ್ಯಾರಟ್ ಚಿನ್ನ ಎಂದರೇನು?
ಶುದ್ಧ ಚಿನ್ನ ಎಂಬ ವಿಚಾರಕ್ಕೆ ಬಂದಾಗ ಸಾಮಾನ್ಯವಾಗಿ "24 ಕ್ಯಾರಟ್ ಚಿನ್ನ" ವನ್ನು ಶುದ್ಧ ಚಿನ್ನ ಎಂದು ಕರೆಯಲಾಗುತ್ತದೆ. ಚಿನ್ನದ ಶುದ್ಧ ರೂಪ 24K ಚಿನ್ನವಾಗಿದೆ. 24 ಕ್ಯಾರಟ್ ಚಿನ್ನದಲ್ಲಿ 99.99% ಚಿನ್ನ ಇರುತ್ತದೆ. ಅತ್ಯಂತ ಪರಿಶುದ್ಧವಾದ ಚಿನ್ನವಾಗಿದ್ದರೂ ಕೂಡಾ ಶೇಕಡ 100ರಷ್ಟು ಶುದ್ಧತೆ ಹೊಂದಿರುವುದಿಲ್ಲ. ಯಾಕೆ ಎಂದು ನಿಮಗಿಸಬಹುದು. ಶೇಕಡ 100ರಷ್ಟು ಶುದ್ದತೆಯ ಚಿನ್ನವು ಅತೀ ದುರ್ಬಲವಾಗಿರುತ್ತದೆ, ಅದಕ್ಕೆ ಸರಿಯಾದ ಆಕಾರವನ್ನು ನೀಡಲಾಗುವುದಿಲ್ಲ. ಆದ್ದರಿಂದಾಗಿ ಚಿನ್ನ ಎಂದಿಗೂ ಶೇಕಡ 100ರಷ್ಟು ಶುದ್ಧತೆ ಹೊಂದಿರುವುದಿಲ್ಲ.
24 ಕ್ಯಾರಟ್ ಚಿನ್ನವು ತುಂಬಾ ಸೂಕ್ಷ್ಮವಾದ ಕಾರಣ, ಅದನ್ನು ಆಭರಣ ಅಥವಾ ಯಾವುದೇ ವಸ್ತುಗಳನ್ನು ಮಾಡಲು ಬಳಕೆ ಮಾಡಲಾಗುವುದಿಲ್ಲ. ಇದನ್ನು ಪ್ರಾಥಮಿಕವಾಗಿ ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಬೇರೆ ಕ್ಯಾರಟ್ ಚಿನ್ನಗಳಿಗೆ ನಾವು ಹೋಲಿಕೆ ಮಾಡಿದಾಗ 24K ಚಿನ್ನವು ವಿಶಿಷ್ಟವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಈ ಚಿನ್ನದ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಅನ್ನು ಮುದ್ರೆ ಮಾಡಲಾಗುತ್ತದೆ. ಅಂದರೆ 24K ಚಿನ್ನವು ಲಭ್ಯವಿರುವ ಚಿನ್ನದ ಶುದ್ಧ ರೂಪವಾಗಿದೆ. ಇದನ್ನು ವೈದ್ಯಕೀಯ ಮತ್ತು ಎಲೆಕ್ಟ್ರಾನಿಕ್ ಉದ್ದೇಶಗಳಿಗೂ ಬಳಸಲಾಗುತ್ತದೆ.
22 ಕ್ಯಾರಟ್ ಚಿನ್ನ ಹೇಗಿರುತ್ತದೆ?
22 ಕ್ಯಾರಟ್ ಚಿನ್ನದಲ್ಲಿ 22 ಭಾಗಗಳು ಚಿನ್ನದಿಂದ 2 ಭಾಗಗಳು ಇತರ ಲೋಹಗಳಾದ ತಾಮ್ರ ಮತ್ತು ಸತುವುಗಳಿಂದ ಮಾಡಲ್ಪಟ್ಟಿರುತ್ತದೆ. ಈ ಕ್ಯಾರಟ್ ಚಿನ್ನವನ್ನು "916 ಚಿನ್ನ" ಎಂದೂ ಕರೆಯಲಾಗುತ್ತದೆ. ಇದರ ಶುದ್ಧತೆ ಶೇಕಡ 91.67ರಷ್ಟಿರುತ್ತದೆ. ಬೇರೆ ಲೋಹ ಸೇರ್ಪಡೆಯಿಂದಾಗಿ 22 ಕ್ಯಾರಟ್ ಚಿನ್ನ ಆಭರಣದ ವಿನ್ಯಾಸವು ಗಟ್ಟಿಯಾಗಿರುತ್ತದೆ, ಹೆಚ್ಚು ಬಾಳಿಕೆ ಬರುತ್ತದೆ.
ಆದರೂ ಸರಳವಾದ ಚಿನ್ನದ ಆಭರಣಗಳನ್ನು ರಚನೆ ಮಾಡಲು ಮಾತ್ರ ಈ 22 ಕ್ಯಾರಟ್ ಚಿನ್ನವನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ. ಆಭರಣಗಳ ವಿಷಯಕ್ಕೆ ಬಂದಾಗ 22 ಕ್ಯಾರಟ್‌ಗಿಂತ ಹೆಚ್ಚಾಗಿ 22 ಕ್ಯಾರಟ್‌ನ ಚಿನ್ನವನ್ನು ಹೆಚ್ಚಾಗಿ ಜನರು ಖರೀದಿ ಮಾಡುತ್ತಾರೆ. "916 ಚಿನ್ನ" ಖರೀದಿ ಮಾಡಬೇಕು, ಅದು ಉತ್ತಮ ಚಿನ್ನ ಎಂಬುವುದು ಜನರ ನಂಬಿಕೆಯಾಗಿದೆ. ಈ ಚಿನ್ನಕ್ಕೆ ಮರುಮಾರಾಟ ಮೌಲ್ಯ ಅಧಿಕವಾಗಿದೆ.
ಯಾವ ಕ್ಯಾರಟ್ ಚಿನ್ನ ಉತ್ತಮ, ಯಾಕೆ?
ನಾವು ಯಾವ ಕ್ಯಾರಟ್‌ನ ಚಿನ್ನವನ್ನು ಖರೀದಿ ಮಾಡುವುದು ಉತ್ತಮ ಎಂಬ ವಿಚಾರಕ್ಕೆ ಬಂದಾಗ ನಾವು ಯಾವ ಕಾರಣಕ್ಕಾಗಿ ಚಿನ್ನ ಖರೀದಿ ಮಾಡುತ್ತಿದ್ದೇವೆ ಎಂಬುವುದು ಮುಖ್ಯವಾಗುತ್ತದೆ. ನೀವು ಆಭರಣವನ್ನು ಖರೀದಿ ಮಾಡುವುದಾದರೆ ಎಂದಿಗೂ ಕೂಡಾ 22 ಕ್ಯಾರಟ್ ಚಿನ್ನ ಖರೀದಿ ಉತ್ತಮ ಆಯ್ಕೆಯಾಗಿದೆ. ಆದರೆ ನಾವು ಹೂಡಿಕೆ ಲೆಕ್ಕಾಚಾರದಲ್ಲಿ ಆಭರಣವನ್ನು ಖರೀದಿ ಮಾಡುವುದಾದರೆ ಅದನ್ನು ಮಾರಾಟ ಮಾಡುವಾಗ ಮೇಕಿಂಗ್ ಚಾರ್ಚ್ ಇತರೆ ಶುಲ್ಕ ಕಡಿತಗೊಳಿಸಲಾಗುತ್ತದೆ.
ಸಾಮಾನ್ಯವಾಗಿ ಚಿನ್ನಾಭರಣಗಳು ಅಧಿಕ ಮೇಕಿಂಗ್ ಚಾರ್ಜ್ ಹೊಂದಿವೆ. ಮತ್ತೊಂದೆಡೆ, ಚಿನ್ನದ ಬಿಸ್ಕತ್ತು ಖರೀದಿ ಮಾಡಿ ಮಾರಾಟ ಮಾಡುವುದಾದರೆ ಇದರಿಂದಾಗಿ ಲಾಭ ಅಧಿಕವಾಗಿರುತ್ತದೆ. ಲಾಭ ಪಡೆಯುವ ಉದ್ದೇಶದಿಂದ ಖರೀದಿ, ಮಾರಾಟ ಮಾಡಲಾಗುತ್ತದೆ. ನೀವು ಹೂಡಿಕೆಗಾಗಿ ಚಿನ್ನವನ್ನು ಖರೀದಿ ಮಾಡುವುದಾದರೆ 24 ಕ್ಯಾರಟ್ ಉತ್ತಮವಾಗಿದೆ. ಚಿನ್ನದ ಬಾರ್‌ಗಳು, ನಾಣ್ಯಗಳು 24 ಕ್ಯಾರಟ್ ಚಿನ್ನವಾಗಿರುತ್ತದೆ.


Click it and Unblock the Notifications