ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದ ಅತಿದೊಡ್ಡ ವಾಣಿಜ್ಯ ಬಾಂಕ್ ಆಗಿದೆ. ಇದು ದೇಶಾದ್ಯಂತ 24,000 ಶಾಖೆಗಳ ಮೂಲಕ ಬೃಹತ್ ನೆಟ್‌ವರ್ಕ್ ಜಾಲವನ್ನು ಹೊಂದಿದೆ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ರೀತಿಯ ಬ್ಯಾಂಕಿಂಗ್ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸಿದೆ. ನಾವು ಯಾವಾಗಲೂ ನಮ್ಮ ವಾಸಸ್ಥಳದ ವಿಳಾಸಕ್ಕೆ ಹತ್ತಿರವಿರುವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಹೀಗಾಗಿ, ಹೆಚ್ಚಿನವರು ಎಸ್‌ಬಿಐನಲ್ಲಿ ಖಾತೆಗಳನ್ನು ಹೊಂದಿರುವುದನ್ನು ಕಾಣಬಹುದು.
ಆದರೆ, ಹೆಚ್ಚಿನವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರಬೇಕಾಗುತ್ತದೆ. ಇಂಥಹ ಸನ್ನಿವೇಶದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ವರ್ಗಾಯಿಸಿಕೊಳ್ಳುವುದಕ್ಕೆ ಬಯಸುತ್ತಾರೆ. ಈ ಹಿಂದೆ ನಿಮ್ಮ ಬ್ಯಾಂಕಿನ ಶಾಖೆಯನ್ನು ವರ್ಗಾಯಿಸಿಕೊಳ್ಳುವುದು ದೊಡ್ಡ ಕಿರಿಕಿರಿಯ ಪ್ರಕ್ರಿಯೆಯಾಗಿತ್ತು. ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು, ಹಲವಾರು ಫಾರ್ಮ್‌ಗಳನ್ನು ಭರ್ತಿ ಮಾಡುವುದು, ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವುದು ಮತ್ತು ಖಾತೆಯನ್ನು ವರ್ಗಾಯಿಸಿಕೊಳ್ಳುವುದಕ್ಕೆ ಹಲವು ದಿನಗಳವರೆಗೆ ಕಾಯುವುದು ಕೂಡ ಇದರಲ್ಲಿ ಸೇರಿತ್ತು.

ಆದರೆ ಈಗ ಅಷ್ಟೊಂದು ಪ್ರಯಾಸ ಪಡುವ ಅಗತ್ಯವಿಲ್ಲ. ಇಂಟರ್‌ನೆಟ್ ಬಂದ ಬಳಿಕ ಹೆಚ್ಚಿನ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮನೆಯಲ್ಲಿನ ಅನುಕೂಲ ನೋಡಿಕೊಂಡು ಆನ್‌ಲೈನ್‌ನಲ್ಲಿಯೇ ಸುಲಭವಾಗಿ ಮಾಡಿ ಮುಗಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಗ್ರಾಹಕರಾಗಿದ್ದು, ಬ್ಯಾಂಕ್ ಶಾಖೆಯನ್ನು ವರ್ಗಾಯಿಸಲು ಬಯಸಿದರೆ ಅದನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇದಕ್ಕಾಗಿ ನಿಮ್ಮ ಸಂಖ್ಯೆಯನ್ನು ನೀವು ಬ್ಯಾಂಕ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯನ್ನು ನೀವು ಹೇಗೆ ವರ್ಗಾಯಿಸಬೇಕು ಎನ್ನುವ ಕುರಿತ ಹಂತ-ಹಂತದ ಮಾರ್ಗದರ್ಶನವನ್ನು ಇಲ್ಲಿ ನೀಡಲಾಗಿದೆ.
ಹಂತ 1: ಎಸ್‌ಬಿಐ ಗ್ರಾಹಕರು ಅಧಿಕೃತ ವೆಬ್‌ಸೈಟ್ www.onlinesbi.com ಗೆ ಭೇಟಿ ನೀಡಬೇಕು.
ಹಂತ 2: ನಿಮ್ಮ ನೆಟ್ ಬ್ಯಾಂಕಿಂಗ್‌ಗೆ ಪ್ರವೇಶಿಸಲು ನಿಮ್ಮ ಲಾಗಿನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಮೊದಲ ಬಾರಿಗೆ ಬಳಸುವ ಯೂಸರ್‌ಗಳು ಲಾಗಿನ್ ಐಡಿಯನ್ನು ಕ್ರಿಯೇಟ್ ಮಾಡಬೇಕು.
ಹಂತ 3: ಲಾಗಿನ್ ಆದ ಬಳಿಕ ಇ-ಸರ್ವೀಸಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಕ್ವಿಕ್ ಲಿಂಕ್‌ನಲ್ಲಿ ಟ್ರಾನ್ಸ್‌ಫರ್ ಆಫ್ ಸೇವಿಂಗ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಆಗ ಹೊಸ ಪೇಜ್ ಓಪನ್ ಆಗುತ್ತದೆ. ಬಳಿಕ ವರ್ಗಾಯಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ. ಒಂದುವೇಳೆ ಕೇವಲ ಒಂದೇ ಎಸ್‌ಬಿಐ ಖಾತೆಯಿದ್ದರೆ ಆಗ ಅದು ಸ್ವಯಂ ಆಗಿ ಆಯ್ಕೆ ಮಾಡಿಕೊಳ್ಳುತ್ತದೆ.
ಹಂತ 6: ಈಗ ನೀವು ಯಾವ ಶಾಖೆಗೆ ವರ್ಗಾಯಿಸಬೇಕೆಂದು ಬಯಸುವಿರೋ ಅಲ್ಲಿನ ಬ್ರಾಂಚ್ ಕೋಡ್ ಅನ್ನು ನಮೂದಿಸಿ.
ಹಂತ 7: 'ಗೆಟ್ ಬ್ರಾಂಚ್ ಕೋಡ್' ಮೇಲೆ ಕ್ಲಿಕ್ ಮಾಡಿ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 8: ನಿಮ್ಮ ಅಗತ್ಯವಿರುವ ಹೊಸ ಶಾಖೆಯ ಹೆಸರನ್ನು ನಮೂದಿಸಿ, ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ಮೂಲಕ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 9: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಬಳಿಕ ಅದನ್ನು ನಮೂದಿಸುವ ಮೂಲಕ ಬ್ಯಾಂಕ್ ಶಾಖೆ ವರ್ಗಾಯಿಸುವ ಕೋರಿಕೆಯು ನೋಂದಣಿಯಾಗುತ್ತದೆ.
ಹಂತ 10: ಕೆಲವು ದಿನಗಳ ಬಳಿಕ ನಿಮ್ಮ ಶಾಖೆಯು ವರ್ಗಾವಣೆಯಾಗುತ್ತದೆ.


Click it and Unblock the Notifications