ದಿನಗಳು ಉರುಳಿ, ತಿಂಗಳುಗಳು ಕಳೆದು ಈಗ ನಾವು ಮತ್ತೆ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದೇವೆ. ಈ ವರ್ಷದ ಅಂದರೆ 2023 ರ 11 ತಿಂಗಳುಗಳು ಈಗಾಗಲೇ ಕೊನೆಯಾಗಿದ್ದು, ಕೊನೆಯ ತಿಂಗಳು ಡಿಸೆಂಬರ್ ಇಂದಿನಿಂದ ಆರಂಭವಾಗುತ್ತದೆ. ಈ ತಿಂಗಳು ಮುಗಿದರೆ ಈ ವರ್ಷವೂ ಮುಗಿಯುತ್ತದೆ.
ಈ ವರ್ಷ ಮುಗಿಯುತ್ತಿದ್ದಂತೆ ಈ ವರ್ಷದ ದುಬಾರಿ ವಸ್ತುಗಳು, ಹಣಕಾಸು ನೀತಿಗಳು, ವೈಯಕ್ತಿಕ ಹಣಕಾಸುಗಳು ಮೊದಲಾದವುಗಳನ್ನು ವಿವರವನ್ನು ನಾವು ತಿಳಿಸುತ್ತಾ ಬರುತ್ತೇವೆ. ಈ ವರ್ಷದಲ್ಲಿ ವಿಶ್ವದಲ್ಲೇ ಅತೀ ದುಬಾರಿ ನಗರಗಳ ಬಗ್ಗೆ ನಿಮಗೆ ತಿಳಿದಿದೆಯೇ?. ಇಲ್ಲಿದೆ ವಿವರ ಮುಂದೆ ಓದಿ....

ಈ ವರ್ಷದ ಅತೀ ದುಬಾರಿ ನಗರಗಳು
ಈ ವರ್ಷ ಸಿಂಗಾಪುರ ಮತ್ತು ಜ್ಯೂರಿಚ್ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಅದಾದ ಬಳಿಕದ ಸ್ಥಾನದಲ್ಲಿ ಜಿನೀವಾ, ನ್ಯೂಯಾರ್ಕ್ ಮತ್ತು ಹಾಂಗ್ ಕಾಂಗ್ ನಗರಗಳು ಇದೆ. ಜಾಗತಿಕ ಜೀವನ ವೆಚ್ಚದ ಬಿಕ್ಕಟ್ಟು ಇನ್ನೂ ಮುಗಿದಿಲ್ಲ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಗುರುವಾರ ಹೇಳಿದೆ.
ಸರಾಸರಿಯಾಗಿ, 200 ಕ್ಕೂ ಹೆಚ್ಚು ಸಾಮಾನ್ಯವಾಗಿ ಬಳಸುವ ಸರಕುಗಳು ಮತ್ತು ಸೇವೆಗಳಿಗೆ ಸ್ಥಳೀಯ ಕರೆನ್ಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 7.4 ರಷ್ಟು ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ದಾಖಲೆಯ ಶೇಕಡ 8.1 ರಷ್ಟು ಕುಸಿತವನ್ನು ಕಂಡಿದೆ. ಆದರೂ ಕೂಡಾ "2017-2021 ರಲ್ಲಿನ ಬೆಲೆಗೆ ಹೋಲಿಕೆ ಮಾಡಿದರೆ ಈ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ," ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಹಲವಾರು ವರ್ಗಗಳಲ್ಲಿ ಭಾರೀ ಬೆಲೆ ಏರಿಕೆಯನ್ನು ಕಂಡಿದೆ. ಇದರಿಂದಾಗಿ ಒಂಬತ್ತನೇ ಬಾರಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಾರುಗಳ ಸಂಖ್ಯೆಗಳ ಮೇಲೆ ಕಟ್ಟುನಿಟ್ಟಾದ ಸರ್ಕಾರದ ನಿಯಂತ್ರಣಗಳಿಂದಾಗಿ ನಗರ ರಾಜ್ಯವು ವಿಶ್ವದ ಅತಿ ಹೆಚ್ಚು ಸಾರಿಗೆ ಬೆಲೆಗಳನ್ನು ಹೊಂದಿದೆ. ಬಟ್ಟೆ, ದಿನಸಿ ಮತ್ತು ಮದ್ಯಕ್ಕೆ ಅತೀ ದುಬಾರಿಯಾದ ನಗರ ಇದಾಗಿದೆ.
ಜ್ಯೂರಿಚ್‌ನಲ್ಲಿನ ಬೆಲೆ ಏರಿಕೆಯು ಸ್ವಿಸ್ ಫ್ರಾಂಕ್‌ನ ಬಲವನ್ನು ಪ್ರತಿಬಿಂಬಿಸುತ್ತದೆ. ದಿನಸಿ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆಗಾಗಿ ಹೆಚ್ಚಿನ ಬೆಲೆಗಳನ್ನು ನಾವು ಜ್ಯೂರಿಚ್‌ನಲ್ಲಿ ಕಾಣಬಹುದಾಗಿದೆ ಎಂದು ಅದು ಹೇಳಿದೆ. ಜಿನೀವಾ ಮತ್ತು ನ್ಯೂಯಾರ್ಕ್ ಮೂರನೇ ಸ್ಥಾನದಲ್ಲಿ ಸಮನಾಗಿದೆ. ಹಾಂಗ್ ಕಾಂಗ್ ಐದನೇ ಮತ್ತು ಲಾಸ್ ಏಂಜಲೀಸ್ ಆರನೇ ಸ್ಥಾನದಲ್ಲಿದೆ.
ಏಷ್ಯಾವು ಇತರ ಪ್ರದೇಶಗಳಿಗೆ ಹೋಲಿಸಿದರೆ ಸರಾಸರಿ ಕಡಿಮೆ ಬೆಲೆ ಏರಿಕೆಯನ್ನು ಕಾಣುತ್ತಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಹೇಳಿದೆ. ಚೀನಾದ ನಗರಗಳು ಬೆಲೆ ಏರಿಕೆ ಪಟ್ಟಿಯಲ್ಲಿ ಕುಸಿತವನ್ನು ಕಂಡಿದೆ. ನಾನ್ಜಿಂಗ್, ವುಕ್ಸಿ, ಡೇಲಿಯನ್ ಮತ್ತು ಬೀಜಿಂಗ್ ಎಂಬ ನಾಲ್ಕು ನಗರಗಳು ಮಾತ್ರ ಚೀನಾದಲ್ಲಿ ದುಬಾರಿ ನಗರಗಳಾಗಿದೆ. ಚೀನಾದ ಈ ನಗರಗಳನ್ನು ಹೊರತುಪಡಿಸಿ ಜಪಾನ್‌ನ ಒಸಾಕಾ ಮತ್ತು ಟೋಕಿಯೊ ಈ ವರ್ಷದಲ್ಲಿ ಶ್ರೇಯಾಂಕದಲ್ಲಿ ಕೆಳಗಿಳಿದ ಇತರೆ ನಗರಗಳಾಗಿದೆ.


Click it and Unblock the Notifications