ಈ ಹಿಂದೆ ಸಾಲವನ್ನು ಪಡೆಯುವುದು ಅತೀ ಕಷ್ಟವಾಗಿತ್ತು. ಬ್ಯಾಂಕ್‌ಗೆ ಅಥವಾ ಹಣಕಾಸು ಸಂಸ್ಥೆಗಳಿಗೆ ಹಲವಾರು ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗಿತ್ತು. ಆದರೆ ಈ ಡಿಜಿಟಲ್ ಇಂಡಿಯಾದಲ್ಲಿ ಸಾಲ ಪಡೆಯುವುದು ಕೂಡಾ ಸರಳ, ಸುಲಭವಾಗಿದೆ. ಡಿಜಿಟಲ್ ಆಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಿ, ಸಾಲ ಪಡೆಯಬಹುದು.
ಆದರೆ ನಾವು ಡಿಜಿಟಲ್ ಆಪ್ ಮೂಲಕ ಸಾಲವನ್ನು ಪಡೆಯುವ ಮುನ್ನು ಕೆಲವು ಅಗತ್ಯ ವಿಚಾರಗಳನ್ನು ತಿಳಿದಿರಬೇಕಾಗುತ್ತದೆ. ಈ ಡಿಜಿಟಲ್ ಇಂಡಿಯಾದಲ್ಲಿ ಎಲ್ಲವೂ ಒಂದು ಕ್ಲಿಕ್‌ನಲ್ಲಿ ಆಗುವ ಕೆಲಸಗಳು ಆಗಿದೆ. ಆದರೆ ನಾವು ಏನೇ ಕಾರ್ಯ ಮಾಡುವುದಾದರೂ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅತೀ ಮುಖ್ಯವಾಗಿದೆ.
ಪ್ರಸ್ತುತ ಎಲ್ಲ ಡಿಜಿಟಲ್ ಆಗಿರುವಾಗ ಸಾಲವು ಕೂಡಾ ಡಿಜಿಟಲ್ ಆಪ್‌ಗಳ ಮೂಲಕ ಲಭ್ಯವಾಗುತ್ತದೆ. ದಾಖಲೆಗಳನ್ನು ಕೂಡಾ ಡಿಜಿಟಲ್ ರೂಪದಲ್ಲಿ ನೀಡಬಹುದು ಹಾಗೂ ಅಧಿಕ ದಾಖಲೆಗಳ ಅಗತ್ಯ ಕೂಡಾ ಇರುವುದಿಲ್ಲ. ಆದರೆ ನಾವು ಈ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ನೆನೆಪಿನಲ್ಲಿ ಇಟ್ಟುಕೊಳ್ಳಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ
* ಮೊದಲು ನೀವು ಯಾವೆಲ್ಲ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನೋಡಿಕೊಳ್ಳಬೇಕು. ಎಷ್ಟು ಬಡ್ಡಿದರವಿದೆ, ಎಷ್ಟು ಪ್ರಕ್ರಿಯೆ ಶುಲ್ಕ ಇದೆ, ಅರ್ಜಿ ಶುಲ್ಕ ಎಷ್ಟಿದೆ, ಮರುಪಾವತಿ ತಡವಾಗಿ ಮಾಡಿದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬಂತಹ ಮೊದಲಾದ ಶುಲ್ಕಗಳ ಬಗ್ಗೆ ಮಾಹಿತಿಯನ್ನು ಮುಖ್ಯವಾಗಿ ತಿಳಿದಿರಬೇಕು. ಅದಕ್ಕಾಗಿ ನೀವು ಸಾಲ ಪಡೆಯುವಾಗ ಆಪ್‌ನಲ್ಲಿ ನೀಡಲಾಗುವ ಮಾಹಿತಿಯನ್ನು ಸರಿಯಾಗಿ, ಸೂಕ್ಷ್ಮವಾಗಿ ಓದಬೇಕಾಗುತ್ತದೆ. ಡಿಜಿಟಲ್ ಮೂಲಕ ಸಾಲ ನೀಡುವ ಬ್ಯಾಂಕ್, ಎನ್‌ಬಿಎಫ್‌ಸಿಗಳು ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿರುತ್ತಾರೆ.
* ಸಾಲದ ಮೊತ್ತ, ವಿಮೆ ಶುಲ್ಕ, ಅವಧಿ, ಮರುಪಾವತಿ ಮೊತ್ತ, ಮರುಪಾವತಿ ಅವಧಿ, ಎಷ್ಟು ಇನ್‌ಸ್ಟಾಲ್‌ಮೆಂಟ್, ಸಾಲವನ್ನು ಮೊದಲೇ ಮರುಪಾವತಿ ಮಾಡುವ ಮಾಹಿತಿ, ಎಲ್ಲಿ ಸಾಲವನ್ನು ಶೀಘ್ರ ಮರುಪಾವತಿ ಮಾಡುವುದು, ಹೇಗೆ ಎಂಬ ಮೊದಲಾದ ಮಾಹಿತಿಯನ್ನು ತಿಳಿದುಕೊಳ್ಳಿ.
ಸಾಲ ಮಂಜೂರು ಆದ ಬಗ್ಗೆ ಇಮೇಲ್, ಎಸ್‌ಎಂಎಸ್
* ಸಾಲ ಪಡೆಯುವವರ ನೋಂದಾಯಿತ ಇ-ಮೇಲ್ ಅಥವಾ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಮಂಜೂರು ಮಾಡಲಾಗಿರುವ ಸಾಲದ ಮೊತ್ತದ ಹೇಳಿಕೆ ಅಥವಾ ಸ್ಟೇಟ್‌ಮೆಂಟ್ ಅಥವಾ ಮಾಹಿತಿ ಬರಬೇಕು. ಸಾಲ ಪಡೆದಿರುವವರು ಮಾಡಿದ ಪಾವತಿಗಳನ್ನು ಅಥವಾ ಪಾವತಿಸಿದ ಇಎಂಐಗಳ ಬಗ್ಗೆಯೂ ಇಮೇಲ್ ಅಥವಾ ಎಸ್‌ಎಂಎಸ್ ಕಳುಹಿಸಬೇಕು. ಈ ಬಗ್ಗೆ ಮೊದಲೇ ಖಚಿತಪಡಿಸಿಕೊಳ್ಳಿ.
* ಸಾಲವನ್ನು ಪಡೆದ ಬಳಿಕ ಬಡ್ಡಿದರದೊಂದಿಗೆ ಮರುಪಾವತಿ ಮಾಡಲು ಕೊಂಚ ಸಮಯವನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ದಂಡವನ್ನು ವಿಧಿಸುವಂತಿಲ್ಲ. ಇನ್ನು ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲು ಸಾಲ ಪಡೆದ ಬಳಿಕ ಕೆಲವು ತಿಂಗಳು ಅಥವಾ ವರ್ಷದ ಬಳಿಕ ಅವಕಾಶ ನೀಡಲಾಗುತ್ತದೆ. ಅದಕ್ಕೆ ಕೊಂಚ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನಿಮ್ಮಲ್ಲಿ ಹಣ ಇದ್ದಾಗ ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಲು ಬಯಸಿದರೆ ಬ್ಯಾಂಕ್‌ನಲ್ಲಿ ಸಾಮಾನ್ಯವಾಗಿ ಬ್ಯಾಂಕ್‌ನಲ್ಲಿ ಒಂದು ವರ್ಷದ ಬಳಿಕ ಮಾತ್ರ ಸಾಧ್ಯ.
ಬಡ್ಡಿದರ, ಅವಧಿ ಇತರೆ ಮಾಹಿತಿ ತುಲನೆ ಮಾಡಿಕೊಳ್ಳಿ
* ಡಿಜಿಟಲ್ ಆಪ್ ಮೂಲಕ ಸಾಲವನ್ನು ಪಡೆಯುವಾಗ ಮೊದಲು ಆಪ್‌ಗಳನ್ನು ತುಲನೆ ಮಾಡಿಕೊಳ್ಳಿ. ಯಾವುದರಲ್ಲಿ ಕಡಿಮೆ ಬಡ್ಡಿದರಲ್ಲಿ ಸಾಲ ಲಭ್ಯವಿದೆ, ಯಾವ ಬ್ಯಾಂಕ್ ಉತ್ತಮ ಎಂಬುವುದನ್ನು ನೋಡಿಕೊಳ್ಳಿ. ಅವಧಿ, ನಿಯಮ, ಮರುಪಾವತಿ ಆಯ್ಕೆಯ ತುಲನೆಯನ್ನು ಕೂಡಾ ಮಾಡಿಕೊಳ್ಳಿ.
* ಪ್ರಸ್ತುತ ಆನ್‌ಲೈನ್ ವಂಚನೆಗಳು ಅಧಿಕವಾಗುತ್ತಿದೆ. ಆದ್ದರಿಂದಾಗಿ ನೀವು ಜಾಗರೂಕರಾಗಿರುವುದು ಅತೀ ಮುಖ್ಯ. ಅನಧಿಕೃತ, ವೆರಿಫೈ ಮಾಡದ ಆಪ್‌ಗಳ ಮೂಲಕ ಸಾಲ ಪಡೆಯಲು ಹೋಗದಿರಿ. ಅನಧಿಕೃತ ಡಿಜಿಟಲ್ ಸಾಲದ ಆಪ್‌ಗಳಿಗೆ ನಿಮ್ಮ ವಿಳಾಸ, ಪಿನ್, ಬ್ಯಾಂಕ್ ಮಾಹಿತಿ, ಖಾತೆಯ ಸಂಖ್ಯೆ ಮೊದಲಾದ ಮಾಹಿತಿಯನ್ನು ನೀಡುವಾಗ ಎಚ್ಚರವಾಗಿರಿ.
ಮೂರನೇ ವ್ಯಕ್ತಿಗೆ ಇಲ್ಲ ಎಂಟ್ರಿ
* ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಲು ಅವಕಾಶವಿಲ್ಲ. ಸಾಲದ ಮೊತ್ತವನ್ನು ನೇರವಾಗಿ ಸಾಲ ಪಡೆದಿರುವ ವ್ಯಕ್ತಿಗೆ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಡಿಜಿಟಲ್ ಆಪ್ ಬ್ಯಾಂಕ್ ಮೂಲಕ ಸಾಲವನ್ನು ನೀಡಿದಾಗ ಬ್ಯಾಂಕ್ ಮೂಲಕವೇ ಸಾಲವನ್ನು ನಿಮಗೆ ಜಮೆ ಮಾಡಬೇಕೇ, ಬೇರೆ ಆಪ್ ಮೂಲಕ ಸಾಲವನ್ನು ಜಮೆ ಮಾಡುವಂತಿಲ್ಲ.
* ಸಾಲ ನಮ್ಮ ಹಣಕಾಸು ಬಿಕ್ಕಟ್ಟು ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಸಾಲ ತೀರಾ ಅಗತ್ಯವಾದಾಗ ಪಡೆಯುವುದರಲ್ಲಿ ತೊಂದರೆ ಇಲ್ಲ. ಆದರೆ ಡಿಜಿಟಲ್ ಆಪ್ ಮೂಲಕ ಸಾಲವನ್ನು ಪಡೆಯುವಾಗ ಅತೀ ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿದೆ.


Click it and Unblock the Notifications