ಬೆಂಗಳೂರು, ಜೂನ್ 20: ವಿಮೆ ಮಾಡಿಸಿ ನಿಮ್ಮ ಮನೆಯವರಿಗೆ ಹೇಳಿಲ್ವಾ? ಮುಂದೆ ದೊಡ್ಡ ಸಮಸ್ಯೆ ಕಾದಿರುತ್ತದೆ. ಇದು ನಿಮಗೆ ಮಾತ್ರ ಅಲ್ಲ ಇನ್ಶೂರೆನ್ಸ್ ಕಂಪನಿಗಳಿಗೂ ದೊಡ್ಡ ಸಮಸ್ಯೆಯಾಗಿದೆ. ಇನ್ಶುರೆನ್ಸ್ ಕಂಪನಿಗಳೂ ಈಗ ಬ್ಯಾಂಕ್‌ಗಳ ಹಾಗೆ ಕ್ಲೇಮ್ ಮಾಡದೇ ಇರುವ ಹಣವನ್ನು ತಮ್ಮ ಗ್ರಾಹಕರಿಗೆ ವಾಪಸ್ ಮಾಡುತ್ತವೆ. ಇನ್ಶುರೆನ್ಸ್ ಕಂಪನಿಗಳ ಬಳಿ ಈ ಅನ್‌ಕ್ಲೇಮ್ಡ್ ಹಣ ಹೆಚ್ಚಾಗುತ್ತಲೇ ಇರುವ ಬಗ್ಗೆ ರೆಗ್ಯುಲೇಟರ್ ಮತ್ತು ಸರ್ಕಾರಗಳಿಗೆ ಆತಂಕ ವ್ಯಕ್ತಪಡಿಸಿದೆ.
ಲೈಫ್ ಇನ್ಶುರೆನ್ಸ್ ಕಂಪನಿಗಳ ಬಳಿ ಕ್ಲೇಮ್ ಮಾಡದ ಹಣವೇ 25 ಸಾವಿರ ಕೋಟಿ ರೂ. ಇದೆ. ಇದರಲ್ಲಿ ಅತಿದೊಡ್ಡ ಪಾಲು ಅಂದರೆ 84% ಅಂದರೆ ಸುಮಾರು 21 ಸಾವಿರ ಕೋಟಿ ರೂ. ಎಲ್‌ಐಸಿ ಬಳಿಯೇ ಇದೆ. ಇದರಲ್ಲಿ ಮೆಚ್ಯುರಿಟಿ ಮೊತ್ತ, ಡೆತ್ ಮತ್ತು ಸರ್ವೈವಲ್ ಬೆನಿಫಿಟ್‌ಗಳೂ ಸೇರಿವೆ. ನಿಯಮಗಳ ಪ್ರಕಾರ, ಸೆಟಲ್‌ಮೆಂಟ್ ದಿನಾಂಕದಿಂದ ಆರು ತಿಂಗಳೊಳಗೆ ಕ್ಲೇಮ್ ಮಾಡಿಲ್ಲ ಎಂದಾದರೆ, ಅಂತಹ ಹಣವನ್ನು ಅನ್‌ಕ್ಲೇಮ್ಡ್ ಎಂದು ಕರೆಯಲಾಗುತ್ತದೆ. 1 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ಹಣ ಅನ್‌ಕ್ಲೇಮ್ಡ್ ಆಗಿದ್ದರೆ, ಅಂತಹ ಪಾಲಿಸಿಹೋಲ್ಡರ್‌ಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು IRDA ಹೇಳಿದೆ.

ಈ ಪ್ರಮುಖ ಸೂಚನೆಗಳು ನಮ್ಮ ಮತ್ತು ವಿಮಾ ಕಂಪನಿಗಳ ಗಮನದಲ್ಲಿ ಇರಬೇಕು. ಮೊದಲನೆಯದು, ಪಾಲಿಸಿ ರಿನ್ಯೂವಲ್ ಸಮಯದಲ್ಲಿ ಗ್ರಾಹಕರ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್ ಮತ್ತು ನಾಮಿನಿ ವಿವರವನ್ನು ಇನ್ಶುರೆನ್ಸ್ ಕಂಪನಿಗಳು ಅಪ್‌ಡೇಟ್ ಮಾಡಬೇಕು. ಎರಡನೆಯದು, ಆನ್‌ಲೈನ್‌ನಲ್ಲಿ ಕಾಂಟ್ಯಾಕ್ಟ್ ನಂಬರ್ ಮತ್ತು ಬ್ಯಾಂಕ್ ಡೀಟೇಲ್ಸ್ ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಪಾಲಿಸಿದಾರರಿಗೆ ಇನ್ಶುರೆನ್ಸ್ ಕಂಪನಿಗಳು ನೀಡಬೇಕು. ಅನ್‌ಕ್ಲೇಮ್ಡ್ ಪಾಲಿಸಿಗಳ ಸಂಬಂಧ ಕಸ್ಟಮರ್‌ಗಳಿಗೆ ಕಾಂಟ್ಯಾಕ್ಟ್ ಮಾಡುವುದಕ್ಕೆ ಹಲವು ವಿಧಾನಗಳನ್ನು ಇನ್ಶುರೆನ್ಸ್ ಕಂಪನಿಗಳು ಒದಗಿಸಬೇಕು. ಪಾಲಿಸಿ ಮೆಚ್ಯುರಿಟಿ ದಿನಾಂಕವನ್ನು ಕನಿಷ್ಠ 6 ತಿಂಗಳ ಮೊದಲು ಪಾಲಿಸಿದಾರರಿಗೆ ಕಂಪನಿಗಳು ತಿಳಿಸಬೇಕು. ಪಾಲಿಸಿಹೋಲ್ಡರ್ ಇನ್‌ಕಂಪ್ಲೀಟ್ ಕೆವೈಸಿ ವಿವರಗಳನ್ನು ಇನ್ಶುರೆನ್ಸ್ ಕಂಪನಿಗಳು ಸರಿಪಡಿಸಬೇಕು. ಅಪ್ರಾಪ್ತ ವಯಸ್ಕರ ಕೆವೈಸಿ ಪ್ರೋಸೆಸ್ ಅನ್ನು ಅವರು ಪ್ರಾಪ್ತ ವಯಸ್ಕರಾದ ಮೇಲೆ ಮತ್ತೊಮ್ಮೆ ಮಾಡಬೇಕು.
ಹಾಗಿದ್ದರೆ ಈ ರೀತಿ ಅನ್‌ಕ್ಲೇಮ್ಡ್ ಹಣ ಹೆಚ್ಚಳ ಆಗುತ್ತಿರೋದು ಯಾಕೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಪಾಲಿಸಿ ಮಾರಾಟದ ಸಮಯದಲ್ಲಿ ಇನ್ಶುರೆನ್ಸ್ ಏಜೆಂಟರು ಸಂಪೂರ್ಣ ಮಾಹಿತಿಯನ್ನು ಮತ್ತು ಸರಿಯಾದ ವಿವರವನ್ನು ದಾಖಲಿಸಿರೋದಿಲ್ಲ. ಹಲವರು ಸಂಖ್ಯೆಯ ಜನರು ತಮ್ಮ ವಿಳಾಸ ಮತ್ತು ಮೊಬೈಲ್ ನಂಬರ್ ಬದಲಿಸುತ್ತಿರುತ್ತಾರೆ. ಕೆಲವರು ಇನ್ಶುರೆನ್ಸ್ ಪಾಲಿಸಿ ಖರೀದಿ ಮಾಡಿ, ತಮ್ಮ ಕುಟುಂಬದ ಜೊತೆಗೆ ಡಾಕ್ಯುಮೆಂಟ್ ಹಂಚಿಕೊಂಡಿರುವುದಿಲ್ಲ. ಅಂತಹ ಪಾಲಿಸಿದಾರರು ಸತ್ತಾಗ, ಅವರ ಪ್ಯಾಮಿಲಿ ಮೆಂಬರ್‌ಗೆ ಕ್ಲೇಮ್ ಮಾಡುವುದಕ್ಕೆ ಆಗುವುದಿಲ್ಲ. ತಾನು ನಾಮಿನಿ ಆಗಿರುವ ಒಂದು ಇನ್ಶುರೆನ್ಸ್ ಪಾಲಿಸಿ ಇದೆ ಎಂದೇ ನಾಮಿನಿಗೆ ಗೊತ್ತಿರುವುದಿಲ್ಲ ಅಥವಾ ಅವರ ಬಳಿ ಪಾಲಿಸಿ ಡಾಕ್ಯುಮೆಂಟ್ ಇರುವುದಿಲ್ಲ ಈ ಎಲ್ಲ ಕಾರಣಗಳಿಂದ ಅನ್‌ಕ್ಲೇಮ್ಡ್ ಮೊತ್ತ ಏರುತ್ತಲೇ ಇದೆ.
10 ವರ್ಷಗಳವರೆಗೆ ಒಂದು ಇನ್ಶುರೆನ್ಸ್ ಕಂಪನಿಗೆ ಕ್ಲೇಮ್ ಬಂದಿಲ್ಲ ಎಂದಾದರೆ, ಅದನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿ SCWF ಗೆ ಈ ಹಣ ವರ್ಗಾವಣೆ ಮಾಡಲಾಗುತ್ತದೆ. ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ಸ್ಕೀಮ್‌ಗಳಿಗೆ ಈ ಹಣವನ್ನು ಬಳಸಲಾಗುತ್ತದೆ. ಯಾವುದೇ ಪಾಲಿಸಿದಾರರು ಅಥವಾ ಅವಲಂಬಿತ ಹಿರಿಯ ನಾಗರಿಕರು 25 ವರ್ಷಗಳವರೆಗೆ ಈ ಫಂಡ್‌ಗೆ ವರ್ಗಾವಣೆ ಮಾಡಿದ ಹಣವನ್ನು ಕ್ಲೇಮ್ ಮಾಡಬಹುದು. 25 ವರ್ಷಗಳವರೆಗೂ ಕ್ಲೇಮ್ ಮಾಡದೇ ಉಳಿದರೆ, ಅದನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ.


Click it and Unblock the Notifications