ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, ಗುರುವಾರದಂದು ಮಧ್ಯಂತರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು ಜನವರಿ 31ರಂದು ಆರಂಭವಾಗಲಿದ್ದು, ಈ ಬಜೆಟ್ ಅಧಿವೇಶನದ ಮಹತ್ವದ ಭಾಗವೆಂದರೆ ಆರ್ಥಿಕ ಸಮೀಕ್ಷೆಯಾಗಿದೆ.
ಪ್ರತಿ ವರ್ಷ ಜನವರಿ 31 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಅದಾದ ಬಳಿಕ ಫೆಬ್ರವರಿ ಒಂದರನ್ನು ಕೇಂದ್ರ ಹಣಕಾಸು ಸಚಿವರು ಬಜೆಟ್ ಅನ್ನು ಮಂಡನೆ ಮಾಡುತ್ತಾರೆ. ಆದರೆ ಈ ಬಾರಿ ಯಾಕೆ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡುತ್ತಿಲ್ಲ. ಏನಿದರ ಕಾರಣ ಎಂಬ ವಿವರ ಇಲ್ಲಿದೆ ಮುಂದೆ ಓದಿ....

ಏನಿದು ಆರ್ಥಿಕ ಸಮೀಕ್ಷೆ?
ಆರ್ಥಿಕ ಸಮೀಕ್ಷೆಯು ಕೇಂದ್ರ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಕೇಂದ್ರದಿಂದ ಪ್ರಸ್ತುತಪಡಿಸಲಾಗುವ ದಾಖಲೆಯಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಭಾರತೀಯ ಆರ್ಥಿಕತೆಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಸಮಗ್ರ ವಾರ್ಷಿಕ ವರದಿಯಾಗಿರುತ್ತದೆ. ಭವಿಷ್ಯದ ಉತ್ತಮ ಆರ್ಥಿಕ ದೃಷ್ಟಿಗಾಗಿ ಈ ಹಿಂದಿನ ಎಲ್ಲ ಏರಿಳಿತದ ವಿವರ ಹೊಂದಿರುತ್ತದೆ.
ಬಜೆಟ್ ಮಂಡನೆಯ ಮುನ್ನಾದಿನದಂದು ಮುಖ್ಯ ಆರ್ಥಿಕ ಸಲಹೆಗಾರರು (ಸಿಇಎ) ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸುತ್ತಾರೆ. ಹಿಂದಿನ ಬಜೆಟ್ ಹೇಗೆ ಕಾರ್ಯನಿರ್ವಹಿಸಿತು ಮತ್ತು ಭಾರತೀಯ ಆರ್ಥಿಕತೆಗೆ ಮುಂದೆ ಏನಾಗಬಹುದು ಎಂಬುದರ ಕುರಿತು ಒಳನೋಟಗಳನ್ನು ಇದು ನೀಡುತ್ತದೆ.
ಜನವರಿ 31 ರಂದು ಆರ್ಥಿಕ ಸಮೀಕ್ಷೆ ಏಕಿಲ್ಲ?
ಆರ್ಥಿಕ ಸಮೀಕ್ಷೆಯು ಒಂದು ಹಣಕಾಸು ವರ್ಷದಲ್ಲಿ ಆರ್ಥಿಕ ಏರಿಳಿತ ಎಲ್ಲ ವಿವರವನ್ನು ಒಳಗೊಂಡಿರುತ್ತದೆ. ಆದರೆ ಈ ಬಾರಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣದಿಂದಾಗಿ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ಈ ವರ್ಷ ಆರ್ಥಿಕ ಸಮೀಕ್ಷೆ ಮಂಡಿಸಲಾಗಲ್ಲ. ಪೂರ್ಣ ಪ್ರಮಾಣದ ಬಜೆಟ್ ಇರುವಾಗ ಮಾತ್ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ.
ಸ್ಪಷ್ಟವಾಗಿ ಹೇಳುವುದಾದರೆ ಇದು ಪೂರ್ಣ ಪ್ರಮಾಣದ ಬಜೆಟ್ ಅಧಿವೇಶನವಲ್ಲದ ಕಾರಣ, ಈ ವರ್ಷ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದಿಲ್ಲ. ವಾಸ್ತವವಾಗಿ ಹೇಳುವುದಾದರೆ ಇದು ಮಧ್ಯಂತರ ಬಜೆಟ್ ಆದ ಕಾರಣದಿಂದಾಗಿ ಫೆಬ್ರವರಿ 1 ರಂದು ಯಾವುದೇ ಪ್ರಮುಖ ಘೋಷಣೆಗಳನ್ನು ಅಥವಾ ಯೋಜನೆಗಳಲ್ಲಿ ಬದಲಾವಣೆಗಳನ್ನು ಘೋಷಣೆ ಮಾಡಲಾಗುವುದಿಲ್ಲ.
ಲೋಕಸಭೆ ಚುನಾವಣೆ 2024 ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ. ಅದಕ್ಕಾಗಿಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಬಜೆಟ್ ಅನ್ನು ಮಂಡಿಸುತ್ತಿಲ್ಲ. ಸಂಪೂರ್ಣ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಯನ್ನು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜುಲೈನಲ್ಲಿ ಮಂಡಿಸಲಾಗುತ್ತದೆ.
ಆರ್ಥಿಕ ಸಮೀಕ್ಷೆ ಇಂದು ಮಂಡಿಸಲಾಗದ ಕಾರಣದಿಂದಾಗಿ ಹಣಕಾಸು ಸಚಿವಾಲಯವು ಜನವರಿ 29, ಸೋಮವಾರದಂದು "ಭಾರತೀಯ ಆರ್ಥಿಕತೆ - ಒಂದು ವಿಮರ್ಶೆ" ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಇದು 10 ವರ್ಷಗಳ ಭಾರತೀಯ ಆರ್ಥಿಕತೆಯ ಪ್ರಮುಖ ಮುಖ್ಯಾಂಶಗಳನ್ನು ನೀಡುತ್ತದೆ.
ಮುಂದಿನ 3 ವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು 2030 ರ ವೇಳೆಗೆ 7 ಟ್ರಿಲಿಯನ್ ಡಾಲರ್‌ಗೆ ತಲುಪಬಹುದು ಎಂದು ಭಾರತೀಯ ಆರ್ಥಿಕತೆ-ಎ ರಿವ್ಯೂ ಹೇಳುತ್ತದೆ. ಭಾರತವು ಹಣಕಾಸು ವರ್ಷ 2023ರಲ್ಲಿ 7.2% ಜಿಡಿಪಿ ಬೆಳವಣಿಗೆ ದರವನ್ನು ಮೀರಿಸಲು ಸಿದ್ಧವಾಗಿದೆ ಎಂದು ಹೇಳುತ್ತದೆ.


Click it and Unblock the Notifications