ಕೇಂದ್ರ ಸರ್ಕಾರವು ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ. ಪ್ರಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರಫ್ತಿನ ಮೇಲೆ ನಿರ್ಬಂಧವನ್ನು ವಿಧಿಸಿದೆ.
ಆದರೆ ಇಯು ಹಾಗೂ ಯುಎಸ್‌ಗೆ ರಫ್ತು ಮಾಡುವ ಸಕ್ಕರೆಯ ಮೇಲೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಕೂಡಾ ಈ ಸಂದರ್ಭದಲ್ಲೇ ಸರ್ಕಾರ ಸ್ಪಷ್ಟಪಡಿಸಿದೆ. ಸಿಎಲ್‌ಎಕ್ಸ, ಟಿಆರ್‌ಕ್ಯೂ ಅಡಿಯಲ್ಲಿ ಈ ರಾಷ್ಟ್ರಗಳಿಗೆ ನಿರ್ದಿಷ್ಟ ಪ್ರಮಾಣದ ಸಕ್ಕರೆಯನ್ನು ರಫ್ತು ಮಾಡಲಾಗುತ್ತದೆ. 2021-22 ರ ಸಕ್ಕರೆ ಉತ್ಪಾದನೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ದೇಶದಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತುಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
2021-22 ರ ಸಕ್ಕರೆ ಉತ್ಪಾದನೆ ಋತುವಿನಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 100 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಸಕ್ಕರೆ ರಫ್ತು ಮಾಡಲು ಸರ್ಕಾರವು ನಿರ್ಧರಿಸಿದೆ. ಡಿಜಿಎಫ್‌ಟಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2022 ರಿಂದ ಅಕ್ಟೋಬರ್ 31, 2022 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ನಿರ್ಬಂಧ ಇರಲಿದೆ.
ದಾಖಲೆ ಪ್ರಮಾಣದಲ್ಲಿ ಸಕ್ಕರೆ ರಫ್ತು
ದಾಖಲೆ ಪ್ರಮಾಣದಲ್ಲಿ ಸಕ್ಕರೆ ರಫ್ತು ಮಾಡಲಾಗಿತ್ತು. ಈ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 2017-18, 2018-19 ಮತ್ತು 2019-20 ರ ಸಕ್ಕರೆ ಉತ್ಪಾದನೆ ಮಾಡುವ ಋತುಗಳಲ್ಲಿ ಕ್ರಮವಾಗಿ ಕೇವಲ 6.2 ಲಕ್ಷ ಮೆಟ್ರಿಕ್ ಟನ್, 38 ಎಲ್‌ಎಂಟಿ, 59.60 ಎಲ್‌ಎಂಟಿ ಸಕ್ಕರೆ ರಫ್ತು ಮಾಡಲಾಗಿದೆ. ಆದರೆ 2020-21 ರ ಸಕ್ಕರೆ ಉತ್ಪಾದನೆ ಮಾಡುವ ಋತುವಿನಲ್ಲಿ 60 ಎಲ್‌ಎಂಟಿ ರಫ್ತು ಮಾಡುವ ಗುರಿ ಹೊಂದಲಾಗಿತ್ತು. ಆದರೆ ಸುಮಾರು 70 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಪ್ರಸಕ್ತ 2021-22 ರ ಸಕ್ಕರೆ ಉತ್ಪಾದನೆ ಋತುವಿನಲ್ಲಿ, ಸುಮಾರು 90 ಎಲ್‌ಎಂಟಿ ಮಾಡುವ ಗುರಿ ಹೊಂದಲಾಗಿದೆ. ಇದರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಮಾರು 82 ಲಕ್ಷ ಎಲ್‌ಎಂಟಿ ಮಾಡಲು ಕಾರ್ಖಾನೆಗಳಿಂದ ರವಾನಿಸಲಾಗಿದೆ ಮತ್ತು ಸುಮಾರು 78 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ.
ಮತ್ತೆ ಯಾವಾಗ ಸಕ್ಕರೆ ಉತ್ಪಾದನೆ
ಪ್ರಸಕ್ತ ಸಕ್ಕರೆ ಋತುವಿನ 2021-22 ರಲ್ಲಿ ಸಕ್ಕರೆ ರಫ್ತು ಐತಿಹಾಸಿಕವಾಗಿ ಅತ್ಯಧಿಕವಾಗಿದೆ ಎಂದು ಹೇಳಿಕೆ ತಿಳಿಸಿದೆ. "ಸಕ್ಕರೆ ಉತ್ಪಾದನೆ ಋತುವಿನ ಕೊನೆಯಲ್ಲಿ (30 ಸೆಪ್ಟೆಂಬರ್ 2022) 60-65 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉಳಿಸುವುದನ್ನು ನೋಡಿಕೊಳ್ಳಲಾಗುತ್ತದೆ. ಇದು 2-3 ತಿಂಗಳ ಸ್ಟಾಕ್‌ಗಳು ಆಗಲಿದೆ. ಇದು ದೇಶೀಯ ಬಳಕೆಗೆ ಅವಶ್ಯಕವಾಗಿದೆ," ಎಂದು ಹೇಳಿಕೆ ಉಲ್ಲೇಖ ಮಾಡಿದೆ. ಆದರೆ ವರದಿ ಪ್ರಕಾರ ತಿಂಗಳುಗಳಲ್ಲಿ ಮಾಸಿಕ ಅವಶ್ಯಕತೆ ಸುಮಾರು 24 ಲಕ್ಷ ಮೆಟ್ರಿಕ್ ಟನ್ ಆಗಿದೆ. ಕರ್ನಾಟಕದಲ್ಲಿ ಹೊಸ ಉತ್ಪಾದನೆ ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ಮಹಾರಾಷ್ಟ್ರದಲ್ಲಿ ಹಾಗೂ ನವೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಗುತ್ತದೆ.
ಯಾಕಾಗಿ ಸಕ್ಕರೆ ರಫ್ತಿಗೆ ನಿರ್ಬಂಧ?
"ಸಾಮಾನ್ಯವಾಗಿ, ನವೆಂಬರ್ ವರೆಗೆ, ಹಿಂದಿನ ವರ್ಷದ ಸ್ಟಾಕ್‌ನಿಂದ ಸಕ್ಕರೆ ಪೂರೈಕೆ ನಡೆಯುತ್ತದೆ," ಎಂದು ಸರ್ಕಾರ ಹೇಳಿದೆ. "ಸಕ್ಕರೆ ರಫ್ತಿನಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡು ಬಂದಿದೆ. ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಕಾಯ್ದುಕೊಳ್ಳುವ ಅಗತ್ಯವಾಗಿದೆ. ಸಕ್ಕರೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇಶದ ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಅಗತ್ಯವನ್ನು ಪರಿಗಣಿಸಿ, ಭಾರತ ಸರ್ಕಾರವು ಸಕ್ಕರೆ ರಫ್ತನ್ನು ನಿರ್ಬಂಧಿಸಲು, ನಿಯಂತ್ರಿಸಲು ನಿರ್ಧಾರ ಮಾಡಿದೆ," ಎಂದು ಸರ್ಕಾರ ಹೇಳಿದೆ. ಸಕ್ಕರೆ ಉತ್ಪಾದನೆ, ಬಳಕೆ, ರಫ್ತು ಮತ್ತು ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಬೆಲೆ ಪ್ರವೃತ್ತಿಗಳು ಸೇರಿದಂತೆ ಸಕ್ಕರೆ ವಲಯದ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೂಡಾ ಹೇಳಿಕೆ ಉಲ್ಲೇಖಿಸಿದೆ.
ವಿಶ್ವದಲ್ಲೇ ಅತಿ ಹೆಚ್ಚು ಉತ್ಪಾದನೆ, ರಫ್ತು
ಪ್ರಸಕ್ತ ವರ್ಷದಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಉತ್ಪಾದಕ ಮತ್ತು ಎರಡನೇ ಅತಿ ದೊಡ್ಡ ಸಕ್ಕರೆ ರಫ್ತುದಾರ ದೇಶವಾಗಿದೆ. ಸರ್ಕಾರದ ನಿಯಮಿತ ಪ್ರಯತ್ನದ ಫಲವಾಗಿ ಕಳೆದ 2020-21ನೇ ಸಾಲಿನ ಸಕ್ಕರೆ ಹಂಗಾಮಿನ ಶೇ.99.5ರಷ್ಟು ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ. 2021-22ನೇ ಸಾಲಿನ ಕಬ್ಬಿನ ಬಾಕಿಯ ಶೇ.85ರಷ್ಟು ಹಣವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಸಕ್ಕರೆಯ ಸಗಟು ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ 3,150-3,500 ರೂಗಳ ವ್ಯಾಪ್ತಿಯಲ್ಲಿರುತ್ತವೆ. ಚಿಲ್ಲರೆ ಬೆಲೆಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿ ಕಿಲೋಗ್ರಾಂಗೆ ರೂ 36-44 ರ ವ್ಯಾಪ್ತಿಯಲ್ಲಿದೆ ಎಂದು ಕೂಡಾ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications