ಸದ್ಯ ಇಂದಿನ ಹೆಚ್ಚಿನ ಉದ್ಯಮಿಗಳ ಜೀವನ ಚರಿತ್ರೆಯನ್ನು ನೋಡಿದರೆ ಅವರು ಎಷ್ಟು ಕಷ್ಟ ಪಟ್ಟು ಉದ್ಯಮ ಬೆಳೆಸಿದ್ದರು ಎಂಬುದು ನಮಗೆ ಮನವರಿಕೆಯಾಗುತ್ತದೆ. ಕಠಿಣ ಪರಿಶ್ರಮದ ಮೂಲಕ ಯಾವುದೇ ಸಮಯದಲ್ಲೂ ಎದೆಗುಂದದೆ ಅಂದಿನ ಸವಾಲಿನ ಸಮಯದಲ್ಲೂ ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸಿ, ಅವರು ಮುಂದೆ ಬಂದವರು ಎಂಬುದು ನಮಗೆ ತಿಳಿಯುತ್ತದೆ. ಇದೇ ರೀತಿಯ ಹಲವು ಉದಾಹರಣೆಗಳನ್ನು ಕೂಡ ನಾವು ನೋಡಬಹುದು.
ಸದ್ಯ ಇದೇ ಪಟ್ಟಿಯಲ್ಲಿರುವ ಮತ್ತೊಬ್ಬ ಯಶಸ್ವಿ ಉದ್ಯಮಿ ಎಂದರೆ ವಡಿಲಾಲ್ ಗಾಂಧಿ ಕೂಡ ಸೇರಿದ್ದಾರೆ. ನಾವು ವಾಡಿಲಾಲ್ ಗಾಂಧಿ ಎಂದರೆ ಬಹುಷಃ ಹೆಚ್ಚಿನವರಿಗೆ ಪರಿಚಯ ಸಿಗಲು ಸಾಧ್ಯವಿಲ್ಲ. ಆದರೆ ನಾವು ವಾಡಿಲಾಲ್ ಐಸ್ ಕ್ರೀಂ ಎಂದರೆ ಎಲ್ಲರಿಗೂ ಇವರು ಕಠಿಣ ಪರಿಶ್ರಮದಿಂದ ಸ್ಥಾಪಿಸಿದ ಕಂಪೆನಿ ಬಗ್ಗೆ ಗೊತ್ತಾಗುತ್ತದೆ. ಇಷ್ಟೆಲ್ಲಾ ಪೀಠಿಕೆ ನೀಡಿದ ಮೇಲೆ ನಿಮ್ಮ ಊಹೆ ಸರಿಯಾಗಿಯೇ ಇದೆ.

ಹೌದು, ವಿಶ್ವಪ್ರಖ್ಯಾತ ಐಸ್ ಕ್ರೀಂ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ವಾಡಿಲಾಲ್ ಐಸ್‌ಕ್ರೀಂ ಸ್ಥಾಪಕರಾಗಿರುವ ವಾಡಿಲಾಲ್ ಗಾಂಧಿ ಅವರ ಜೀವನ ಚರಿತ್ರೆ ಓದಿದಾಗ ಅವರ ಆರಂಭಿಕ ಜೀವನ ಎಷ್ಟೊಂದು ಕಠಿಣಕಾರಿಯಾಗಿತ್ತು ಎಂಬುದು ತಿಳಿಯುತ್ತದೆ. ಆರಂಭದಲ್ಲಿ ಬೀದಿ ಬದಿ ವ್ಯಾಪಾರದ ಮೂಲಕ ಉದ್ಯಮ ಆರಂಭಿಸಿದ್ದ ಅವರು ಇಂದು ಬರೊಬ್ಬರಿ 3000 ಕೋಟಿ ರೂ. ಮೌಲ್ಯದ ಸಂಪತ್ತಿಗೆ ಒಡೆಯರಾಗಿದ್ದಾರೆ. ಸದ್ಯ ಅವರ ಯಶಸ್ಸಿನ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಆರಂಭಿಕ ಉದ್ಯಮ ಜೀವನ ಹೇಗಿತ್ತು?
1907 ರಲ್ಲಿ, ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ವಾಡಿಲಾಲ್ ಗಾಂಧಿ ಅವರು ಸ್ವತಂತ್ರ ಭಾರತದ ಪೂರ್ವದಲ್ಲಿ ಅಹಮದಾಬಾದ್‌ನ ಸಣ್ಣ ಫೌಂಟೇನ್ ಸೋಡಾ ಅಂಗಡಿಯಲ್ಲಿ ಸೋಡಾವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಅಂಗಡಿಯು ಗುಜರಾತ್‌ನಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದ್ದಂತೆ ಅವರು ಐಸ್ ಕ್ರೀಂನೊಂದಿಗೆ ಸೋಡಾವನ್ನು ಮಿಶ್ರಣ ಮಾಡುವ ವಿನೂತನ ಪ್ರಯೋಗವನ್ನು ಪ್ರಾರಂಭಿಸಿದರು. ಈ ಮೂಲಕ ಐಸ್ ಕ್ರೀಮ್ ಸೋಡಾದ ಪರಿಕಲ್ಪನೆಯನ್ನು ಅವರು ಜನರಿಗೆ ಪರಿಚಯಿಸಿದರು.
ಆದರೆ ವಡಿಲಾಲ್ ಅವರ ಈ ಅಪೂರ್ವ ಆವಿಷ್ಕಾರವು ಭಾರೀ ಯಶಸ್ವಿಯಾಯಿತು. ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ ವಡಿಲಾಲ್ ಅವರು 1926 ರಲ್ಲಿ, ಅವರು ತನ್ನ ಮೊದಲ ಐಸ್ ಕ್ರೀಮ್ ಔಟ್ಲೆಟ್ ಅನ್ನು ಸ್ಥಾಪಿಸಿದರು. ನಿಧಾನವಾಗಿ ಐಸ್ ಕ್ರೀಂ ಉದ್ಯಮ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಂತೆ ವಡಿಲಾಲ್ ಅವರು ಸಂಸ್ಥೆಯನ್ನು ಪುತ್ರ ರಾಂಚೋಡ್ ಲಾಲ್ ಗಾಂಧಿ ಅವರಿಗೆ ಹಸ್ತಾಂತರಿಸಿದರು. ಯುವಕನಾಗಿದ್ದರೂ ಕೂಡ ರಾಂಚೋಡ್ ಅವರು ಉದ್ಯಮದಲ್ಲಿ ಏನನ್ನಾದರೂ ಸಾಧಿಸುವ ತುಡಿತ ಹೊಂದಿದ್ದರು.
ಇದೇ ಫಲವಾಗಿ ರಾಂಚೋಡ್ ಅವರು ಸ್ವಾತಂತ್ರ್ಯಕ್ಕೂ ಮುನ್ನ ಅವಧಿಯಲ್ಲಿ ಜರ್ಮನಿಯಿಂದ ವಿಶೇಷ ಐಸ್ ಕ್ರೀಂ ಯಂತ್ರವನ್ನು ತರಿಸಿಕೊಂಡು, ಅದರಿಂದಲೇ ಉದ್ಯಮವನ್ನು ಮುಂದುವರೆಸಲು ಆರಂಭಿಸಿದರು. ಇನ್ನು 1970 ರ ಹೊತ್ತಿಗೆ, ರಾಂಚೋಡ್ ಲಾಲ್ ಅವರ ಪುತ್ರರಾದ ರಾಮಚಂದ್ರ ಮತ್ತು ಲಕ್ಷ್ಮಣ್ ಗಾಂಧಿಯವರು ಅಹಮದಾಬಾದ್‌ನಲ್ಲಿ 10 ವಾಡಿಲಾಲ್ ಔಟ್‌ಲೆಟ್‌ಗಳನ್ನು ಸ್ಥಾಪಿಸಿದರು. ಈ ಮೂಲಕ ಗುಜರಾತ್‌ನಲ್ಲಿ ಬ್ರ್ಯಾಂಡ್‌ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಿಕೊಂಡರು.
ಐಸ್ ಕ್ರೀಂನಿಂದ ಬೇರೆ ಉತ್ಪನ್ನಗಳತ್ತ ಗಮನ
ಇನ್ನು ಹೀಗೆ ವರ್ಷದಿಂದ ವರ್ಷಕ್ಕೆ ಉದ್ಯಮದಲ್ಲಿ ಯಶಸ್ಸು ಸಾಧಿಸುತ್ತಲೇ ಹೋದ ಸಂಸ್ಥೆ ಕೇವಲ ವಾಡಿಲಾಲ್ ಐಸ್ ಕ್ರೀಂಗೆ ತನ್ನ ಉದ್ಯಮವನ್ನು ಮೀಸಲು ಇಟ್ಟಿಲ್ಲ. ನಿಧಾನವಾಗಿ ಸಂಸ್ಥೆಯು ಸಂಸ್ಕರಿಸಿದ ಆಹಾರಗಳತ್ತ ಕೂಡ ಗಮನ ಹರಿಸಿತು. ಅಂದರೆ ಮೊದಲೇ ಬೇಯಿಸಿದ ಆಹಾರ ಪದಾರ್ಥಗಳನ್ನು ಕೂಡ ಸಂಸ್ಥೆ ಮಾರಾಟ ಮಾಡಲು ಆರಂಭಿಸಿದ್ದು, ಅದರಲ್ಲೂ ಬ್ರೆಡ್ ಹಾಗೂ ಸಸ್ಯಾಹಾರಿ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿತು.
ಐದನೇ ತಲೆಮಾರಿನ ಕೈಯಲ್ಲಿ ಕಂಪೆನಿ!
ವಾಡಿಲಾಲ್ ಗಾಂಧಿ ಆರಂಭಿಸಿದ್ದ ಕಂಪೆನಿಯನ್ನು ಸದ್ಯ ಐದನೇ ತಲೆಮಾರು ಮುಂದುವರೆಸಿಕೊಂಡು ಹೋಗುತ್ತಿದೆ. ಇಂದು, ಕುಟುಂಬದ ಐದನೇ ತಲೆಮಾರಿನ ಸದಸ್ಯರಾದ ಕಲ್ಪಿತ್ ಗಾಂಧಿ ಅವರು ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕೇವಲ ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಉದ್ಯಮವನ್ನು ವಿಸ್ತರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ವಡಿಲಾಲ್ ಅಮೆರಿಕಾದಲ್ಲೇ ಅತಿ ಹೆಚ್ಚು ಮಾರಾಟವಾಗುವ ಭಾರತೀಯ ಐಸ್‌ಕ್ರೀಂ ಬ್ರ್ಯಾಂಡ್ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದೆ.
ಕಠಿಣ ಪರಿಶ್ರಮ ಹಾಗೂ ಸಾಧಿಸುವ ಇಚ್ಛೆ ಹೊಂದಿದ್ದರೆ ಯಾವ ರೀತಿ ಮುಂದೆ ಬರಬಹುದು ಎಂಬುದನ್ನು ವಾಡಿಲಾಲ್ ಹಾಗೂ ಅವರ ನಂತರದ ತಲೆಮಾರು ಉತ್ತಮ ಉದಾಹರಣೆಯಾಗಿದೆ. 1907 ರಲ್ಲಿ ಬೀದಿ ಬದಿಯ ಸೋಡಾ ಅಂಗಡಿಯಾಗಿ ಅದರ ಸಾಧಾರಣ ಆರಂಭದಿಂದ, ವಡಿಲಾಲ್ ಭಾರತದ ಐಸ್ ಕ್ರೀಮ್ ಮತ್ತು ಸಂಸ್ಕರಿಸಿದ ಆಹಾರ ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿ ಬೆಳೆದಿದೆ. ಕಂಪೆನಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳ ₹ 3,000 ಕೋಟಿಯೊಂದಿಗೆ, ಬ್ರ್ಯಾಂಡ್ ನಾವೀನ್ಯತೆ, ಪರಿಶ್ರಮ ಮತ್ತು ಕುಟುಂಬ-ಚಾಲಿತ ಪರಂಪರೆಯ ಶಕ್ತಿಗೆ ಸಾಕ್ಷಿಯಾಗಿದೆ.


Click it and Unblock the Notifications