ನವದೆಹಲಿ, ಜೂನ್ 15: ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಘಟ್ಟ. ವಿವಾಹಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಆದರೆ ಕೊನೆ ಕ್ಷಣದಲ್ಲಿ ಅನಿವಾರ್ಯ ಕಾರಣದಿಂದ ವಿವಾಹ ಮುಂದಕ್ಕೆ ಹೋಗುತ್ತದೆ. ಇದೊಂದು ಆಘಾತವೇ ಸರಿ. ಆದರೆ ಇಂಥ ಸಂದರ್ಭದಲ್ಲಿ ಎದುರಾಗುವ ಹಣಕಾಸು ಮುಗ್ಗಟ್ಟು ಎದುರಿಸಲು ಒಂದು ಉಪಾಯ ಇದೆ. ಅದುವೆ ಮ್ಯಾರೆಜ್ ಇನ್ಶೂರೆನ್ಸ್.
ವಿವಾಹ ಹಠಾತ್ ರದ್ದಾಗುವುದು, ಅಮೂಲ್ಯ ಸಾಮಗ್ರಿಗಳ ಕಳ್ಳತನ, ಅಪಘಾತ ಮತ್ತು ನೈಸರ್ಗಿಕ ವಿಕೋಪದಂತಹ ಅಪಾಯಗಳನ್ನು ಕವರ್ ಮಾಡಲು ಮದುವೆ ವಿಮೆ ಒಂದು ಉತ್ತಮ ಆಯ್ಕೆ. ವಿವಾಹ ಎಂಬುದು ಜೀವನದ ಒಂದು ಘಟನೆ. ಇದರಲ್ಲಿ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಈ ಶುಭ ಸಂದರ್ಭದಲ್ಲಿ, ಎಲ್ಲರೂ ತಮ್ಮ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ. ಹಲವು ಕುಟುಂಬಗಳು ಮದುವೆಗೆ ಅಂತ ಒಂದು ಅಥವಾ ಎರಡು ವರ್ಷಗಳಷ್ಟು ಮೊದಲಿನಿಂದಲೇ ಶಾಪಿಂಗ್ ಮಾಡುತ್ತಾರೆ. ಹೋಟೆಲ್, ಕೇಟರಿಂಗ್ ಮತ್ತು ಬ್ಯೂಟಿಶಿಯನ್‌ಗಳನ್ನು ತಿಂಗಳುಗಳ ಮೊದಲೇ ಬುಕ್ ಮಾಡುತ್ತಾರೆ.

ವಿವಾಹದ ತಯಾರಿಯಲ್ಲಿ ಕಳ್ಳತನ, ದರೋಡೆ, ಅಗ್ನಿ ಆಕಸ್ಮಿಕ ಅಥವಾ ಅಪಘಾತ ಘಟಿಸಿದರೆ, ಕುಟುಂಬಗಳು ದೊಡ್ಡ ವಿಪತ್ತನ್ನು ಎದುರಿಸಬೇಕಾಗುತ್ತದೆ.ವಿವಾಹ ವಿಮೆ ಇಂತಹ ನಷ್ಟಗಳನ್ನು ಭರಿಸುತ್ತದೆ. ವಿವಾಹಕ್ಕೆ ಸಾಮಾನ್ಯವಾಗಿ ಹೆಚ್ಚೆಂದರೆ 20-30 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಇದರ 1-1.5 ಪರ್ಸೆಂಟ್ ವೆಚ್ಚ ಮಾಡಿದರೆ, ಹಲವು ರೀತಿಯ ಚಿಂತೆಗಳನ್ನು ನೀವು ನಿವಾರಿಸಿಕೊಳ್ಳಬಹುದು. ಈ ಮದುವೆ ಖರ್ಚಿನ ಸಣ್ಣ ಮೊತ್ತವನ್ನು ಪ್ರೀಮಿಯಂ ಆಗಿ ಕಟ್ಟಿದರೆ ನೀವು ಎಲ್ಲ ಚಿಂತೆಗಳಿಂದ ದೂರವಾಗಬಹುದು.
ಕಾನೂನು ಅಥವಾ ಅಪರಾಧದ ಘಟನೆಗಳಿಂದ ವಿವಾಹದ ಸ್ಥಳಕ್ಕೆ ಆಗುವ ಹಾನಿಯನ್ನು ಈಗ ವಿಮೆ ಕವರ್‌ನಲ್ಲಿ ಸೇರಿಸಲಾಗಿದೆ. ಆಭರಣ, ಬಟ್ಟೆಗಳು ಅಥವಾ ಇತರ ಅಮೂಲ್ಯ ಐಟಂಗಳು ಕಳ್ಳತನವಾದರೆ ಆ ನಷ್ಟಕ್ಕೆ ವಿಮೆ ಕಂಪನಿ ಮರುಪಾವತಿ ಮಾಡುತ್ತದೆ. ಮಳೆ, ಪ್ರವಾಹ ಅಥವಾ ಭೂಕಂಪದಿಂದಾಗಿ ಹಾನಿಯಾದರೆ, ಅದನ್ನೂ ಕವರ್ ಮಾಡಲಾಗಿದೆ. ವಿವಾಹ ವಿಮೆ ಪಾಲಿಸಿಗಳಲ್ಲಿ ವೈಯಕ್ತಿಕ ಅಪಘಾತ ಕವರ್ ಸಹ ಇದೆ. ಈ ಪಾಲಿಸಿಯಲ್ಲಿ ಸೇರಿರುವ ಎಲ್ಲರಿಗೂ ಪರಿಹಾರ ಸಿಗುತ್ತದೆ. ಅವರಿಗೆ ಗಾಯವಾದರೆ, ಅಂಗವೈಕಲ್ಯ, ಮರಣಕ್ಕೂ ಪರಿಹಾರ ಇದೆ.
ವಿವಾಹ ವಿಮೆ ಪಾಲಿಸಿಗಳಲ್ಲಿ ಕೆಲವು ಷರತ್ತುಗಳೂ ಇವೆ. ಇಂತಹ ಷರತ್ತುಗಳನ್ನು ಮುಂದಿಟ್ಟು ನಿಮ್ಮ ಕ್ಲೇಮ್ ಅನ್ನು ವಿಮೆ ಕಂಪನಿಗಳು ತಿರಸ್ಕರಿಸಬಹುದು. ಯಾವುದೇ ವಿವಾದ ಅಥವಾ ವಾಗ್ವಾದದ ಕಾರಣಕ್ಕೆ ವಿವಾಹ ಕಾರ್ಯಕ್ರಮ ರದ್ದಾದರೆ, ಆಗ ಉಂಟಾದ ನಷ್ಟವನ್ನು ವಿಮೆ ಕಂಪನಿ ಮರುಪಾವತಿ ಮಾಡುವುದಿಲ್ಲ. ವಿವಾಹದ ಸಮಯದಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಹಾನಿ ಮಾಡಿದ್ದರೂ ಕೂಡ ಪರಿಹಾರ ಸಿಗುವುದಿಲ್ಲ. ಆತ್ಮಹತ್ಯೆ ಅಥವಾ ಆತ್ಮಹತ್ಯೆ ಯತ್ನ, ಸ್ವಯಂ ಹಾನಿ ಇತ್ಯಾದಿಯೂ ಈ ವಿಮೆ ಪಾಲಿಸಿ ಅಡಿಯಲ್ಲಿ ಕವರ್ ಆಗಿರುವುದಿಲ್ಲ. ವಿವಾಹ ವಿಮೆ ಖರೀದಿಗೂ ಮುನ್ನ ಸಕಲ ಷರತ್ತುಗಳನ್ನು ಸಮಗ್ರವಾಗಿ ತಿಳಿದುಕೊಂಡು ಹೆಜ್ಜೆ ಇಡಬೇಕು.


Click it and Unblock the Notifications