ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ದಿಂದ ಮಾರ್ಚ್ 9, 2022ರಂದು UPI 123Pay ಅನ್ನು ಪ್ರಾರಂಭಿಸಿದೆ. ಇದು ಫೀಚರ್ ಫೋನ್ ಹೊಂದಿರುವವರಿಗೆ ಯುಪಿಐ ಬಳಸಲು ಅನುಮತಿಸುವ ಸೇವೆಯಾಗಿದೆ; ಇದು ಇಂಟರ್ನೆಟ್ ಇಲ್ಲದೆ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. UPI123PAY ಫೀಚರ್ ಫೋನ್‌ಗಳಿಗಾಗಿ ಅಗತ್ಯವಿರುವ ಎಲ್ಲ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಉಪಕ್ರಮವು ಡಿಜಿಟಲ್ ಪಾವತಿಗಳನ್ನು ಉನ್ನತ ಮಟ್ಟಕ್ಕೆ ಸುಧಾರಿಸುತ್ತದೆ, ನಗದು ರಹಿತ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ. "UPI123Pay ಮತ್ತು DigiSaathi ಎಂಬ ಎರಡು ಉಪಕ್ರಮಗಳನ್ನು ಮಾರ್ಚ್ 9ನೇ ತಾರೀಕಿನ ಬುಧವಾರದಂದು ಪ್ರಾರಂಭಿಸಲಾಗಿದೆ.
ಇವೆರಡೂ ಪಾವತಿಗಳ ಎಕೋ ಸಿಸ್ಟಮ್ಗೆ ಎರಡು ವೈವಿಧ್ಯಮಯ, ಆದರೆ ಮಹತ್ವದ ಆಯಾಮಗಳನ್ನು ಪ್ರತಿನಿಧಿಸುತ್ತವೆ. UPI123Payನಲ್ಲಿ ವಹಿವಾಟುಗಳನ್ನು ಪೂರ್ಣಗೊಳಿಸಲು ಬಳಕೆದಾರರು ತೆಗೆದುಕೊಳ್ಳಬೇಕಾದ ಮೂರು ಹಂತಗಳಿವೆ. UPI123Pay ಎಂಬುದರ ಉದ್ದೇಶವು ಫೀಚರ್ ಫೋನ್‌ಗಳ ಮೂಲಕ ಆನ್‌ಬೋರ್ಡ್ ಡಿಜಿಟಲ್ ಅನುಭವವನ್ನು ಪಡೆಯಲು ಹೆಚ್ಚಿನ ಜನರನ್ನು ಸಿದ್ಧಗೊಳಿಸುವುದಾಗಿದೆ. ಡಿಜಿಟಲ್ ಪಾವತಿ ಎಕೋ ಸಿಸ್ಟಮ್ನಲ್ಲಿ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್‌ಸಾಥಿ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. "UPI123Pay ಪ್ರಾರಂಭವು UPI ಅಡಿಯಲ್ಲಿನ ಸೌಲಭ್ಯಗಳನ್ನು ಇದುವರೆಗೆ ಡಿಜಿಟಲ್ ಪಾವತಿ ಲ್ಯಾಂಡ್‌ಸ್ಕೇಪ್‌ನಿಂದ ಹೊರಗಿಡಲಾಗಿದ್ದ ಸಮಾಜದ ವರ್ಗಕ್ಕೆ ಸಂಪರ್ಕಿಸುವಂತೆ ಮಾಡುತ್ತದೆ. ಆ ರೀತಿಯಲ್ಲಿ ಅದು ನಮ್ಮ ಆರ್ಥಿಕತೆಯಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತಿದೆ," ಎಂದು ಅವರು ಹೇಳಿದ್ದಾರೆ.
UPI123PAY ಬಳಸುವುದು ಹೇಗೆ?
40 ಕೋಟಿಗೂ ಹೆಚ್ಚು ಭಾರತೀಯರು ಫೀಚರ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಅವರಿಗೆ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಆರ್‌ಬಿಐ ಡಿಜಿಟಲ್ ಪಾವತಿ ವಿಧಾನವನ್ನು ಪ್ರಾರಂಭಿಸಿದ್ದು, ಫೀಚರ್ ಫೋನ್ ಹೊಂದಿರುವವರು ಈಗ ಡಿಜಿಟಲ್ ಪಾವತಿ ವಿಧಾನಗಳನ್ನು ಸಹ ಪ್ರವೇಶಿಸಬಹುದು. ಫೀಚರ್ ಫೋನ್ ಹೊಂದಿರುವವರು ವಹಿವಾಟು ನಡೆಸಲು ಡಿಜಿಟಲ್ ವಿಧಾನಗಳನ್ನು ಬಳಸಲು ಅನುಮತಿಸಲು ಸಾಮಾನ್ಯ ಸರ್ವರ್ ಸೈಟ್ ಲೈಬ್ರರಿಯನ್ನು ಸೃಷ್ಟಿಸಲಾಗಿದೆ.

- 123PAY ವೈಶಿಷ್ಟ್ಯದೊಂದಿಗೆ ಆನ್‌ಲೈನ್ ವಹಿವಾಟು ನಡೆಸಲು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಅಲ್ಲದೆ, ಈ ಸೇವೆಯನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಪಡೆಯಬಹುದು.
- ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್ ಹೊಂದಿರುವವರು ಹೊಸ ಸೌಲಭ್ಯದೊಂದಿಗೆ ಈಗ ಸುಲಭವಾಗಿ ಡಿಜಿಟಲ್ ವಹಿವಾಟು ಮಾಡಬಹುದು.
- ಫೀಚರ್ ಫೋನ್‌ಗಾಗಿ UPI ಅಂದರೆ, UPI123Pay ಮೂರು-ಹಂತದ ಪ್ರಕ್ರಿಯೆಯಾಗಿದೆ - ಕರೆ ಮಾಡಿ, ಆಯ್ಕೆಮಾಡಿ ಮತ್ತು ಪಾವತಿಸಿ.
- ಪಾವತಿಯನ್ನು ಮಾಡಲು ಪ್ರಾರಂಭಿಸುವ ಮೊದಲು ಬಳಕೆದಾರರು ಖಾತೆಯನ್ನು ಫೀಚರ್ ಫೋನ್‌ನೊಂದಿಗೆ ಜೋಡಣೆ ಮಾಡಬೇಕಾಗುತ್ತದೆ.
- ಬಳಕೆದಾರರು ಡೆಬಿಟ್ ಕಾರ್ಡ್ ಬಳಸಿ, UPI ಪಿನ್ ಅನ್ನು ಹೊಂದಿಸಬೇಕಾಗುತ್ತದೆ.
- ಒಮ್ಮೆ UPI ಪಿನ್ ಹೊಂದಿಸಿದರೆ ಬಳಕೆದಾರರು ಸ್ಮಾರ್ಟ್‌ಫೋನ್ ಬಳಕೆದಾರರಂತೆ ವಹಿವಾಟು ನಡೆಸಲು ಫೀಚರ್ ಫೋನ್ ಅನ್ನು ಬಳಸಬಹುದು.
- ಫೀಚರ್ ಫೋನ್ ಬಳಕೆದಾರರು ಐವಿಆರ್ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ ಮತ್ತು ಹಣ ವರ್ಗಾವಣೆ, ಎಲ್‌ಪಿಜಿ ಗ್ಯಾಸ್ ರೀಫಿಲ್, ಫಾಸ್ಟ್‌ಟ್ಯಾಗ್ ರೀಚಾರ್ಜ್, ಮೊಬೈಲ್ ರೀಚಾರ್ಜ್, ಬ್ಯಾಲೆನ್ಸ್ ಚೆಕ್ ಮುಂತಾದ ಅಗತ್ಯ ಇರುವ ಸೇವೆಯನ್ನು ಅವಲಂಬಿಸಿ ಫೋನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ.
- ಹಣವನ್ನು ವರ್ಗಾಯಿಸಲು, ಯಾರಿಗೆ ಹಣವನ್ನು ವರ್ಗಾಯಿಸಬೇಕೋ ಅವರ ಫೋನ್ ಸಂಖ್ಯೆಯನ್ನು ಒಬ್ಬರು ಆಯ್ಕೆ ಮಾಡಬೇಕಾಗುತ್ತದೆ, ಮೊತ್ತ ಮತ್ತು UPI ಪಿನ್ ಅನ್ನು ನಮೂದಿಸಿ.
- ವ್ಯಾಪಾರಿಗೆ ಪಾವತಿಸಲು, ಅವರು ಅಪ್ಲಿಕೇಷನ್ ಆಧಾರಿತ ಪಾವತಿ ವಿಧಾನ ಅಥವಾ ಮಿಸ್ಡ್ ಕಾಲ್ ಪಾವತಿ ವಿಧಾನವನ್ನು ಬಳಸಬಹುದು.
- ಡಿಜಿಟಲ್ ಪಾವತಿಗಳನ್ನು ಮಾಡಲು ಬಳಕೆದಾರರು ಧ್ವನಿ ಆಧಾರಿತ ವಿಧಾನವನ್ನು ಸಹ ಬಳಸಬಹುದು.
ಆರ್‌ಬಿಐ ಪತ್ರಿಕಾ ಪ್ರಕಟಣೆ ಪ್ರಕಾರ, UPI123Pay ಕೆಳಗಿನಂತೆ ನಾಲ್ಕು ವಿಭಿನ್ನ ಆಯ್ಕೆಗಳನ್ನು ಒಳಗೊಂಡಿದೆ:
ಎ. ಅಪ್ಲಿಕೇಷನ್ ಆಧಾರಿತ ಕಾರ್ಯನಿರ್ವಹಣೆ: ಫೀಚರ್ ಫೋನ್‌ನಲ್ಲಿ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಲಾಗುವುದು, ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಹಲವಾರು UPI ಕಾರ್ಯಗಳನ್ನು ಫೀಚರ್ ಫೋನ್‌ಗಳಲ್ಲಿಯೂ ಲಭ್ಯ ಆಗುವಂತೆ ಮಾಡುತ್ತದೆ.
ಬಿ. ಮಿಸ್ಡ್ ಕಾಲ್: ವ್ಯಾಪಾರಿ ಔಟ್‌ಲೆಟ್‌ನಲ್ಲಿ ಪ್ರದರ್ಶಿಸಲಾದ ಸಂಖ್ಯೆಗೆ ಮಿಸ್ಡ್ ಕಾಲ್ ಡಯಲ್ ಮಾಡುವ ಮೂಲಕ ಫೀಚರ್ ಫೋನ್ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಮತ್ತು ಸ್ವೀಕಾರ, ಹಣ ವರ್ಗಾವಣೆ, ನಿಯಮಿತ ಖರೀದಿಗಳು, ಬಿಲ್ ಪಾವತಿಗಳು ಮತ್ತು ಮುಂತಾದ ದಿನನಿತ್ಯದ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಗ್ರಾಹಕರು ತಮ್ಮ UPI ಪಿನ್ ಅನ್ನು ನಮೂದಿಸುವ ಮೂಲಕ ವಹಿವಾಟನ್ನು ಖಚಿತಪಡಿಸಲು ಕೇಳುವ ಒಳಬರುವ ಕರೆಯನ್ನು ಸ್ವೀಕರಿಸುತ್ತಾರೆ.
ಸಿ. ಇಂಟರ್-ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR): ಪೂರ್ವ-ನಿರ್ಧಾರಿತ IVR ಸಂಖ್ಯೆಗಳ ಮೂಲಕ UPI ಪಾವತಿಯು ಬಳಕೆದಾರರು ತಮ್ಮ ಫೀಚರ್ ಫೋನ್‌ಗಳಿಂದ ಪೂರ್ವ-ನಿರ್ಧಾರಿತ ಸಂಖ್ಯೆಗೆ ಸುರಕ್ಷಿತ ಕರೆಯನ್ನು ಪ್ರಾರಂಭಿಸುವ ಅಗತ್ಯವಿರುತ್ತದೆ ಮತ್ತು ಅವರು ಇಂಟರ್ನೆಟ್ ಇಲ್ಲದೆ ಹಣಕಾಸಿನ ವಹಿವಾಟುಗಳನ್ನು ಪ್ರಾರಂಭಿಸುವ ಮೊದಲು UPI ಆನ್-ಬೋರ್ಡಿಂಗ್ ಔಪಚಾರಿಕತೆ ಪೂರ್ಣಗೊಳಿಸಬೇಕಾಗುತ್ತದೆ.
ಡಿ. ಪ್ರಾಕ್ಸಿಮಿಟಿ ಸೌಂಡ್-ಆಧಾರಿತ ಪಾವತಿಗಳು: ಯಾವುದೇ ಸಾಧನದಲ್ಲಿ ಸಂಪರ್ಕರಹಿತ, ಆಫ್‌ಲೈನ್ ಮತ್ತು ಸಾಮೀಪ್ಯ ಡೇಟಾ ಸಂವಹನವನ್ನು ಸಕ್ರಿಯಗೊಳಿಸಲು ಈ ತಂತ್ರಜ್ಞಾನವು ಧ್ವನಿ ತರಂಗಗಳನ್ನು (ಪ್ರಾಕ್ಸಿಮಿಟಿ ಸೌಂಡ್) ಬಳಸಿಕೊಳ್ಳುತ್ತದೆ.


Click it and Unblock the Notifications