ನವದೆಹಲಿ, ಜೂನ್ 14: ಕ್ರೆಡಿಟ್ ಕಾರ್ಡ್ ಮತ್ತು ಅದರಿಂದ ಸಿಗುವ ಲಾಭಗಳ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಆಡ್ ನ್ ಕ್ರೆಡಿಟ್ ಕಾರ್ಡ್ ಬಗ್ಗೆ ಹಲವರಿಗೆ ಗೊತ್ತಿರಲು ಸಾಧ್ಯವಿಲ್ಲ. ಹಾಗಿದ್ದರೆ ಈ ಆಡ್ ಆನ್ ಕ್ರೆಡಿಟ್ ಕಾರ್ಡ್ ಎಂದರೆ ಏನು? ಎನ್ನುವುದನ್ನು ನಾವು ತಿಳಿದುಕೊಳ್ಳೋಣ.
ನೀವು ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವುದನ್ನು ಕಂಡ ನಿಮ್ಮ ಹೆಂಡತಿಯೋ, ಮಗನೋ ತನಗೂ ಒಂದು ಕ್ರೆಡಿಟ್ ಕಾರ್ಡ್ ಬೇಕು ಎಂದು ದುಂಬಾಲು ಬೀಳಬಹುದು. ಆ ಸಂದರ್ಭದಲ್ಲಿ ಈ ಆಡ್ ಆನ್ ಕ್ರೆಡಿಟ್ ಕಾರ್ಡ್ ನಿಮ್ಮ ನೆರವಿಗೆ ಬರುತ್ತದೆ.

ಆಡ್-ಆನ್ ಕ್ರೆಡಿಟ್ ಕಾರ್ಡ್ ಅನ್ನು ಪೂರಕ ಕಾರ್ಡ್ ಅಥವಾ ಸೆಕೆಂಡರಿ ಕಾರ್ಡ್ ಎಂದು ಸಹ ಕರೆಯಲಾಗುತ್ತದೆ. ಇದು ವಾಸ್ತವವಾಗಿ ನಿಮ್ಮ ಪ್ರಾಥಮಿಕ ಕ್ರೆಡಿಟ್ ಕಾರ್ಡ್‌ನ ವಿಸ್ತರಣೆ ಎಂದೇ ಹೇಳಬಹುದು. ಅಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಜೊತೆಗೆ ನೀವು ಇನ್ನೊಂದು ಕಾರ್ಡ್ ಅನ್ನು ತೆಗೆದುಕೊಳ್ಳಬಹುದು. ಹೊಸದಾಗಿ ಪಡೆದುಕೊಂಡ ಕಾರ್ಡ್ ಆಡ್-ಆನ್ ಕ್ರೆಡಿಟ್ ಕಾರ್ಡ್ ಆಗಿರುತ್ತದೆ. ಮೂಲ ಕಾರ್ಡ್ ಹೊಂದಿರುವ ವ್ಯಕ್ತಿ ತಮ್ಮ ಕ್ರೆಡಿಟ್ ಲೈನ್ ಅಥವಾ ಲಿಮಿಟ್ ನ್ನು ಆಡ್ ಆನ್ ಕಾರ್ಡ್ ಪಡೆದವರ ಜತೆ ಶೇರ್ ಮಾಡಿಕೊಳ್ಳಬಹುದು.
ಪಡೆದುಕೊಂಡ ಹೆಚ್ಚುವರಿ ಕಾರ್ಡ್ ಸಹ ಮುಖ್ಯ ಕಾರ್ಡ್‌ನಂತೆಯೇ ಕ್ರೆಡಿಟ್ ಮಿತಿ ಹೊಂದಿರುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಬ್ಯಾಂಕಿನ ಜಂಟಿ ಖಾತೆಯಂತೆ ಕೆಲಸ ಮಾಡುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಆಡ್-ಆನ್ ಕ್ರೆಡಿಟ್ ಕಾರ್ಡ್ ನಿಮ್ಮ ಹಣಕಾಸಿನ ನಿರ್ವಹಣೆ ಸುಲಭಗೊಳಿಸುತ್ತದೆ. ಮಲ್ಟಿಪಲ್ ಕಾರ್ಡ್ ಅಕೌಂಟ್ ಇಲ್ಲದೆ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವೈಯಕ್ತಿಕ ಖರ್ಚಿಗೆ ಮಿತಿ ಹೊಂದಿಸಲು ಸಹಾಯ ಮಾಡುತ್ತದೆ.
ಈ ಸೌಲಭ್ಯವು ವಿಶೇಷವಾಗಿ ಪೋಷಕರಿಗೆ ಪ್ರಯೋಜನಕಾರಿಯಾಗಿದೆ. ತಮ್ಮ ಮಕ್ಕಳಿಗೆ ಹಣ ನೀಡಲು ಒಂದು ಕಡೆ ಆಸಕ್ತಿ ಇದ್ದು ಅವರ ವೆಚ್ಚದ ಮೇಲೆ ನಿಯಂತ್ರಣವೂ ಇರಬೇಕು ಎನ್ನುವವರಿಗೆ ಬೆಸ್ಟ್ ಆಪ್ಶನ್. ಅಲ್ಲದೆ ಪ್ರತಿ ಆಡ್-ಆನ್ ಕ್ರೆಡಿಟ್ ಕಾರ್ಡ್‌ನಲ್ಲಿ ಖರ್ಚಿನ ಮಿತಿ ಕಸ್ಟಮೈಸ್ ಮಾಡಬಹುದು . ಅಂದರೆ, ನೀವು ನಿಮ್ಮ ಆಯ್ಕೆಯ ಪ್ರಕಾರ ಅದನ್ನು ಹೊಂದಿಸಬಹುದು. ಇದು ಕುಟುಂಬದ ಯಾವುದೇ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ನೀವು ಪ್ರತಿ ವ್ಯವಹಾರವನ್ನು ಟ್ರ್ಯಾಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಯಾರು ಎಲ್ಲಿ ಮತ್ತು ಯಾವ ವಸ್ತುವಿಗೆ ಎಷ್ಟು ಖರ್ಚು ಮಾಡುತ್ತಿದ್ದಾರೆಂದು ನಿಮಗೆ ತಿಳಿಯುತ್ತದೆ. ಅಲ್ಲದೇ ಆಡ್ ಆನ್ ಕಾರ್ಡ್ ಪಡೆದ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಿಲ್ಡ್ ಮಾಡಲು ಕಾರಣವಾಗುತ್ತದೆ.
ಕಾರ್ಡ್‌ನ ಸರಿಯಾದ ಬಳಕೆ ಮತ್ತು ಸಮಯೋಚಿತ ಪಾವತಿಯು ಪ್ರಾಥಮಿಕ ಮತ್ತು ದ್ವಿತೀಯ ಕಾರ್ಡ್ ಹೊಂದಿರುವವರ ಕ್ರೆಡಿಟ್ ಸ್ಕೋರ್ ಪಾಸಿಟಿವ್ ಆಗಲು ಕಾರಣವಾಗುತ್ತದೆ. ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ವಿಶೇಷ ಪ್ರಯೋಜನ ನೀಡುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಇದೊಂದು ಲೈಫ್ ಪೈನ್ ರೀತಿ ಕೆಲಸ ಮಾಡುತ್ತದೆ. ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಅಥವಾ ಎಲ್ಲೋ ಪ್ರಯಾಣಿಸುತ್ತಿದ್ದರೆ ಅಥವಾ ಹಠಾತ್ ಹಣದ ತುರ್ತು ಪರಿಸ್ಥಿತಿ ಎದುರಾದರೆ ಈ ಕಾರ್ಡ್ ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ.
ಕಾರ್ಡ್ ಪಡೆದುಕೊಳ್ಳುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ಬ್ಯಾಂಕ್‌ನ ವೆಬ್ ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಆಡ್ ಆನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯಲ್ಲಿ ಪ್ರಾಥಮಿಕ ಮತ್ತು ಆಡ್ ಆನ್ ಕಾರ್ಡ್ ಬೇಕಾದವರಿಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಭರ್ತಿ ಮಾಡಬೇಕಿರುತ್ತದೆ. ಎಲ್ಲ ದಾಖಲೆ ಸಬ್ ಮಿಟ್ ಮಾಡಿದ ಮೇಲೆ ಬ್ಯಾಂಕ್ ನಿಂದ ಅಪ್ರೂವಲ್ ಸಿಗುತ್ತದೆ. ಈ ಎಲ್ಲ ಪ್ರಕ್ರಿಯೆ ನಂತರ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ನಿಮ್ಮ ಫ್ಯಾಮಿಲಿ ಸದಸ್ಯರಿಗೆ ಅಗತ್ಯವಿದ್ದರೆ ಈ ರೀತಿ ನೀವು ಆಡ್-ಆನ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು.


Click it and Unblock the Notifications