ಇಸ್ಲಾಮಿಕ್ ಬ್ಯಾಂಕಿಂಗ್ ಅಥವಾ ಇಸ್ಲಾಮಿಕ್ ಫೈನಾನ್ಸ್ ಎಂಬ ಪದಗಳನ್ನು ಕೇಳಿದ್ದೀರಾ? ಹೀಗಂದರೆ, ಯಾವುದೇ ಬ್ಯಾಂಕಿಂಗ್ ಅಥವಾ ಹಣಕಾಸಿನ ವ್ಯವಹಾರವನ್ನು ಇಸ್ಲಾಮಿಕ್ ಕಾನೂನು ಅಥವಾ ಶರಿಯಾಗೆ ಗೌರವ ನೀಡಿ, ನಡೆಸುವುದು.
ಇಸ್ಲಾಮಿಕ್ ಫೈನಾನ್ಸ್ ಗೆ ಅಬ್ಬಬ್ಬ ಅಂದರೆ ಮೂವತ್ತು ವರ್ಷಗಳ ಇತಿಹಾಸ ಇದೆ. ಅರವತ್ತು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಂಥ ಸಂಸ್ಥೆಗಳ ಒಟ್ಟು ವ್ಯವಹಾರ ಎರಡೂ ಕಾಲು ಲಕ್ಷ ಕೋಟಿ ಡಾಲರ್ ನಷ್ಟು ಇರಬಹುದು.
ಇಸ್ಲಾಮಿಕ್ ಆರ್ಥಿಕ ವಲಯದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳದೇ ಮಹತ್ತರ ಪಾತ್ರ. ಅವುಗಳ ಆಸ್ತಿ ಮೌಲ್ಯ ಒಂದೂವರೆ ಲಕ್ಷ ಕೋಟಿ ಅಮೆರಿಕನ್ ಡಾಲರ್ ಗಳಷ್ಟಿರಬಹುದು. ಮುಂದಿನ ಎರಡು ವರ್ಷಗಳಲ್ಲಿ ಮೂರೂವರೆ ಲಕ್ಷ ಕೋಟಿ ಡಾಲರ್ ಗೆ ಈ ಆಸ್ತಿ ಮೌಲ್ಯ ಏರಿಕೆ ಆಗಬಹುದು ಎಂಬ ನಿರೀಕ್ಷೆಯಂತೂ ಇದೆ.

ಜಾಗತಿಕ ಆರ್ಥಿಕ ಆಸ್ತಿ ಪ್ರಮಾಣದಲ್ಲಿ ಇಸ್ಲಾಮಿಕ್ ಫೈನಾನ್ಸ್ ನ ಪಾಲು ಒಂದು ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚು, ಅಷ್ಟೇ. ಆದರೆ ಇದರ ವಾರ್ಷಿಕ ಬೆಳವಣಿಗೆ ದರ ಹತ್ತರಿಂದ ಹನ್ನೆರಡು ಪರ್ಸೆಂಟ್ ಇದೆ. ಸಾಂಪ್ರದಾಯಿಕ ಆರ್ಥಿಕ ವ್ಯವಹಾರಗಳಿಗಿಂತ ವೇಗವಾಗಿ ಇದು ಬೆಳೆಯುತ್ತಿದೆ. ಕೆಲವು ದೇಶಗಳಲ್ಲಂತೂ ಇಸ್ಲಾಮಿಕ್ ಬ್ಯಾಂಕ್ ಗಳು ಮುಸ್ಲಿಮ್ ಗ್ರಾಹಕರನ್ನು ಸೆಳೆಯುತ್ತಿದೆ.
ಹಾಗಿದ್ದರೆ ಇಸ್ಲಾಮಿಕ್ ಫೈನಾನ್ಸ್ ಯಶಸ್ಸಿನ ಹಿಂದಿನ ಕಾರಣ ಏನು? ಇಸ್ಲಾಮಿಕ್ ಫೈನಾನ್ಸ್ ಯಾವ ಕಾರಣಗಳಿಗೆ ವಿಶೇಷ? ಯಾವ ಕಾರಣಕ್ಕಾಗಿ ಇಷ್ಟು ವೇಗವಾಗಿ ಬೆಳೆಯುತ್ತಿದೆ?
ಬಡ್ಡಿರಹಿತ ಸಾಲ ವಿತರಣೆ
ಇಸ್ಲಾಮಿಕ್ ಫೈನಾನ್ಸ್ ನ ಮುಖ್ಯ ನಿಯಮ ಏನೆಂದರೆ, ಬಡ್ಡಿಯನ್ನು ಪಡೆಯುವಂತಿಲ್ಲ ಹಾಗೂ ಪಾವತಿಸುವಂತಿಲ್ಲ. ಶರಿಯಾ ಕಾನೂನಿನ ಪ್ರಕಾರ ನಡೆಯುವ ಬ್ಯಾಂಕ್ ಗಳು ಬಡ್ಡಿ ಆಧಾರಿತವಾದ ಸಾಲವನ್ನು ನೀಡುವುದಿಲ್ಲ.
ಹಾಗಿದ್ದರೆ ಇಸ್ಲಾಮಿಕ್ ಬ್ಯಾಂಕ್ ಗಳು ಹೇಗೆ ಹಣ ಸಂಪಾದಿಸುತ್ತವೆ ಎಂಬ ಪ್ರಶ್ನೆ ಮೂಡುತ್ತದೆ. ಆ ಕಾರಣಕ್ಕೆ ಗ್ರಾಹಕರಿಗೆ ಹಣ ನೀಡಿ, ಲಾಭ ಮಾಡುವ ಬದಲಿಗೆ ಮನೆ, ಕಾರು, ರೆಫ್ರಿಜರೇಟರ್ ನಂಥದ್ದನ್ನು ಖರೀದಿ ಮಾಡಲಾಗುತ್ತದೆ. ಅವುಗಳನ್ನು ಭೋಗ್ಯಕ್ಕೆ, ಕಂತುಗಳ ಆಧಾರದಲ್ಲಿ ಗ್ರಾಹಕರಿಗೆ ಮರು ಮಾರಾಟ ಮಾಡಲಾಗುತ್ತದೆ. ಆ ವಸ್ತುಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಲಾಗುತ್ತದೆ. ಅಂದರೆ ಗ್ರಾಹಕರ ಜತೆಗೆ ಅವರ ರಿಸ್ಕ್ ಹಂಚಿಕೊಳ್ಳಲಾಗುತ್ತದೆ. ಪ್ರತಿಯಾಗಿ ಆ ವ್ಯವಹಾರದಲ್ಲಿ ಲಾಭ ಮಾಡಲಾಗುತ್ತದೆ.
ಬಡ್ಡಿಯನ್ನು ವಸೂಲಿ ಮಾಡುವ ಬದಲಿಗೆ ಇಸ್ಲಾಮಿಕ್ ಬ್ಯಾಂಕ್ ಗಳು ಗ್ರಾಹಕರ ಹಣವನ್ನು ಆಸ್ತಿ ಖರೀದಿಗೆ, ವ್ಯಾಪಾರಕ್ಕೆ ಬಳಸುತ್ತವೆ. ಸಾಲವನ್ನು ಸಂಪೂರ್ಣ ಹಿಂತಿರುಗಿಸಿದ ಮೇಲೆ ಲಾಭವನ್ನು ಪಡೆಯುತ್ತವೆ. ಅಂದ ಹಾಗೆ, ಎಲ್ಲ ಇಸ್ಲಾಮಿಕ್ ಆರ್ಥಿಕ ಹೂಡಿಕೆಗಳು, ಖರೀದಿ, ವ್ಯವಹಾರಗಳಲ್ಲಿ ಇಸ್ಲಾಮಿಕ್ ಮೌಲ್ಯಗಳನ್ನು ಅನುಸರಿಸಬೇಕು. ಮದ್ಯದ ಉತ್ಪಾದನೆ, ಹಂದಿ ಸಾಕಣೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಅಥವಾ ಜೂಜು ನಿಷಿದ್ಧ.
ಶರಿಯಾ ಕಾನೂನಿನ ಪ್ರಕಾರ ಹಣದಿಂದ ಹಣ ಮಾಡುವುದು ತಪ್ಪು. ಆದೇ ರೀತಿ ಸಟ್ಟಾ ವ್ಯವಹಾರ ಕೂಡ ಮಾಡುವಂತಿಲ್ಲ. ಫ್ಯೂಚರ್ ಅಂಡ್ ಆಪ್ಷನ್ ವ್ಯವಹಾರದಲ್ಲಿ ಕೂಡ ಪಾಲ್ಗೊಳ್ಳುವಂತಿಲ್ಲ. ಈ ಕಾರಣಕ್ಕೆ 2008ರ ಆರ್ಥಿಕ ಹಿಂಜರಿತದ ಹೊಡೆತ ಇಸ್ಲಾಮಿಕ್ ಬ್ಯಾಂಕ್ ಗಳಿಗೆ ಬೀಳಲಿಲ್ಲ.


Click it and Unblock the Notifications