ಬೆಂಗಳೂರು, ಜುಲೈ 5: ಕೂಡಲೇ ಹಣ ಮಾಡಲು ಪ್ರೇರೇಪಿಸುವ ಯೋಜನೆಗಳು ನಿಮ್ಮನ್ನು ನಷ್ಟದ ಕೂಪಕ್ಕೆ ದೂಡಬಹುದು. ಅಂಥದ್ದೆ ಒಂದು ಸ್ಕೀಂ ಎಂದರೆ ಪಿರಮಿಡ್ ಸ್ಕೀಂ. ಸರಳವಾಗಿ ಹೇಳಬೇಕು ಎಂದರೆ ನೀವು ಸದಸ್ಯರಾಗಿ, ನಿಮ್ಮ ಸ್ನೇಹಿತರನ್ನು ಸದಸ್ಯರನ್ನಾಗಿ ಮಾಡಿ ಎನ್ನುತ್ತ ಹಣ ದೋಚುವ ಸ್ಕೀಂ!
ಮೆಂಬರ್ ಅಗಿ ಒಂದಿಷ್ಟು ಹಣ ಹೂಡಿಕೆ ಮಾಡಿದರೆ ಸಾಕು. ನಿಮಗೆ ಒಂದಿಷ್ಟು ಉತ್ಪನ್ನ ನೀಡಲಾಗುತ್ತದೆ. ಉತ್ಪನ್ನಗಳ ಮಾರಾಟ ಆರಂಭವಾಗುತ್ತಿದ್ದ ಹಾಗೇ ನಮಗೆ ಪ್ರಾಫಿಟ್ ಸಿಗುತ್ತದೆ. ಇದು ಹೂಡಿದಾರರ ರಿಟರ್ನ್. ಪ್ರತಿದಿನ ಐನೂರು ರೂಪಾಯಿಯಿಂದ ಸಾವಿರ ರೂಪಾಯಿ ಸಿಗುತ್ತಾ ಹೋಗುತ್ತದೆ. ಈ ಮೊತ್ತ ಕ್ರಮೇಣ ಜಾಸ್ತಿಯಾಗುತ್ತದೆ ಎಂದು ನಿಮ್ಮನ್ನು ನಂಬಿಸುತ್ತಾರೆ.

ಇದನ್ನು ಪಿರಮಿಡ್ ಇನ್ವೆಸ್ಟ್ ಮೆಂಟ್ ಸ್ಕೀಂ ಅಥವಾ ಪೋನ್ಝೀ ಸ್ಕೀಮ್ ಅಂತಾನೂ ಕರೆಯುತ್ತಾರೆ. ಆರಂಭದಲ್ಲಿ ನಿಮಗೆ ಒಂದಿಷ್ಟು ಹಣ ಸಿಗುತ್ತದೆ. ಕ್ರಮೇಣ ನೀವು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸದಸ್ಯರನ್ನ ಸೇರಿಸಬೇಕು ಎಂದು ಹೇಳಲಾಗತ್ತದೆ. ಈ ಸ್ಕೀಂ ಗಳು ವಂಚನೆ ಮಾಡೋ ಸ್ಕೀಂ ಗಳಷ್ಟೇ. ಹೊಸ ಹೊಸ ಸದಸ್ಯರನ್ನ ಸೇರ್ಪಡೆ ಮಾಡೋದಷ್ಟೇ. ರಿಟರ್ನ್ಸ್ ಇರಲಿ ಪ್ರಿನ್ಸಿಪಲ್ ಮೊತ್ತ ಅಂದ್ರೆ ನೀವು ಹಾಕಿರೋ ಹಣ ಕೂಡ ಸಿಗೋದಿಲ್ಲ.
ಹೆಚ್ಚಿನ ರಿಟರ್ನ್ಸ್ ಆಮಿಷ ಒಡ್ಡಿ ನಿಮ್ಮನ್ನ ಸದಸ್ಯರಾಗಿ ಸೇರ್ಪಡೆ ಮಾಡಿಕೊಂಡ ಮೇಲೆ ರಾತ್ರೋ ರಾತ್ರಿ ಆ ಸ್ಕೀಂ ಗಳು ಕಣ್ಮರೆಯಾಗಿಬಿಡುತ್ತವೆ.
ಪ್ರಸ್ತುತ ಅಂತಹ 4 ಸಾವಿರ ವಂಚಕ ಸ್ಕೀಂ ಗಳು ಕಾರ್ಯಾಚರಣೆಯಲ್ಲಿವೆ. ಇಂತಹ ವಂಚಕ ಸ್ಕೀಂ ಗಳ ಬಗ್ಗೆ ಸ್ಟ್ಯಾಟೆಜಿ ಇಂಡಿಯಾ ಸ್ಕ್ಯಾಮ್ ಅಲರ್ಟ್ ಕೂಡ ಕೊಟ್ಟಿತ್ತು. ಇವುಗಳ ಜಾಡು ಹಿಡಿಯೋದು ಸುಲಭ ಅಲ್ಲ. ಅವುಗಳ ಆಫೀಸ್ ಅಥವಾ ಕಾರ್ಯಾಚರಣೆ ಸ್ಥಳ ಇರೋದಿಲ್ಲ.. ಅಥವಾ ಸಂಪರ್ಕ ಸಂಖ್ಯೆ ಇರೋದಿಲ್ಲ.. ಹೀಗಾಗಿ ಪತ್ತೆ ಮಾಡೋದು ತುಂಬಾನೇ ಕಷ್ಟ.
ಈ ಸ್ಕೀಂ ಗಳು ಮನಿ ಸರ್ಕ್ಯುಲೇಷನ್ ನೆಟ್ ವರ್ಕ್ ಮೇಲೆ ಅವಲಂಬಿತವಾಗಿರುತ್ತವೆ. ಈ ಸ್ಕೀಂ ನಡೆಸುತ್ತಾ ಇರುವವರು ಪ್ರಸ್ತುತ ಇರೋ ಹೊಸ ಹೂಡಿಕೆದಾರರಿಂದ ಸಂಗ್ರಹಿಸುವ ಹಣದಲ್ಲಿ ಹಿಂದಿನ ಹೂಡಿಕೆದಾರರಿಗೆ ಹಣ ಪಾವತಿಸುತ್ತಾ ಬರುತ್ತಾರೆ. ಅವರಿಗೆ ಲಾಭ ಗಳಿಸಲು ಬೇರೆ ಯಾವುದೇ ಮಾರ್ಗಗಳಿಲ್ಲ. ಅವರು ಗ್ರಾಹಕ ಸಂರಕ್ಷಣಾ ಕಾಯ್ದೆಯ ಲೋಪದೋಷಗಳ ದುರ್ಬಳಕೆ ಮಾಡುತ್ತಾ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಕಂಪೆನಿಗಳು ಕಡಿಮೆ ಆದಾಯದವರನ್ನ ಗುರಿಯಾಗಿಸಿ ಹೆಚ್ಚಿನ ರಿಟರ್ನ್ ಗಳ ಆಮಿಷ ಒಡ್ಡಿ ಅವರನ್ನ ಸೆಳೆಯುವ ಕೆಲಸ ಮಾಡುತ್ತವೆ. ಹೂಡಿಕೆ ಬರುವುದು ನಿಲ್ಲುತ್ತಿದ್ದ ಹಾಗೇ ಈ ಜನರು ಕಣ್ಮರೆಯಾಗ್ತಾರೆ, ಹೂಡಿಕೆದಾರರ. ಹಣದೊಂದಿಗೆ ಪರಾರಿಯಾಗಿಬಿಡುತ್ತಾರೆ.
ಈ ಸ್ಕೀಂಗಳಿಗೆ ಸಂಬಂರಧಿಸಿದ ಕಾನೂನುಗಳು ಸಮರ್ಪಕವಾಗಿಲ್ಲದ ಕಾರಣ ವಂಚಕರ ಕೈ ಮೇಲಾಗುತ್ತದೆ. ನೀವೇ ಹಣ ಹೂಡಿಕೆ ಮಾಡುವಂತಹ ಸ್ಥಿತಿ ಸೃಷ್ಟಿಸಿರುತ್ತಾರೆ. ನಿಮ್ಮಿಂದಲೇ ಇನ್ವೆಸ್ಟ್ ಮೆಂಟ್ ಮಾಡಲಾಗಿದೆ. ನೀವೇ ಸ್ವಯಂ ಒಪ್ಪಿಗೆಯಿಂದ ಮಾಡಿದ್ದೀರಾ ಎಂದು ತೋರಿಸುವುದರಿಂದ ನಿಮಗೆ ಪರಿಹಾರ ಸಹ ಸಿಗುವುದು ಕಷ್ಟ. ಇಂಥವರಿಂದ ಬಚಾವಾಗಲು ಎಚ್ಚರಿಕೆಯೊಂದೇ ಮಾರ್ಗ. ಇಂಥ ಸ್ಕೀಂ ಗಳಲ್ಲಿ ನಿಮ್ಮ ಹಣ ತೊಡಗಿಸುವ ಮುನ್ನ ನೂರು ಸಲ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ.


Click it and Unblock the Notifications