For Quick Alerts
ALLOW NOTIFICATIONS  
For Daily Alerts

ಎಲ್ಲಿಂದ ಶುರು ಮಾಡಬೇಕು ಉಳಿತಾಯ? ಹಣ ಉಳಿಸುವುದಕ್ಕೆ ಸರಳ ಸೂತ್ರಗಳು

By ಅನಿಲ್ ಆಚಾರ್
|

ಉಳಿತಾಯ ಅನ್ನೋದು ಬಹಳ ಸುಲಭಕ್ಕೆ ರೂಢಿಸಿಕೊಳ್ಳಲು ಸಾಧ್ಯವಾಗದ ಹಾಗೂ ತುಂಬ ಉಪಯೋಗಕ್ಕೆ ಬರುವ ಹವ್ಯಾಸ. ಈಗಿನ ಹೊಸ ತಲೆಮಾರಿನವರಿಗೆ ಉಳಿತಾಯವನ್ನು ಎಲ್ಲಿಂದ ಶುರು ಮಾಡಬೇಕು ಎಂಬ ಬಗ್ಗೆಯೇ ಕೊಂಚ ಗೊಂದಲ ಇರುತ್ತದೆ. ಈ ಕಾರಣಕ್ಕೆ ಉಳಿತಾಯ ಮಾಡುವುದೇ ಇಲ್ಲ.

ಆದ್ದರಿಂದಲೇ ಈ ಲೇಖನದಲ್ಲಿ ಎಲ್ಲಿಂದ ಉಳಿತಾಯ ಶುರು ಮಾಡಬೇಕು ಎಂಬ ಬಗ್ಗೆ ಸುಲಭವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ನಿಮಗೆ ನಿಜವಾಗಿಯೂ ಉಪಯೋಗವಾಯಿತಾ ಎಂಬುದನ್ನು ನಮಗೆ ನಿಮ್ಮ ಕಾಮೆಂಟ್ ಮೂಲಕ ಫೇಸ್ ಬುಕ್ ನಲ್ಲಿ ತಿಳಿಸಿ.

ಹಣಕಾಸು ಹೂಡಿಕೆ ಪಾಠ ಕಲಿಯಲು MoneyFLIX 'ಸಿನಿಮಾ'ಹಣಕಾಸು ಹೂಡಿಕೆ ಪಾಠ ಕಲಿಯಲು MoneyFLIX 'ಸಿನಿಮಾ'

ಎಲ್ಲಾದರೂ ಒಂದು ಕೆಲಸ ಮಾಡುತ್ತಿದ್ದಲ್ಲಿ ಒಂದು ಸ್ಯಾಲರಿ ಸೇವಿಂಗ್ಸ್ ಅಕೌಂಟ್ ಇರುತ್ತದೆ. ಇನ್ನು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಮತ್ತಿತರ ಕಾರಣಗಳಿಗಾಗಿ ಒಂದು ಉಳಿತಾಯ ಖಾತೆಯೂ ಇದ್ದಿರಬಹುದು. ಅಂದಹಾಗೆ ಸ್ಯಾಲರಿ ಸೇವಿಂಗ್ಸ್ ಖಾತೆ ಇದ್ದಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು ಎಂಬ ಕಡ್ಡಾಯ ಏನಿಲ್ಲ. ಆದರೆ ಉಳಿತಾಯ ಖಾತೆ ಇದ್ದಲ್ಲಿ ನಗರ, ಪಟ್ಟಣ ಅಥವಾ ಹಳ್ಳಿ- ಹೀಗೆ ಎಲ್ಲಿ ಖಾತೆ ತೆರೆದಿದ್ದೀರಿ ಎಂಬ ಆಧಾರದಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟಿರಲೇಬೇಕು.

ಮನೆಯ ಹತ್ತಿರದ ಬ್ಯಾಂಕ್ ನಲ್ಲೇ ಖಾತೆ ತೆರೆಯಿರಿ

ಮನೆಯ ಹತ್ತಿರದ ಬ್ಯಾಂಕ್ ನಲ್ಲೇ ಖಾತೆ ತೆರೆಯಿರಿ

ಉಳಿತಾಯ ಖಾತೆಯೊಂದನ್ನು ತೆರೆಯುವುದು ಆರಂಭಿಕ ಹೆಜ್ಜೆ. ಮನೆಗೆ ಬಹಳ ಹತ್ತಿರ ಇರುವಲ್ಲೇ ಅಕೌಂಟ್ ಆರಂಭಿಸಿ. ಅದಕ್ಕೆ ಎಟಿಎಂ ಕಾರ್ಡ್ ಪಡೆದುಕೊಳ್ಳಬೇಡಿ. ಚೆಕ್ ಬುಕ್ ಇರಲಿ, ಪರವಾಗಿಲ್ಲ. ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇರಲಿ. ಆದರೆ ಇಷ್ಟೆಲ್ಲದರ ಜತೆಗೆ ಆ ಉಳಿತಾಯ ಖಾತೆಗೆ ಹೆಚ್ಚಿನ ಬಡ್ಡಿ ದರ ಕೊಡ್ತಾರಾ ಎಂಬುದರ ಕಡೆಗೂ ಗಮನ ಇರಲಿ. ಏಕೆಂದರೆ ಹಲವು ಬ್ಯಾಂಕ್ ಗಳಲ್ಲಿ ಬಡ್ಡಿ ದರ ಬಹಳ ಕಡಿಮೆ ಇದೆ. ಕೆಲವು ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗೇ ನೀಡುವ ಬಡ್ಡಿಯೇ ಎಫ್.ಡಿ. ಬಡ್ಡಿ ದರಕ್ಕೆ ಸಮನಾಗಿದೆ. ಆದ್ದರಿಂದ ನಿಮ್ಮ ಉಳಿತಾಯ ಪ್ರವೃತ್ತಿಯು ಉಳಿತಾಯ ಖಾತೆ ಜತೆಗೆ ಶುರು ಮಾಡಿ. ಸಾಧ್ಯವಾದಲ್ಲಿ ಅದರ ಜತೆಗೊಂದು ಆರ್.ಡಿ. (ರೆಕರಿಂಗ್ ಡೆಪಾಸಿಟ್) ಕಟ್ಟಿ. ಮೊತ್ತ ಅದೆಷ್ಟು ಕಡಿಮೆಯಾದರೂ ಪರವಾಗಿಲ್ಲ. ಮೊದಲಿಗೆ ಉಳಿತಾಯ ಪ್ರವೃತ್ತಿ ಆರಂಭವಾಗಬೇಕು. ಆದ್ದರಿಂದ ಇವೆರಡು ಬಹಳ ಮುಖ್ಯವಾಗುತ್ತದೆ. ಅವೆರಡೂ ನಿಮ್ಮಲ್ಲೊಂದು ಶ್ರದ್ಧೆ ಮೂಡಿಸಿದ ಮೇಲೆ ಮುಂದಿನ ಹಂತಕ್ಕೆ ಹೆಜ್ಜೆ ಇಡಿ.

ನಿಮ್ಮ ಹಣವು ಮತ್ತಷ್ಟು ಹಣ ದುಡಿಯುವುದು ಮನವರಿಕೆ

ನಿಮ್ಮ ಹಣವು ಮತ್ತಷ್ಟು ಹಣ ದುಡಿಯುವುದು ಮನವರಿಕೆ

ಉಳಿತಾಯ ಖಾತೆ, ಆರ್.ಡಿ. ಇವೆರಡೂ ತುಂಬ ಹಳೆಯ ಮಾದರಿ ಹಾಗೂ ಅಷ್ಟೇನೂ ಲಾಭ ತಂದುಕೊಡದಂಥವೇ ಆಗಿದ್ದರೂ ಶಿಸ್ತನ್ನು ರೂಢಿಸಿಕೊಳ್ಳಲು ಬಹಳ ಮುಖ್ಯವಾಗುತ್ತದೆ. ಅದರ ಮುಂದಿನ ಹಂತವೇ ಎಫ್.ಡಿ. ಖಾತೆ. ಕನಿಷ್ಠ ಐದು ಸಾವಿರ ರುಪಾಯಿಯಿಂದ ಎಫ್.ಡಿ. ಮಾಡುವುದನ್ನು ರೂಢಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಅವಧಿಗೆ ಮುನ್ನ ಅದನ್ನು ಮುರಿಸಬೇಡಿ. ನಿಮ್ಮ ಹಣವು ಹೇಗೆ ಇನ್ನಷ್ಟು ಹಣವನ್ನು ಅಪಾಯವೇ ಇಲ್ಲದೆ ದುಡಿಯುತ್ತದೆ ಎಂಬುದು ಮನವರಿಕೆ ಆಗುತ್ತದೆ. ಸಾಧ್ಯವಾದಷ್ಟೂ ಎಫ್ ಡಿ ಮೊತ್ತವನ್ನು ಇನ್ನಷ್ಟು, ಮತ್ತಷ್ಟು ಸೇರಿಸುತ್ತಾ ಅದನ್ನು ಮುರಿಸದೆ ಜೋಪಾನ ಮಾಡಿ. ಈ ಎಲ್ಲ ಖಾತೆಗೂ ಅದೆಷ್ಟು ಕನಿಷ್ಠ ಮಟ್ಟದ ಉಳಿತಾಯ ಮಾಡಿದರೂ ಅಡ್ಡಿಯಿಲ್ಲ. ಆದರೆ ನಿಮಗೆ ಆರಂಭಿಕ ಹಂತದಲ್ಲೇ ಉಳಿತಾಯದ ಬಗ್ಗೆ ಜುಗುಪ್ಸೆ ಬರುವಂತೆ ಆಗಬಾರದು. ಆ ಕಾರಣಕ್ಕೆ ದುಡಿಮೆಯ ಸ್ವಲ್ಪ ಮೊತ್ತವನ್ನು ಮಾತ್ರವೇ ಹಾಕುತ್ತಾ ಬನ್ನಿ.

ಅಪಾಯ ಎಷ್ಟಿದೆ ಎಂಬ ಅಳತೆ ಮಾಡಬೇಕು

ಅಪಾಯ ಎಷ್ಟಿದೆ ಎಂಬ ಅಳತೆ ಮಾಡಬೇಕು

ಈ ಮೂರೂ ಹಂತ ದಾಟಿದ ಮೇಲೆ ಬ್ಯಾಂಕ್ ವ್ಯವಹಾರಗಳ ಅರಿವು, ಜ್ಞಾನ ಬೆಳೆದಿರುತ್ತದೆ. ನಿಯಮಗಳು ಹಾಗೂ ಮತ್ತಿತರ ಸಾಧ್ಯತೆಗಳ ಬಗ್ಗೆ ಗೊತ್ತಾಗಿರುತ್ತದೆ. ಆಗ ಮ್ಯೂಚುವಲ್ ಫಂಡ್ ಗಳ ಮೇಲೆ ಹಣ ಹೂಡಿಕೆ ಆರಂಭಿಸಬಹುದು. ಆಗ ಕೂಡ ಕಲಿಕೆಯ ಹಂತದಲ್ಲಿ ಹೆಚ್ಚು ಅಪಾಯ ಇಲ್ಲದ ಬ್ಯಾಂಕ್ ಡೆಪಾಸಿಟ್ ಗಳಿಗಿಂತ ಉತ್ತಮ ರಿಟರ್ನ್ಸ್ ನೀಡುವಂಥದ್ದನ್ನು ಮತ್ತು ಆದಾಯ ತೆರಿಗೆ ಲಾಭ ನೀಡುವಂಥದ್ದನ್ನು ಆರಿಸಿಕೊಳ್ಳಿ. ಆರ್ಥಿಕ ಸಲಹೆಗಾರರ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ. ಇದರ ಜತೆಗೆ ಹಣಕಾಸು ವಿಷಯಗಳ ಬಗ್ಗೆ ಸುದ್ದಿ ಪ್ರಕಟಿಸುವ, ಆಯ್ಕೆಗಳನ್ನು ತಿಳಿಸುವ ವೆಬ್ ಸೈಟ್ ಮತ್ತಿತರ ಮಾಧ್ಯಮಗಳನ್ನು ಸಹ ಫಾಲೋ ಮಾಡಿ. ಆಗ ಮ್ಯೂಚುವಲ್ ಫಂಡ್, ಎನ್ ಸಿಡಿ, ಡಿಬೆಂಚರ್, ಪರ್ಪೆಚುವಲ್ ಫಂಡ್, ಕರೆನ್ಸಿಗಳು ಸೇರಿದಂತೆ ಹಣಕಾಸು ಹೂಡಿಕೆಯ ನಾನಾ ಸಾಧ್ಯತೆಗಳು ಮತ್ತು ಅಲ್ಲಿನ ಅವಕಾಶ- ಅಪಾಯಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ. ಆ ನಂತರ ಎಷ್ಟು ರಿಟರ್ನ್ಸ್ ನಿರೀಕ್ಷೆ ಮಾಡುತ್ತೀರಿ ಹಾಗೂ ಅಪಾಯ ಎಷ್ಟಿದೆ ಎಂಬ ತುಲನೆ ಮಾಡಿ, ನಿಮ್ಮ ಹಣವನ್ನು ತೊಡಗಿಸಬಹುದು.

ಪೋರ್ಟ್ ಫೋಲಿಯೋ ಮಾಡಿಕೊಳ್ಳಬೇಕು

ಪೋರ್ಟ್ ಫೋಲಿಯೋ ಮಾಡಿಕೊಳ್ಳಬೇಕು

ಅಲ್ಲಿಂದ ಮುಂದಿನ ಹಂತವೇ ಪೋರ್ಟ್ ಫೋಲಿಯೋ. ಹಾಗೆಂದರೆ ನೀವು ಹತ್ತು ಲಕ್ಷ ರುಪಾಯಿ ಹಣ ಇಟ್ಟುಕೊಂಡಿದ್ದೀರಿ ಅಂದುಕೊಳ್ಳೋಣ. ಅದನ್ನು ಈಕ್ವಿಟಿ ಷೇರು, ಚಿನ್ನ, ರಿಯಲ್ ಎಸ್ಟೇಟ್, ಮ್ಯೂಚುವಲ್ ಫಂಡ್, ಎಫ್ ಡಿ ಹೀಗೆ ವಿವಿಧೆಡೆ ಹೂಡಿಕೆ ಮಾಡುವುದಕ್ಕೆ ಪೋರ್ಟ್ ಫೋಲಿಯೋ ಅನ್ನುತ್ತಾರೆ. ಹೀಗೆ ಏಕೆ ಮಾಡುತ್ತಾರೆ ಅಂದರೆ, ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಚಿನ್ನದ ಬೆಲೆ ಇಳಿಯುತ್ತದೆ. ಅದೇ ಷೇರು ಮಾರ್ಕೆಟ್ ಕುಸಿದಾಗ ಚಿನ್ನ ಏರುತ್ತದೆ. ರಿಯಲ್ ಎಸ್ಟೇಟ್ ಗೆ ಒಂದು ಕಾಲ ಬಂದರೆ, ಮತ್ತೊಂದಕ್ಕೆ ಇನ್ನೊಮ್ಮೆ ಕಾಲ. ಆ ಕಾರಣಕ್ಕೆ ಟ್ರೆಂಡ್ ಗೆ ತಕ್ಕಂತೆ ಹೂಡಿಕೆ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆ ಮಾಡುತ್ತಾ ಉಳಿತಾಯದ ನಿರ್ವಹಣೆ ಮಾಡಬೇಕಾಗುತ್ತದೆ. ಎಫ್.ಡಿ. ದರ ಪೂರ್ತಿ ಇಳಿದಾಗ ಚಿನ್ನ ಅಥವಾ ರಿಯಲ್ ಎಸ್ಟೇಟ್, ಷೇರು ಮಾರ್ಕೆಟ್ ಹೀಗೆ ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡಬೇಕಾಗುತ್ತದೆ. ಕಲಿಕೆ, ಅನುಭವ ಹಾಗೂ ಸರಿಯಾದ ಮಾರ್ಗದರ್ಶನದಿಂದ ಮುಂದುವರಿದಲ್ಲಿ ಉತ್ತಮ.

ನೀವಿನ್ನೂ ಉಳಿತಾಯ ಶುರು ಮಾಡಿಲ್ಲವೆ? ಇನ್ನೂ ಕಾಲ ಮಿಂಚಿಲ್ಲ. ಈಗಲೂ ಹಂತಹಂತವಾಗಿ ಆರಂಭಿಸಿ. ಅಥವಾ ಈಗಾಗಲೇ ನೀವು ಒಂದು ಹಂತ ತಲುಪಿದ್ದಲ್ಲಿ ಅಲ್ಲಿಂದ ಮುಂದಿನ ಘಟ್ಟದಿಂದ ಆರಂಭಿಸಿ. ಬೆಸ್ಟ್ ಆಫ್ ಲಕ್.

English summary

Where To Start Savings? Simple Techniques To Improve Savings Habit

Beginners guide to start savings. Here is the simple techniques to improve savings habit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X