ಬೆಂಗಳೂರು, ಜೂನ್ 7: ನೀವು ಮ್ಯೂಚುವಲ್ ಫಂಢ್ ನಲ್ಲಿ ಹೂಡಿಕೆ ಮಾಡಿದ್ದೀರಿ ಎಂದಾದರೆ ಅದಕ್ಕೆ ನಾಮಿನಿ ಮಾಡಿಸುವುದು ಅಷ್ಟೇ ಮುಖ್ಯ. ಒಂದು ವೇಳೇ ನಾಮಿನಿ ಮಾಡಿಸಿಲ್ಲ ಎಂದಾದರೆ ಮುಂದೆ ವಹಿವಾಟು ಮಾಡಲು ಹಣ ಹಿಂಪಡೆಯಲು ತುಂಬಾ ಸಾಹಸ ಮಾಡಬೇಕಾಗುತ್ತದೆ.
ಸ್ಟಾಕ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡ್ ಮಾರ್ಕೆಟ್ ನಲ್ಲಿ ತುಂಬಾ ಜನ ಹೂಡಿಕೆ ಮಾಡುತ್ತಾರೆ. ಆದರೆ ನಾಮಿನೇಷನ್ ವಿವರಗಳನ್ನು ತುಂಬುವುದನ್ನು ಸಲೀಸಾಗಿ ತೆಗೆದುಕೊಳ್ಳುತ್ತಾರೆ. ಅಂದರೆ ನಾಮಿನಿ ವಿವರಗಳನ್ನು ಕೊಡುವುದಿಲ್ಲ.
ಹಾಗಿದ್ದರೆ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲಿ ನಾಮಿನೇಷನ್ ಬಗ್ಗೆ ಏನು ಹೇಳುತ್ತೆ ಎನ್ನುವುದನ್ನು ನೋಡೀಣ. ರಾಷ್ಟ್ರವ್ಯಾಪಿಯಾಗಿ 13 ಕೋಟಿ 64 ಲಕ್ಷ ಸಿಂಗಲ್ ಡಿಮ್ಯಾಟ್ ಖಾತೆಗಳಿವೆ. ಆದರೆ ಇವುಗಳ ಪೈಕಿ 9.9 ಕೋಟಿ ಖಾತೆಗಳಲ್ಲಿ ನಾಮಿನಿ ವಿವರಗಳಿಲ್ಲ. ಅಂದರೆ ಒಟ್ಟು ಡಿಮ್ಯಾಟ್ ಖಾತೆಗಳ ಪೈಕಿ ಶೇಕಡ 72.5 ರಷ್ಟು ಖಾತೆಗಳಲ್ಲಿ ನಾಮಿನೇಷನ್ ಆಗಿಲ್ಲ. 9.51 ಕೋಟಿ ಜನರು ಅಂದರೆ ಡಿಮ್ಯಾಟ್ ಖಾತೆ ಹೊಂದಿರೋ ಸುಮಾರು ಶೇಕಡ 70 ರಷ್ಟು ಜನರು ಗೊತ್ತಿದ್ದರೂ ನಾಮಿನಿ ವಿವರಗಳನ್ನ ಕೊಟ್ಟಿಲ್ಲ. ಇನ್ನು ಶೇಕಡ 2.75 ರಷ್ಟು ಡಿಮ್ಯಾಟ್ ಖಾತೆದಾರರು ದ್ವಂದದಲ್ಲಿದ್ದಾರೆ. ನಾಮಿನೇಟ್ ಮಾಡುವುದನ್ನಾಗಲಿ ಅಥವಾ ಆಪ್ಟ್ - ಔಟ್ ಆಪ್ಶನ್ ಅವರು ಆಯ್ಕೆ ಮಾಡಿಕೊಂಡಿಲ್ಲ.

ನಿಮಗೆ ಏನಾದರೂ ಅವಘಡ ಸಂಬಂವಿಸಿದರೆ, ಅಕಾಲಿಕ ಮರಣ ಹೊಂದಿದರೆ ನಿಮ್ಮ ಆಸ್ತಿಯ ಜವಾಬ್ದಾರರು ಯಾರು ಎಂದು ತಿಳಿಸುವುದೇ ಈ ನಾಮಿನೇಶನ್. ನಿಯಮಗಳ ಪ್ರಕಾರ, ಹೊಸ ಡಿಮ್ಯಾಟ್ ಖಾತೆಗಳಿಗೆ ಅಥವಾ ಮ್ಯೂಚುವಲ್ ಫಂಡ್ ಗಳಿಗೆ ನಾಮಿನೇಶನ್ ಕಡ್ಡಾಯವಾಗಿದೆ. ಒಂದು ವೇಳೆ ನೀವು ಯಾರನ್ನೂ ನಾಮಿನಿ ಮಾಡಲು ಇಷ್ಟಪಡದೇ ಇದ್ದರೆ ನೀವು ಅರ್ಜಿಯಲ್ಲಿ ಆಪ್ಟ್ ಔಟ್ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ನಾಮಿನೇಷನ್ ಮಾಡೋದು ಕಡ್ಡಾಯ ಆಗಿರಲಿಲ್ಲ. ಹೀಗಾಗಿ ಅನೇಕರು ಇದನ್ನ ಬಿಟ್ಟು ಅರ್ಜಿ ಸಲ್ಲಿಕೆ ಮಾಡುತ್ತಿದ್ದರು.
ನಾಮಿನಿ ವಿವರ ನೀಡುವುದು ತುಂಬಾ ಮುಖ್ಯ. ಆಗ ಹೂಡಿಕೆ ಮಾಡಿದ ವ್ಯಕ್ತಿ ಒಂದು ವೇಳೆ ಮೃತಪಟ್ಟಲ್ಲಿ ಅವರ ಆಸ್ತಿ ಸೂಕ್ತ ವ್ಯಕ್ತಿಯ ಕೈ ಸೇರುತ್ತದೆ. ಹೀಗೆ ನಾಮಿನಿಯಾಗಿ ಕುಟುಂಬದ ವಾರಸುದಾರನ್ನು ಅಥವಾ ನಿಮ್ಮ ಆಪ್ತರನ್ನ ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ನಾಮಿನಿಯಾಗಿ ನೀವು ಹೆಸರಿಸುವ ವ್ಯಕ್ತಿ, ಕಾನೂನುಬದ್ಧ ವಾರಸುದಾರರಾಗಿಲ್ಲದೇ ಹೋದರೆ, ಆಗ ಕಾನೂನುಬದ್ದ ವಾರಸುದಾರರಿಗೆ ಆಸ್ತಿ ವರ್ಗಾಯಿಸಲು ನಾಮಿನಿಯು ಏಜೆಂಟ್ ಅಥವಾ ಟ್ರಸ್ಟಿ ಆಗುತ್ತಾರೆ.
ಒಂದು ವೇಳೆ ಮ್ಯೂಚುವಲ್ ಫಂಡ್ ಗಳಲ್ಲಿ ನಾಮಿನಿ ವಿವರಗಳಿಲ್ಲದಿದ್ದರೆ ಕಾನೂನುಬದ್ಧ ವಾರಸುದಾರರು ಅಥವಾ ಯಾರು ಕ್ಲೇಮ್ ಮಾಡುತ್ತಾರೋ ಅವರು ವಿಲ್, ಲೀಗಲ್ ಹೇಯರ್ ಸರ್ಟಿಫೀಕೇಟ್, ಮಕ್ಕಳಿಂದ ನಿರಾಕ್ಷೇಪಣ ಪತ್ರ ಮೊದಲಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ದಾಖಲೆಗಳು ಅವರ ಪಾಲಿನ ಷೇರುಗಳನ್ನ ಅವರ ಹೆಸರಿಗೆ ವರ್ಗಾಯಿಸಿಕೊಳ್ಳುವುದಕ್ಕೆ ಬೇಕಾಗುತ್ತವೆ. ಅನೇಕ ಹೂಡಿಕೆದಾರರು ವಿಲ್ ಬರೆದಿಟ್ಟಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ನಾಮಿನಿ ವಿವರಗಳನ್ನು ಕೂಡ ಕೊಟ್ಟಿಲ್ಲದೇ ಹೋದರೆ ಮೃತ ಹೂಡಿಕೆದಾರರ ಕುಟುಂಬದವರು ತಾವೇ ಕಾನೂನುಬದ್ಧವಾರಸುದಾರರು ಎಂದು ಸಾಬೀತುಪಡಿಸಲು ಅಗತ್ಯ ದಾಖಲೆ ಸಲ್ಲಿಸಬೇಕಾಗತ್ತದೆ. ಆದರೆ ಈ ಪ್ರಕ್ರಿಯೆ ಕ್ಲಿಷ್ಟಕರ.
ನೀವು ಇನ್ನೂ ನಾಮಿನಿ ವಿವರಗಳನ್ನ ಸಲ್ಲಿಸದೆ ಈಗಲೇ ಮಾಡಿ. ಇಲ್ಲದಿದ್ದಲ್ಲಿ, ನಿಮ್ಮ ಡಿಮ್ಯಾಟ್ ಖಾತೆ ಕ್ಲೋಸ್ ಆಗಬಹುದು. ಅಷ್ಟೇ ಇಲ್ಲ, ನಿಮ್ಮ ಮ್ಯೂಚುವಲ್ ಫಂಡ್ ಗಳಿಂದ ಹಣವನ್ನು ವಿತ್ ಡ್ರಾ ಮಾಡುವುದಕ್ಕೂ ಆಗಲ್ಲ. ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲದೇ, ಬ್ಯಾಂಕ್ ಖಾತೆ, ನಿಶ್ಚಿತ ಠೇವಣಿ, ಭವಿಷ್ಯ ನಿಧಿ, ವಿಮಾ ಪಾಲಿಸಿಗಳಲ್ಲೂ ನಾಮಿನಿ ವಿವರಗಳನ್ನು ನಮೂದಿಸಿ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನಿಮ್ಮ ಕುಟುಂಬದವರ, ನಿಮಗೆ ಸಂಬಂಧಿಸಿದವರ ಕೈಯಲ್ಲೇ ಇರುವಂತೆ ನೋಡಿಕೊಳ್ಳಿ.


Click it and Unblock the Notifications